ಯುವ ಪೀಳಿಗೆ ತಂಬಾಕು ಸೇವನೆಯಿಂದ ದೂರವಿರಿ - ಡಾ. ಟಿ.ಲಿಂಗರಾಜು

ಯುವ ಪೀಳಿಗೆ ತಂಬಾಕು ಸೇವನೆಯಿಂದ ದೂರವಿರಿ - ಡಾ. ಟಿ.ಲಿಂಗರಾಜು Young generation should stay away from tobacco use - Dr. T. Lingaraju


ಕೊಪ್ಪಳ  19:  ಇಂದಿನ ಯುವ ಪೀಳಿಗೆ ತಂಬಾಕು ಸೇವನೆಯಿಂದ ದೂರವಿದ್ದು, ಆರೋಗ್ಯವಂತ ಸಮಾಜ ನಿರ್ಮಾಣಕ್ಕೆ ಮುಂದಾಗಬೇಕೆಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ. ಟಿ.ಲಿಂಗರಾಜು ಹೇಳಿದರು. ಅವರು ಬುಧವಾರ ಕೊಪ್ಪಳ ನಗರದಲ್ಲಿನ ಹಳೇ ಜಿಲ್ಲಾಸ್ಪತ್ರೆಯ ಸಭಾಭವನದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ತಂಬಾಕು ನಿಯಂತ್ರಣ ಕೋಶ ಕೊಪ್ಪಳ ಇವರ ಸಂಯುಕ್ತಾಶ್ರಯದಲ್ಲಿ ರಾಷ್ಟ್ರೀಯ ತಂಬಾಕು ನಿಯಂತ್ರಣ ಕಾರ್ಯಕ್ರಮದಡಿ ತಂಬಾಕು ಸೇವನೆಯಿಂದ ಆರೋಗ್ಯದ ಮೇಲೆ ಉಂಟಾಗುವ ದುಷ್ಪರಿಣಾಮಗಳು ಮತ್ತು ಕೋಟ್ಪಾ-2003 ಕಾಯ್ದೆ ಅನುಷ್ಠಾನ ಕುರಿತು “ರಾಷ್ಟ್ರೀಯ ಸೇವಾ ಯೋಜನೆಯ ವಿದ್ಯಾರ್ಥಿಗಳಿಗೆ'' ಹಮ್ಮಿಕೊಂಡಿದ್ದ ಒಂದು ದಿನ ತರಬೇತಿ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು. 

ತಂಬಾಕು ಸೇವನೆಯಿಂದ ಆರೋಗ್ಯದ ಮೇಲೆ ಹಲವಾರು ದುಷ್ಪರಿಣಾಮಗಳು ಉಂಟಾಗುತ್ತವೆ. ಸಿಗರೇಟ್, ಬೀಡಿ, ಸಿಗಾರ್, ಹುಕ್ಕಾ ತಂಬಾಕು ವಿಧಗಳಾಗಿವೆ. ತಂಬಾಕು ಸೇವನೆಯಿಂದ ಕ್ಯಾನ್ಸರ್, ಹೃದಯ ಸಂಬಂಧಿ ಕಾಯಿಲೆ, ಶ್ವಾಸಕೋಶದ ಕಾಯಿಲೆ, ಲಕ್ವಾ ಇತರೆ ಕಾಯಿಲೆಗಳು ಸಂಭವಿಸುತ್ತವೆ. ಪ್ರತಿ ಸಿಗರೇಟ್, ಬೀಡಿ ಸೇವನೆಯಿಂದ 7 ನಿಮಿಷ ಆಯಸ್ಸು ಕಡಿಮೆ ಮಾಡುತ್ತದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ತಿಳಿಸುತ್ತದೆ. ತಂಬಾಕಿನಲ್ಲಿ ನಿಕೋಟಿನ್ ಎಂಬ ವಿಷಕಾರಕ ಪದಾರ್ಥ ಇದ್ದು, ಇದರಲ್ಲಿ 3000 ದಿಂದ 7000 ಆಪಾಯಕಾರಿ ರಾಸಾಯನಿಕ ವಿಷಾನಿಲಗಳು ಇರುತ್ತವೆ. ಮಹಿಳೆಯರಲ್ಲೂ ತಂಬಾಕು ಸೇವನೆಯಿಂದ ಗರ್ಭಪಾತ, ಗರ್ಭಕಂಠದ ಕ್ಯಾನ್ಸರ್, ಕಡಿಮೆ ತೂಕವಿರುವ ಮಗುವಿನ ಜನನ ಹಾಗೂ ಶಿಶುಮರಣ ಸಂಭವಿಸುವ ಸಾಧ್ಯತೆ ಇರುತ್ತದೆ. ಪ್ರತಿ ವರ್ಷ ವಿಶ್ವದಾದ್ಯಂತ 60 ಲಕ್ಷಕ್ಕಿಂತ ಹೆಚ್ಚು ಜನರು ತಂಬಾಕು ಸೇವನೆಯಿಂದ ಉಂಟಾಗುವ ಕಾಯಿಲೆಗಳಿಂದ ಸಾವನ್ನಪ್ಪುತ್ತಿದ್ದಾರೆ. ಇದನ್ನು ಅರಿತುಕೊಂಡ ಸಾರ್ವಜನಿಕರು, ವಿಶೇಷವಾಗಿ ಯುವ ಜನರು ತಂಬಾಕು ಸೇವನೆಯಿಂದ ದೂರವಿರಬೇಕು ಎಂದರು. 

ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಜಿಲ್ಲಾ ಅನುಷ್ಠಾನಾಧಿಕಾರಿ ಡಾ. ರವೀಂದ್ರನಾಥ್ ಎಂ.ಹೆಚ್‌. ಅವರು  ಮಾತನಾಡಿ, ತಂಬಾಕು ತ್ಯಜಿಸುವುದರಿಂದ ಮತ್ತು ವ್ಯಸನಿಗಳು ನಿಲ್ಲಿಸಿದ ಕ್ಷಣದಿಂದ ಶ್ವಾಸಕೋಶ ಮತ್ತು ಹೃದಯ ಉತ್ತಮವಾಗಿ ಕಾರ್ಯನಿರ್ವಹಿಸಲು ಸಹಾಯ ಮಾಡುತ್ತದೆ. ಹಾಗಾಗಿ ಪೌಷ್ಠಿಕ ಆಹಾರ ಸೇವನೆಯನ್ನು ನಮ್ಮ ಜೀವನ ಶೈಲಿಯಲ್ಲಿ ಅಳವಡಿಸಿಕೊಳ್ಳಬೇಕು. ವಿದ್ಯಾರ್ಥಿಗಳು ತಂಬಾಕು ಸೇವನೆಯಂತಹ ದುಶ್ಚಟದಿಂದ ದೂರವಿರಬೇಕು ಮತ್ತು ವಿದ್ಯಾಭ್ಯಾಸದಲ್ಲಿ ಹೆಚ್ಚಿನ ಗಮನ ಹರಿಸಿ ಉಜ್ವಲ ಭವಿಷ್ಯ ರೂಪಿಸಿಕೊಳ್ಳಬೇಕು ಎಂದು ಹೇಳಿದರು. 

ರಾಜ್ಯ ತಂಬಾಕು ನಿಯಂತ್ರಣ ಕೋಶದ ವಿಭಾಗೀಯ ಸಂಯೋಜಕ  ಮಹಾಂತೇಶ್ ಬಿ. ಉಳ್ಳಾಗಡ್ಡಿ ಅವರು ಮಾತನಾಡಿ, ಭಾರತ ಸರ್ಕಾರವು ರಾಷ್ಟ್ರೀಯ ತಂಬಾಕು ನಿಯಂತ್ರಣ ಬಗ್ಗೆ 2003ರಲ್ಲಿ ಕೋಟ್ಪಾ ಕಾಯ್ದೆಯನ್ನು ಜಾರಿಗೊಳಿಸಿದೆ. ಸೆಕ್ಷನ್‌-4 ಪ್ರಕಾರ ಸಾರ್ವಜನಿಕ ಸ್ಥಳಗಳಲ್ಲಿ ಧೂಮಪಾನ ಮಾಡುವುದು ನಿಷೇಧ, ಸೆಕ್ಷನ್‌-5ರ ಪ್ರಕಾರ ತಂಬಾಕು ಉತ್ಪನ್ನಗಳ ನೇರ ಹಾಗೂ ಪರೋಕ್ಷ ಜಾಹೀರಾತು, ಉತ್ತೇಜನ ಪ್ರಯೋಜಕತೆ ನಿಷೇಧ, ಸೆಕ್ಷನ್‌-6(ಎ) ತಂಬಾಕು ಉತ್ಪನ್ನಗಳು ಅಪ್ರಾಪ್ತ ವಯಸ್ಕರಿಗೆ (21 ವರ್ಷದೊಳಗಿನ ಮಕ್ಕಳು) ಸಿಗದಂತೆ ನಿಯಂತ್ರಣ ಮಾಡುವುದು,

           ಸೆಕ್ಷನ್‌-6ಬಿ ಪ್ರಕಾರ ಶಿಕ್ಷಣ ಸಂಸ್ಥೆಗಳ 100 ಅಂತರ ಗಜಗಳ ವ್ಯಾಪ್ತಿಯಲ್ಲಿ ತಂಬಾಕು ಉತ್ಪನ್ನಗಳನ್ನು ಮಾರಾಟ ಮಾಡುವುದು ಶಿಕ್ಷಾರ್ಹ ಅಪರಾಧ, ಸೆಕ್ಷನ್‌-7 ಪ್ರಕಾರ ಸಿಗರೇಟ್ ಮತ್ತು ಇತರೆ ತಂಬಾಕು ಉತ್ಪನ್ನಗಳ ಮೇಲೆ ನಿರ್ಧಿಷ್ಟ ಆರೋಗ್ಯ ಎಚ್ಚರಿಕೆಗಳ ಸಂದೇಶಗಳಿಲ್ಲದೆ ಮಾರುವುದನ್ನು ನಿಷೇಧಿಸಲಾಗಿದೆ. ಈ ನಿಯಮಗಳನ್ನು ಉಲ್ಲಂಘಿಸಿದಲ್ಲಿ ಕೋಟ್ಪಾ ಕಾಯ್ದೆ-2003 ಕಲಂ 20ರ ಅಡಿಯಲ್ಲಿ ದಂಡ ಮತ್ತು ಜೈಲು ಶಿಕ್ಷೆಗೆ ಒಳಪಡಿಸಲಾಗುವುದು. ಯುವಜನತೆ ತಂಬಾಕು ಸೇವನೆಯಿಂದ ದೂರವಿರಬೇಕು ಎಂದು ಹೇಳುತ್ತಾ, ತಂಬಾಕು ವ್ಯಸನ ಮುಕ್ತ ಕೇಂದ್ರದಲ್ಲಿ ಸಿಗುವ ಸೌಲಭ್ಯಗಳ ಬಗ್ಗೆ ತಿಳಿಸಿದರು. 

ಕಾರ್ಯಾಗಾರದಲ್ಲಿ ಜಿಲ್ಲಾ ಸರ್ವೇಕ್ಷಣಾ ಮತ್ತು ರೋಗವಾಹಕ ಆಶ್ರಿತ ರೋಗಗಳ ನಿಯಂತ್ರಣಾಧಿಕಾರಿ ಡಾ. ನಂದಕುಮಾರ ಹೆಜ್‌., ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಶಿವಾನಂದ ವಿ.ಪಿ., ತಂಬಾಕು ನಿಯಂತ್ರಣ ಕೋಶದ ಜಿಲ್ಲಾ ಸಲಹೆಗಾರ ಸಂಗಪ್ಪ ಮಮಟಗೇರಿ, ಸೈಕಾಲಾಜಿಸ್ಟ್‌ ಶಾಂತಮ್ಮ ಕಟ್ಟಿಮನಿ, ಸಮಾಜ ಕಾರ್ಯಕರ್ತೆ ಸರಸ್ವತಿ ಹಾಗೂ ಎನ್‌.ಎಸ್‌.ಎಸ್ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.