ನಗರ ಪ್ರದಕ್ಷಿಣೆ ಮಾಡಿದ ಮುಖ್ಯಮಂತ್ರಿ ಯಡಿಯೂರಪ್ಪ; ಎಲ್ಲೆಡೆ ಸಮಸ್ಯೆಗಳ ದರ್ಶನ

 ಬೆಂಗಳೂರು, ಸೆ 8     ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡ ಬಳಿಕ ಇದೇ ಮೊದಲ ಬಾರಿಗೆ ಬಿ.ಎಸ್.ಯಡಿಯೂರಪ್ಪ ಇಂದು ಮೊದಲ ಬಾರಿಗೆ ನಗರ ಪ್ರದಕ್ಷಿಣೆ ನಡೆಸಿದರು. ಮುಖ್ಯಮಂತ್ರಿಗಳ ಗೃಹ ಕಚೇರಿ ಕೃಷ್ಣಾದಿಂದ ಬೆಳಗ್ಗೆ ಬಸ್ನಲ್ಲಿ ಹೊರಟ ಮುಖ್ಯಮಂತ್ರಿ ನಗರದ ಹಲವೆಡೆ ತೆರಳಿ ಅಭಿವೃದ್ಧಿ ಕಾರ್ಯಗಳನ್ನು ವೀಕ್ಷಿಸಿ, ಜನರ ಸಮಸ್ಯೆ ಆಲಿಸಿದರು. ಉಪ ಮುಖ್ಯಮಂತ್ರಿ ಡಾ. ಅಶ್ವಥ್ ನಾರಾಯಣ, ಸಚಿವ ಆರ್. ಅಶೋಕ್, ಗೃಹ ಸಚಿವ  ಬಸವರಾಜ ಬೊಮ್ಮಾಯಿ, ಶಾಸಕರಾದ ಅರವಿಂದ ಲಿಂಬಾವಳಿ , ರವಿಸುಬ್ರಮಣ್ಯ, ಸತೀಶ್ ರೆಡ್ಡಿ,  ಮೇಯರ್ ಗಂಗಾಂಬಿಕೆ ಮಲ್ಲಿಕಾರ್ಜುನ್, ಬಿಬಿಎಂಪಿ ಅಧಿಕಾರಿಗಳು ಮುಖ್ಯಮಂತ್ರಿಗಳ ಜೊತೆ ತೆರಳಿದ್ದರು. ಬನ್ನೇರುಘಟ್ಟ ರಸ್ತೆಯ ಐಐಎಂಬಿ ಬಳಿ ಬಸ್ಸಿನಿಂದ ಇಳಿದ ಮುಖ್ಯಮಂತ್ರಿ ಅಲ್ಲಿ ನಡೆಯುತ್ತಿದ್ದ ಮೆಟ್ರೋ ಕಾಮಗಾರಿ ವೀಕ್ಷಿಸಿದರು. ಈ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಯಡಿಯೂರಪ್ಪ, ನಗರದ ರಸ್ತೆ, ಸ್ವಚ್ಛತೆ, ಅಭಿವೃದ್ಧಿ ದೃಷ್ಟಿಯಿಂದ ನಗರ ಪರಿವೀಕ್ಷಣೆ ಮಾಡುತ್ತಿದ್ದೇನೆ. ನಗರದ ಸ್ವಚ್ಛತೆ ಹಾಗೂ ಅಭಿವೃದ್ಧಿ ಕಾಮಗಾರಿಗಳ ಬಗ್ಗೆ ವಾಸ್ತವಿಕ ಸ್ಥಿತಿ ತಿಳಿಯುವುದಕ್ಕೆ ಪ್ರತಿ 15 ದಿನಗಳಿಗೆ ಒಂದು ಬಾರಿ ಎರಡು ಗಂಟೆ ಕಾಲ ನಗರ ಪ್ರದಕ್ಷಿಣೆ ಮಾಡಲು ನಿರ್ಧರಿಸಿದ್ದೇನೆ ಎಂದರು. ಭಾನುವಾರ ನಗರ ಪ್ರದಕ್ಷಿಣೆ ಮಾಡಲಾಗುವುದು, ಇದರಿಂದ ಸಾರ್ವಜನಿಕರಿಗೆ ಹೆಚ್ಚಿನ ತೊಂದರೆ ಉಂಟಾಗುವುದಿಲ್ಲ, ಜಗತ್ತು ಅಚ್ಚರಿ ಪಡುವಂತೆ ಯೋಜನೆ ರೂಪಿಸುತ್ತಿದ್ದೇವೆ, ಜನರ ಸಮಸ್ಯೆ ತಿಳಿದು ತಕ್ಷಣ ಪರಿಹಾರ ಮಾಡುವುದಕ್ಕೆ ಪ್ರಾಮಾಣಿಕ ಪ್ರಯತ್ನ ಮಾಡಿ ಹಣವನ್ನು ಬಿಡುಗಡೆ ಮಾಡಲಾಗುವುದು ಎಂದು ಭರವಸೆ ನೀಡಿದರು. ರಸ್ತೆ ವಿಸ್ತರಣೆ ಸಂಬಂಧ ಟಿಡಿಆರ್ ಪರಿಹಾರ ವಿತರಣೆ ವಿಳಂಬವಾಗುತ್ತಿದೆ ಎಂದು  ಮುಖ್ಯಮಂತ್ರಿಗೆ  ರಸ್ತೆಯ ಆಸ್ತಿಗಳ ಮಾಲೀಕರು ಇದೇ ವೇಳೆ ದೂರು ನೀಡಿದರು. ಶೇ.25 ರಷ್ಟೇ ಪರಿಹಾರ ಕೊಡಲಾಗಿದೆ. ಉಳಿದ ಪರಿಹಾರ ಬೇಗ ಕೊಡಿಸಿ ಎಂದು ಮನವಿ ಮಾಡಿದರು. ಆಗ ಮುಖ್ಯಮಂತ್ರಿ ಸಂಬಂಧಪಟ್ಟ ಅಧಿಕಾರಿಗಳನ್ನು ಕರೆಸಿ ತರಾಟೆಗೆ ತೆಗೆದುಕೊಂಡರು. ಬೇಗ ಪರಿಹಾರ ಸಮಸ್ಯೆ ಇತ್ಯರ್ಥ ಪಡಿಸಿ ಎಂದು ಸ್ಥಳದಲ್ಲೇ ಸೂಚಿಸಿದರು. ಈ ಮಾರ್ಗದಲ್ಲಿ ರಸ್ತೆ ವಿಸ್ತರಣೆ ಸಂಬಂಧ ಗೊಂದಲಗಳಿವೆ. ಮೆಟ್ರೋ ಮಾರ್ಗ ನಿರ್ಮಾಣದಿಂದ ಸಮಸ್ಯೆ ಆಗುತ್ತಿದೆ ಎಂದು ಸ್ಥಳೀಯ ವರ್ತಕರು ಮುಖ್ಯಮಂತ್ರಿಗೆ ಮನವಿ ಸಲ್ಲಿಸಿದರು. ಟ್ರಾಫಿಕ್ ನಿಂದ 30 ಸಾವಿರ ಕೋಟಿ ನಷ್ಟವಾಗಿದೆ ಎಂದು ಔಟರ್ ರಿಂಗ್ ರೋಡ್ ಕಂಪನಿ ಅಸೋಸಿಯೇಷನ್ ದೂರು ನೀಡಿತು. ಹೆಬ್ಬಾಳ, ಸಿಲ್ಕ್ ಬೋರ್ಡ, ಟಿನ್  ಫ್ಯಾಕ್ಟರಿ ಬಳಿ ಸಂಚಾರ ದಟ್ಟಣೆ ಆಗುತ್ತಿದೆ. ಮೆಟ್ರೋ ಕಾಮಗಾರಿ ವಿಳಂಬದಿಂದ ವ್ಯಾಪಾರ ನಷ್ಟ ಉಂಟಾಗಿದೆ. ಕೆಲಸದ ಸಮಯವೆಲ್ಲಾ ಸಂಚಾರ ದಟ್ಟಣೆಯಲ್ಲೇ ಕಳೆದು ಹೋಗುತ್ತಿದೆ. ಇದರಿಂದ ಔಟರ್ ರಿಂಗ್ ರೋಡ್ ನಲ್ಲಿರುವ ಕಂಪನಿಗಳಿಗೆ ವರ್ಷಕ್ಕೆ  30 ಸಾವಿರ ಕೋಟಿ ನಷ್ಟವಾಗುತ್ತಿದೆ ಎಂದು ಸಂಘದ ಅಧ್ಯಕ್ಷ ಆರ್. ಕೆ. ಮಿಶ್ರಾ ಅವರು ಅಂಕಿ ಅಂಶಗಳ ಸಮೇತ ಮುಖ್ಯಮಂತ್ರಿಗೆ ಮನವಿ ಸಲ್ಲಿಸಿದರು.