ಹೊಸಪೇಟೆ 04: ಹೊಸಪೇಟೆ ನಗರದಲ್ಲಿ ಫೆ. 5ರಿಂದ 9ರವರೆಗೆ ನಡೆಯಲಿರುವ ಯೋಗ ಚಿಕಿತ್ಸೆ ಹಾಗೂ ಧ್ಯಾನ ಶಿಬಿರವೂ ಕೇವಲ ಆರೋಗ್ಯ ದೃಷ್ಠಿಯಿಂದ ಮಾತ್ರ ನಡೆಸಲಾಗುತ್ತಿದ್ದು ಇದರ ಹಿಂದೆ ಯಾವುದೇ ರಾಜಕೀಯ ಉದ್ದೇಶವಿಲ್ಲ ಎಂದು ಪತಂಜಲಿ ಯೋಗಾ ಪೀಠದ ಬಾಬಾ ರಾಮದೇವ್ ಗುರೂಜಿ ತಿಳಿಸಿದರು.
ನಗರದ ಖಾಸಗಿ ಹೊಟೇಲ್ ಸಭಾಂಗಣದಲ್ಲಿ ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಮಂಗಳವಾರ ಮಾತನಾಡಿ, ಕಳೆದ 10 ವರ್ಷದ ನಂತರ ಹೊಸಪೇಟೆಗೆ ಆಗಮಿಸಿರುವೆ. ಆಗಿನ ಸಂದರ್ಭದಲ್ಲಿ ಇಲ್ಲಿ ಹಲವು ದಿನಗಳ ಕಾಲ ಯೋಗಾ ಶಿಬಿರ ನಡೆಸಲಾಗಿತ್ತು. ಪ್ರಸ್ತುತ ಎಂಎಸ್ಪಿಎಲ್ ಸಂಸ್ಥೆಯಿಂದ ನಗರದ ತಾಲೂಕು ಕ್ರೀಡಾಂಗಣದಲ್ಲಿ ಯೋಗಾ ಶಿಬಿರ ಆಯೋಜಿಸಲಾಗಿದೆ. ಬೆಳಿಗ್ಗೆ 5ರಿಂದ 7.30ರವರೆಗೆ ನಡೆಯಲಿದ್ದು ಜ. 6ರಂದು ಖ್ಯಾತ ಗಾಯಕ ಸೋನು ನಿಗಮ್ ಆಗಮಿಸಲಿದ್ದಾರೆ ಎಂದರು.
ಕಳೆದ ಹಲವು ವರ್ಷಗಳಿಂದ ದೇಶ ಸೇರಿದಂತೆ ವಿದೇಶಗಳಲ್ಲಿ ಜನರಲ್ಲಿ ಆರೋಗ್ಯ ಬಗ್ಗೆ ಜಾಗೃತಿ ಮೂಡಿಸಲು ಯೋಗಾ ತರಬೇತಿ ಶಿಬಿರಗಳನ್ನು ಆಯೋಜಿಸಲಾಗುತ್ತಿದೆ. ಪ್ರಸ್ತುತ ವಿಶ್ವಾದ್ಯಂತ ಸುಮಾರು 100ಕೋಟಿಗೂ ಅಧಿಕ ಜನರು ಯೋಗಾಭ್ಯಾಸ ಮಾಡುತ್ತಿದ್ದಾರೆ. ಯೋಗವೂ ಯಾವುದೇ ಧರ್ಮ, ಜಾತಿ, ಪಕ್ಷ ಇಲ್ಲವೇ ವರ್ಗಕ್ಕೆ ಮಾತ್ರ ಸೀಮಿತವಾಗಿಲ್ಲ. ಯೋಗಾ ಪ್ರಸ್ತುತ ಸರ್ವವ್ಯಾಪಿಯಾಗಿದೆ ಎಂದರು.
ದೇಶವನ್ನು ಆರೋಗ್ಯ ದೇಶ ಮಾಡುವುದೇ ನಮ್ಮ ಗುರಿ. ಆಧ್ಯಾತ್ಮಿಕ ಭಾರತ ಸಂಕಲ್ಪ ಮಾಡಲಾಗಿದೆ. ದೇಶ, ವಿದೇಶಗಳಲ್ಲಿ ಯೋಗಾ ತರಬೇತಿ ನೀಡಲಾಗುತ್ತಿದ್ದು ನಾನಾ ಯೋಗಾಸನಗಳನ್ನು ಮಾಡುತ್ತಿದ್ದಾರೆ ಎಂದು ಹೇಳಿದರು. ಯೋಗ ಮನುಷ್ಯನ ಜೀವನದ ಅವಿಭಾಜ್ಯ ಅಂಗವಾಗಿದೆ. ನಿರೋಗಿ, ನಿರವ್ಯಸನಿ, ಹಿಂಸಮುಕ್ತ ಭಾರತದ ಉದ್ದೇಶವಿದೆ.
ದುಶ್ಚಟಗಳಿಂದ ಮುಕ್ತವಾಗಲು ಯೋಗವನ್ನು ಅಳವಡಿಸಿಕೊಳ್ಳಬೇಕು. ಭಾರತ ದೇಶ ಸಂವಿಧಾನದಿಂದ ನಡೆಯುತಿದೆ. ಸತ್ಯ, ಅಹಿಂಸೆ ಮಾರ್ಗದಲ್ಲಿ ಮುನ್ನಡೆಯಲಿದೆ. ಮುಸ್ಲಿಂ, ಹಿಂದೂ ಧರ್ಮ ಸೇರಿದಂತೆ ಯಾವುದೇ ಧರ್ಮವಾಗಲಿ ಆತಂಕದಲ್ಲಿ ಇಲ್ಲ. ಕೆಲವು ಪಟ್ಟಭದ್ರ ಹಿತಾಸಕ್ತಿಗಳಿಂದ ಮಾತ್ರ ಈ ರೀತಿ ಬಿಂಬಿಸಲಾಗುತ್ತಿದೆ ಎಂದರು.
ಔಷಧಿ ಮುಕ್ತ ಜೀವನ ನಡೆಸಲು ಎಲ್ಲ ವರ್ಗದ ಜನರು ಯೋಗಾ ಶಿಬಿರದಲ್ಲಿ ಭಾಗವಹಿಸಬೇಕು. ನಿತ್ಯ ಯೋಗಾಸನಗಳನ್ನು ಮಾಡುವುದರಿಂದ ಆರೋಗ್ಯದಿಂದಿರಬಹುದು ಎಂದು ತಿಳಿಸಿದರು.
ಸಿಎಎ, ಎನ್ಆರ್ಸಿಗಳಿಂದ ಯಾರೊಬ್ಬರ ನಾಗರಿಕತೆಯನ್ನು ಕಿತ್ತುಕೊಳ್ಳಲು ಸಾಧ್ಯವಿಲ್ಲ. ಅದು ಯಾವುದೇ ಪಕ್ಷ, ವ್ಯಕ್ತಿಗಳಿಂದಲೂ ಸಾಧ್ಯವಿಲ್ಲ. ಮತಬ್ಯಾಂಕ್ ರಾಜಕಾರಣ ಹಿನ್ನೆಲೆಯಲ್ಲಿ ಕೆಲವರು ಇದನ್ನು ರಾಜಕೀಯ ದಾಳವಾಗಿ ಬಳಸಿಕೊಳ್ಳುತ್ತಿದ್ದಾರೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು. ಗೋಷ್ಠಿಯಲ್ಲಿ ಎಂಎಸ್ಪಿಎಲ್ ಸಂಸ್ಥೆಯ ಮುಖ್ಯಸ್ಥ ನರೇಂದ್ರ ಬಲ್ಡೋಟಾ, ಪತಂಜಲಿ ಸಮಿತಿಯ ಭರಲಾಲ್ ಆರ್ಯ, ಎಂಎಸ್ಪಿಎಲ್ ಸಂಸ್ಥೆಯ ಸಾಮಾಜಿಕ ವಿಭಾಗದ ಅಧಿಕಾರಿ ರಮೇಶ್ ಮುಂತಾದವರು ಇದ್ದರು.