ಯುವಕರು ರಾಸಾಯನಿಕ ಮುಕ್ತ ಸಾವಯವ ಕೃಷಿ ಮುಖ ಮಾಡಬೇಕು: ಪಾಟೀಲ

Youth should be involved in chemical free organic farming

‘ಜಾಗತಿಕ ಮಣ್ಣು ದಿನದ’ ಆಚರಣೆ 

ಗದಗ 06: ಯುವಕರು ಕೃಷಿಯತ್ತ ಮುಖ ಮಾಡಬೇಕು. ಅದೂ ರಾಸಾಯನಿಕ ಮುಕ್ತ ಸಾವಯವ ಕೃಷಿಯಲ್ಲಿ ತೊಡಗುವ ಮೂಲಕ ತಮ್ಮ ಕುಟುಂಬ ಹಾಗೂ ಸಮಾಜದ ಸ್ವಾಸ್ಥ್ಯ ಕಾಪಾಡಬೇಕು ಎಂದು ಗದಗ ಜಿಲ್ಲಾ ಯುವ ಕಾಂಗ್ರೆಸ್ ಸಮಿತಿ ಪ್ರಧಾನ ಕಾರ್ಯದರ್ಶಿ, ಯುವ ಮುಖಂಡ ಕೃಷ್ಣಗೌಡ ಪಾಟೀಲ ಹೇಳಿದರು. 

‘ಜಾಗತಿಕ ಮಣ್ಣು ದಿನದ’ ಆಚರಣೆ ಅಂಗವಾಗಿ ಸಂಕಲ್ಪ ಸಂಸ್ಥೆಯ ವತಿಯಿಂದ ತಾಲ್ಲೂಕಿನ ಬೆಳಧಡಿ ತಾಂಡಾದ ಶ್ರೀ ಶರಣ ಬಸವೇಶ್ವರ ದೇವಸ್ಥಾನದಲ್ಲಿ ಆಯೋಜಿಸಿದ್ದ ಅಜೀಂ ಪ್ರೇಮಜಿ ಫೌಂಡೇಶನ್ ಯೋಜನೆ ಉದ್ಘಾಟನಾ ಸಮಾರಂಭದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು. 

ಜನರ ಒಗ್ಗಟ್ಟು ಮತ್ತು ಸಹಕಾರ ಇದ್ದರೆ ಇಂತಹ ಸಂಘ ಸಂಸ್ಥೆಗಳು ಸಾಕಷ್ಟು ಯೋಜನೆಗಳನ್ನು ತಂದು ಕೊಡುತ್ತವೆ ಮತ್ತು ಇಂತಹ ಸಂಸ್ಥೆಗಳೊಂದಿಗೆ ಯಾವುದೇ ರೀತೀಯ ರಾಜಕೀಯ ಮಾಡದೇ ಸಹಕಾರ ನೀಡಿದರೆ ನಿಮ್ಮ ಜೀವನಕ್ಕೆ ಬಹಳ ಅನುಕೂಲವಾಗುವುದು. ಆದ್ದರಿಂದ ಇದರ ಉಪಯೋಗವನ್ನು ಪಡೆದುಕೊಂಡು ಅಭಿವೃದ್ಧಿಯೊಂದಿಗೆ ಸಾಗುವ ಗುರಿಯನ್ನು ಹೊಂದಬೇಕು ಎಂದು ಸಲಹೆ ನೀಡಿದರು. 

ಸಮಾರಂಭವನ್ನು ಉದ್ಘಾಟಿಸಿದ ಹುಲಕೋಟಿಯ ಕೆ.ಎಚ್‌. ಪಾಟೀಲ ಕೃಷಿ ವಿಜ್ಞಾನ ಕೇಂದ್ರದ ಹಿರಿಯ ವಿಜ್ಞಾನಿಗಳು ಸಲಹೆಗಾರರಾದ ಡಾ.ಎಲ್‌.ಎಚ್‌.ಹೀರೇಗೌಡ್ರ ಅವರು ಮಾತನಾಡಿ, ಸಂಕಲ್ಪ ಸಂಸ್ಥೆಯು ಗದಗ ಜಿಲ್ಲೆಯ ಮಂಡರಗಿ ಭಾಗದಲ್ಲಿ ಕೃಷಿ ಹೊಂಡಗಳು ಮತ್ತು ದೊಡ್ಡ ಊರಿನ ಕೆರೆಗಳ ಹೂಳೆತ್ತುವ ಕೆಲಸವನ್ನು ಗ್ರಾಮ ಪಂಚಾಯತಿಯ ಸಹಕಾರದೊಂದಿಗೆ ಕೆಲವು ಅನ್ನದಾನದ ಸಹಾಯದಿಂದ ಆಯ್ದ ಕೆಲವು ಗ್ರಾಮ ಪಂಚಾಯಿತಿಗಳಲ್ಲಿ ಯಶಸ್ವಿಯಾಗಿ ಕಾರ್ಯನಿರ್ವಹಿಸಿದ್ದು ಇದರ ಹೆಗ್ಗುರುತಾಗಿದೆ. ಹಾಗಾಗಿ ಈ ವರ್ಷದಿಂದ ಮೂರು ವರ್ಷಗಳ ಕಾಲ ಸಂಕಲ್ಪ ಸಂಸ್ಥೆಯು ಗದಗ ತಾಲ್ಲೂಕಿನ 13 ಹಳ್ಳಿಗಳಲ್ಲಿ ಬೋರ್‌ವೆಲ್ ರೀಚಾರ್ಜ್‌, ಕೃಷಿ ಹೊಂಡ, ಮತ್ತು ಸಾರ್ವಜನಿಕ ಕೆರೆಗಳ ಹೂಳೆತ್ತುವ ಯೋಜನೆಯನ್ನು ನಿನಿರ್ವಹಿಸಲು ಸಿದ್ಧವಾಗಿದೆ. ಆದ್ದರಿಂದ ತಾವುಗಳು ಸಹಕಾರ ನೀಡಬೇಕೆಂದು ಹೇಳಿದರು. 

ಹುಲಕೋಟಿಯ ಕೆ.ಎಚ್‌. ಪಾಟೀಲ ಕೃಷಿ ವಿಜ್ಞಾನ ಕೇಂದ್ರದ ವಿಜ್ಞಾನಿ ಹಾಗೂ ಸಲಹೆಗಾರ ಡಾ. ಎನ್‌.ಎಚ್‌. ಬಂಡಿ ಅವರು ಮಾತನಾಡಿ, ಜಾಗತಿಕ ಮಣ್ಣು ದಿನದ ಆಚರಣೆ ಮಾಡುತ್ತಿದ್ದು ನಾವುಗಳು ಮಣ್ಣಿನ ಫಲವತ್ತತೆ ಮತ್ತು ತಂತ್ರಜ್ಞಾನದ ಅರಿವನ್ನು ಹೊಂದಿರಬೇಕು ಎಂದು ವಿವರವಾದ ಮಾಹಿತಿಯನ್ನು ಗ್ರಾಮಸ್ಥರ ಮನಮುಟ್ಟುವಂತೆ ತಿಳಿಸಿದರು. 

ಸಂಕಲ್ಪ ರೂರಲ್ ಡೆವಲಪ್‌ಮೆಮಟ್ ಸೊಸೈಟಿಯ ಸಂಸ್ಥಾಪಕ ಸಿಕಂದರ ಮೀರಾನಾಯಕ ಅವರು ಮಾತನಾಡಿ, ಸಂಕಲ್ಪ ಸಂಸ್ಥೆಯು ನಡೆದುಕೊಂಡು ಬಂದದಾರಿಯನ್ನು ವಿಸ್ತಾರವಾಗಿ ತಿಳಿಸುತ್ತ, ನಮ್ಮ ಸಂಕಲ್ಪ ಸಂಸ್ಥೆ ಸದಾ ನಿಮ್ಮೊಂದಿಗೆ ಇರುತ್ತದೆ ಎಂದು ಹೇಳಿದರು. 

ಬೆಳಧಡಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಶಂಕ್ರ​‍್ಪ ಶಿವಪ್ಪ ಹೊಸಮನಿ ಅವರು ಅಧ್ಯಕ್ಷತೆವಹಿಸಿದ್ದರು. ಗ್ರಾಮ ಪಂಚಾಯಿತಿ ಉಪಾಧ್ಯಕ್ಷೆ ಶ್ರೀಮತಿ ಲಕ್ಷ್ಮವ್ವ ಮುತ್ತಪ್ಪ ಮುಂದಲಮನಿ ವೇದಿಕೆಯಲ್ಲಿದ್ದರು.ಕಾರ್ಯಕ್ರಮದಲ್ಲಿ ಹನಮಂತ ದಾಸರ ಸೇರಿ ಗ್ರಾಮಸ್ಥರು, ಯುವಕರು ಮತ್ತು ಮಹಿಳೆಯರು ಭಾಗವಹಿಸಿದ್ದರು.