ವಿಶ್ವ ಹಿರಿಯ ನಾಗರಿಕರ ದಿನಾಚರಣೆ- ಹಿರಿಯ ನಾಗರಿಕರಿಗೆ ಸನ್ಮಾನ

ಹಾವೇರಿ 03: ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾ ನ್ಯಾಯವಾದಿಗಳ ಸಂಘ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ, ಹಿರಿಯ ನಾಗರಿಕರಿಗಾಗಿ ಶ್ರಮಿಸುತ್ತಿರುವ ಸ್ವಯಂ ಸೇವಾ ಸಂಸ್ಥೆಗಳು ಹಾಗೂ ನಿವೃತ್ತ ನೌಕರರ ಜಿಲ್ಲಾ ಸಂಘದ ಸಹಯೋಗದಲ್ಲಿ  ಅಕ್ಟೋಬರ್ 1 ರಂದು ವಿಶ್ವ ಹಿರಿಯ ನಾಗರಿಕರ ದಿನಾಚರಣೆ ಹಾಗೂ ಹಿರಿಯ ನಾಗರಿಕರಿಗೆ ಕಾನೂನು ಅರಿವು ನೆರವು ಕಾರ್ಯಕ್ರಮ ಹಾವೇರಿ ನಗರದ ಹೊಸಮಠದ ಶ್ರೀ ಬಸವೇಶ್ವರ ಸಮುದಾಯ ಭವನದಲ್ಲಿ  ಜರುಗಿತು. 

ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಗಳಾದ ಬಿ.ಆರ್‌.ಮುತಾಲಿಕ್‌ದೇಸಾಯಿ ಅವರು ಉದ್ಘಾಟನೆ ನೆರವೇರಿಸಿ ಮಾತನಾಡಿದರು.  

ಉಪನ್ಯಾಸಕರಾಗಿ ಭಾಗವಹಿಸಿದ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸಹಾಯಕ ಕಾನೂನು ನೆರವು ಅಭಿರಕ್ಷಣಾ ನ್ಯಾಯವಾದಿ ಎನ್‌.ಎನ್‌.ದಿಳ್ಳೆಪ್ಪನವರ ಅವರು   ಹಿರಿಯ ನಾಗರಿಕರ ಕಾಯ್ದೆಗಳ ಕುರಿತು ಮಾಹಿತಿ ನೀಡಿದರು. 

ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ 10 ಜನ ಹಿರಿಯ ನಾಗರಿಕರನ್ನು  ಸನ್ಮಾನಿಸಲಾಯಿತು. ಹಿರಿಯ ನಾಗರಿಕರ ಕ್ರೀಡಾಕೂಟ  ಹಾಗೂ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ವಿಜೇತರಾದ ಹಿರಿಯ ನಾಗರಿಕರಿಗೆ ಪ್ರಥಮ, ದ್ವಿತೀಯ ಹಾಗೂ ತೃತೀಯ ಬಹುಮಾನ ಹಾಗೂ ಪ್ರಶಸ್ತಿ ನೀಡಿ ಗೌರವಿಸಲಾಯಿತು.  

ಹೊಸಮಠದ  ಬಸವಶಾಂತಲಿಂಗ ಸ್ವಾಮೀಜಿಗಳು ಸಾನಿಧ್ಯ ವಹಿಸಿದ್ದರು. ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಅಕ್ಷಯ್ ಶ್ರೀಧರ, ಅಪರ ಜಿಲ್ಲಾಧಿಕಾರಿ ಪೂಜಾರ ವೀರಮಲ್ಲಪ್ಪ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕ ಶ್ರೀನಿವಾಸ ಆಲದರ್ತಿ, ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಕಲ್ಯಾಣಾಧಿಕಾರಿ ಶ್ರೀಮತಿ ಆಶು ನದಾಫ್,  ತಾಲೂಕಾ ಆರೋಗ್ಯಾಧಿಕಾರಿ ಡಾ.ಪ್ರಭಾಕರ ಕುಂದೂರ, ನಿವೃತ್ತ ಕೃಷಿ ಅಧಿಕಾರಿ ಹಾಗೂ  ನಿವೃತ್ತ ಸಂಘದ ಜಿಲ್ಲಾಧ್ಯಕ್ಷ ಎಸ್‌.ಬಿ.ಅಣ್ಣಿಗೇರಿ ಇತರರು ಉಪಸ್ಥಿತರಿದ್ದರು.