ಶ್ರೀದೇವಿಯ ಆರಾಧನೆಯಿಂದ ಆಂತರಿಕ ಶಕ್ತಿ ಮತ್ತು ತೇಜಸ್ಸನ್ನು ಪಡೆಯಲು ಸಾಧ್ಯ

ಶ್ರೀದೇವಿಯ ಆರಾಧನೆಯಿಂದ ಆಂತರಿಕ ಶಕ್ತಿ ಮತ್ತು ತೇಜಸ್ಸನ್ನು ಪಡೆಯಲು ಸಾಧ್ಯ Worshipping Sridevi can help you gain inner strength and radiance.

ಶ್ರೀದೇವಿಯ ಆರಾಧನೆಯಿಂದ ಆಂತರಿಕ ಶಕ್ತಿ ಮತ್ತು ತೇಜಸ್ಸನ್ನು ಪಡೆಯಲು ಸಾಧ್ಯ 

ಗದಗ 02 :  ನವರಾತ್ರಿ ಹಬ್ಬದಲ್ಲಿ ದುರ್ಗಾ ದೇವಿಯ ಒಂಬತ್ತು ಅವತಾರಗಳಿಗೆ ಪೂಜೆ ಸಲ್ಲಿಸಲಾಗುತ್ತದೆ. ಈ ಆರಾಧನೆಯು ಪುರಾಣ ಕಥೆಯ ಅನುಸಾರವಾಗಿ ದುಷ್ಟ ಮಹಿಷಾಸುರನ ಸಂಹಾರಕ್ಕಾಗಿ ದೇವಿ ಹೇಗೆ ಅವತಾರ ತಾಳಿದಳೋ ಅದೇ ಅನುಕ್ರಮದಲ್ಲಿ ನಡೆಯುತ್ತದೆ ಎಂದು ಡಾ.ರಾಜಗುರು ಗುರುಸ್ವಾಮಿ ಕಲಕೇರಿ ಹೇಳಿದರು. 

ನಗರದ ಮುಳಗುಂದನಾಕಾ ಬಳಿಯ ಶ್ರೀಅಡವೀಂದ್ರಸ್ವಾಮಿ ಮಠದ ಶ್ರೀಅನ್ನಪೂರ್ಣೇಶ್ವರ ಸನ್ನಿಧಿಯಲ್ಲಿ ದಸರಾ ಮಹೋತ್ಸವ ಮತ್ತು ಶ್ರೀದೇವಿ ಪುರಾಣ ಪ್ರವಚನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.  

ನವರಾತ್ರಿಯ ವ್ರತಾಚರಣೆಯ ಐದನೇ ದಿನ ಆರಾಧನೆಗೆ ಪಾತ್ರವಾಗುವ ಜಗನ್ಮಾತೆಯ ಸ್ವರೂಪವೇ ಸ್ಕಂದಮಾತೆ. ಪೌರಾಣಿಕ ನಂಬಿಕೆಗಳ ಪ್ರಕಾರ, ಸ್ಕಂದಮಾತೆಯು ತಾಯಿ ಪಾರ್ವತಿಯ ಒಂದು ರೂಪ. ದೇವತೆಗಳ ಸೇನಾಧಿಪತಿಯಾದ ಕುಮಾರ ಕಾರ್ತಿಕೇಯನಿಗೆ (ಸ್ಕಂದ) ತಾಯಿಯಾದ್ದರಿಂದಲೇ ಆಕೆಗೆ ಈ ಹೆಸರು ಬಂದಿದೆ ಎಂದರು. 

ಒಂದು ಕಥೆಯ ಪ್ರಕಾರ, ತಾಯಿ ಪಾರ್ವತಿಯು ಕೋಪಗೊಂಡು ಕುಮಾರ ಕಾರ್ತಿಕೇಯನನ್ನು ರಕ್ಷಿಸಲು ಆದಿಶಕ್ತಿಯ ರೂಪದಲ್ಲಿ ಕಾಣಿಸಿಕೊಂಡಾಗ, ಇಂದ್ರನು ಭಯದಿಂದ ನಡುಗಲು ಪ್ರಾರಂಭಿಸಿದನು. ನಂತರ ಇಂದ್ರನು ತನ್ನ ಪ್ರಾಣವನ್ನು ಉಳಿಸಿಕೊಳ್ಳಲು ದೇವಿಯ ಬಳಿ ಕ್ಷಮೆಯನ್ನು ಕೇಳಿದನು. ಈ ಪರಾಕ್ರಮದಿಂದಾಗಿ, ಎಲ್ಲಾ ದೇವತೆಗಳು ದುರ್ಗಾ ದೇವಿಯ ಈ ರೂಪವನ್ನು ಸ್ಕಂದಮಾತೆ ಎಂದು ಕರೆದು ಆಕೆಯನ್ನು ಸ್ತುತಿಸಲು ಪ್ರಾರಂಭಿಸಿದರು. ಆಕೆ ಪದ್ಮಾಸನಾ ದೇವಿ ಎಂದೂ ಪ್ರಸಿದ್ಧಳಾಗಿದ್ದಾಳೆ ಎಂದು ಅವರು ಹೇಳಿದರು.   

ನವರಾತ್ರಿಯ ಐದನೇ ದಿನದಂದು ಸ್ಕಂದಮಾತೆಯ ಆರಾಧನೆ ಮಾಡುವ ಭಕ್ತರು ಆಕೆಯ ಕೃಪಾದೃಷ್ಟಿಯಿಂದ ಶಾಂತಿ, ಸಮಾಧಾನ, ಆಂತರಿಕ ಶಕ್ತಿ ಮತ್ತು ತೇಜಸ್ಸನ್ನು ಪಡೆಯುತ್ತಾರೆ ಎಂಬ ನಂಬಿಕೆ ಇದೆ. ವಿಶೇಷವಾಗಿ, ಸಂತಾನ ಬಯಸುವ ದಂಪತಿಗಳು ಈ ದಿನದ ಪೂಜೆಯಿಂದ ಅಪಾರ ಅನುಗ್ರಹವನ್ನು ಪಡೆಯುತ್ತಾರೆ ಎಂಬ ನಂಬಿಕೆ ಜನಮಾನಸದಲ್ಲಿ ಬೇರೂರಿದೆ ಎಂದರು. 

ಸ್ಕಂದಮಾತೆಯ ಪೌರಾಣಿಕ ಹಿನ್ನೆಲೆ-ತಾರಕಾಸುರನ ವರ ಮತ್ತು ವಧೆ:  

ಪುರಾಣಗಳ ಪ್ರಕಾರ, ತಾರಕಾಸುರ ಎಂಬ ರಾಕ್ಷಸನು ತೀವ್ರ ತಪಸ್ಸಿನಿಂದ ಬ್ರಹ್ಮನಿಂದ ವರವನ್ನು ಪಡೆದಿದ್ದನು. ಜೀವಿಗಳೆಲ್ಲರೂ ಮರಣವನ್ನು ಅನುಭವಿಸಲೇಬೇಕು ಎಂಬ ಬ್ರಹ್ಮನ ನಿಯಮದ ಕಾರಣ, ತಾರಕಾಸುರನು ಒಂದು ವಿಶಿಷ್ಟ ವರವನ್ನು ಬೇಡಿಕೊಂಡನು: ನನಗೆ ಶಿವನ ಮಗನಿಂದಲೇ ಮರಣವಾಗಲಿ. ಶಿವನು ಎಂದಿಗೂ ಮದುವೆಯಾಗುವುದಿಲ್ಲ ಎಂಬ ಅಹಂಕಾರ ಮತ್ತು ಭರವಸೆಯಿಂದ ಅವನು ಈ ವರವನ್ನು ಕೇಳಿದ್ದನು. ಆದರೆ, ಕಾಲವು ಬದಲಾಯಿತು. ಶಿವನು ತಾಯಿ ಪಾರ್ವತಿಯನ್ನು ವಿವಾಹವಾದರು ಮತ್ತು ಇವರಿಗೆ ಕಾರ್ತಿಕೇಯನು (ಸ್ಕಂದ) ಜನಿಸಿದನು. ದೇವತೆಗಳ ಸೇನಾಧಿಪತಿಯಾಗಿ ಬೆಳೆದ ಕಾರ್ತಿಕೇಯನು ಮುಂದೆ ತಾರಕಾಸುರನ ವಧೆಯನ್ನು ನೆರವೇರಿಸಿ ಲೋಕವನ್ನು ರಾಕ್ಷಸನ ಸಂಕಟದಿಂದ ರಕ್ಷಿಸಿದನು ಎಂದು ಅವರು ಹೇಳಿದರು.  

ಅಂತಹ ಮಹಾನ್ ವೀರನಾದ ಸ್ಕಂದನಿಗೆ ತಾಯಿಯಾದ್ದರಿಂದ ದುರ್ಗಾ ದೇವಿಯ ಈ ರೂಪಕ್ಕೆ ಸ್ಕಂದಮಾತಾ ಎಂದು ಹೆಸರು ಬಂದಿದೆ. ಈ ರೂಪವು ಮಾತೃತ್ವದ ಪ್ರೀತಿ, ಶಕ್ತಿ ಮತ್ತು ದುಷ್ಟ ಶಕ್ತಿಗಳ ನಾಶದ ಸಂಕೇತವಾಗಿದೆ. ಪಾರಿಜಾತ ಹೂವುಗಳಿಂದ ದೇವಿಯನ್ನು ಪೂಜಿಸುವುದು ಅತ್ಯಂತ ಶುಭಕರವಾಗಿದ್ದು, ಸ್ಕಂದಮಾತೆಯನ್ನು ಭಕ್ತಿಯಿಂದ ಆರಾಧಿಸುವುದರಿಂದ ಭಕ್ತರ ಬಡತನ ನಿವಾರಣೆಯಾಗುತ್ತದೆ ಮತ್ತು ಜೀವನದಲ್ಲಿ ಸುಖ-ಶಾಂತಿ ನೆಲೆಸುತ್ತದೆ ಎಂಬ ಬಲವಾದ ನಂಬಿಕೆಯಿದೆ ಎಂದು ಅವರು ಹೇಳಿದರು. 

ಸ್ಕಂದ ಮಾತೆಯ ರೂಪ ಮತ್ತು ಆರಾಧನಾ ಮಹತ್ವ: ನವರಾತ್ರಿಯ ಸಂದರ್ಭದಲ್ಲಿ ಆರಾಧಿಸಲ್ಪಡುವ ಸ್ಕಂದಮಾತೆಯು ತಾಯಿ ಪಾರ್ವತಿಯ ಮತ್ತೊಂದು ಭವ್ಯ ರೂಪ. ಈಕೆ ದೇವತೆಗಳ ಸೇನಾಧಿಪತಿಯಾದ ಸುಬ್ರಹ್ಮಣ್ಯನ (ಕುಮಾರ ಕಾರ್ತಿಕೇಯ) ತಾಯಿ ಎಂದು ಪ್ರಸಿದ್ಧಳು. ಈ ದೇವಿಯನ್ನು ಆರೋಗ್ಯ ಮತ್ತು ಸಂಪತ್ತಿನ ಪ್ರತೀಕವೆಂದು ಪರಿಗಣಿಸಲಾಗುತ್ತದೆ. ಪುರಾಣಗಳಲ್ಲಿ, ಆಕೆಯನ್ನು ದೇವತೆಗಳ ಸೈನ್ಯದ ನಾಯಕಿ ಎಂದು ಉಲ್ಲೇಖಿಸಲಾಗಿದೆ ಎಂದು ಅವರು ಹೇಳಿದರು. 

ಚನ್ನಬಸಯ್ಯ ಶಾಸ್ತ್ರಿಗಳು ಹೇಮಗಿರಿಮಠ ಪುರಾಣ ಪಠಿಸಿದರು. ಪಕ್ರುಸಾಬ ಮುಲ್ಲಾ, ಜಗನ್ನಾಥ ಕಲಬುರಗಿ, ಶರಣಕುಮಾರ ಗುತ್ತರಗಿ, ಎಸ್‌.ಬಿ. ಭಜಂತ್ರಿ ಸಂಗೀತ ಸೇವೆ ನೀಡಿದರು.  

ಶ್ರೀಮಠದ ಧರ್ಮದರ್ಶಿಗಳಾದ ಮಹೇಶ್ವರ ಸ್ವಾಮೀಜಿ ಸಮ್ಮುಖ ವಹಿಸಿದ್ದರು. ಶ್ರೀಅನ್ನಪೂರ್ಣೇಶ್ವರಿದೇವಿ ಜಾತ್ರಾ ಮಹೋತ್ಸವ ಸಮಿತಿಯ ಗೌರವಾಧ್ಯಕ್ಷರಾದ ಎಸ್‌.ಪಿ. ಸಂಶಿಮಠ, ಅಧ್ಯಕ್ಷರಾದ ಸದಾಶಿವಯ್ಯ ಮದರಿಮಠ, ಪ್ರಧಾನ ಕಾರ್ಯದರ್ಶಿ ಶರಣಬಸಪ್ಪ ಗುಡಿಮನಿ, ಮಹಿಳಾ ಸಮಿತಿ ಅಧ್ಯಕ್ಷರಾದ ಸುವರ್ಣಾ ಮದರಿಮಠ, ಪೂಜಾ ಸಮಿತಿ ಅಧ್ಯಕ್ಷರಾದ ಶರಣಯ್ಯಸ್ವಾಮಿ ಶಿವಪ್ಪಯ್ಯನಮಠ, ವೀರೇಶ್ವರ ಸ್ವಾಮಿಗಳು ಹೊಸಳ್ಳಿಮಠ, ಜಾತ್ರಾ ಮಹೋತ್ಸವ ಸಮಿತಿ ಕಾರ್ಯದರ್ಶಿ ಗೀತಾ ಎಂ. ಹೂಗಾರ, ಸಹಕಾರ್ಯದರ್ಶಿ ಸುಷ್ಮಾ ಖಂಡಪ್ಪಗೌಡ್ರ, ಕೋಶಾಧ್ಯಕ್ಷರಾದ ಅಶ್ವಿನಿ ನೀಲಗುಂದ, ವಿ.ಎಚ್‌. ದೇಸಾಯಿಗೌಡ್ರ ಮತ್ತಿತರ ಗಣ್ಯರು ಉಪಸ್ಥಿತರಿದ್ದರು.