ಪಿಒಪಿ ಗಣೇಶ ಮೂರ್ತಿಗಳ ತಯಾರಿ, ಮಾರಾಟ ನಿಷೇಧ: ಜಿಲ್ಲಾಧಿಕಾರಿ
Ban on manufacture and sale of POP Ganesha idols: Deputy Commissioner
ಲೋಕದರ್ಶನ ವರದಿ
ಧಾರವಾಡ 18 : ಜಿಲ್ಲೆಯಲ್ಲಿ ಪ್ಲಾಸ್ಟರ್ ಆಫ್ ಪ್ಯಾರಿಸ್ (ಪಿಒಪಿ) ಗಣೇಶ ಮೂರ್ತಿಗಳ ತಯಾರಿ, ಮಾರಾಟ, ಸಂಗ್ರಹಣೆ ಹಾಗೂ ಬಳಕೆಯನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ ಎಂದು ಜಿಲ್ಲಾಧಿಕಾರಿ ಸ್ನೇಹಲ್ ಆರ್. ತಿಳಿಸಿದ್ದಾರೆ.
ಗಣೇಶೋತ್ಸವದ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆದ ಸಭೆಯಲ್ಲಿ ಮಾತನಾಡಿದ ಅವರು, ನಿಯಮ ಮೀರಿ ಡಿಜೆ ಹಾಗೂ ಧ್ವನಿವರ್ಧಕ ಬಳಸಿದರೆ ಅಧಿಕಾರಿಗಳು ಜಪ್ತಿ ಕ್ರಮ ಕೈಗೊಂಡು, ಗರಿಷ್ಠ 1 ಲಕ್ಷದವರೆಗೆ ದಂಡ ವಿಧಿಸಬಹುದು ಎಂದು ಎಚ್ಚರಿಸಿದರು. ಪಿಒಪಿ ಮೂರ್ತಿಗಳ ಮಾರಾಟ ಕಂಡುಬಂದಲ್ಲಿ ತಕ್ಷಣ ವಶಪಡಿಸಿಕೊಂಡು, ಮಾರಾಟಗಾರರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಿದರು.
ಪರಿಸರ ಸ್ನೇಹಿ ಮಣ್ಣಿನ ಗಣೇಶ ಮೂರ್ತಿಗಳನ್ನು ಮಾತ್ರ ಬಳಸುವಂತೆ ಸಾರ್ವಜನಿಕರಿಗೆ ಮನವಿ ಮಾಡಿದ ಅವರು, ಗಣೇಶೋತ್ಸವದ ಸಂದರ್ಭದಲ್ಲಿ ಡಿಜೆ ಬದಲು ಡೊಳ್ಳು ಕುಣಿತ, ಹೆಜ್ಜೆ ಮೇಳ, ಕರಡಿ ಮಜಲು ಸೇರಿದಂತೆ ಸಾಂಪ್ರದಾಯಿಕ ಜಾನಪದ ಕಲೆಗಳಿಗೆ ಉತ್ತೇಜನ ನೀಡಬೇಕು ಎಂದರು. ಹಸಿರು ಪಟಾಕಿಗಳನ್ನೂ ಸಾರ್ವಜನಿಕರಿಗೆ ತೊಂದರೆಯಾಗದಂತೆ ಬಳಸುವಂತೆ ಸೂಚಿಸಿದರು.
ಗಣೇಶ ಮೂರ್ತಿಗಳ ಪ್ರತಿಷ್ಠಾಪನೆ ಹಾಗೂ ವಿಸರ್ಜನೆ ಸಂದರ್ಭದಲ್ಲಿ ಮೆರವಣಿಗೆ ಮಾರ್ಗವನ್ನು ಮುಂಚಿತವಾಗಿ ಪೊಲೀಸ್ ಠಾಣೆಗೆ ತಿಳಿಸಬೇಕು. ಮಾರ್ಗ ಬದಲಾವಣೆಯಿದ್ದರೂ ಕೂಡಲೇ ಪೊಲೀಸರಿಗೆ ಮಾಹಿತಿ ನೀಡಬೇಕು. ಸಾರ್ವಜನಿಕರು ಹಾಗೂ ಸಂಚಾರಕ್ಕೆ ಅಡಚಣೆಯಾಗದಂತೆ ಮುನ್ನೆಚ್ಚರಿಕೆ ವಹಿಸಬೇಕು ಎಂದು ಹೇಳಿದರು.
ಜಿಲ್ಲೆಯ ಗಡಿ ಹಾಗೂ ಮಹಾನಗರದ ಪ್ರವೇಶದ್ವಾರಗಳಲ್ಲಿ ಚೆಕ್ಪೋಸ್ಟ್ಗಳನ್ನು ಸ್ಥಾಪಿಸಿ, ಪಿಒಪಿ ಮೂರ್ತಿಗಳು ಜಿಲ್ಲೆಗೆ ಪ್ರವೇಶಿಸದಂತೆ ಕಟ್ಟುನಿಟ್ಟಿನ ತಪಾಸಣೆ ನಡೆಸುವಂತೆ ಸೂಚಿಸಲಾಯಿತು. ನಿಯಮ ಉಲ್ಲಂಘಿಸಿ ಸಾಗಾಟ ಮಾಡುವ ವಾಹನಗಳು ಹಾಗೂ ಪಿಒಪಿ ಮೂರ್ತಿಗಳನ್ನು ವಶಪಡಿಸಿಕೊಳ್ಳಲು ಅಧಿಕಾರಿಗಳಿಗೆ ನಿರ್ದೇಶನ ನೀಡಲಾಗಿದೆ.
ಮಣ್ಣಿನ ಗಣೇಶ ಮೂರ್ತಿಗಳನ್ನು ಮನೆಯಲ್ಲೇ ಬಕೆಟ್ ನೀರಿನಲ್ಲಿ ವಿಸರ್ಜಿಸಿ, ಅದೇ ಮಣ್ಣಿನಿಂದ ಗಿಡ-ಮರಗಳನ್ನು ಬೆಳೆಸುವ ಕುರಿತು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವಂತೆ ಅಧಿಕಾರಿಗಳಿಗೆ ಸೂಚಿಸಲಾಯಿತು. ಸಾರ್ವಜನಿಕರು ಮಣ್ಣಿನ ಗಣೇಶ ಮೂರ್ತಿಗಳನ್ನು ಬಳಸಿ ಪರಿಸರ ಸ್ನೇಹಿ ಗಣೇಶ ಚತುರ್ಥಿ ಆಚರಿಸಬೇಕು ಎಂದು ಜಿಲ್ಲಾಧಿಕಾರಿ ಕರೆ ನೀಡಿದರು.
ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯಿಂದ ಮಣ್ಣಿನ ಗಣೇಶ ಮೂರ್ತಿ ತಯಾರಕರಿಗೆ ?25,000 ಪ್ರೋತ್ಸಾಹಧನ ಹಾಗೂ ಧೀಮಂತ ಸನ್ಮಾನ ನೀಡಲಾಗುವುದು ಎಂದು ಪಾಲಿಕೆ ಆಯುಕ್ತ ಡಾ. ರುದ್ರೇಶ್ ಘಾಳಿ ತಿಳಿಸಿದರು. ಮನೆಗಳಲ್ಲಿ ಮಣ್ಣಿನ ಗಣೇಶ ಮೂರ್ತಿ ಪ್ರತಿಷ್ಠಾಪಿಸಿ ವಿಸರ್ಜನೆ ಮಾಡಿದ ಸಾರ್ವಜನಿಕರು ಮೂರ್ತಿಯ ಛಾಯಾಚಿತ್ರವನ್ನು ಪಾಲಿಕೆಗೆ ಸಲ್ಲಿಸಿದರೆ ಪ್ರಮಾಣಪತ್ರ ನೀಡಲಾಗುವುದು ಎಂದರು.
ಗಣೇಶ ಮೂರ್ತಿಗಳ ವಿಸರ್ಜನೆಯನ್ನು ಪಾಲಿಕೆ ನಿಯೋಜಿಸಿರುವ ಸಾರ್ವಜನಿಕ ನೀರಿನ ತೊಟ್ಟಿಗಳಲ್ಲೇ ಕಡ್ಡಾಯವಾಗಿ ನಡೆಸಬೇಕು. ಪ್ರತಿಷ್ಠಾಪನೆ ಹಾಗೂ ವಿಸರ್ಜನೆ ವೇಳೆ ಚಲನಚಿತ್ರ ಹಾಡುಗಳ ಬದಲು ದೇವರ ನಾಮಾವಳಿ ಬಳಸಬೇಕು ಮತ್ತು ಲೇಸರ್ ಲೈಟ್ಗಳನ್ನು ಬಳಸಬಾರದು ಎಂದು ಸೂಚಿಸಲಾಯಿತು.
ಸಭೆಯಲ್ಲಿ ಪ್ರೊಬೇಷನರಿ ಐಎಎಸ್ ಅಧಿಕಾರಿ ಅನುಪ್ರಿಯಾ ಸಾಕ್ಯ, ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ಅಜೀಜ್ ದೇಸಾಯಿ, ಅಪರ ಜಿಲ್ಲಾಧಿಕಾರಿ ಗೀತಾ ಸಿ.ಡಿ., ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ಪರಿಸರ ಅಧಿಕಾರಿ ಶೋಭಾ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು, ಗಣೇಶ ಮೂರ್ತಿ ತಯಾರಕರು, ಮಾರಾಟಗಾರರು ಹಾಗೂ ಪಟಾಕಿ ಮಾರಾಟಗಾರರು ಭಾಗವಹಿಸಿದ್ದರು.
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು
ನಾಗರಿಕರ ಬಹುಕೋಟಿ ಹಣ ವಂಚನೆ ಪ್ರಕರಣ: ಮತ್ತೋರ್ವ ಆರೋಪಿಯ ಬಂಧನ 