ಸದೃಢವಾಡ ದೇಶ ನಿರ್ಮಾಣಕ್ಕೆ ಯೋಗಾಭ್ಯಾಸ ಅವಶ್ಯ: ಕರಿಯಣ್ಣನವರ

ಹಾವೇರಿ೨೧: ಸದೃಢವಾದ ದೇಶ ನಿರ್ಮಾಣಕ್ಕೆ ಸದೃಢವಾದ ಮನಸ್ಸು, ಆರೋಗ್ಯ ವಂತ ಶರೀರ ಹಾಗೂ ಹುಮ್ಮಸ್ಸುಳ್ಳ ಮನೋಬಲ ಅಗತ್ಯವಾಗಿದೆ. ಈ ಎಲ್ಲವೂ ಯೋಗಾಭ್ಯಾಸದಿಂದ ಲಭ್ಯವಾಗುತ್ತದೆ. ಪ್ರತಿಯೊಬ್ಬರೂ ಯೋಗ ಕಲಿತು ಸದೃಢವಾದ ದೇಶ ನಿರ್ಮಾಣಕ್ಕೆ ಶ್ರಮಿಸೋಣ ಎಂದು ಜಿ.ಪಂ.ಅಧ್ಯಕ್ಷ ಎಸ್.ಕೆ.ಕರಿಯಣ್ಣನವರ ಅವರು ಕರೆ ನೀಡಿದರು.

ಐದನೇ ವಿಶ್ವ ಯೋಗ ದಿನಾಚರಣೆ ಅಂಗವಾಗಿ ಜಿಲ್ಲಾ ಪಂಚಾಯತ್, ಜಿಲ್ಲಾಡಳಿತ ಹಾಗೂ ಆಯುಷ್ ಇಲಾಖೆ ಸಹಯೋಗದಲ್ಲಿ ಶುಕ್ರವಾರ ನಗರದ ಹೊಸಮನಿ ಸಿದ್ದಪ್ಪ ಜಿಲ್ಲಾ ಕ್ರೀಡಾಂಗಣದಲ್ಲಿ ಸ್ವಚ್ಛಮೇವ ಜಯತೆ ಹಾಗೂ ಜಲರಕ್ಷಣೆ ಘೋಷಣೆಯೊಂದಿಗೆ ಆಯೋಜಿಸಲಾದ ಯೋಗ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು. 

ಮೊದಲು ಯೋಗದ ಮಹತ್ವ ಅರಿತುಕೊಳ್ಳಬೇಕು, ಯೋಗದಿಂದ ಹುಮ್ಮಸು, ಚೈತನ್ಯ ಉಂಟಾಗುತ್ತದೆ. ಮಾನಸಿಕವಾಗಿ, ದೈಹಿಕವಾಗಿ ಶಕ್ತಿ ಕುಂದಿದಾಗ ಅವನ ಕೈಹಿಡಿಯುವ ಶಕ್ತಿ ಯೋಗಕ್ಕಿದೆ. ಮಾನವನ ಹೃದಯ ದೌರ್ಬಲ್ಯವನ್ನು ಕಿತ್ತೊಗೆದು ನವಚೈತನ್ಯವನ್ನು ಬೆಳೆಸಲು ಯೋಗ ಸಹಕಾರಿಯಾಗಿದೆ. ಪ್ರತಿಯೊಬ್ಬರೂ ಯೋಗವನ್ನು ರೂಢಿಸಿಕೊಂಡು ಸದೃಢಮನಸ್ಸು ಹಾಗೂ ಉತ್ತಮ ಆರೋಗ್ಯ ಕಾಯ್ದುಕೊಂಡರೆ ದೇಶದ ಅಭಿವೃದ್ಧಿಗೆ ಯೋಗ ಪೂರಕವಾಗಿದೆ.  ಆರೋಗ್ಯ ಸುಧಾರಣೆ ಜೊತೆಗೆ ಸಮಾಜ ಸ್ವಾಸ್ಥ್ಯ ಕಾಪಾಡಲು ಯೋಗ ಸಹಕಾರಿಯಾಗಿದೆ ಎಂದು ಹೇಳಿದರು.

ಇಂದಿನ ಆಹಾರ ಪದ್ಧತಿಯಿಂದ ಜನರು ಶುಗರ, ಬಿಪಿ, ಹೃದಯಸಂಬಂಧಿ ಕಾಯಿಲೆ ಸೇರಿದಂತೆ ಅನೇಕ ಕಾಯಿಲೆಗಳಿಂದ ಬಳಲುತ್ತಿದ್ದಾರೆ. ಮನಸ್ಸಿನ ಖಿನ್ನತೆಗೆ ಒಳಗಾಗುತ್ತಿದ್ದಾರೆ. ದೈನಂದಿನ ಕಾರ್ಯಶೀಲತೆಗೆ ಹಿನ್ನಡೆಯಾಗುತ್ತಿದೆ. ಈ ಎಲ್ಲದರಿಂದ ಹೊರಬರಲು,ದಿನಪೂತರ್ಿ ಲವಲವಿಕೆಯಿಂದ ಇರಲು ಯೋಗಾಭ್ಯಾಸ ಹಾಗೂ ಧ್ಯಾನ ನಮಗೆ ಪರಿಹಾರವಾಗಬಲ್ಲದು. ಯೋಗಾಭ್ಯಾಸಕ್ಕೆ ದಿನದ ಒಂದಿಷ್ಟು ಸಮಯ ಕಾಯ್ದಿರಿಸಿದರೆ ದಿನವಿಡಿ ಲವಲವಿಕೆಯಿಂದ ದೇಹ, ಮನಸ್ಸನ್ನು ನಿತ್ಯದ ಕೆಲಸದಲ್ಲಿ ತೊಡಗಿಸಿಕೊಳ್ಳಬಹುದು. ಒತ್ತಡದಿಂದ, ರೋಗದಿಂದ ದೂರ ಉಳಿಯಬಹುದು ಎಂದು ಹೇಳಿದರು.

ಜಿಲ್ಲಾಧಿಕಾರಿ ಕೃಷ್ಣ ಬಾಜಪೇಯಿ ಅವರು ಮಾತನಾಡಿ, ಯೋಗ ಪುರಾತನ ವಿದ್ಯೆಯಾಗಿದ್ದು, ಋಷಿಮುನಿಗಳ ಕಾಲದಿಂದ ರೂಢಿಯಲ್ಲಿದೆ. ಯೋಗಕ್ಕೆ ತುಂಬಾ ಮಹತ್ವವಿದೆ. ಪ್ರತಿಯೊಬ್ಬರು ಇದರ ಉಪಯೋಗ ಪಡೆದುಕೊಳ್ಳಬೇಕು. ಯೋಗ ಮೆದುಳು ಹಾಗೂ ದೇಹದ ಮೇಲೆ ಉತ್ತಮ ಪರಿಣಾಮ ಬೀರುತ್ತದೆ, ಆಧುನಿಕ ಜೀವನ ಶೈಲಿಗೆ ಬೌದ್ಧಿಕ, ಶಾರಿರೀಕ ಒತ್ತಡ ನಿವಾರಣೆಗೆ  ಯೋಗ ಮತ್ತು ಆಧ್ಯಾತ್ಮ ತುಂಬಾ ಅವಶ್ಯ. ಯೋಗಾಭ್ಯಾವನ್ನು ನಿತ್ಯ ಜೀವನದಲ್ಲಿ  ರೂಢಿಸಿಕೊಳ್ಳಿ  ಎಂದು ಹೇಳಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಶಾಸಕ ನೆಹರು ಓಲೇಕಾರ ಅವರು ಮಾತನಾಡಿ, ಇಂದು ಯೋಗ ದಿನಾಚರಣೆ ದೇಶ ಹಾಗೂ ಅಂತರಾಷ್ಟ್ರೀಯ ಮಟ್ಟದಲ್ಲಿ ನಡೆಯುತ್ತಿದೆ. ಭಾರತ ದೇಶವನ್ನು ಯೋಗ ಗುರು ಎಂದು ಗುರುತಿಸುವ ಕಾಲ ಸನ್ನಿಹಿತವಾಗಿದೆ. ಯೋಗದಿಂದ ದೈಹಿಕ ಹಾಗೂ ಮಾನಸಿಕ ಸಮಸ್ಯೆಗಳ ನಿವಾರಣೆಗೆ ಸಾಧ್ಯ. ಯೋಗ ಒಂದು ದಿನಕ್ಕೆ ಮಾತ್ರ ಸೀಮಿತವಾಗದೆ ಜೀವನದಲ್ಲಿ ನಿರಂತರವಾಗಿ ಅಳವಡಿಸಿಕೊಂಡಲ್ಲಿ ಸದೃಢ ಆರೋಗ್ಯ ಕಾಪಾಡಿಕೊಳ್ಳಬಹುದು ಎಂದು  ಹೇಳಿದರು.

ಕಾರ್ಯಕ್ರಮದಲ್ಲಿ ಜಿ.ಪಂ.ಸದಸ್ಯರಾದ ಕೊಟ್ರೇಶಪ್ಪ ಬಸೇಗಣ್ಣಿ, ಸಿದ್ದರಾಜ ಕಲಕೋಟಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ಪರಶುರಾಮ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಶ್ರೀಮತಿ ಕೆ.ಲೀಲಾವತಿ, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಮಲ್ಲಿಕಾಜುನ  ಬಾಲದಂಡಿ, ಜಿ.ಪಂ.ಉಪಕಾರ್ಯದರ್ಶ  ಜಿ.ಗೋವಿಂದಸ್ವಾಮಿ, ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದಶಕ ಅಂದಾನಪ್ಪ ವಡಗೇರಿ, ವಾರ್ತಧಿಕಾರಿ ಬಿ.ಆರ್.ರಂಗನಾಥ್, ಯುವಜನ ಸೇವಾ ಮತ್ತು ಕ್ರೀಡಾ ಇಲಾಖೆ ಸಹಾಯಕ ನಿರ್ದಶಕ ಶಾಕೀರ ಅಹ್ಮದ್, ಪೌರಾಯುಕ್ತ ಬಸವರಾಜ ಜಿದ್ದಿ, ತಾಲೂಕು ಪಂಚಾಯತಿ ಕಾರ್ಯನಿರ್ವಾಹಣಾಧಿಕಾರಿ  ಅನ್ನಪೂರ್ಣ, ತಹಶೀಲ್ದಾರ ಶಿವಕುಮಾರ ಉಪಸ್ಥಿತರಿದ್ದರು. ಜಿಲ್ಲಾ ಆಯುಷ್ ಅಧಿಕಾರಿ ಡಾ.ಎ.ಎ.ಸ್.ಶಿರೋಳ ಸ್ವಾಗತಿಸಿದರು. ಡಾ.ಜಿ.ಸಿ. ನಿಡಗುಂದಿ ಕಾರ್ಯಕ್ರಮ ನಿರೂಪಿಸಿದರು. ಡಾ.ಬಾಬಾಸೇಬ ವಂದಿಸಿದರು.

ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಯೋಗ  ಪ್ರಾತ್ಯಕ್ಷಿಕೆಯಲ್ಲಿ ಭಾಗವಹಿಸಿದ್ದರು. ವಿಶೇಷವಾಗಿ ಜಿಲ್ಲಾ ಮೀಸಲು ಪಡೆಯ ಪೊಲೀಸ್ ಅಧಿಕಾರಿಗಳು ಹಾಗೂ ಪೇದೆಗಳು, ವಿವಿಧ ಶಾಲಾ ಮಕ್ಕಳು, ಸಾರ್ವಜನಿಕರು ಒಳಗೊಂಡಂತೆ ಎರಡು ಸಾವಿರ ಜನ ಯೋಗಾಸನ ಪ್ರದರ್ಶನದಲ್ಲಿ ಪಾಲ್ಗೊಂಡು ಗಮನ ಸೆಳೆದರು. ಇದರೊಂದಿಗೆ ಅಂತರಾಷ್ಟ್ರೀಯ ಮಟ್ಟದಲ್ಲಿ ಸಾಧನೆಮಾಡಿದ ಜಿಲ್ಲೆಯ ಯೋಗಪಟುಗಳು  ಯೋಗದ ಕ್ಲಿಷ್ಟಕರ ಆಸನಗಳನ್ನು ಪ್ರದಶರ್ಿಸಿ ಎಲ್ಲರ ಮೆಚ್ಚುಗೆ ಗಳಿಸಿದರು.