ಯಕ್ಷಗಾನ ತಾಳಮದ್ದಳೆ ಶ್ರವಣಾತ್ಮಕ ಕಲೆಯ ಉನ್ನತ ರೂಪ: ಪ್ರೊ. ಸಿ. ಎಂ. ತ್ಯಾಗರಾಜ

ಯಕ್ಷಗಾನ ತಾಳಮದ್ದಳೆ ಶ್ರವಣಾತ್ಮಕ ಕಲೆಯ ಉನ್ನತ ರೂಪ: ಪ್ರೊ. ಸಿ. ಎಂ. ತ್ಯಾಗರಾಜ Yakshagana rhythm is the highest form of auditory art: Prof. C. M. Thyagaraja

ಬೆಳಗಾವಿ 26: ನಗರದ ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಶಾಸ್ತ್ರೀಯ ಕನ್ನಡ ಭಾಷಾ ಅಧ್ಯಯನ ಸಂಸ್ಥೆಯು ಪಿಎಮ್ ಉಷಾ ಮೇರು ಯೋಜನೆಯ ಅಡಿಯಲ್ಲಿ ರಾಚವಿ ಕುವೆಂಪು ಸಭಾಂಗಣದಲ್ಲಿ ಜೂ. 24 ರಂದು ಹಮ್ಮಿಕೊಂಡಿದ್ದ ಹಳಗನ್ನಡ ಕಾವ್ಯ ರಸಗ್ರಹಣ ಕಾರ್ಯಕ್ರಮದಲ್ಲಿ ನಾಡಿನ ಪ್ರಸಿದ್ಧ ಕಲಾವಿದರಾದ ಜಬ್ಬಾರ್ ಸುಮೊ ಸಂಪಾಜೆ ಮತ್ತು ತಂಡದವರು ತಾಳೆಮದ್ದಳೆ ಮೂಲಕ ಗದಾಯುದ್ಧ ಪ್ರಸಂಗವನ್ನು ಪ್ರಸ್ತುತ ಪಡಿಸಿದರು. 

ಕುಲಪತಿ ಪ್ರೊ ಸಿ ಎಂ ತ್ಯಾಗರಾಜ ಅವರು ಮಾತನಾಡಿ ಯಕ್ಷಗಾನ ತಾಳಮದ್ದಳೆ ಕರ್ನಾಟಕದ ಕರಾವಳಿ ಭಾಗದಲ್ಲಿ ಪ್ರಚಲಿತವಿರುವ ಶ್ರವಣಾತ್ಮಕ ಕಲೆ. ಇದು ಯಕ್ಷಗಾನ ಶೈಲಿಯ ಭಾಗವಾಗಿದ್ದರೂ, ನೃತ್ಯ-ವೇಷಭೂಷಣ ರಹಿತವಾದ ಬರಹ ರಹಿತ ರೂಪವಾಗಿದೆ. ಇಲ್ಲಿ ಕಲಾವಿದರು ತಾಳಮದ್ದಳೆಯನ್ನು ಬಳಸಿ ಪುರಾಣಗಳಲ್ಲಿ ಬಂದಿರುವ ಕತಥಾನಕಗಳನ್ನು ಗಾಯನ-ವಿದ್ವತ್ ಸಂವಾದದ ಮೂಲಕ ಪ್ರಸ್ತುತಪಡಿಸುತ್ತಾರೆ. ಇಂತಹ ಅಮೋಘ ಕಲೆಯನ್ನು ವಿದ್ಯಾರ್ಥಿಗಳಿಗೆ ಹಾಗೂ ಅಧ್ಯಾಪಕರಿಗೆ ಪರಿಚಯಿಸುವ ಉದ್ದೇಶದಿಂದ ಹಮ್ಮಿಕೊಂಡಿದ್ದೇವು. ಖ್ಯಾತ ಕಲಾವಿದ ಜಬ್ಬಾರ್ ಸಮೋ ಹಾಗೂ ತಂಡದವರಿಂದ ಪೌರಾಣಿಕ ಕಥಾವಸ್ತುಗಳನ್ನು ಕೇಳುವುದೇ ಒಂದು ಸೌಭಾಗ್ಯ. ಅವರುಗಳಲ್ಲಿ ಇರುವ ಸಂಯೋಜನೆ, ಪಾತ್ರಗಳ ಪರಕಾಯ ಪ್ರವೇಶ ಹಾಗೂ ತನ್ಮಯತೆಯು ಅಮೋಘವಾದುದು ಎಂದು ಅವರನ್ನು ಶ್ಲಾಘಿಸಿದರು. 

ನಿಡಸೋಸಿ ಪರಮ ನಿಜಲಿಂಗೇಶ್ವರ ಸ್ವಾಮಿಗಳು ಈ ಕಲೆ ಮುಖ್ಯವಾಗಿ ಶ್ರೋತೃಗಳ ಧ್ಯಾನ ಹಾಗೂ ಕಾವ್ಯಗ್ರಹಣ ಶಕ್ತಿಯನ್ನು ಪರೀಕ್ಷಿಸುತ್ತದೆ. ಕಲಾವಿದರು ತಾವು ಓದಿದ ಪಾಠ, ಪುರಾಣ ಮತ್ತು ತತ್ತ್ವಗ್ರಂಥಗಳ ಆಧಾರದ ಮೇಲೆ ತೀಕ್ಷ್ಣವಾದ ವಿಚಾರಸರಣಿಯನ್ನು ಅನಾವರಣಗೊಳಿಸುತ್ತಾರೆ. ಕನ್ನಡ ನಾಡಿನ ಶ್ರವಣ ಕಲೆಯಲ್ಲಿ ಇದು ವಿಶಿಷ್ಟವಾದುದು. ಇದರಲ್ಲಿ ಕಾವ್ಯ, ಸಂಗೀತ, ತರ್ಕ ಮತ್ತು ಭಕ್ತಿಯ ಸುಂದರ ಸಮನ್ವಯತೆ ಕಾಣುತ್ತೇವೆ. ಯಕ್ಷಗಾನ ತಾಳಮದ್ದಳೆ ಭಾರತೀಯ ಶ್ರವಣಸಂಸ್ಕೃತಿಯ ಜೀವಂತ ಮಾದರಿಯಾಗಿದೆ. ಯಾವ ಕಾವ್ಯ ಓದುಗರಿಗೆ ಸಾಂತ್ವನ, ನೆಮ್ಮದಿ, ಬದುಕು, ಮಹೋನ್ನತೆಯನ್ನು ಕೊಡುತ್ತದೆಯೋ ಅದು ಶಾಶ್ವತ ಕಾವ್ಯವಾಗಿರುತ್ತದೆ ಎಂದು ಆಶೀರ್ವಚನ ನುಡಿಗಳಲ್ಲಿ ಹೇಳಿದರು. 

ಮಧ್ಯಾಹ್ನ ನಡೆದ ಭರತ ಮತ್ತು ಬಾಹುಬಲಿ ಯುದ್ಧ ಪ್ರಸಂಗದ ಕುರಿತಾದ ಗೋಷ್ಠಿಯಲ್ಲಿ ಪಂಪನ ಆದಿಪುರಾಣವನ್ನು ವನ್ನು ಕುರಿತು ವಿಭಿನ್ನ ನೆಲೆಗಳಲ್ಲಿ ಚರ್ಚಿಸಿದರು. ಗೋಷ್ಠಿಯ ಸಂಪನ್ಮೂಲ ವ್ಯಕ್ತಿಗಳಾಗಿ ಡಾ. ವಿ. ಎಸ್‌. ಮಾಳಿ ಹಾಗೂ ಗೋಷ್ಠಿಯ ಅಧ್ಯಕ್ಷತೆಯನ್ನು ಪ್ರೊ. ಎಸ್ ಗಂಗಾಧರಯ್ಯ ವಹಿಸಿದ್ದರು. 

ಮೌಲ್ಯಮಾಪನ ಕುಲಸಚಿವರಾದ ಪ್ರೊ. ಡಿ. ಎನ್‌. ಪಾಟೀಲ ಹಾಗೂ ಹಣಕಾಸು ಅಧಿಕಾರಿಗಳಾದ ಎಂ ಎ ಸ್ವಪ್ನ ಉಪಸ್ಥಿತರಿದ್ದರು. 

ಜಬ್ಬಾರ್ ಹಾಗೂ ತಂಡದವರು ಗದಾಯುದ್ಧ ಪ್ರಸಂಗವನ್ನು, ಸುಮಾರು ಮೂರು ಗಂಟೆಗಳ ಕಾಲ ಪ್ರಸ್ತುತ ಪಡಿಸಿದರು. ಆರು ಕಲಾವಿದರನ್ನು ಒಳಗೊಂಡಿರುವ ಈ ತಂಡ ಮುಮ್ಮೇಳ ಹಿಮ್ಮೇಳ ಭಾಗವತರೊಂದಿಗೆ ಚಂಡೆ, ಮದ್ದಳೆಗಳೊಂದಿಗೆ ಕುಳಿತು ಕೊಳ್ಳುತ್ತಾರೆ. ಇದು ಭಾವಪೂರ್ಣ ಸಂಗೀತದೊಂದಿಗೆ ನಾಟಕೀಯ ವಾಚನವಾಗಿದೆ. 

ಸಂಗೀತದ ರಸದೌತಣ ಉಣಬಡಿಸಿದರು. ನೆರೆದ ಶ್ರೋತೃವೃಂದವು ಕಣ್ತುಂಬಿಕೊಂಡರು. ಕಲಾವಿದರು ಗದಾಯುದ್ಧದ ಹಲವು ಸನ್ನಿವೇಶಗಳನ್ನು ಭಾಗವತಿಕೆಯ ಮೂಲಕ ಪ್ರಸ್ತುತ ಪಡಿಸುವಾಗ ಸಭೀಕರು ತಲೆದೂಗಿದರು. ಕಣ್ಮುಂದೆ ಪ್ರತ್ಯಕ್ಷವಾದಂತಾಯಿತು. ಚಂಡೆ ಮತ್ತು ಮದ್ದಳೆವಾದನಗಳಿಂದ ಸಭಾ ಕಂಪನವಾಯಿತು. 

ದಿನೇಶ ಭಟ್ಟರ ಭಾಗವತಿಕೆಯಲ್ಲಿ ಹಳಗನ್ನಡದ ಕಾವ್ಯದ ನಾದ ಎಲ್ಲರನ್ನೂ ಆಯಸ್ಕಾಂತದಂತೆ ಸೆಳೆಯಿತು. ನರಸಿಂಹ ಭಟ್ಟರ ಮದ್ದಳೆ ವಾದ, ಪ್ರಶಾಂತ ಕೈಗಡಿ ಅವರ ಚಂಡೆವಾದನವು ಎಲ್ಲರ ಮನ ಸೆಳೆಯಿತು. ದುರ್ಯೋಧನ ಪಾತ್ರದಲ್ಲಿ ವಾಸುದೇವ ರಂಗಭಟ್, ಸಂಜಯ ಮತ್ತು ಧರ್ಮರಾಯ ಪಾತ್ರಗಳಲ್ಲಿ ಹರೀಶ್ ಭಟ್ಟ ಹಾಗೂ ಭೀಮಸೇನ ಪಾತ್ರದಲ್ಲಿ ಜಬ್ಬರ್ ಸಮೋ ಅವರುಗಳ ಮಾತು, ಸಂಭಾಷಣೆ, ಸಂವಾದವು, ರಸಾವೇಶಗಳು ಶ್ರೋತೃವರ್ಗವನ್ನು ಮಂತ್ರಮುಗ್ಧಗೊಳಿಸಿತು. 

ಸಂಯೋಜಕಿ ಡಾ. ಶೋಭಾ ನಾಯಕ್ ಪಿಎಂ ಉಷಾ ಮೇರು ಯೋಜನೆಯ ನೋಡಲ್ ಅಧಿಕಾರಿಗಳಾದ ಡಾ. ನಂದಿನಿ ದೇವರ ಮನೆ ಹಾಗೂ ವಿಭಾಗದ ಮುಖ್ಯಸ್ಥರದ ಡಾ. ಮಹೇಶ್ ಗಾಜಪ್ಪನವರ, ಡಾ. ಗಜಾನನ ನಾಯ್ಕ, ಡಾ. ಪಿ. ನಾಗರಾಜ, ಡಾ. ಹನುಮಂತಪ್ಪ ಸಂಜೀವಣ್ಣನವರ್ ಉಪಸ್ಥಿತರಿದ್ದರು. ಬೆಳಗಾವಿ ಹಾಗೂ ಜಯಪುರದ ಕನ್ನಡ ಅಧ್ಯಾಪಕರು ಮತ್ತು ವಿವಿಯ ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.