ವಿಜಯಪುರ 03: ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಆಯ್ಕೆ ವಿಷಯವಾಗಿ ಪಕ್ಷದ ವರಿಷ್ಠರೊಂದಿಗೆ ಚರ್ಚಿಸಲು ಮಂಗಳವಾರ ದೆಹಲಿಗೆ ನಮ್ಮ ತಂಡ ತೆರಳುತ್ತಿರುವುದಾಗಿ ಶಾಸಕ ಬಸನಗೌಡ ಪಾಟೀಲ ಯತ್ನಾಳ ಹೇಳಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಯಡಿಯೂರಪ್ಪ ಕುಟುಂಬ ರಾಜ್ಯದಲ್ಲಿ ಸಾಕಷ್ಟು ಲೂಟಿ ಮಾಡಿದೆ, ನಕಲಿ ಸಹಿ ಮಾಡಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರೊಂದಿಗೆ ಶಾಮೀಲಾಗಿ ಕರ್ನಾಟಕದಲ್ಲಿ ಬಿಜೆಪಿಯನ್ನು ಮುಗಿಸುವ ಕೆಲಸ ವಿಜಯೇಂದ್ರ ಮಾಡುತ್ತಿದ್ದಾರೆ’ ಎಂಬುದನ್ನು ವರಿಷ್ಠರ ಗಮನಕ್ಕೆ ತರಲಾಗುವುದು’ ಎಂದರು.
‘ಯಡಿಯೂರಪ್ಪ ಕುಟುಂಬದಿಂದ ಬಿಜೆಪಿಯನ್ನು ಸಂಪೂರ್ಣ ಮುಕ್ತ ಮಾಡಿ, ಹಿಂದುತ್ವಪರ ಹಾಗೂ ಭ್ರಷ್ಟಾಚಾರ ರಹಿತ ನಾಯಕತ್ವವನ್ನು ಕರ್ನಾಟಕಕ್ಕೆ ಕೊಡಿ’ ಎಂಬ ಮೂರು ಪ್ರಮುಖ ಬೇಡಿಕೆಗಳನ್ನು ವರಿಷ್ಠರ ಮುಂದೆ ಇಡಲಾಗುವುದು’ ಎಂದರು.
ಬಿಜೆಪಿಯಲ್ಲಿ ತಟಸ್ಥ ಇದ್ದವರು ಇದುವರೆಗೆ ಎರಡೂ ಕಡೆ ಆಟ ಆಡುತ್ತಿದ್ದರು. ಇದೀಗ ನಮ್ಮೊಂದಿಗೆ ಸೇರಿಕೊಂಡಿದ್ದಾರೆ. ರಾಜ್ಯದ ಸಂಸದರು ನಮ್ಮೊಂದಿಗೆ ಸೇರಿದ್ದಾರೆ. ವಿಜಯೇಂದ್ರ ವಿರುದ್ಧ ಪಕ್ಷದ ಹೈಕಮಾಂಡ್‌ಗೆ ದೂರು ನೀಡಲು ಇದೀಗ ದೊಡ್ಡ ತಂಡವೇ ಸಿದ್ಧವಾಗಿದೆ ಎಂದು ಹೇಳಿದರು.