ಸಾಮಾಜಿಕ ಜಾಲತಾಣ ಬಳಕೆಯಲ್ಲಿ ಯುವಜನರು ಎಚ್ಚರ ವಹಿಸಲಿ

ಸಾಮಾಜಿಕ ಜಾಲತಾಣ ಬಳಕೆಯಲ್ಲಿ ಯುವಜನರು ಎಚ್ಚರ ವಹಿಸಲಿ  Young people should exercise caution while using social media


ತಾಳಿಕೋಟಿ ಸೆ.7: ಸಾಮಾಜಿಕ ಜಾಲತಾಣಗಳ ಅತಿಯಾದ ಬಳಕೆಯಿಂದ ಇಂದಿನ ಯುವಜನರು ದಾರಿ ತಪ್ಪುತ್ತಿದ್ದು, ಬದುಕಿನಲ್ಲಿ ತೆಗೆದುಕೊಳ್ಳುವ ಕೆಲವು ತಪ್ಪು ನಿರ್ಧಾರಗಳು ಜೀವನವನ್ನೇ ಬಲಿತೆಗೆದುಕೊಳ್ಳುವ ಅಪಾಯವಿದೆ. ಆದ್ದರಿಂದ ಯುವಕ-ಯುವತಿಯರು ಎಚ್ಚರಿಕೆಯಿಂದ ನಡೆದುಕೊಳ್ಳಬೇಕು ಎಂದು ವಿಜಯಪುರ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಅಭಿವೃದ್ಧಿ ಇಲಾಖೆಯ ಜಿಲ್ಲಾ ಮಿಷನ್ ಸಂಯೋಜಕಿ ಭಾರತಿ ಪಾಟೀಲ ಹೇಳಿದರು.  

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಹಾಗೂ ಜಿಲ್ಲಾ ಮಕ್ಕಳ ರಕ್ಷಣಾ ಘಟಕ, ವಿಜಯಪುರ ಇವರ ಸಹಯೋಗದಲ್ಲಿ ಆದರ್ಶ ಪ್ರಥಮ ದರ್ಜೆ ಕಲಾ ಮತ್ತು ವಿಜ್ಞಾನ ಕಾಲೇಜಿನ ಲೈಂಗಿಕ ಕಿರುಕುಳ ಪರಿಹಾರ ಕೋಶದಡಿ ನಡೆದ ಪೋಕ್ಸೋ ಕಾಯ್ದೆ ಹಾಗೂ ಸಾಮಾಜಿಕ ಜಾಲತಾಣಗಳ ಅತಿಯಾದ ಬಳಕೆಯ ದುಷ್ಪರಿಣಾಮಗಳ ಕುರಿತ ಜಾಗೃತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.  

ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಆಪ್ತ ಸಮಾಲೋಚಕಿ ನೀಲಮ್ಮ ಅರಳಗುಂಡಗಿ ಮಾತನಾಡಿ, ಮಕ್ಕಳ ಹಕ್ಕುಗಳ ರಕ್ಷಣೆ, ಬಾಲ್ಯವಿವಾಹದ ದುಷ್ಪರಿಣಾಮಗಳು, ಕಾನೂನು ನೆರವು, ಪೋಕ್ಸೋ ಕಾಯ್ದೆಯ ಉದ್ದೇಶ ಹಾಗೂ ಮಕ್ಕಳ ಸಹಾಯವಾಣಿ 1098 ಕುರಿತು ವಿದ್ಯಾರ್ಥಿಗಳಿಗೆ ಮಾಹಿತಿ ನೀಡಿದರು. ಬಳಿಕ ವಿದ್ಯಾರ್ಥಿಗಳಿಗೆ ಪ್ರತಿಜ್ಞಾವಿಧಿ ಬೋಧಿಸಲಾಯಿತು.  

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಆಡಳಿತಾಧಿಕಾರಿ ಅಬ್ದುಲ್ ಸತ್ತಾರ್ ಸಿರಸಗಿ ವಹಿಸಿದ್ದರು. ಪ್ರಾಚಾರ್ಯರಾದ ಎಸ್‌.ಎಂ. ಸಜ್ಜನ, ಪಿಯು ಕಾಲೇಜಿನ ಪ್ರಾಚಾರ್ಯ ಅಜಯ್ ಬರಗಾಲಿ, ಪ್ಯಾರಾಮೆಡಿಕಲ್ ಕಾಲೇಜಿನ ಪ್ರಾಚಾರ್ಯ ಎಚ್‌.ಎ. ಮೊಮಿನ್ ಸೇರಿದಂತೆ ಉಪನ್ಯಾಸಕರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.