ವಾರ್ಷಿಕ ಮಹಿಳಾ ಹಕ್ಕು ಸಭೆ ಅವಧಿ ಮೊಟಕುಗೊಳಿಸಿದ ವಿಶ್ವಸಂಸ್ಥೆ

ವಿಶ್ವಸಂಸ್ಥೆ, ಮಾ 2, ಕೊರೊನಾ ಭೀತಿ ಹಿನ್ನೆಲೆಯಲ್ಲಿ ಬರಲಿರುವ ವಾರ್ಷಿಕ ಅಂತರ ಸರ್ಕಾರೀಯ ಸಭೆಯನ್ನು ಒಂದು ದಿನಕ್ಕೆ ಮಿತಗೊಳಿಸಲು ಮಹಿಳಾ ಸ್ಥಿತಿಗತಿ ಕುರಿತ ವಿಶ್ವಸಂಸ್ಥೆಯ ಆಯೋಗ ಸಿ ಎಸ್ ಡಬ್ಲ್ಯು ನಿರ್ಧರಿಸಿದೆ. ಸಾಮಾನ್ಯವಾಗಿ ಈ ವಾರ್ಷಿಕ ಸಭೆ ಎರಡು ವಾರಗಳ ಕಾಲ ನಡೆಯುತ್ತದೆ. 64 ನೇ ಸಭೆಗೆ ಸಿದ್ಧತೆ ಕುರಿತ ಆಯೋಗದ ಅಧ್ಯಕ್ಷರ ಹೇಳಿಕೆಯಲ್ಲಿ, ಮಾ 9 ರಿಂದ 20 ರವರೆಗೆ ನಡೆಯಬೇಕಿದ್ದ ಸಭೆಯನ್ನು ವಿಶ್ವಸಂಸ್ಥೆ ಪ್ರಧಾನ ಕಾರ್ಯದರ್ಶಿ ಆಂಟೊನಿಯೋ ಗ್ಯುಟೆರಸ್ ಸಲಹೆಯ ಕಾರಣ ಒಂದು ದಿನಕ್ಕೆ ಸೀಮಿತಗೊಳಿಸಲಾಗಿದೆ ಎಂದು ತಿಳಿಸಲಾಗಿದೆ. ಮಾರ್ಚ್ 9 ರಂದು ಒಂದು ದಿನದ ಸಭೆ ನಡೆಯಲಿದ್ದು ಪ್ರತಿನಿಧಿಗಳು ರಾಜಕೀಯ ಘೋಷಣೆಗಳು ಹಾಗೂ ಇತರ ವಿಷಯಗಳ ಕರಡನ್ನು ಅಂಗೀಕರಿಸಲಿದ್ದಾರೆ. ಮಾರ್ಚ್ 9 ರಂದು ಸಾಮಾನ್ಯ ಚರ್ಚೆ ನಡೆಯುವುದಿಲ್ಲ ಮತ್ತು ಎಲ್ಲ ಇತರ ಕಾರ್ಯಕ್ರಮಗಳನ್ನು ರದ್ದುಪಡಿಸಲಾಗುವುದು ಎಂದೂ ಸಹ ಹೇಳಿಕೆ ತಿಳಿಸಿದೆ. 64 ನೇ ಸಭೆಯನ್ನು ಪೂರ್ಣಗೊಳಿಸಲು ಅಂದು ಮುಂದೂಡಲ್ಪಡುವ ಸಭೆಯನ್ನು ಮುಂದಿನ ದಿನಗಳಲ್ಲಿ ಮುಂದುವರಿಸಲಾಗುವುದು. ಲಿಂಗ ಸಮಾನತೆ ಉತ್ತೇಜನ ಮತ್ತು ಮಹಿಳಾ ಸಬಲೀಕರಣಕ್ಕೆ ಜೂನ್ 1946 ರಲ್ಲಿ ಆರ್ಥಿಕ ಮತ್ತು ಸಾಮಾಜಿಕ ಮಂಡಳಿಯ ನಿರ್ಣಯದನ್ವಯ ಸಿ ಎಸ್ ಡಬ್ಲ್ಯು ಅಸ್ತಿತ್ವಕ್ಕೆ ಬಂದಿತು.