ನಾಲ್ವರು ವೈದ್ಯರಿಗೆ ಪಿಹೆಚ್‌ಡಿ ಪ್ರದಾನ

four doctors Awarded PhD

ಬೆಳಗಾವಿ 06: ಬೈಲಹೊಂಗಲ ತಾಲೂಕಿನ ಇಂಚಲದ ಶ್ರೀ ಶಿವಯೋಗಿಶ್ವರ ಗ್ರಾಮೀಣ ಆಯುರ್ವೇದ ಮಹಾವಿದ್ಯಾಲಯ ಹಾಗೂ ಹಾವೇರಿಯ ಶಾಂತವೀರೇಶ್ವರ ಆಯುರ್ವೇದ ವೈದ್ಯಕೀಯ ಮಹಾವಿದ್ಯಾಲಯ ಹಾಗೂ ಆಸ್ಪತ್ರೆಯಲ್ಲಿ ಸೇವೆ ಸಲ್ಲಿಸುತ್ತಿರುವ ನಾಲ್ವರು ವೈದ್ಯರಿಗೆ ವಿವಿಧ ವಿಷಯಗಳ ಕುರಿತು ಮಂಡಿಸಿದ್ದ ಪ್ರಬಂಧಕ್ಕೆ ಪಿಹೆಚ್‌ಡಿ ಪದವಿ ದೊರೆತಿದೆ.  

ಡಾ. ಶಿವಾನಂದ ಕೆಂಭಾವಿ ಮೂಲವ್ಯಾಧಿಯ ಶಸ್ತ್ರ ಚಿಕಿತ್ಸೆಯ ನಂತರ ವೇದನೆಗಾಗಿ ಬಸ್ತಿ ಪ್ರಯೋಗ, ಡಾ. ಸಿದ್ದನಗೌಡ ಬಿಷ್ಟನಗೌಡ್ರ ಅನಿದ್ರಾದಲ್ಲಿ ಶಿರೋಧಾರಾದಿಂದ ಚಿಕಿತ್ಸೆ, ಡಾ. ಸಂಗಮೇಶ್ವರ ದೊಡ್ಡಗೌಡ್ರ, ಮುಖಾರ್ಧಿತವಾತ ಕಾಯಿಲೆಯಲ್ಲಿ ಪಂಚಕರ್ಮದ ನಸ್ಯ ಚಿಕಿತ್ಸೆಯ ಪ್ರಯೋಗ, ಡಾ. ಈಶ್ವರಯ್ಯ ಎಸ್ ಮಠಪತಿ, ಸ್ಥೌಲ್ಯ ಬೊಜ್ಜು ಕಾಯಿಲೆ ವಿಷಯದ ಕುರಿತಾದ ಶಮನೌಷಧಿ ಪ್ರಯೋಗ ಎಂಬ ನಾಲ್ವರು ವೈದ್ಯರು ಮಂಡಿಸಿದ ಆಯುರ್ವೇದ ವಿಷಯ ಕುರಿತಾದ ಪ್ರಬಂಧಕ್ಕೆ ಗುಜರಾತಿನ ಪಾರುಲ್ ವಿಶ್ವ ವಿದ್ಯಾಲಯದಿಂದ  ಪಿ.ಹೆಚ್‌.ಡಿ ಪದವಿ ಲಭಿಸಿದೆ. 

ಪಿಎಚ್‌ಡಿ ಪದವಿ ಸಂದರ್ಭದಲ್ಲಿ ಪಾರುಲ್ ಆಯುರ್ವೇದ ವೈದ್ಯಕೀಯ ಮಹಾವಿದ್ಯಾಲಯ ಹಾಗೂ ಆಸ್ಪತ್ರೆ ಪ್ರಾಂಶುಪಾಲ ಡಾ. ಹೇಮಂತ ತೋಷಿಖಾನೆ ಸಹಕಾರ ನೀಡಿದ್ದರು. ನಾಲ್ವರು ವೈದ್ಯರ ಸಾಧನೆಗೆ ಶಾಂತವೀರೇಶ್ವರ ಆಯುರ್ವೇದ ವೈದ್ಯಕೀಯ ಮಹಾವಿದ್ಯಾಲಯ ಸಂಸ್ಥೆಯ ಕಾರ್ಯದರ್ಶಿ ಎಸ್‌.ಎಸ್‌.ಪಟ್ಟಣಶೆಟ್ಟಿ, ಆಡಳಿತ ಅಧಿಕಾರಿ ವಿ.ಎಚ್ಕೆ.ಹಿರೇಮಠ, ಪ್ರಾಂಶುಪಾಲರಾದ ಡಾ. ಸಿ.ಎನ್‌.ಗೌಡರ, ಉಪ ಪ್ರಾಂಶುಪಾಲರಾದ ಡಾ. ಎಸ್‌.ಎಸ್‌.ಅಂಗಡಿ, ಹಿರಿಯ ವೈದ್ಯ ಡಾ. ಪ್ರಸನ್ನ ಪಾಟೀಲ್ ಸೇರಿದಂತೆ ಗ್ರಾಮೀಣ ಆಯುರ್ವೇದ ಮಹಾವಿದ್ಯಾಲಯ ಇಂಚಲ ಪ್ರಾಂಶುಪಾಲರು ಮತ್ತು ಆಡಳಿತ ಮಂಡಳಿ ಸದಸ್ಯರು ಪ್ರಶಂಸೆ ವ್ಯಕ್ತಪಡಿಸಿದ್ದಾರೆ.