ಆರೋಗ್ಯಕರ ಜೀವನ ಸಾಗಿಸಲು ಯೋಗ ಅವಶ್ಯಕ: ಶಾಸಕ ಸೈಲ್‌.

ಆರೋಗ್ಯಕರ ಜೀವನ ಸಾಗಿಸಲು ಯೋಗ ಅವಶ್ಯಕ: ಶಾಸಕ ಸೈಲ್‌. Yoga is essential for leading a healthy life: MLA Sail

ಕಾರವಾರ 21: ಪ್ರತಿಯೊಬ್ಬರಿಗೂ ಉತ್ತಮ ಜೀವನ ಸಾಗಿಸಲು ಆರೋಗ್ಯ ಬಹಳ ಮುಖ್ಯವಾಗಿದ್ದು, ಆರೋಗ್ಯವನ್ನು ಕಾಪಾಡಿಕೊಳ್ಳಲು ಮತ್ತು ಮಾನಸಿಕ ಒತ್ತಡವನ್ನು ಕಡಿಮೆ ಮಾಡಲು ಯೋಗ ಸಹಕಾರಿಯಾಗಲಿದೆ ಎಂದು ಕರ್ನಾಟಕ ರಾಜ್ಯ ಮಾರ್ಕೇಟಿಂಗ್ ಕನ್ಸಲೆಂಟ್ ಅಂಡ್ ಏಜೆನ್ಸಿಸ್ ಅಧ್ಯಕ್ಷ ಹಾಗೂ ಶಾಸಕ ಸತೀಶ್ ಸೈಲ್ ಹೇಳಿದರು. 

ಅವರು ಶನಿವಾರ ಪೋಲಿಸ್ ಕಲ್ಯಾಣ ಮಂಟಪ ಕಾಜುಭಾಗ ಕಾರವಾರದಲ್ಲಿ, ಜಿಲ್ಲಾಡಳಿತ , ಜಿಲ್ಲಾ ಪಂಚಾಯತ ಉತ್ತರ ಕನ್ನಡ ಜಿಲ್ಲೆ ಆಯುಷ್ ಇಲಾಖೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ, ಸಮಾಜ ಕಲ್ಯಾಣ, ಆರೋಗ್ಯ, ಶಿಕ್ಷಣ, ಕ್ರೀಡಾ ಮತ್ತು ಯುವ ಸಬಲೀಕರಣ, ಕನ್ನಡ ಮತ್ತು ಸಂಸ್ಕೃತಿ, ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆ, ಪದವಿ ಪೂರ್ವ ಶಿಕ್ಷಣ ಇಲಾಖೆ, ನಗರಸಭೆ ಕಾರವಾರ, ಸ್ಕೌಟ್ ಮತ್ತು ಗೈಡ್ಸ್‌, ಎನ್‌.ಸಿ.ಸಿ, ಎನ್‌.ಎಸ್‌.ಎಸ್, ರೆಡ್‌ಕ್ರಾಸ್, ಪತಂಜಲಿ, ರೋಟರಿ ಕ್ಲಬ್, ರೋಟರಿ ಸಿಸೈಡ್, ರೋಟರಿ ಪಶ್ಚಿಮ, ಸರಕಾರಿ ನೌಕರರ ಸಂಘ ಜಿಲ್ಲಾ ಶಾಖೆ ಕಾರವಾರ, ಹಾಗೂ ವಿವಿಧ ಸಂಘ ಸಂಸ್ಥೆಗಳ ಸಹಯೋಗದಲ್ಲಿ ನಡೆದ 11 ನೇ ಅಂತಾರಾಷ್ಟ್ರೀಯ ಯೋಗ ದಿನಾಚರಣೆಯನ್ನು ಉದ್ಘಾಟಿಸಿ ಮಾತನಾಡಿದರು. 

ಇತ್ತಿಚಿನ ದಿನಗಳಲ್ಲಿ ಚಿಕ್ಕವರಿಂದ ದೊಡ್ಡವರವರೆಗೆ ಎಲ್ಲರಿಗೂ ಮಾನಸಿಕ ಒತ್ತಡವಿರುತ್ತದೆ ಆದರಲ್ಲೂ ಶಾಲಾ ಕಾಲೇಜು ಮಕ್ಕಳಲ್ಲಿ ಹೆಚ್ಚಿನ ಒತ್ತಡ ಇರುತ್ತದೆ ಆದರಿಂದ ಪ್ರತಿ ಶಾಲೆಗಳಲ್ಲಿ ಮಕ್ಕಳಿಗೆ ಯೋಗವನ್ನು ಹೇಳಿಕೊಡುವಂತೆ ಶಿಕ್ಷಣ ಇಲಾಖಾಧಿಕಾರಿಗಳಿಗೆ ಸೂಚಿಸಿದ ಅವರು,  ಇತ್ತಿಚಿನ ದಿನಗಳಲ್ಲಿ ಆನ್‌ಲೈನ್ ಸೇವೆಗಳ ಮೂಲಕ ಪಡೆಯುವ ರೆಡಿಮೇಡ್ ಫುಡ್ ಗಳ  ಸೇವನೆಯಿಂದ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತಿದೆ. ಆದ್ದರಿಂದ ಪ್ರತಿಯೊಬ್ಬರೂ ಉತ್ತಮ ಆಹಾರ ಸೇವನೆಯ ಜೊತೆಯಲ್ಲಿ  ಆಸಕ್ತಿಯಿಂದ ಯೋಗವನ್ನು ಮಾಡಿ ಆರೋಗ್ಯವಂತರಾಗಿರಬೇಕು ಎಂದರು. 

ಜಿಲ್ಲಾಧಿಕಾರಿ ಕೆ. ಲಕ್ಷ್ಮೀಪ್ರಿಯಾ ಮಾತನಾಡಿ, ವಿಶ್ವದಲ್ಲೇ ಇಂದು ಯೋಗ ದಿನಾಚರಣೆಯನ್ನು ಆಚರಿಸಲಾಗಿದೆ. ನಮ್ಮ ಪೂರ್ವಜರು ಪ್ರತಿ ಕ್ಷಣ ದೈಹಿಕ ಚಟುವಟಿಕೆಯಲ್ಲಿ ತೊಡಗಿಸಿಕೊಂಡು ಆರೋಗ್ಯವನ್ನು ಕಾಪಾಡಿಕೊಳ್ಳುತ್ತಿದ್ದರು ಇಂದಿನ ಆಧುನಿಕ ಕಾಲದಲ್ಲಿ ಯಾರು ಕೂಡ ಹೆಚ್ಚಿನ ದೈಹಿಕ ಕಾರ್ಯಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವುದಿಲ್ಲ ಪ್ರತಿದಿನ ಯೋಗ ಮಾಡುವುದರ ಮೂಲಕ ದೈಹಿಕ ಮತ್ತು ಮಾನಸಿಕ ಆರೋಗ್ಯ ಪಡೆಯಬಹುದಾಗಿದೆ ಎಂದರು.  

ಜಿಲ್ಲೆಯಲ್ಲಿ ಯೋಗ ಕಲಿಕೆಗೆ ಪ್ರತಿ ತಾಲೂಕಿನಲ್ಲೂ  ಯೋಗ ತರಬೇತಿದಾರರಿದ್ದಾರೆ, ಅವರ ಮೂಲಕ ದೈಹಿಕ ಶಿಕ್ಷಕರಿಗೆ ತರಬೇತಿ ನೀಡಲಾಗುತ್ತಿದ್ದು, ಅವರು ಯೋಗವನ್ನು ಕಲಿತು ತಮ್ಮ ಶಾಲೆಗಳಲ್ಲಿ ಮಕ್ಕಳಿಗೆ ಯೋಗವನ್ನು ಹೇಳಿಕೊಡಲಾಗುವುದು ಎಂದ ಅವರು ಸಾರ್ವಜನಿಕರು ಆಯುಷ್ ಇಲಾಖೆಯಿಂದ ಸಿಗುವ ಸೌಲಭ್ಯಗಳ ಸದುಪಯೋಗ ಪಡೆದುಕೊಳ್ಳಬೇಕು ಎಂದರು. 

 ಹಿರಿಯ ವೈದ್ಯಾಧಿಕಾರಿ ಡಾ.ಜಗದೀಶ ಯಾಜಿ ಪ್ರಾಸ್ತವಿಕವಾಗಿ ಮಾತನಾಡಿ, ಪ್ರತಿಯೊಬ್ಬರು ಮಕ್ಕಳಿಗೆ ಯೋಗವನ್ನು ಕಲಿಸಬೇಕು, ಯೋಗ ಶಾಂತಿ ಸಹಬಾಳ್ವೆ ಮತ್ತು ಮಾನಸಿಕ ಆರೋಗ್ಯವನ್ನು ಕಾಪಾಡಿಕೊಳ್ಳಲು ನೆರವಾಗಲಿದೆ. ವೈ ಬ್ರೇಕ್ ಯೋಗ ( ಙ-ಛಡಿಜಚಿಞ ಥಿಠಚಿ) ಆ್ಯಫ್‌ನ್ನು ಡೌನ್‌ಲೋಡ್ ಮಾಡಿಕೊಂಡು ಪ್ರತಿಯೊಬ್ಬರೂ ಯೋಗ ಮಾಡುವುದನ್ನು ಕಲಿಯಬಹುದು ಎಂದರು. 

ಕಾರ್ಯಕ್ರಮದಲ್ಲಿ ನಗರ ಸಭೆ ಅಧ್ಯಕ್ಷ ರವಿರಾಜ ಚಂದ್ರ ಅಂಕೋಲೆಕರ್, ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಈಶ್ವರ ಕಾಂದೂ, ಅಪರ ಜಿಲ್ಲಾಧಿಕಾರಿ ಸಾಜೀದ್ ಮುಲ್ಲಾ, ಬ್ರಹ್ಮ ಕುಮಾರಿ ಕೇಂದ್ರದ ಕವಿತಾ, ಪತಂಜಲಿ ಯೋಗ ಕೇಂದ್ರದ ಪ್ರೇರಣ ನಾಯ್ಕ ಡಾ. ಅನು ಜಯಪ್ರಕಾಶ್, ಡಾ. ತಾರನಾಥ್ ಎಂ ಹರಿಕಾಂತ, ಎಲ್‌.ಕೆ ನಾಯ್ಕ ವಿವಿಧ ಸಂಘ ಸಂಸ್ಥೆಗಳ ಪ್ರತಿನಿಧಿಗಳು, ಪೊಲೀಸ್ ಸಿಬ್ಬಂದಿಗಳು,  ಎನ್‌.ಸಿ.ಸಿ ವಿದ್ಯಾರ್ಥಿಗಳು   ಮತ್ತಿತರರು ಭಾಗವಹಿಸಿ, ಯೋಗಾಭ್ಯಾಸ ಮಾಡಿದರು. 

ಆಯುಷ್ ಇಲಾಖೆಯ ಜಿಲ್ಲಾ ಆಯುಷ್ ಅಧಿಕಾರಿ (ಪ್ರ) ಡಾ. ಭಾರತಿ ದೇವಿ ಸ್ವಾಗತಿಸಿದರು, ಆಡಳಿತಾಧಿಕಾರಿ ಸಂಜೀವ್ ಕುಮಾರ ವಂದಿಸಿದರು.