ಗೃಹ ಬಳಕೆಯ ಅನಿಲ ವಾಣಿಜ್ಯ ಉದ್ದೇಶಕ್ಕೆ ಬಳಕೆಯಾಗದಂತೆ ತಡೆಯಿರಿ: ಜಿಲ್ಲಾಧಿಕಾರಿ

Prevent domestic gas from being used for commercial purposes: District Collector

ಕಾರವಾರ 06 : ಜಿಲ್ಲೆಯಲ್ಲಿ ಗೃಹ ಬಳಕೆಯ ಉದ್ದೇಶಕ್ಕೆ ನೀಡಲಾಗುವ ಅಡುಗೆ ಅನಿಲದ ಸಿಲೆಂಡರ್‌ಗಳು ವಾಣಿಜ್ಯ ಉದ್ದೇಶಕ್ಕೆ ಬಳಕೆಯಾಗದ ರೀತಿಯಲ್ಲಿ ಹೆಚ್ಚಿನ ನಿಗಾವಹಿಸಿ, ವಾಣಿಜ್ಯ ಚಟುವಟಿಕೆಗಳು ನಡೆಯುವ ಸ್ಥಳಗಳಿಗೆ ಅನೀರೀಕ್ಷಿತವಾಗಿ ಭೇಟಿ ನೀಡಿ ಪರೀಶೀಲನೆ ಕೈಗೊಳ್ಳುವಂತೆ ಆಹಾರ ಮತ್ತು ನಾಗರೀಕ ಸರಬರಾಜು ಇಲಾಖೆಯ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಕೆ.ಲಕ್ಷ್ಮೀಪ್ರಿಯಾ ಸೂಚನೆ ನೀಡಿದರು.

ಅವರು ಮಂಗಳವಾರ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಆಹಾರ ಮತ್ತು ನಾಗರೀಕ ಸರಬರಾಜು ಇಲಾಖೆಯ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.ವಾಣಿಜ್ಯ ಬಳಕೆಯ ಅನಿಲ ಸಿಲೆಂಡರ್‌ಗಳಿಗಿಂತ ಕಡಿಮೆ ದರದಲ್ಲಿ ಗೃಹ ಬಳಕೆಯ ಉದ್ದೇಶಕ್ಕೆ ಸಿಲೆಂಡರ್‌ಗಳನ್ನು ವಿತರಿಸಲಾಗುತ್ತಿದ್ದು, ಈ ಸಿಲೆಂಡರ್‌ಗಳು ವಾಣಿಜ್ಯ ಉದ್ದೇಶಗಳಿಗೆ ಬಳಕೆಯಾಗದಂತೆ ನಿಗಾ ವಹಿಸುವಂತೆ ಸೂಚಿಸಿದ ಜಿಲ್ಲಾಧಿಕಾರಿಗಳು, ಜಿಲ್ಲೆಯ ಕೆಲವು ಪ್ರದೇಶದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ವಾಣಿಜ್ಯ ಚಟುವಟಿಕೆಗಳು ನಡೆಯುತ್ತಿದ್ದು ಇಂತಹ ಪ್ರದೇಶಗಳಿಗೆ ಅನೀರೀಕ್ಷಿತ ಭೇಟಿ ನೀಡಿ ಪರೀಶೀಲನೆ ನಡೆಸುವಂತೆ ಮತ್ತು ಗ್ಯಾಸ್ ಏಜೆನ್ಸಿಗಳ ಅನಿಲ ವಿತರಣೆಯ ದಾಖಲೆಗಳನ್ನು ಹಾಗೂ ವಾಣಿಜ್ಯ ಅನಿಲ ಬಳಕೆದಾರರ ಅನಿಲ ಬಳಕೆಯ ಮಾಹಿತಿ ದಾಖಲೆಗಳನ್ನು ಪರೀಶೀಲನೆ ನಡೆಸುವಂತೆ ತಿಳಿಸಿದರು.ಪಡಿತರ ಚೀಟಗಳಿಗೆ ಇ ಕೆವೈಸಿ ಮಾಡುವ ಕಾರ್ಯದಲ್ಲಿ ಜಿಲ್ಲೆಯಲ್ಲಿ ಇದುವರೆಗೆ 98.02 ಪ್ರಗತಿ ಸಾಧಿಸಿದ್ದು, ಈ ಕಾರ್ಯದಲ್ಲಿ ಶೇ.100 ರಷ್ಟು ಪ್ರಗತಿ ಸಾಧಿಸುವ ನಿಟ್ಟಿನಲ್ಲಿ ಅಗತ್ಯ ಕ್ರಮಗಳನ್ನು ಕೈಗೊಳ್ಳುವಂತೆ ತಿಳಿಸಿದ ಅವರು, ಇದುವರೆಗೆ ಇ ಕೆವೈಸಿ ಮಾಡಿಸದೇ ಇರುವವರಿಗೆ ಅಂತಿಮ ದಿನಾಂಕವನ್ನು ನಿಗಧಿಪಡಿಸಿ, ನೊಟೀಸ್ ನೀಡುವಂತೆ ನಿರ್ದೇಶನ ನೀಡಿದರು.ಜಿಲ್ಲೆಯಲ್ಲಿನ ಒಟ್ಟು 410 ನ್ಯಾಯಬೆಲೆ ಅಂಗಡಿಗಳಲ್ಲಿ 402 ಅಂಗಡಿಗಳಿಗೆ ಪಾಯಿಂಟ್ ಆಫ್ ಸೇಲ್ (ಪಿಓಎಸ್) ಯಂತ್ರಗಳನ್ನು ಅಳವಡಿಸಿದ್ದು, ಬಾಕಿ ಇರುವ ಅಂಗಡಿಗಳಿಗೆ ಇಂಟರ್ನೆಟ್ ಸೌಲಭ್ಯದ ಕೊರತೆಯಿಂದ ಈ ಯಂತ್ರಗಳನ್ನು ಅಳವಡಿಸಿಕೊಳ್ಳಲು ಸಾಧ್ಯವಾಗಿಲ್ಲದ ಬಗ್ಗೆ ಪರೀಶೀಲಿಸಿದ ಅವರು ಬಿ.ಎಸ್‌.ಎನ್‌.ಎಲ್ ಅಧಿಕಾರಿಗಳೊಂದಿಗೆ ಸಮನ್ವಯ ಸಾಧಿಸಿ ಈ ಪ್ರದೇಶಗಳಿಗೆ ಶೀಘ್ರದಲ್ಲಿ ಇಂಟರ್ನೆಟ್ ಸೌಲಭ್ಯ ಪಡೆದು (ಪಿಓಎಸ್) ಯಂತ್ರಗಳನ್ನು ಅಳವಡಿಸುವ ಮೂಲಕ ಸಾರ್ವಜನಿಕ ಪಡಿತರ ವಿತರಣೆಯಲ್ಲಿ ಸಂಪೂರ್ಣ ಪಾರದರ್ಶಕತೆ ಮೂಡಿಸಿ ಎಂದರು.   ಅನ್ನಭಾಗ್ಯ ಗ್ಯಾರಂಟಿ ಯೋಜನೆಯಡಿ ಪ್ರಸ್ತುತ ಪೂರ್ಣ ಪ್ರಮಾಣದಲ್ಲಿ ಅಕ್ಕಿಯನ್ನು ವಿತರಿಸುತ್ತಿದ್ದು, ಪಡಿತರ ಅಕ್ಕಿಯು ಕಾಳಸಂತೆಯಲ್ಲಿ ಮಾರಾಟವಾಗದಂತೆ ಅತ್ಯಂತ ಎಚ್ಚರ ವಹಿಸಬೇಕು, ಜಿಲ್ಲೆಯ ಗಡಿ ತಾಲೂಕುಗಳಲ್ಲಿ ಹೆಚ್ಚಿನ ತಪಾಸಣೆಯನ್ನು ಕೈಗೊಳ್ಳಬೇಕು, ಕಾಳಸಂತೆಯಲ್ಲಿ ಮಾರಾಟ ಮಾಡುವುದು ಮತ್ತು ಅಕ್ರಮ ಸಾಗಾಟ ಕಂಡುಬಂದಲ್ಲಿ ಸಂಬಂಧಪಟ್ಟ ಅಧಿಕಾರಿಗಳ ವಿರುದ್ದ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು. 

ಸಾರ್ವಜನಿಕ ವಿತರಣಾ ಪದ್ದತಿಯಡಿ ವಿತರಿಸುವ ಆಹಾರ ಧಾನ್ಯಗಳನ್ನು ಸಗಟು ಗೋದಾಮುಗಳಲ್ಲಿ ದಾಸ್ತಾನು ಮಾಡುವಾಗ ವೈಜ್ಞಾನಿಕವಾಗಿ ಮತ್ತು ಕ್ರಮಬದ್ದವಾಗಿ ಜೋಡಿಸಿರಬೇಕು, ಯಾವುದೇ ಕಾರಣಕ್ಕೂ ಆಹಾರಧಾನ್ಯಗಳು ಹಾಳಾಗದಂತೆ ಅತ್ಯಂತ ಎಚ್ಚರ ವಹಿಸಬೇಕು, ಈ ಬಗ್ಗೆ ಸಂಬಂಧಪಟ್ಟ ತಾಲೂಕಿನ ಆಹಾರ ಇಲಾಖೆಯ ಅಧಿಕಾರಿಗಳು ಗೋದಾಮುಗಳಿಗೆ ಭೇಟಿ ನೀಡಿ ನಿರಂತರವಾಗಿ ಪರೀಶೀಲನೆ ನಡೆಸಬೇಕು, ಪರೀಶೀಲನಾ ವೇಳೆಯಲ್ಲಿ ವ್ಯತ್ಯಾಸ ಕಂಡು ಬಂದಲ್ಲಿ ಅಂತಹವರ ವಿರುದ್ದ ಸೂಕ್ತ ಕ್ರಮ ಕೈಗೊಳ್ಳಿ ಎಂದರು.ಸಭೆಯಲ್ಲಿ ಜಿಲ್ಲಾ ಆಹಾರ ಮತ್ತು ನಾಗರೀಕ ಸರಬರಾಜು ಇಲಾಖೆಯ ಉಪನಿರ್ದೇಶಕ ಮಂಜುನಾಥ ರೇವಣ್ಕರ್ ಹಾಗೂ ಆಹಾರ ಇಲಾಖೆಯ ಎಲ್ಲಾ ತಾಲೂಕುಗಳು ಅಧಿಕಾರಿಗಳು ಹಾಜರಿದ್ದರು.