ಡಿಮ್ಹಾನ್ಸ್‌ ಸಂಸ್ಥೆಯಲ್ಲಿ ವಿಶ್ವ ಸಮಾಜ ಕಾರ್ಯ ದಿನಾಚರಣೆ-2026 ಆಚರಣೆ

ಡಿಮ್ಹಾನ್ಸ್‌ ಸಂಸ್ಥೆಯಲ್ಲಿ ವಿಶ್ವ ಸಮಾಜ ಕಾರ್ಯ ದಿನಾಚರಣೆ-2026 ಆಚರಣೆ World Social Work Day 2026 celebrated at Dimhans Institute

ಲೋಕದರ್ಶನ ವರದಿ 

ಧಾರವಾಡ (ಮಾ.18): ಸಮಾಜದ ಅಭಿವೃದ್ದಿಯಲ್ಲಿ ಸಾಮಾಜಿಕ ಕಾರ್ಯಕರ್ತರ ಸೇವೆ ಅತ್ಯಮೂಲ್ಯವಾಗಿದ್ದು, ಪ್ರಸ್ತುತ ದಿನಮಾನಗಳಲ್ಲಿ ಏರಿಕೆಯಾಗುತ್ತಿರುವ ಮಾನಸಿಕ ಆರೋಗ್ಯ ಸಮಸ್ಯೆಗಳಿಗೆ ಸ್ಪಂದಿಸುವಂತಹ ಸಮಾಜಕಾರ್ಯಕರ್ತರ ಸೇವೆ ಜನರಿಗೆ ತುಂಬಾ ಸಹಾಯಕವಾಗುತ್ತಿದೆ ಎಂದು ಡಿಮ್ಹಾನ್ಸ್‌ ಸಂಸ್ಥೆಯ ನಿರ್ದೇಶಕ ಡಾ.ಅರುಣಕುಮಾರ ಸಿ. ಅವರು ಹೇಳಿದರು.  

ಅವರು ನಿನ್ನೆ (ಮಾ.17) ಬೆಳಿಗ್ಗೆ ಧಾರವಾಡ ಮಾನಸಿಕ ಆರೋಗ್ಯ ಮತ್ತು ನರವಿಜ್ಞಾನಗಳ ಸಂಸ್ಥೆ (ಡಿಮ್ಹಾನ್ಸ್‌) ಯಲ್ಲಿ ವಿಶ್ವ ಸಮಾಜ ಕಾರ್ಯ ದಿನಾಚರಣೆ-2026 ರ ಕಾರ್ಯಕ್ರಮವನ್ನು ಉದ್ಘಾಟಿಸಿ, ಮಾತನಾಡಿದರು.  

 ಸಮಾಜದ ಸಮಸ್ಯೆಗಳಿಗೆ ಸಮಾಜಕಾರ್ಯಕರ್ತರು ವೃತ್ತಿ ನೈಪುಣ್ಯತೆಯ ಆಧಾರದ ಮೇಲೆ ಹಲವಾರು ಸಮಸ್ಯೆಗಳನ್ನು ಪರಿಹರಿಸುತ್ತಾ ಬಂದಿದ್ದಾರೆ. ಸಮಾಜಕಾರ್ಯ ವೃತ್ತಿಯ ಕ್ಷೇತ್ರದಲ್ಲಿ ಅನೇಕ ಮಹನೀಯರು ಅಮೂಲ್ಯವಾದ ಸೇವೆಯನ್ನು ನೀಡಿದ್ದಾರೆ. ಇಂತಹ ಅನೇಕ ಮಹನೀಯರಿಗೆ ವಿಶ್ವ ಸಮಾಜಕಾರ್ಯ ದಿನಾಚರಣೆಯ ದಿನದ ನಿಮಿತ್ತ ವಿಶೇಷವಾದ ಅಭಿನಂದನೆಗಳು ಎಂದು ತಿಳಿಸಿದರು.  

ಈ ವರ್ಷದ ಧ್ಯೇಯವಾಕ್ಯವು, ವಿಭಜಿತ ಸಮುದಾಯಗಳನ್ನು ಒಗ್ಗೂಡಿಸುವ, ಬೆಳೆಸುವ ಮತ್ತು ನಂಬಿಕೆಯನ್ನು ನಿರ್ಮಿಸುವ ಹಾಗೂ ಆಫ್ರೀಕನ್ ಹರಂಬೀ ತತ್ವಶಾಸ್ತ್ರದ ನೆಲೆಗಟ್ಟಿನಲ್ಲಿ ಸುಸ್ಥಿರ, ಅಂತರ್ಗತ ಭವಿಷ್ಯವನ್ನು ಉತ್ತೇಜಿಸುವಲ್ಲಿ ಸಾಮಾಜಿಕ ಕಾರ್ಯಕರ್ತರ ಪ್ರಮುಖ ಪಾತ್ರವನ್ನು ಎತ್ತಿ ತೋರಿಸುತ್ತದೆ ಎಂದು ತಿಳಿಸಿದರು.  

ವಿಭಜಿತ ಸಮಾಜವನ್ನು ಒಟ್ಟುಗೂಡಿಸಲು ಸಹಭಾಗಿತ್ವದ ಮೂಲಕ ಭರವಸೆ ಮತ್ತು ಸಾಮರಸ್ಯವನ್ನು ನಿರ್ಮಿಸಿ ನಾವು ಒಟ್ಟಾಗಿ ಮುಂದೆ ಸಾಗಿದಾಗ ಯಾವುದೇ ಸವಾಲು ಮತ್ತು ಸಮಸ್ಯೆ ತುಂಬಾ ದೊಡ್ಡದಾಗುವುದಿಲ್ಲ, ಇಂತಹ ಕೆಲಸದಲ್ಲಿ ನಾವು ಒಟ್ಟಾಗಿ ಕೆಲಸ ಮಾಡುವುದು ನಮಗೆ ಒಂದು ನೆನಪಿನೊಂದಿಗೆ ಸವಾಲನ್ನು ನೀಡುತ್ತದೆ ಎಂಬುದಾಗಿದೆ. ಸಮಾಜಕಾರ್ಯ ಶಿಕ್ಷಣವು ಕೇವಲ ಜ್ಞಾನವನ್ನು ನೀಡುವುದು ಅಷ್ಟೇ ಅಲ್ಲ, ಸಮಾಜದ ಹೃದಯವನ್ನು ರೂಪಿಸುವ ಕಾರ್ಯವು ಆಗಿದೆ ಎಂಬುದನ್ನು ನೆನಪಿಸುತ್ತದೆ ಎಂದು ಅಭಿಪ್ರಾಯಪಟ್ಟರು.  

ಮಾನಸಿಕ ಆರೋಗ್ಯ ಕ್ಷೇತ್ರದಲ್ಲಿ ಮನೋವೈದ್ಯಕೀಯ ಸಮಾಜ ಕಾರ್ಯಕರ್ತರ ಸೇವೆ ಪ್ರಮುಖವಾಗಿದೆ. ಮನೋವೈದ್ಯಕೀಯ ಸಮಾಜ ಕಾರ್ಯ ಶಾಖೆಯು ಮಾನಸಿಕ ಆರೋಗ್ಯ ಕ್ಷೇತ್ರದಲ್ಲಿ ಗಣನೀಯ ಮಹತ್ವವನ್ನು ಪಡೆದುಕೊಳ್ಳುತ್ತಿದೆ ಎಂದು ಅಭಿಪ್ರಾಯ ಪಟ್ಟರು. ಡಿಮ್ಹಾನ್ಸ್‌ ಸಂಸ್ಥೆಯಲ್ಲಿ ಮನೋವೈದ್ಯಕೀಯ ಸಮಾಜಕಾರ್ಯ ವಿಭಾಗದ ವತಿಯಿಂದ ಮಾಡಿದ ಕಾರ್ಯಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.  

ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಡಿಮ್ಹಾನ್ಸ್‌ ಸಂಸ್ಥೆಯ ಮುಖ್ಯ ಆಡಳಿತ ಅಧಿಕಾರಿ ಮೇಜರ್ ಸಿದ್ದಲಿಂಗಯ್ಯ ಹಿರೇಮಠ, ವೈದ್ಯಕೀಯ ಅಧೀಕ್ಷಕ ಡಾ.ರಾಘವೇಂದ್ರ ನಾಯಕ್ ಅವರು ಮಾತನಾಡಿದರು.  

ವೇದಿಕೆಯಲ್ಲಿ ಡಿಮ್ಹಾನ್ಸ್‌ ಸಂಸ್ಥೆಯ ಸೈಕಿಯಾಟ್ರಿ ವಿಭಾಗದ ಪ್ರಾಧ್ಯಾಪಕ ಹಾಗೂ ಮುಖ್ಯಸ್ಥ ಡಾ.ರಂಗನಾಥ ಕುಲಕರ್ಣಿ ಮತ್ತು ಮನೋವೈದ್ಯಕೀಯ ಸಮಾಜ ಕಾರ್ಯ ವಿಭಾಗದ ಪ್ರಾಧ್ಯಾಪಕ ಹಾಗೂ ವಿಭಾಗದ ಮುಖ್ಯಸ್ಥ ಡಾ.ಸತೀಶ್ ಅವರು ಉಪಸ್ಥಿತರಿದ್ದರು.  

ವಿಶ್ವ ಸಮಾಜ ಕಾರ್ಯ ದಿನಾಚರಣೆ-2026 ಅಂಗವಾಗಿ ಹಮ್ಮಿಕೊಂಡ ಈ ಕಾರ್ಯಕ್ರಮದಲ್ಲಿ ಮನೋವೈದ್ಯಕೀಯ ಸಮಾಜ ಕಾರ್ಯವಿಭಾಗದ ಸಿಬ್ಬಂದಿಗಳಾದ ಡಾ.ಅಶೋಕ ಎಸ್‌.ಕೋರಿ ಹಾಗೂ ಡಾ.ಬಿ.ಜಿ ಅನಂತರಾಮು ಅವರು ಪಿ.ಹೆಚ್‌.ಡಿ ಪದವಿಯನ್ನು ಪಡೆದಿದ್ದಾಕ್ಕಾಗಿ ಡಿಮ್ಹಾನ್ಸ್‌ ಸಂಸ್ಥೆಯ ಸಿಬ್ಬಂದಿಗಳು ಸೇರಿ ಸನ್ಮಾನಿಸಿದರು.  

ಕಾರ್ಯಕ್ರಮದಲ್ಲಿ ಮನೋವೈದ್ಯಕೀಯ ಸಮಾಜ ಕಾರ್ಯಕರ್ತರಾದ ಓಬಾ ನಾಯ್ಕ ಪಿ,         ರಮೇಶ ತಿಮ್ಮಾಪೂರ, ಪ್ರಶಾಂತ ಪಾಟೀಲ, ಶ್ರೀದೇವಿ ಬಿರಾದಾರ, ಟಿಲಿಮಾನಸ ತಂಡದ ಎಲ್ಲಾ ಸಾಮಾಜಿಕ ಕಾರ್ಯಕರ್ತರು ಮತ್ತು ಮನಶಾಸ್ತ್ರಜ್ಞರು, ಮನೋವೈದ್ಯರಾದ ಡಾ.ರಾಘವೇಂದ್ರ ಪಾಟೀಲ, ಎಂಫೀಲ್ ಪ್ರಶೀಕ್ಷಾಣಾರ್ಥಿಗಳು ಉಪಸ್ಥಿತರಿದ್ದರು.  

ಅಶೋಕ ಹಾರೋಡಗಿ ಪ್ರಾರ್ಥಸಿದರು. ಆಶಾ ಮೇಟಿ ಕಾರ್ಯಕ್ರಮವನ್ನು ನಿರೂಪಿಸಿದರು. ಅಕ್ಷತಾ ಸಿ ತೋಟಗೇರ ಅವರು ಪ್ರಾಸ್ತಾವಿಕವಾಗಿ ಮಾತನಾಡಿದರು. ನಾಮದೇವ ಕೊಡತೆ ಸ್ವಾಗತಿಸಿದರು. ಪಲ್ಲವಿ ಕಾಡೇವಾಡಿ ಅವರು ವಂದಿಸಿದರು.  ವೇದಿಕೆಯ ಕಾರ್ಯಕ್ರಮದ ನಂತರ ವಿಶ್ವ ಸಮಾಜ ಕಾರ್ಯ ದಿನಾಚರಣೆ-2026 ಅಂಗವಾಗಿ ಡಿಮ್ಹಾನ್ಸ್‌ ಸಂಸ್ಥೆಯಲ್ಲಿ ಆವರಣದಲ್ಲಿ ಸಸಿಗಳನ್ನು ನೆಡಲಾಯಿತು.