ಲೋಕದರ್ಶನ ವರದಿ
ಯುವಕರು ಶಿಕ್ಷಣದ ಜೊತೆ ಕ್ರೀಡೆಯಲ್ಲೂ ತೊಡಗಿಸಿಕೊಳ್ಳಬೇಕು: ಮೇಯರ್ ಮುಲ್ಲಂಗಿ ನಂದೀಶ್
ಬಳ್ಳಾರಿ 17: ಕ್ರೀಡೆ ಎಂಬುದು ಕೇವಲ ಮನರಂಜನೆಗೆ ಮಾತ್ರ ಸೀಮಿತವಾಗಿರದೇ ಮನುಷ್ಯನ ಮಾನಸಿಕ ಹಾಗೂ ಸಾಂಸ್ಕೃತಿಕ ಬೆಳವಣಿಗೆಗೂ ಸಾಕಷ್ಟು ಪ್ರಯೋಜನಕಾರಿಯಾಗಿದೆ ಎಂದು ಮಹಾನಗರ ಪಾಲಿಕೆಯ ಮಹಾಪೌರರಾದ ಮುಲ್ಲಂಗಿ ನಂದೀಶ್ ಅವರು ಹೇಳಿದರು.
ನೆಹರು ಯುವ ಕೇಂದ್ರ, ಯುವ ಕಾರ್ಯ ಮತ್ತು ಕ್ರೀಡಾ ಸಚಿವಾಲಯ ಹಾಗೂ ಲಿಯಾ ಯೂತ್ ಅಸೋಸಿಯೇಷನ್(ರಿ) ಇವರ ಸಂಯುಕ್ತಾಶ್ರಯದಲ್ಲಿ ನಗರದ ಗಾಲಿ ರುಕ್ಮಣಮ್ಮ ಚೆಂಗಾರೆಡ್ಡಿ ಸ್ಮಾರಕ ಸರ್ಕಾರಿ ವಾಣಿಜ್ಯ ಮತ್ತು ನಿರ್ವಾಹಣ ಕಾಲೇಜ್‌ನಲ್ಲಿ ಸೋಮವಾರ ಆಯೋಜಿಸಿದ್ದ ಜಿಲ್ಲಾ ಮಟ್ಟದ ಕ್ರೀಡಾಕೂಟ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಯುವಜನತೆಯಲ್ಲಿ ಶಿಸ್ತು, ನಾಯಕತ್ವ ಹಾಗೂ ಸಂಘಟನೆ ಮಖ್ಯ. ಶಿಕ್ಷಣದ ಜೊತೆ ಕ್ರೀಡೆಯಲ್ಲೂ ತೊಡಗಿಸಿಕೊಳ್ಳುವುದರಿಂದ ಇವುಗಳು ಬೆಳೆಯಲು ಸಾಧ್ಯ ಎಂದು ತಿಳಿಸಿದರು.
ಗಾಲಿ ರುಕ್ಮಣಮ್ಮ ಚೆಂಗಾರೆಡ್ಡಿ ಸ್ಮಾರಕ ಸರ್ಕಾರಿ ವಾಣಿಜ್ಯ ಮತ್ತು ನಿರ್ವಾಹಣ ಕಾಲೇಜಿನ ಪ್ರಾಚಾರ್ಯರಾದ ಡಾ.ಸುಧಾಕರ.ಡಿ ಅವರು ಅಧ್ಯಕ್ಷತೆ ವಹಿಸಿ ಮಾತನಾಡಿ, ಓದಿನೊಂದಿಗೆ ಕ್ರೀಡೆಗೂ ಒತ್ತು ನೀಡಿದಾಗ ಯುವ ಸಮುದಾಯ ಆರೋಗ್ಯವಂತರಾಗಿರಬಹುದು ಎಂದು ತಿಳಿಸಿದರು.
ನೆಹರು ಯುವ ಕೇಂದ್ರದ ಯುವ ಅಧಿಕಾರಿ ಮೊಂಟ್ ಪತ್ತಾರ್ ಅವರು ಕ್ರೀಡೆಗಳ ಬಗ್ಗೆ ವಿದ್ಯಾರ್ಥಿಗಳಿಗೆ ಸಂಕ್ಷಿಪ್ತ ಮಾಹಿತಿ ನೀಡಿದರು.
ಕ್ರೀಡಾಕೂಟದಲ್ಲಿ ವಾಲಿಬಾಲ್, ಖೋಖೋ, 100 ಮೀ. ಓಟ ಸ್ಪರ್ಧೆ, ಸ್ಲೋಸೈಕಲಿಂಗ್ ಕ್ರೀಡೆಗಳನ್ನು ಆಯೋಜಿಸಲಾಗಿತ್ತು. ಕ್ರೀಡಾಕೂಟದಲ್ಲಿ ವಿಜೇತರಿಗೆ ಬಹುಮಾನ ಮತ್ತು ಪ್ರಶಸ್ತಿ ಪತ್ರ ನೀಡಿ ಗೌರವಿಸಲಾಯಿತು.
ಈ ಸಂದರ್ಭದಲ್ಲಿ ದೈಹಿಕ ಶಿಕ್ಷಕ ಮುತ್ತೇಗೌಡ, ಕ್ರೀಡಾಕೂಟ ಆಯೋಜಕ ಆರ್.ಕೆ.ಅಬ್ರಹಾಂ, ಎನ್.ಐ.ಎಫ್.ಎ.ಎ ಮತ್ತು ವಿದ್ಯಾರ್ಥಿಗಳು ಭಾಗವಹಿಸಿದ್ದರು.
*ಕ್ರೀಡಾಕೂಟದಲ್ಲಿ ವಿಜೇತರಾದವರು:*
100 ಮೀ. ಓಟ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನ-ಮೇಘನಾ, ದ್ವಿತೀಯ ಬಹುಮಾನ-ರತ್ತಮ್, ತೃತೀಯ ಬಹುಮಾನ-ಶಾಂತ.
ಖೋಖೋ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನ-ಎಎಸ್‌ಎಮ್ ಕಾಲೇಜ್, ದ್ವಿತೀಯ ಬಹುಮಾನ-ಎಸ್‌ಎಅರ್‌ಸಿಎಮ್ ಕಾಲೇಜಿನ ಶೃತಿ.
ವಾಲಿಬಾಲ್ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನ-ಎಸ್‌ಎಅರ್‌ಸಿಎಮ್ ಕಾಲೇಜ್‌ನ ಚಂದ್ರಶೇಖರ, ದ್ವಿತೀಯ ಬಹುಮಾನ ಮೇಧಾ ಕಾಲೇಜಿನ ಪಂಪಾಪತಿ.
ಸ್ಲೋ-ಸೈಕಲಿಂಗ್ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನ-ಮೇಧ, ದ್ವಿತೀಯ ಬಹುಮಾನ-ನಂದಿನಿ, ತೃತೀಯ ಬಹುಮಾನ-ನೀವೀದಿತ್.