ಬೆಂಗಳೂರು 15, ಆಂಬಿಡೆಂಟ್ ವಂಚನೆ ಪ್ರಕರಣವನ್ನು ಮುಚ್ಚಿ ಹಾಕಲು ಪ್ರಯತ್ನಿಸಿರುವವರ ಪಟ್ಟಿಯಲ್ಲಿ ಇಬ್ಬರು ಪೊಲೀಸ್ ಅಧಿಕಾರಿಗಳು ಹಾಗೂ ಓರ್ವ ಯುವತಿಯ ಹೆಸರುಗಳು ಈಗ ಕೇಳಿಬರುತ್ತಿವೆ.
ಈಗಾಗಲೇ ಈ ಪ್ರಕರಣದಲ್ಲಿ ರಾಜಕಾರಣಿಗಳು, ಪತ್ರಕರ್ತರು ಮತ್ತು ರೌಡಿಗಳ ಹೆಸರುಗಳು ಕೇಳಿಬಂದಿದ್ದವು.
ಆಂಬಿಡೆಂಟ್ ಕಂಪನಿಯ ಮಾಲೀಕ ಸಯ್ಯದ್ ಫರೀದ್ ವಿರುದ್ಧ ಡಿಜೆಹಳ್ಳಿ ಪೊಲೀಸ್ ಠಾಣೆಯಲ್ಲಿ ವಂಚನೆ ಪ್ರಕರಣ ದಾಖಲಾಗಿತ್ತು.
ಪೊಲೀಸ್ ಅಧಿಕಾರಿಗಳು ಹಾಗೂ ಆ ಯುವತಿ ವಂಚನೆಗೊಳಗಾದ ಹೂಡಿಕೆದಾರರಿಂದ ತೊಂದರೆಯಾಗದಂತೆ ನೋಡಿಕೊಳ್ಳುವುದಾಗಿ ಫರೀದ್ಗೆ ಸಹಾಯ ಮಾಡಿದ್ದಾರೆ ಎಂಬ ಆರೋಪ ಕೇಳಿಬಂದಿದೆ.
ಕೆಲವು ಪತ್ರಕರ್ತರು ಕೂಡ ಈ ಪ್ರಕರಣದಲ್ಲಿ ಲಾಭ ಪಡೆದುಕೊಂಡಿದ್ದಾರೆ ಎಂಬ ಆರೋಪ ಸಹ ಕೇಳಿಬಂದಿದೆ.
ತನಿಖೆ ತೀವ್ರಗೊಳುತ್ತಿದ್ದಂತೆ ದಿನೇ ದಿನೆ ಪ್ರಕರಣ ಹೊಸ ತಿರುವು ಪಡೆದುಕೊಳ್ಳುತ್ತಿದ್ದು, ಸಿಸಿಬಿ ಪೊಲೀಸರಿಗೆ ಹೊಸ ಹೊಸ ಮಾಹಿತಿಗಳು ಲಭ್ಯವಾಗುತ್ತಿವೆ.
ಪ್ರಕರಣದಲ್ಲಿ ಹಲವು ಗಣ್ಯ ವ್ಯಕ್ತಿಗಳು ಶಾಮೀಲಾಗಿರುವುದು ಕಂಡು ಬರುತ್ತಿದ್ದು, ಪೊಲೀಸರು ತನಿಖೆಯನ್ನು ಮತ್ತಷ್ಟು ಚುರುಕುಗೊಳಿಸಿದ್ದಾರೆ.
15000ಕ್ಕೂ ಹೆಚ್ಚು ಹೂಡಿಕೆದಾರರಿಗೆ 600 ಕೋಟಿ ರೂ. ವಂಚಿಸಿರುವ ಫರೀದ್ಗೆ ಹಲವು ರಾಜಕಾರಣಿಗಳು, ಪೊಲೀಸ್ ಅಧಿಕಾರಿಗಳು ಬೆಂಬಲ ನೀಡಿದ್ದಾರೆಂದು ತಿಳಿದುಬಂದಿದೆ.