ಯಲ್ಲಾಪುರ ವಿಧಾನಸಭಾ ಕ್ಷೇತ್ರ : ಕೈ-ಕಮಲ ಎರಡಕ್ಕೂ ಗೆಲುವಿನ ವಿಶ್ವಾಸ

ಯಲ್ಲಾಪುರ ವಿಧಾನಸಭಾ ಕ್ಷೇತ್ರ : ಕೈ-ಕಮಲ ಎರಡಕ್ಕೂ ಗೆಲುವಿನ ವಿಶ್ವಾಸ 

ನಾಗರಾಜ ಹರಪನಹಳ್ಳಿ

ಕಾರವಾರ: ಯಲ್ಲಾಪುರ ಉಪ ಚುನಾವಣೆಯ ಕದನ ಮುಗಿದಿದೆ. ಕಾಂಗ್ರೆಸ್ನಿಂದ ಶಾಸಕರಾಗಿದ್ದ ಶಿವರಾಮ ಹೆಬ್ಬಾರರು, ಕಾಂಗ್ರೆಸ್ ಪಕ್ಷ ಹಾಗೂ ಶಾಸಕತ್ವಕ್ಕೆ ರಾಜೀನಾಮೆ ನೀಡಿದ್ದರಿಂದ ನಡೆದ ಉಪ ಚುನಾವಣೆಯಲ್ಲಿ ಅವರು ಆಡಳಿತ ಪಕ್ಷ ಬಿಜೆಪಿಯ ಅಭ್ಯಥರ್ಿಯಾಗಿ ಕಣಕ್ಕೆ ಇಳಿದಿದ್ದರು. ಅವರ ಎದುರಾಳಿಯಾಗಿದ್ದ ವಿ.ಎಸ್.ಪಾಟೀಲರು ಅನಿವಾರ್ಯವಾಗಿ ಹೆಬ್ಬಾರರ ಜೊತೆ ನಿಲ್ಲಬೇಕಾಯಿತು. ಶಾಸಕತ್ವದ ಅನರ್ಹತೆಯನ್ನೇ ಪ್ರಮುಖ ಅಸ್ತ್ರವಾಗಿ ಬಳಸಿದ ಕಾಂಗ್ರೆಸ್ ಪಕ್ಷ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಭೀಮಣ್ಣ ನಾಯ್ಕರನ್ನು ಯಲ್ಲಾಪುರ ವಿಧಾನಸಭಾ ಕ್ಷೇತ್ರದ ಅಭ್ಯಥರ್ಿಯನ್ನಾಗಿಸಿತ್ತು. ಜೆಡಿಎಸ್ ಚೈತ್ರಾ ಗೌಡರನ್ನು ಕಣಕ್ಕೆ ಇಳಿಸಿದ್ದರೂ, ಅವರನ್ನು ತಟಸ್ಥರಾಗಿ ಇರುವಂತೆ ನೋಡಿಕೊಂಡು ಕಾಂಗ್ರೆಸ್ ಪಕ್ಷಕ್ಕೆ ನೆರವಾಯಿತು. ಮುಂಡಗೋಡ ಮತ್ತು ಬನವಾಸಿ ಭಾಗದಲ್ಲಿ ಕಾಂಗ್ರೆಸ್ ಪ್ರಬಲವಾಗಿದ್ದ ಕಾರಣ ಈ ಉಪ ಚುನಾವಣೆಯನ್ನು ಗೆಲ್ಲುವ ವಿಶ್ವಾಸ ಇಟ್ಟುಕೊಂಡಿದೆ. ಇನ್ನು ಶಿವರಾಮ ಹೆಬ್ಬಾರರು ಬಿಜೆಪಿಯ ಸಂಪ್ರದಾಯಿಕ ಮತಗಳ ಜೊತೆ, ಅವರು ಕಾಂಗ್ರೆಸ್ ಪಕ್ಷದಲ್ಲಿದ್ದಾಗ ಹೊಂದಿದ್ದ ಮತಗಳನ್ನು ಬಾಚಿ ತರುವ ವಿಶ್ವಾಸ ಹೊಂದಿರುವ ಕಾರಣ ಅವರೂ ಸಹ ಗೆಲುವಿನ ಲೆಕ್ಕಾಚಾರ ಹಾಕುತ್ತಿದ್ದಾರೆ. ಆದರೆ ನಾನು ಗೆದ್ದೇ ಗೆಲ್ಲುತ್ತೇನೆ ಎಂದು ಎರಡೂ ಪಕ್ಷಗಳ ಅಭ್ಯಥರ್ಿಗಳು ಎದೆ ತಟ್ಟಿ ಹೇಳಿಕೊಳ್ಳುತ್ತಿಲ್ಲ. ಕಾಂಗ್ರೆಸ್ ಮತ್ತು ಬಿಜೆಪಿ ತನ್ನ ಎಲ್ಲಾ ಶಕ್ತಿ ಸಾಮಥ್ರ್ಯ ಮತ್ತು ತಂತ್ರಗಾರಿಕೆ ಬಳಸಿವೆ. ಮತದಾರರು ಮಾತ್ರ ತಮ್ಮ ಗುಟ್ಟನ್ನು ಮತ ಪೆಟ್ಟಿಗೆಗೆ ಸೇರಿಸಿ ಮೌನಕ್ಕೆ ಶರಣಾಗಿದ್ದಾರೆ. ಮತದಾರರ ಮನದಾಳವನ್ನು ಅಲ್ಲಲ್ಲಿ ಕೆದಕಿದರೂ ಕೆಲವು ಕಡೆ ಬಿಜೆಪಿ ಪರ ಒಲವು ಕಾಣಿಸಿದರೆ, ಕೆಲವು ಕಡೆ ಕಾಂಗ್ರೆಸ್ ಪರ ಒಲವು ಇದೆ. ಮುಂಡಗೋಡ ಭಾಗ, ಬನವಾಸಿ ಭಾಗದಲ್ಲಿ ಬಿಜೆಪಿ ಅಭ್ಯಥರ್ಿ ಪಕ್ಷಾಂತರ ನಿಲುವು ಪ್ರಶ್ನಿಸಿದ ಘಟನೆಗಳು ಸಹ ನಡೆದು ಹೋಗಿವೆ. 

ಬಿಜೆಪಿಗರು ಹೇಳುವಂತೆ ಮೂಲ ಬಿಜೆಪಿಗರಿಗೆ ಹೆಬ್ಬಾರರು ಕಮಲ ಪಕ್ಷಕ್ಕೆ ಬರುವುದು ಇಷ್ಟವಿಲ್ಲವಾಗಿತ್ತು. ಹಿರಿಯರು ಪಕ್ಷಕ್ಕೆ ಶಿವರಾಮ ಹೆಬ್ಬಾರರನ್ನು ಬರಮಾಡಿಕೊಂಡ ಮೇಲೆ ಅನಿವಾರ್ಯವಾಗಿ ಕೆಲಸ ಮಾಡಲೇಬೇಕಾಯಿತು. ಬಿಸಿ ತುಪ್ಪವಾಗಿದ್ದ ಹೆಬ್ಬಾರರನ್ನು ಸಹಿಸಿಕೊಂಡು ಕಾರ್ಯಕರ್ತರು ಕೆಲಸ ಮಾಡಿದರು. ಕಾರವಾರ ಶಾಸಕಿ ರೂಪಾಲಿ ನಾಯ್ಕ ಯಲ್ಲಾಪುರದಲ್ಲಿ ಬೀಡು ಬಿಟ್ಟು ಬಿಜೆಪಿಗೆ ಮತ ಕೊಡಿ ಎಂದು ಮನೆ ಮನೆ ಅಡ್ಡಾಡಿದ್ದಾರೆ. ಅನರ್ಹತೆ ಎಂಬುದು ಮತ ಕೇಳಲು ತೀರಾ ಮುಜುಗುರವನ್ನು ಬಿಜೆಪಿಗರಿಗೆ ತಂದಿಟ್ಟಿತ್ತು. ಮಾಜಿ ಶಾಸಕ ವಿ.ಎಸ್.ಪಾಟೀಲರು 1500 ಮತಗಳಿಂದ ಸೋತಿದ್ದರು. ಹಾಗಾಗಿ ಯಲ್ಲಾಪುರದಲ್ಲಿ ಬಿಜೆಪಿ ಕಮಲವನ್ನು ಪಾಟೀಲರ ಗೆಲುವಿನ ಮೂಲಕವೇ ನೋಡಲು ಬಿಜೆಪಿಗರು ಬಯಸಿದ್ದರು. ಆದರೆ ಯಡಿಯೂರಪ್ಪ ಅವರ ಆದೇಶಕ್ಕೆ ಮಣಿದ ಪಾಟೀಲರು ಹೆಬ್ಬಾರರ ಜೊತೆ ಕಾಣಿಸಿಕೊಳ್ಳಬೇಕಾಯಿತು. ಅನರ್ಹತೆಯ ನೆಗಿಟಿವ್ ಅಂಶವನ್ನು ಮರೆ ಮಾಚಲು ಯಡಿಯೂರಪ್ಪ, ಮೋದಿ, ಅಭಿವೃದ್ಧಿ ಮಂತ್ರ ತೋರಿಸಿ ಮತ ಯಾಚಿಸಲಾಯಿತು. ಬಿಜೆಪಿ ಸಕರ್ಾರ ಉಳಿಯಬೇಕಾದರೆ ಯಡಿಯೂರಪ್ಪಗೆ ಮತ ಕೊಡಿ ಎಂದು ಕೇಳಿ ಬಿಜೆಪಿ ತನ್ನ ಒಳಗಿನ ನೋವನ್ನು ಮರೆಯಿತು. ಹೀಗಾಗಿ ಬಿಜೆಪಿ ಗೆಲುವಿನ ಆಶಯವನ್ನು ಬಲವಾಗಿ ಹೊಂದಿದೆ. 

ಕಾಂಗ್ರೆಸ್ಸಿಗರು ಉಪ ಚುನಾವಣೆಗೆ ನಾಮಪತ್ರ ಕೊಡುವ  ನಾಲ್ಕು ದಿನ ಮುನ್ನ ಮಾಜಿ ಮುಖ್ಯಮಂತ್ರಿಯನ್ನು ಮುಂಡಗೋಡಕ್ಕೆ ಕರೆಯಿಸಿಕೊಂಡು ಸಮಾವೇಶ ಮಾಡಿ ಪ್ರಚಾರಕ್ಕೆ ಮುನ್ನುಡಿ ಬರೆಯಿತು. ಅನರ್ಹತೆಯ ವಿರುದ್ಧ ಸರಣಿ ವಾಗ್ದಾಳಿ ನಡೆದವು. ಬಿಜೆಪಿಯ ಪೇಜ್ ಪ್ರಮುಖರಂತೆ, ಬೂತ್ ವೈಜ್ ಮಹಿಳಾ ಪ್ರಚಾರಕಿಯನ್ನು ನೇಮಿಸಿ ವ್ಯವಸ್ಥಿತ ಪ್ರಚಾರಕ್ಕೆ ಕಾಂಗ್ರೆಸ್ ಮುನ್ನುಡಿ ಬರೆಯಿತು. ಮಾಜಿ ಸಚಿವರಾದ  ಆರ್.ವಿ.ದೇಶಪಾಂಡೆ  ಎಚ್.ಕೆ.ಪಾಟೀಲ, ದಿನೇಶ್ ಗುಂಡೂರಾವ್,ಹರಿಪ್ರಸಾದ್, ವಿನಯ್ ಕುಮಾರ್ ಸೊರಕೆ, ರಮಾನಾಥ ರೈ, ಮಹಾದೇವಪ್ಪ, ಪ್ರಮೋದ ಮಧ್ವರಾಜ್ ರಂಥ ಘಟಾನುಘಟಿಗಳನ್ನು ಕರೆಯಿಸಿ ಪ್ರಚಾರ ಮಾಡಿಸಿತು. ಸರಣಿ ಪತ್ರಿಕಾಗೋಷ್ಠಿಗಳನ್ನು ಮಾಡಿ ಬಿಜೆಪಿಯನ್ನು ಹಣಿದರು. ಇದು ಮತದಾರರು ಯೋಚಿಸುವಂತೆ ಮಾಡಿತು. ಬನವಾಸಿ ಮತ್ತು ಮುಂಡಗೋಡ ಭಾಗದಲ್ಲಿ ಕಾಂಗ್ರೆಸ್ ಬಲ ಹೆಚ್ಚಿಸಿಕೊಂಡಿತು. ಮಾಜಿ ಶಾಸಕ ವಿ.ಎಸ್.ಪಾಟೀಲರ ಮಗನನ್ನು ಕಾಂಗ್ರೆಸ್ ತೆಕ್ಕೆಗೆ ತೆಗೆದುಕೊಂಡಿತು. ಅರಣ್ಯ ಅತಿಕ್ರಮಣ ಹೋರಾಟಗಾರ ರವೀಂದ್ರ ನಾಯ್ಕರನ್ನು ಕಾಂಗ್ರೆಸ್ ಪಕ್ಷಕ್ಕೆ ಸೇರಿಸಿಕೊಂಡು ಪ್ರಚಾರ ಮಾಡಿತು. ದೇಶಪಾಂಡೆ ಅವರಂತೂ ಹೆಬ್ಬಾರರ ವಿರುದ್ಧ ಮಾಡಿದ ಆರೋಪಗಳು ಪ್ರಬಲವಾಗಿದ್ದವು. ಬಿಜೆಪಿಯ ಹೆಬ್ಬಾರರು ಇದು ಕಾಂಗ್ರೆಸ್ ಮತ್ತು ಬಿಜೆಪಿ ನಡುವಿನ ಹೋರಾಟವಲ್ಲ. ದೇಶಪಾಂಡೆ ಮತ್ತು ಶಿವರಾಮ ನಡುವಿನ ಹೋರಾಟ ಎಂದು ಹೇಳುವಷ್ಟರ ಮಟ್ಟಿಗೆ ಜಿದ್ದಾಜಿದ್ದಿ ಏರ್ಪಟ್ಟಿತು. ಮತದಾನದ ಪ್ಯಾಟರನ್ ಗಮನಿಸಿದರೆ ಶೇ.50-50 ಮತದಾನ ಕೈ -ಕಮಲದಲ್ಲಿ ಹಂಚಿಹೋದಂತಿದೆ. ಗೆಲುವಿನ ಆಶಯ ಬಿಜೆಪಿಗೆ ಶೇ.70 ರಷ್ಟಿದ್ದರೆ, ಶೇ.60 ರಷ್ಟು ಮತ ಪಡೆಯುವ ವಿಶ್ವಾಸವನ್ನು ಕಾಂಗ್ರೆಸ್ ವ್ಯಕ್ತಪಡಿಸಿದೆ. ಡಿ.9 ರಂದು ಮತ ಎಣಿಕೆಯ ದಿನ ಮತದಾರರು ಬರೆದ ಹಣೆಬರಹ ಹೊರಬೀಳಲಿದೆ.