ಯುವಕರು ದುಶ್ಚಟಗಳಿಗೆ ದಾಸರಾಗದೇ ಸುಂದರ ಜೀವನ ರೂಪಿಸಿಕೊಳ್ಳಿ: ನ್ಯಾ.ಎ.ಹರೀಶ

ಯುವಕರು ದುಶ್ಚಟಗಳಿಗೆ ದಾಸರಾಗದೇ ಸುಂದರ ಜೀವನ ರೂಪಿಸಿಕೊಳ್ಳಿ: ನ್ಯಾ.ಎ.ಹರೀಶ Youth should lead a beautiful life without becoming slaves to vices: Justice A. Harish

ವಿಜಯಪುರ 26: ಮಾದಕ ವಸ್ತುಗಳ ಸೇವನೆಯಿಂದಾಗಿ ಮಾನವನ ಆರೋಗ್ಯದ ಮೇಲೆ, ಕುಟುಂಬ ಮತ್ತು ಸಮಾಜದ ಮೇಲೆ ಅನೇಕ ರೀತಿಯ ಸಮಸ್ಯೆಗಳು ಉಂಟಾಗುತ್ತಿದ್ದು, ಈ ನಿಟ್ಟಿನಲ್ಲಿ ಯುವಕರು ಇಂತಹ ದುಶ್ಚಟಗಳಿಗೆ ದಾಸರಾಗದೇ ಉತ್ತಮ ಬದುಕು ರೂಪಿಸಿಕೊಂಡು ಸದೃಢ ದೇಶ ನಿರ್ಮಾಣಕ್ಕೆ ಕೈಜೋಡಿಸಬೇಕು ಎಂದು ಗೌರವಾನ್ವಿತ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಹರೀಶ ಎ ಅವರು ಹೇಳಿದರು.  

ವಿಜಯಪುರ ಜಿಲ್ಲಾ ಪೊಲೀಸ್ ಇಲಾಖೆಯಿಂದ ನಗರದ ಕಂದಗಲ್ ಹನುಮಂತರಾಯ ರಂಗಮಂದಿರದಲ್ಲಿ ಗುರುವಾರ ಮಾದಕ ವಸ್ತುಗಳ ದುರುಪಯೋಗ ಮತ್ತು ಅಕ್ರಮ  ಸಾಗಾಣಿಕೆ ವಿರುದ್ಧ ಅಂತರರಾಷ್ಟ್ರೀಯ ದಿನಾಚರಣೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ, ಮಾತನಾಡಿದ ಅವರು, ಮಾದಕ ವಸ್ತುಗಳ ಸೇವನೆಯಿಂದ ಮಾನಸಿಕ ಹಾಗೂ ದೈಹಿಕ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತದೆ.  ಶಿಕ್ಷಕರು ಮಾದಕ ವಸ್ತುಗಳ ಕುರಿತು ದುಷ್ಟಪರಿಣಾಮಗಳ ಬಗ್ಗೆ ವಿದ್ಯಾರ್ಥಿಗಳಲ್ಲಿ ಜಾಗೃತಿ ಮೂಡಿಸಬೇಕು ಎಂದು ತಿಳಿಸಿದರು.  

ಎವಿಡೆನ್ಸ್‌ ಇಸ್ ಕ್ಲಿಯರ್, ಇನವೆಸ್ಟ್‌ ಇನ್ ಪ್ರ್ರಿವೆನ್ಸೆನ್ ಎಂಬ ಘೋಷ ವಾಕ್ಯದಡಿ ಈ ವರ್ಷ ಮಾದಕ ವಸ್ತುಗಳ ಸೇವನೆ ಮತ್ತು ಅಂದರಿಂದಾಗುವ ದುಷ್ಪರಿಣಾಮಗಳ ಬಗ್ಗೆ ಜಾಗೃತಿ ಮೂಡಿಸಲು ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಮಾದಕ ವಸ್ತುಗಳ ಸೇವನೆಗೆ ಒಳಗಾಗಿ ತಮ್ಮ ಜೀವನವನ್ನು ಹಾಳು ಮಾಡಿಕೊಳ್ಳುತ್ತಿರುವವರಿಗೆ ಇದರಿಂದಾಗುವ ದುಷ್ಟಪರಿಣಾಮಗಳ ಬಗ್ಗೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವುದಕ್ಕಾಗಿ ಇಂತಹ ಕಾರ್ಯಕ್ರಮಗಳು ಅತ್ತುಪಯುಕ್ತವಾಗಿವೆ ಎಂದರು. 

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲಕ್ಷ್ಮಣ ನಿಂಬರಗಿ ಅವರು ಮಾತನಾಡಿ, ಮಾದಕ ವಸ್ತುಗಳ ಬಳಕೆ ಹಾಗೂ ಅಕ್ರಮ ಸಾಗಾಣಿಕೆಯಿಂದ ಉಂಟಾಗುವ ಸಮಸ್ಯೆಗಳ ಬಗ್ಗೆ ಅರಿವು ಮೂಡಿಸುವುದಕ್ಕಾಗಿ ಪ್ರತಿ ವರ್ಷ ಜೂನ್ 26ರಂದು ಮಾದಕ ವಸ್ತುಗಳ ದುರುಪಯೋಗ ಮತ್ತು ಅಕ್ರಮ ಸಾಗಣೆ ವಿರುದ್ಧ ಅಂತರರಾಷ್ಟ್ರೀಯ ದಿನಾಚರಣೆ ಕಾರ್ಯಕ್ರಮವನ್ನು ಆಚರಿಸಲಾಗುತ್ತದೆ. ಉತ್ತಮ ಸಮಾಜಕ್ಕೆ ಯುವ ಶಕ್ತಿಯೇ ಮಾದರಿ ಇದನ್ನು ಅರಿತು ಮಾದಕ ವಸ್ತುಗಳ ವಿರುದ್ಧ ಜಾಗೃತಿ ಮೂಡಿಸುವುದು ಪ್ರತಿಯೊಬ್ಬ ನಾಗರಿಕನ ಹೊಣೆಯಾಗಿದೆ ಎಂದು ಹೇಳಿದರು.  

ಮಾದಕ ವ್ಯಸನದ ದುಷ್ಪರಿಣಾಮದ ಬಗ್ಗೆ ಜಾಗೃತಿ ಹೊಂದಬೇಕು ಅದರಿಂದಾಗುವ ಅಪಾಯಗಳ ಬಗ್ಗೆ ನೆರೆ ಹೊರೆವರಿಗೆ ವಿದ್ಯಾರ್ಥಿಗಳು ಅರಿವು ಮೂಡಿಸುವ ಕಾರ್ಯ ಮಾಡಬೇಕು. ವ್ಯಸನ ಮುಕ್ತ ಸಮಾಜವನ್ನು  ನಿರ್ಮಾಣಕ್ಕಾಗಿ ಎಲ್ಲರೂ ಕೈಜೋಡಿಸಿ ಎಂದು ಅವರು ತಿಳಿಸಿದರು.  

ಅಶ್ವಿನಿ ಪ್ರಾರ್ಥನಾ ಗೀತೆ ಹಾಡಿದರು. ಮಲ್ಲಯ್ಯ ಮಠಪತಿ ಸಿಪಿಐ ಅವರು ಸ್ವಾಗತಿಸಿ, ವಂದಿಸಿದರು. ಎಸ್‌ಎಸ್‌ಎಂ ಫಾರ್ಮಸಿ ಕಾಲೇಜಿನ ವಿದ್ಯಾರ್ಥಿಗಳು ಮಾದಕ ವಸ್ತುಗಳ ಸೇವನೆಯಿಂದಾಗುವ ದುಷ್ಪರಿಣಾಮಗಳ ಕುರಿತು ಸ್ಕಿಟ್ ಮೂಲಕ ಮನಮುಟ್ಟುವಂತೆ ತಿಳಿಸಿಕೊಟ್ಟರು. 

ಪ್ರತಿಜ್ಞೆ ವಿಧಿಯನ್ನು ಗೌರವಾನ್ವಿತ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಹರೀಶ ಎ ಅವರು ಬೋಧಿಸಿದರು. 

ಜಿಲ್ಲಾ  ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಶಂಕರ ಮಾರಿಹಾಳ, ಡಿವೈಎಸ್‌ಪಿ ಬಸವರಾಜ ಯಲಿಗಾರ, ಸಹಾಯಕ  ಓಷಧ ನಿಯಂತ್ರಕ ಪರಶುರಾಮ. ಕೆ,ವಿಜಯಪುರ ಬಿಎಲ್‌ಡಿಇಯ ಎಸ್‌ಎಸ್‌ಎಂ ಫಾರ್ಮಸಿ ಕಾಲೇಜಿನ ಪ್ರಾಂಶುಪಾಲರಾದ ಶೆಟ್ಟಿ, ಪೊಲೀಸ್ ಇಲಾಖೆಯ ಅಧಿಕಾರಿ, ಸಿಬ್ಬಂದಿ ಸೇರಿದಂತೆ ವಿವಿಧ ಕಾಲೇಜಿನ ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು. 

ಮಾದಕ ವಸ್ತುಗಳ ದುರುಪಯೋಗ ಮತ್ತು ಅಕ್ರಮ ಸಾಗಣೆ ವಿರುದ್ಧದ ಅಂತರಾಷ್ಟ್ರೀಯ ದಿನಾಚರಣೆ-2025ರ ಕುರಿತು ಸಿದ್ದೇಶ್ವರ ದೇವಸ್ಥಾನದಿಂದ ಪ್ರಾರಂಭವಾದ ಜಾಗೃತಿ ಜಾಥಾವು  ಕಂದಗಲ್ ಹಣಮಂತರಾಯ ರಂಗಮಂದಿರದಲ್ಲಿ ಸಮಾರೋಪಗೊಂಡಿತ್ತು.