ಯೋಗ ಸಂಸ್ಕೃತಿ ಜಗತ್ತಿಗೆ ಭಾರತ ನೀಡಿದ ಅಪೂರ್ವ ಕೊಡುಗೆ : ಪ್ರೊ. ಅಶೋಕ ಹಂಚಲಿ

ಯೋಗ ಸಂಸ್ಕೃತಿ ಜಗತ್ತಿಗೆ ಭಾರತ ನೀಡಿದ ಅಪೂರ್ವ ಕೊಡುಗೆ : ಪ್ರೊ. ಅಶೋಕ ಹಂಚಲಿ Yoga culture is a unique contribution of India to the world: Prof. Ashok Hanchali

ಬೆಳಗಾವಿ 21 : ಇಡೀ ವಿಶ್ವಕ್ಕೆ ಭಾರತ ನೀಡಿದ ಅತ್ಯಂತ ಅಮೂಲ್ಯವಾದ ಕೊಡುಗೆಗಳಲ್ಲಿ ಯೋಗ ಮತ್ತು ಅಧ್ಯಾತ್ಮ ಸಂಸ್ಕೃತಿಗೆ ವಿಶಿಷ್ಟ ಸ್ಥಾನವಿದೆ. ಯೋಗವು ಕೇವಲ ದೈಹಿಕ ವ್ಯಾಯಾಮವಲ್ಲ; ಅದು ಮನುಷ್ಯನ ದೇಹ, ಮನಸ್ಸು ಮತ್ತು ಆತ್ಮವನ್ನು ಸಮನ್ವಯಗೊಳಿಸುವ ಜೀವನ ಪದ್ಧತಿಯಾಗಿದೆ ಎಂದು ಪ್ರೊ. ಅಶೋಕ ಹಂಚಲಿ ಹೇಳಿದರು.ನಾಗನೂರು ರುದ್ರಾಕ್ಷಿಮಠದ ಶ್ರೀ ಸಿದ್ಧರಾಮೇಶ್ವರ ಶಿಕ್ಷಣ ಸಂಸ್ಥೆಯ ಆವರಣದಲ್ಲಿ ಆಯೋಜಿಸಿದ್ದ ಅಂತರರಾಷ್ಟ್ರೀಯ ಯೋಗ ದಿನಾಚರಣೆಯ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಮಾತನಾಡಿದ ಅವರು, ಇಂದು ವಿಶ್ವದ ಅನೇಕ ರಾಷ್ಟ್ರಗಳಲ್ಲಿ ಯೋಗ ದಿನಾಚರಣೆಯನ್ನು ಆಚರಿಸುತ್ತಿರುವುದು ಭಾರತದ ಯೋಗ ಪರಂಪರೆಯ ಜಾಗತಿಕ ಮಹತ್ವಕ್ಕೆ ಸಾಕ್ಷಿಯಾಗಿದೆ ಎಂದರು.ಪಾಶ್ಚಾತ್ಯ ಜಗತ್ತು ಹೆಚ್ಚಾಗಿ ಭೌತಿಕ ಸುಖ ಮತ್ತು ಭೋಗ ಸಂಸ್ಕೃತಿಯ ಕಡೆಗೆ ಸಾಗುತ್ತಿದ್ದರೆ,

ಭಾರತವು ಯೋಗ, ಧ್ಯಾನ ಮತ್ತು ಅಧ್ಯಾತ್ಮದ ಮೂಲಕ ಮಾನವ ಜೀವನಕ್ಕೆ ಶಾಂತಿ ಮತ್ತು ನೆಮ್ಮದಿಯ ಮಾರ್ಗವನ್ನು ತೋರಿಸುತ್ತಿದೆ. ಭಾರತದ ಆಧ್ಯಾತ್ಮಿಕ ಪರಂಪರೆಯ ಬಗ್ಗೆ ಅರ್ನಾಲ್ಡ್‌ ಟಾಯ್ನಬಿ, ವಿಲ್ ಡ್ಯೂರಾಂಟ್, ಮ್ಯಾಕ್ಸ್‌ ಮುಲ್ಲರ್ ಮೊದಲಾದ ವಿದ್ವಾಂಸರು ಅಪಾರ ಗೌರವದಿಂದ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ ಎಂದು ಅವರು ಹೇಳಿದರು. ಮಹಾನ್ ಚಿಂತಕ ಓಶೋ ಅವರು “ಭಾರತ ಕೇವಲ ಒಂದು ದೇಶವಲ್ಲ, ಅದು ಕೋಟ್ಯಂತರ ಜನರ ಧಾರ್ಮಿಕ ಮತ್ತು ಆಧ್ಯಾತ್ಮಿಕ ಅಸ್ತಿತ್ವವಾಗಿದೆ” ಎಂದು ಹೇಳಿರುವುದನ್ನು ಸ್ಮರಿಸಿದ ಪ್ರೊ. ಹಂಚಲಿ, ಭಾರತ ನಮ್ಮ ಮಾತೃಭೂಮಿಯಾಗಿದ್ದು, ಅದರ ಬಗ್ಗೆ ಪ್ರತಿಯೊಬ್ಬರಲ್ಲೂ ಭಕ್ತಿ, ಶ್ರದ್ಧೆ ಮತ್ತು ಗೌರವದ ಭಾವನೆ ಇರಬೇಕು ಎಂದರು.ಸುಮಾರು ಎರಡು ಸಾವಿರ ವರ್ಷಗಳ ಹಿಂದೆಯೇ ಪತಂಜಲಿ ಮಹರ್ಷಿಗಳು ಯೋಗಸೂತ್ರಗಳ ಮೂಲಕ ಮಾನವಕುಲಕ್ಕೆ ಅಮೂಲ್ಯವಾದ ಮಾರ್ಗದರ್ಶನ ನೀಡಿದ್ದಾರೆ.