ಗ್ರಂಥಾಲಯಗಳು ನಿಜ ಮನುಷ್ಯರನ್ನು ಸೃಷ್ಟಿಸುತ್ತವೆ: ಸೋಮಲಿಂಗ ಗೆಣ್ಣೂರ

ಗ್ರಂಥಾಲಯಗಳು ನಿಜ ಮನುಷ್ಯರನ್ನು ಸೃಷ್ಟಿಸುತ್ತವೆ: ಸೋಮಲಿಂಗ ಗೆಣ್ಣೂರ  Libraries create true human beings: Somalinga Gennur

ಗ್ರಂಥಾಲಯಗಳು ನಿಜ ಮನುಷ್ಯರನ್ನು ಸೃಷ್ಟಿಸುತ್ತವೆ: ಸೋಮಲಿಂಗ ಗೆಣ್ಣೂರ  

ವಿಜಯಪುರ 13: ಪುಸ್ತಕಗಳು ನಮ್ಮ ದಿನನಿತ್ಯದ ಗೆಳೆಯರಾಗಬೇಕು. ಪುಸ್ತಕಪ್ರೀತಿಯಿಂದ ಮನುಷ್ಯರೂಪದ ಜೀವಿ ನಿಜವಾದ ಮನುಷ್ಯನಾಗಿ ರೂಪುಗೊಳ್ಳಲು ಸಾಧ್ಯ ಎಂದು ಬಾಗಲಕೋಟೆ ವಿಶ್ವವಿದ್ಯಾಲಯದ ಕುಲಸಚಿವ ಹಾಗೂ ವಿಜಯಪುರ ಜಿಲ್ಲೆಯ ಮಾಜಿ ಅಪರ ಜಿಲ್ಲಾಧಿಕಾರಿ ಸೋಮಲಿಂಗ ಗೆಣ್ಣೂರ ಹೇಳಿದರು. ವಿಜಯಪುರದ ನವರಸಪುರದಲ್ಲಿರುವ ನೇತ್ರ ತಜ್ಞ ಡಾ. ಪ್ರಕಾಶ ಪರಣಾಕಾರ ಅವರ ಮನೆಯಲ್ಲಿ ಭಾನುವಾರ ನಡೆದ ‘ಮನೆಗೊಂದು ಗ್ರಂಥಾಲಯ’ ಅನುಷ್ಠಾನ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಅವರು ಮಾತನಾಡಿದರು. ಪ್ರತಿಯೊಂದು ಉತ್ತಮ ಪುಸ್ತಕದೊಳಗೂ ನಮ್ಮೊಂದಿಗೆ ಸಂವಾದ ನಡೆಸುವ ವ್ಯಕ್ತಿತ್ವ ಮತ್ತು ಮನಸ್ಸಿದೆ. ದಿಕ್ಕು ತಪ್ಪಿಸುವ, ಮೌಢ್ಯ ಹಾಗೂ ಕಂದಾಚಾರವನ್ನು ಬಿತ್ತುವ ಪುಸ್ತಕಗಳನ್ನು ತಿರಸ್ಕರಿಸಿ, ವೈಚಾರಿಕತೆ ಮತ್ತು ವೈಜ್ಞಾನಿಕ ಮನೋಭಾವ ಬೆಳೆಸುವ ಪುಸ್ತಕಗಳನ್ನು ಓದಬೇಕು ಎಂದು ಸಲಹೆ ನೀಡಿದರು. ಇನ್ನೋರ್ವ ಮುಖ್ಯ ಅತಿಥಿ ಡಾ. ಮಹಾಂತೇಶ ಬಿರಾದಾರ ಮಾತನಾಡಿ, ಪುಸ್ತಕ ಓದುವುದು ಸಮಸಮಾಜದ ಆಶಯವನ್ನು ಮುನ್ನಡೆಸುವ ಒಂದು ಮಾರ್ಗವಾಗಿದೆ. ಪುಸ್ತಕ ಓದು ಹೊಸ ಅನುಭವ ಹಾಗೂ ಸಹೃದಯರ ರಸಯಾತ್ರೆಯಂತಿದೆ ಎಂದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕನ್ನಡ ಪುಸ್ತಕ ಪ್ರಾಧಿಕಾರದ ಜಿಲ್ಲಾ ಜಾಗೃತಿ ಸಮಿತಿ ಸದಸ್ಯ ಪ್ರೊ. ಬಸವರಾಜ ಜಾಲವಾದಿ ಮಾತನಾಡಿ, ಪುಸ್ತಕ ಓದುವವನು ಒಂದೇ ಜನ್ಮದಲ್ಲಿ ಸಾವಿರ ಜೀವನಗಳನ್ನು ಕಾಣಬಲ್ಲ. ಬುದ್ಧ, ಬಸವಣ್ಣ ಹಾಗೂ ಅಂಬೇಡ್ಕರ್ ಅವರ ವಿಚಾರಗಳನ್ನು ಅರಿಯಲು ಪುಸ್ತಕ ಓದು ಮಹತ್ವದ ಸಾಧನವಾಗಿದೆ ಎಂದು ಹೇಳಿದರು.  

ಕಕಮರಿ ಗುರುದೇವಾಶ್ರಮದ ಪರಮಪೂಜ್ಯ   ಆತ್ಮಾರಾಮ ಮಹಾಸ್ವಾಮಿಗಳು ಆಶೀರ್ವಚನ ನೀಡಿ, ‘ಮನೆಗೊಂದು ಗ್ರಂಥಾಲಯ’ ಕಾರ್ಯಕ್ರಮವು ಆದರ್ಶವಾದದ್ದು. ಪ್ರತಿಯೊಬ್ಬರೂ ತಮ್ಮ ಮನೆಯಲ್ಲಿ ಗ್ರಂಥಾಲಯ ಸ್ಥಾಪಿಸಿಕೊಂಡು ಪುಸ್ತಕ ಓದುವ ಸಂಸ್ಕೃತಿಯನ್ನು ಬೆಳೆಸಿಕೊಳ್ಳಬೇಕು. ಇಂತಹ ಕಾರ್ಯಕ್ರಮಗಳು ಸಮಾಜವನ್ನು ಅಜ್ಞಾನವೆಂಬ ಕತ್ತಲಿನಿಂದ ಹೊರತರುವಲ್ಲಿ ಸಹಕಾರಿಯಾಗುತ್ತವೆ ಎಂದರು. ವೇದಿಕೆಯಲ್ಲಿ ಯರಡೋಣದ ಕುಮಾರೇಶ್ವರ ಸ್ವಾಮೀಜಿ, ಪ್ರಗತಿಪರ ರೈತರಾದ ಮಲ್ಲಿಕಾರ್ಜುನ ಹಂಜಗಿ, ಶ್ರೀಧರ ಮುರಾಳೆ, ಕಬ್ಬೂರಿನ ಬಾಬೂರಾವ್ ಮಹಾರಾಜ್ ಹಾಗೂ ಆಸ್ಟ್ರೇಲಿಯಾದಿಂದ ಆಗಮಿಸಿ ವಚನ ಪಠಣ ಮಾಡಿದ ವೀರೇಶ ಹಿರೇಮಠ ಉಪಸ್ಥಿತರಿದ್ದರು. ಜಿಲ್ಲಾ ಜಾಗೃತಿ ಸಮಿತಿ ಸದಸ್ಯ ಬಸವರಾಜ ಸಾಲವಾಡಗಿ ಕಾರ್ಯಕ್ರಮ ನಿರ್ವಹಿಸಿದರು. ಸಹಪ್ರಾಧ್ಯಾಪಕ ಬಸವರಾಜ ಬೆಳಗಲಿ ವಚನ ಗಾಯನದ ಮೂಲಕ ಸ್ವಾಗತಿಸಿದರು. ಸಿದ್ಧಾರ್ಥ ಪರಣಾಕಾರ ವಂದಿಸಿದರು. ಕಾರ್ಯಕ್ರಮದ ಕೊನೆಯಲ್ಲಿ ಕನ್ನಡ ಪುಸ್ತಕ ಪ್ರಾಧಿಕಾರದ ವತಿಯಿಂದ ಪರಣಾಕಾರ ದಂಪತಿಯನ್ನು ಶಾಲು ಹೊದಿಸಿ ಸನ್ಮಾನಿಸಿ ಅಭಿನಂದನಾ ಪತ್ರ ನೀಡಿ ಗೌರವಿಸಲಾಯಿತು.