ಸ್ವೇಚ್ಚಾಚಾರದ ನಡುವಳಿಕೆಯಿಂದ ಮಾರಕ ರೋಗ ತಗಲುವ ಅಪಾಯ; ಇದರ ಬಗ್ಗೆ ಅರಿವು ಹೊಂದಿರಬೇಕು: ಜಿಲ್ಲಾಧಿಕಾರಿ ದಿವ್ಯ ಪ್ರಭು
ಧಾರವಾಡ 04: ಅಪಾಯಕಾರಿ ಹೆಚ್.ಐ.ವಿ ಕುರಿತು ಯುವ ಜನಾಂಗ ಎಚ್ಚರದಿಂದ ಇರಬೇಕು. ಸ್ವೇಚ್ಚಾಚಾರದ ನಡುವಳಿಕೆಯಿಂದ ಮಾರಕ ರೋಗ ತಗಲುವ ಅಪಾಯವಿದೆ. ಏಡ್ಸದಂತಹ ರೋಗಗಳಿಂದ ದೂರವಿರಲು ಅರಿವು, ಜಾಗೃತೆ ಮತ್ತು ಸುರಕ್ಷತಾ ಕ್ರಮಗಳನ್ನು ಪಾಲಿಸಬೇಕೆಂದು ಜಿಲ್ಲಾಧಿಕಾರಿ ದಿವ್ಯ ಪ್ರಭು ಅವರು ಹೇಳಿದರು.
ಅವರು ಇಂದು ಬೆಳಿಗ್ಗೆ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಕಚೇರಿ ಆವರಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮತ್ತು ಸರ್ಕಾರೇತರ ಸಂಘ, ಸಂಸ್ಥೆಗಳು, ಶಾಲಾಕಾಲೇಜು ವಿದ್ಯಾರ್ಥಿಗಳ ಸಂಯುಕ್ತ ಆಶ್ರಯದಲ್ಲಿ ಆಯೋಜಿಸಿದ್ದ ವಿಶ್ವ ಏಡ್ಸ್ ದಿನ ಕಾರ್ಯಕ್ರಮದ ಜನಜಾಗೃತಿ ಜಾಥಾ ಕಾರ್ಯಕ್ರಮಕ್ಕೆ ಹಸಿರು ಬಾವುಟ ತೋರಿ ಚಾಲನೆ ನೀಡಿ, ಮಾತನಾಡಿದರು.
ಎಚ್.ಐ.ವಿ ಮತ್ತು ಏಡ್ಸ್ ಕಾಯಿಲೆಯು ಕಳೆದ 35 ವರ್ಷಗಳಿಂದ ಮಾನವ ಜನಾಂಗವನ್ನು ಕಾಡುತ್ತಿದ್ದು, ಇದರ ನಿಯಂತ್ರಣಕ್ಕಾಗಿ ರಾಷ್ಟ್ರೀಯ ಏಡ್ಸ್ ನಿಯಂತ್ರಣ ಸಂಸ್ಥೆ ಹಾಗೂ ಕರ್ನಾಟಕ ರಾಜ್ಯ ಏಡ್ಸ್ ಫ್ರೀವೆನಷನ್ ಸೋಸೈಟಿ ಅವರ ನಿರಂತರ ಕಾರ್ಯಕ್ರಮಗಳಿಂದಾಗಿ ಎಚ್.ಐ.ವಿ ಸೋಂಕಿತರ ಪ್ರಮಾಣವು ಕಡಿಮೆಯಾಗುತ್ತಾ ಬಂದಿದೆ. ಎಚ್.ಐ.ವಿ. ವೈರಸ್ಸು ನಗರ ಪ್ರದೇಶದಿಂದ ಗ್ರಾಮೀಣ ಪ್ರದೇಶಕ್ಕೆ ಹಾಗೂ ಅಪಾಯದ ಸಮುದಾಯಗಳಿಂದ ಸಾಮಾನ್ಯ ಜನರೆಡೆಗೆ ವಿಸ್ತರಿಸಿದೆ. ಈ ಕಾರಣಗಳಿಂದಾಗಿ ಏಡ್ಸ್ ರೋಗ ನಿಯಂತ್ರಣದ ಕಾರ್ಯಕ್ರಮಗಳನ್ನು ಜಿಲ್ಲಾ ಮಟ್ಟದಿಂದ ತಾಲೂಕ ಹಾಗೂ ಗ್ರಾಮೀಣ ಮಟ್ಟದವರೆಗೆ ವಿಸ್ತರಿಸಲಾಗಿದೆ ಎಂದು ಜಿಲ್ಲಾಧಿಕಾರಿ ದಿವ್ಯ ಪ್ರಭು ಅವರು ತಿಳಿಸಿದರು.
ಎಚ್.ಐ.ವಿ. ಮತ್ತು ಏಡ್ಸ್ ನಿಯಂತ್ರಣಕ್ಕಾಗಿ ಜಿಲ್ಲೆಯಲ್ಲಿನ ಎಚ್.ಐ.ವಿಯ ಮೂಲ ಮಾಹಿತಿಗಳನ್ನು ಜನರಿಗೆ ತಿಳಿಯಪಡಿಸುವುದು, ಜಿಲ್ಲೆಯಲ್ಲಿನ ಎಲ್ಲಾ ತಾಲೂಕುಗಳಲ್ಲಿ ಜಾನಪದ ಕಲಾ ತಂಡಗಳ ಮೂಲಕ ಜನರಿಗೆ ಅರಿವು ಮೂಡಿಸುವುದು, ವಿಶ್ವ ಏಡ್ಸ್ ದಿನಾಚರಣೆ ಅಂಗವಾಗಿ ಜಾಥಾ ಹಾಗೂ ಅರಿವು ಮೂಡಿಸುವ ಕಾರ್ಯಕ್ರಮ ಹಮ್ಮಿಕೊಳ್ಳುವುದು, ಕರಪತ್ರ, ಪೊಸ್ಟರ್, ಬ್ಯಾನರ್, ಬಿತ್ತಿ ಪತ್ರ, ಗೋಡೆ ಬರಹ ಹಾಗೂ ಮಾಧ್ಯಮಗಳ ಮುಖಾಂತರ ಅರಿವು ಮೂಡಿಸುವ ಕಾರ್ಯಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಅವರು ತಿಳಿಸಿದರು.
ಜಿಲ್ಲೆಯಲ್ಲಿ 2023-24 ನೇ ಸಾಲಿನಲ್ಲಿ ಲೈಂಗಿಕ ಸಂಪರ್ಕದ ಸೋಂಕುಗಳ ಬಗ್ಗೆ 6029 ಜನರು ಚಿಕಿತ್ಸೆ ಪಡೆದಿದ್ದಾರೆ. ಮತ್ತು 2024-25 ನೇ ಸಾಲಿನ ಅಕ್ಟೋಬರ ವರೆಗೆ 5805 ಜನರು ಚಿಕಿತ್ಸೆ ಪಡೆದು ಕೊಂಡಿದ್ದಾರೆ. ಎಚ್.ಐ.ವಿ. ಸೋಂಕಿತ ತಂದೆ, ತಾಯಿಯವರಿಂದ ಮಕ್ಕಳಿಗೆ ಸೋಂಕು ಬರದಂತೆ ತಡೆಯುವುದು ಈ ಚಿಕಿತ್ಸೆಯ ಧ್ಯೇಯವಾಗಿದೆ.
ಧಾರವಾಡ ಜಿಲ್ಲೆಯಲ್ಲಿ 2020-21 ನೇ ಸಾಲಿನಲ್ಲಿ 34,177 ಜನರು ಪರೀಕ್ಷಿಸಿದ್ದು, 335 ಜನರಿಗೆ ರೋಗ ಕಂಡುಬಂದೆ. 2021-22 ನೇ ಸಾಲಿನಲ್ಲಿ 59,757 ಜನರು ಪರೀಕ್ಷಿಸಿದ್ದು, 405 ಜನರಿಗೆ ರೋಗ ಕಂಡುಬಂದೆ. 2022-23 ನೇ ಸಾಲಿನಲ್ಲಿ 79,096 ಜನರು ಪರೀಕ್ಷಿಸಿದ್ದು, 412 ಜನರಿಗೆ ರೋಗ ಕಂಡುಬಂದಿದೆ. 2023-24 ನೇ ಸಾಲಿನಲ್ಲಿ 1,01,542 ಜನರು ಪರೀಕ್ಷಿಸಿದ್ದು, 482 ಜನರಿಗೆ ರೋಗ ಕಂಡುಬಂದಿದೆ. 2024-25 ನೇ ಸಾಲಿನಲ್ಲಿ ಇಲ್ಲಿವರೆಗೆ 71,967 ಜನರನ್ನು ಪರೀಕ್ಷಿಸಿದ್ದು, 279 ಜನರಿಗೆ ರೋಗ ಕಂಡುಬಂದಿದೆ ಎಂದು ತಿಳಿಸಿದ್ದಾರೆ.
ಎಚ್.ಐ.ವಿ. ಮತ್ತು ಏಡ್ಸನೊಂದಿಗೆ ಬದುಕುತ್ತಿರುವ 371 ಜನರಿಗೆ ಅನ್ನ ಅಂತ್ಯೋದಯ ಕಾರ್ಯಕ್ರಮ, ರಾಜೀವ್ ಗಾಂಧಿ ಗ್ರಾಮೀಣ ವಸತಿ ಯೋಜನೆ ಅಡಿಯಲ್ಲಿ 764 ಜನರ ಪಟ್ಟಿಯನ್ನು ಆಯ್ಕೆ ಮಾಡಿ ಸಲ್ಲಿಸಲಾಗಿದೆ. ಆಧಾರ್ ಕಾರ್ಡ್ ಸೌಲಭ್ಯ, ಬ್ಯಾಂಕ್ ಖಾತೆ ಸೌಲಭ್ಯ, ಉಚಿತ ರೈಲು ಪ್ರಯಾಣ ಸೌಲಭ್ಯ, ಶಿಕ್ಷಣ ಹಾಗೂ ವಸತಿ ನಿಲಯ ಸೌಲಭ್ಯ ಎ.ಆರ್.ಟಿ ಚಿಕಿತ್ಸೆಗೆ ಬರುವ ಅಬ್ಯರ್ಥಿಗಳಿಗೆ ಪ್ರಯಾಣ ಭತ್ಯ ಸೌಲಭ್ಯ ಮತ್ತು ವೃತ್ತಿ ಕೌಶಲ್ಯ ತರಬೇತಿ ಸೌಲಭ್ಯ ಮುಂತಾದ ಕಾರ್ಯಕ್ರಮಗಳನ್ನು ಅವರಿಗಾಗಿ ಜಾರಿಗೆ ತರಲಾಗಿದೆ ಎಂದು ಜಿಲ್ಲಾಧಿಕಾರಿಗಳು ತಿಳಿಸಿದರು.
ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಯಲ್ಲಿ ಎ.ಆರ್.ಟಿ ಪ್ಲಸ್ ಕೇಂದ್ರ, ಧಾರವಾಡದ ಜಿಲ್ಲಾ ಆಸ್ಪತ್ರೆಯಲ್ಲಿ ಎ.ಆರ್.ಟಿ ಕೇಂದ್ರ, ನವಲಗುಂದ, ಕಲಘಟಗಿ, ಕುಂದಗೋಳ ತಾಲೂಕು ಆಸ್ಪತ್ರೆಗಳಲ್ಲಿ ಎ.ಆರ್.ಟಿ ಪ್ಲಸ್ ಓಷಧೋಪಚಾರ ಕೇಂದ್ರಗಳು ಇವೆ ಎಂದು ಜಿಲ್ಲಾಧಿಕಾರಿ ದಿವ್ಯ ಪ್ರಭು ಅವರು ಹೇಳಿದರು.
ಏಡ್ಸ್‌ಗೆ ಚಿಕಿತ್ಸೆ ಸಾಧ್ಯ. ಆದರೆ ಸಂಪೂರ್ಣ ಗುಣಮುಖರಾಗಲು ಕಷ್ಟಸಾಧ್ಯ. ಈ ಕಾರಣದಿಂದ ರೋಗಕ್ಕೆ ತುತ್ತಾಗದಂತೆ ಎಚ್ಚರ ವಹಿಸಬೇಕು. ಏಡ್ಸ್ ಕುರಿತು ಅರಿವು ಹೊಂದಬೇಕು. ಮಾನಸಿಕವಾಗಿ ಮತ್ತು ದೈಹಿಕವಾಗಿ ಆರೋಗ್ಯ ಕಾಪಾಡಿಕೊಳ್ಳಬೇಕು ಎಂದು ಅವರು ಸಲಹೆ ನೀಡಿದರು.
ಜಿಲ್ಲಾ ಆರೋಗ್ಯಾಧಿಕಾರಿ ಡಾ.ಶಶಿ ಪಾಟೀಲ ಅವರು ಪ್ರಾಸ್ತಾವಿಕವಾಗಿ ಮಾತನಾಡಿ, ಧಾರವಾಡ ಜಿಲ್ಲೆಯಲ್ಲಿ ಸೇವಾ ಮಾಹಿತಿ ನೀಡಲು ಸಮಗ್ರ ಆಪ್ತ ಸಮಾಲೋಚನಾ ಮತ್ತು ಪರೀಕ್ಷಾ ಕೇಂದ್ರಗಳು-11, ಎಫ್-ಐ. ಸಿ.ಟಿ ಸಿ. ಪ್ರಾಥಮಿಕ ಆರೋಗ್ಯ ಕೇಂದ್ರಗಳು-32, ಪಿಪಿಪಿ ಕೇಂದ್ರ-1 ಪೂರ್ಣ ಪ್ರಮಾಣದ ಏ.ಆರ್.ಟಿ ಚಿಕಿತ್ಸಾ ಕೇಂದ್ರಗಳು-2, ಲಿಂಕ್ ಏ.ಆರ್.ಟಿ ಪ್ಲಸ್ ಕೇಂದ್ರಗಳು-5, ರಕ್ತನಿಧಿ ಕೇಂದ್ರಗಳು-11, ಟಿ.ಐ.ಎನ್.ಜಿ.ಒ ಕೇಂದ್ರ-1, ಸಿ.ಎಸ್.ಸಿ ಬೆಂಬಲ ಹಾಗೂ ಆರೈಕೆ ಕೇಂದ್ರ-1, ಎಸ್.ಆರ್.ಎಲ್ ಕೇಂದ್ರ-1, ಎಸ್.ಆರ್.ಸಿ ಕೇಂದ್ರ-1 ಗಳನ್ನು ತೆರೆಯಲಾಗಿದೆ ಎಂದರು.
2020-21 ರಲ್ಲಿ 36,985 ಗರ್ಭಿಣಿಯರು ಪರೀಕ್ಷಿಸಿದ್ದು, 20 ಜನ ಗರ್ಭಿಣಿ ಸ್ತ್ರೀಯರಲ್ಲಿ ರೋಗ ಕಂಡುಬಂದಿದೆ. 2021-22 ರಲ್ಲಿ 44,707 ಗರ್ಭಿಣಿಯರು ಪರೀಕ್ಷಿಸಿದ್ದು, 24 ಜನ ಗರ್ಭಿಣಿ ಸ್ತ್ರೀಯರಲ್ಲಿ ರೋಗ ಕಂಡುಬಂದಿದೆ. 2022-23 ರಲ್ಲಿ 50,384 ಜನ ಗರ್ಭಿಣಿಯರು ಪರೀಕ್ಷಿಸಿದ್ದು, 15 ಜನ ಗರ್ಭಿಣಿ ಸ್ತ್ರೀಯರಲ್ಲಿ ರೋಗ ಕಂಡುಬಂದಿದೆ. 2023-24 ರಲ್ಲಿ 50,501 ಜನ ಗರ್ಭಿಣಿಯರು ಪರೀಕ್ಷಿಸಿದ್ದು, 14 ಜನ ಗರ್ಭಿಣಿ ಸ್ತ್ರೀಯರಲ್ಲಿ ರೋಗ ಕಂಡುಬಂದಿದೆ. 2024-25 ನೇ ಸಾಲಿನ ಅಕ್ಟೋಬರ್‌ವರೆಗೆ 27,063 ಜನ ಗರ್ಭಿಣಿಯರು ಪರೀಕ್ಷಿಸಿದ್ದು, 10 ಜನ ಗರ್ಭಿಣಿ ಸ್ತ್ರೀಯರಲ್ಲಿ ರೋಗ ಕಂಡುಬಂದಿದೆ ಎಂದು ಅವರು ತಿಳಿಸಿದರು.
ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಹಾಗೂ ಹಿರಿಯ ಸಿವಿಲ್ ನ್ಯಾಯಾಧೀಶ ಪರಶುರಾಮ ದೊಡ್ಡಮನಿ ಅವರು ಮಾತನಾಡಿ, ಏಡ್ಸ್ ಬಗ್ಗೆ ಜಾಗೃತಿ ಮುಖ್ಯ. ತಪ್ಪು ತಿಳುವಳಿಕೆಯಿಂದ ಜನರಲ್ಲಿ ಆತಂಕ ಉಂಟಾಗುತ್ತದೆ. ಸುರಕ್ಷಿತ ಲೈಂಗಿಕ ಸಂಪರ್ಕ ಹಾಗೂ ಮುನ್ನಚ್ಚರಿಕೆ ಕ್ರಮಗಳಿಂದ ಏಡ್ಸ್ ಬರದಂತೆ ಎಚ್ಚರಿಕೆ ವಹಿಸಬಹುದು ಎಂದು ಅವರು ಹೇಳಿದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ. ಶಶಿ ಪಾಟೀಲ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ಆರ್.ಸಿ.ಎಚ್.ಓ ಡಾ.ಸುಜಾತಾ ಹಸವಿಮಠ, ಡಿಟಿಓ ಡಾ.ರವೀಂದ್ರ ಬೋವೆರ, ತಾಲೂಕು ವೈದ್ಯಾಧಿಕಾರಿ ಡಾ.ಕೆ.ಎನ್.ತನುಜಾ, ಡಾ.ಆರ್.ಬಿ.ಪಾಟೀಲ ಕ್ಯಾನ್ಸರ್ ಆಸ್ಪತ್ರೆಯ ಡಾ. ಹಳ್ಳಿಗೇರಿ ಸೇರಿದಂತೆ ವಿವಿಧ ವೈದ್ಯರು, ಅಧಿಕಾರಿಗಳು, ಶ್ರೇಯಾ, ವಿಹಾನ ಮತ್ತು ಆರ್.ಎಲ್.ಎಸ್. ಕಾಲೇಜು ವಿದ್ಯಾರ್ಥಿಗಳು, ಸಿಬ್ಬಂದಿಗಳು, ಆರೋಗ್ಯ ಕಾರ್ಯಕರ್ತರು, ಆರೋಗ್ಯ ಇಲಾಖೆ ಸಿಬ್ಬಂದಿಗಳು ಜಾಥಾ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಐಇಸಿ ಅಧಿಕಾರಿ ಪಾತ್ರೋಟ ಅವರು ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.
ಜನಜಾಗೃತಿ ಜಾಥಾ: ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳ ಕಚೇರಿ ಆವರಣದಲ್ಲಿ ಏಡ್ಸ್ ಜಾಗೃತಿ ಜಾಥಾಕ್ಕೆ ಜಿಲ್ಲಾಧಿಕಾರಿ ದಿವ್ಯ ಪ್ರಭು ಹಾಗೂ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಪರಶುರಾಮ ದೊಡ್ಡಮನಿ ಚಾಲನೆ ನೀಡಿದರು.
ಜಾಥಾವು ಹಳೆ ಡಿವೈಎಸ್ಪಿ ಸರ್ಕಲ್, ರಾಣಾ ಪ್ರತಾಪಸಿಂಹ ಸರ್ಕಲ್, ಆಲೂರು ವೆಂಕಟರಾವ್ ಸರ್ಕಲ್, ಜಿಲ್ಲಾ ನ್ಯಾಯಾಲಯ ಮೂಲಕ ಮರಳಿ ಡಿಎಚ್‌ಓ ಕಚೇರಿ ತಲುಪಿತು. ಏಡ್ಸ್ ಮುನ್ನಚ್ಚರಿಕೆ, ಸುರಕ್ಷಿತ ಲೈಂಗಿಕತೆ, ಉಚಿತ ಚಿಕಿತ್ಸೆ ಕುರಿತು ಘೋಷಣೆಗಳ ಮೂಲಕ ಆರೋಗ್ಯ ಕಾರ್ಯಕರ್ತರು, ವಿದ್ಯಾರ್ಥಿಗಳು ಜನಜಾಗೃತಿ ಮೂಡಿಸಿದರು. ಹರ್ಲಾಪುರದ ಕಲಾವಿದ ಎಸ್.ಎಸ್.ಹಿರೇಮಠ ನೇತೃತ್ವದ ಯುವಜನ ಹಾಗೂ ಸಂಸ್ಕೃತಿಕ ಅಭಿವೃದ್ಧಿ ಕೇಂದ್ರ ಕಲಾವಿದರ ಜಾನಪದ ತಂಡ ಏಡ್ಸ ಜಾಗೃತಿ ಗೀತೆಗಳನ್ನು ಜಾಥಾದಲ್ಲಿ ಪ್ರಸ್ತುತ ಪಡಿಸಿತು.