ಜನಸಂಖ್ಯಾ ಸಂಶೋಧನಾ ಕೇಂದ್ರದಲ್ಲಿ ವಿಶ್ವ ಜನಸಂಖ್ಯಾ ದಿನಾಚರಣೆ

ಜನಸಂಖ್ಯಾ ಸಂಶೋಧನಾ ಕೇಂದ್ರದಲ್ಲಿ ವಿಶ್ವ ಜನಸಂಖ್ಯಾ ದಿನಾಚರಣೆ World Population Day Celebration at the Population Research Centre

ಲೋಕದರ್ಶನ ವರದಿ 

ಧಾರವಾಡ 18 :  ವಿದ್ಯಾಗಿರಿಯ ಜನ ಸಂಖ್ಯಾ ಸಂಶೋಧನಾ ಕೇಂದ್ರ  ವತಿಯಿಂದ ಶಾಲಾ ಹಾಗೂ ಪಿ.ಯು.ಸಿ ವಿದ್ಯಾರ್ಥಿಗಳಿಗಾಗಿ ಜನಸಂಖ್ಯೆ ಹಾಗೂ ಹದಿಹರೆಯದವರ ಆರೋಗ್ಯ ಕುರಿತು ಅರಿವು ಮೂಡಿಸುವ ಉದ್ದೇಶದಿಂದ “ಕುಟುಂಬದ ಮಹತ್ವ" ಹಾಗೂ "ಜನಸಂಖ್ಯೆ ಮತ್ತು ಪರಿಸರ ಸವಾಲುಗಳನ್ನು ಎದುರಿಸುವಲ್ಲಿ ಯುವ ಜನರ ಪಾತ್ರ" ಎಂಬ ಎರಡು ವಿಷಯಗಳ ಮೇಲೆ ಪ್ರಬಂಧ ಸ್ಪರ್ಧೆ ಹಾಗೂ ವಿಶೇಷ ಉಪನ್ಯಾಸ ಕಾರ್ಯಕ್ರಮ ಆಯೋಜಿಲಾಗಿತ್ತು. 

ಅತಿಥಿ ಉಪನ್ಯಾಸಕರಾಗಿ ಆಗಮಿಸಿದ್ದ ಹುಬ್ಬಳ್ಳಿಯ ಕಿಮ್ಸ್‌ ನ ಡಾ. ರಾಮ. ಎಸ್‌. ಕೌಲಗುಡ್ಡ ಮಾತನಾಡಿ ಆರೊಗ್ಯವಂತ ಯುವಕರೇ ನಿಜವಾದ ದೇಶದ ಸಂಪತ್ತು. ಹದಿರೆಯದವರು ಉತ್ತಮವಾದ ದೈಹಿಕ ಹಾಗೂ ಮಾನಸಿಕ ಆರೋಗ್ಯ ಹೊಂದಿದಾಗ ಮಾತ್ರ ಸಾಮಾಜಿಕ ಸ್ವಾಸ್ಥ್ಯ ಕಾಪಾಡಲು ಸಾಧ್ಯ. ಮೊಬೈಲ್ ಗೀಳಿನಿಂದ ವಿದ್ಯಾರ್ಥಿಗಳಿಗೆ ಶಾರೀರಿಕ ಶ್ರಮ ಕಡಿಮೆ ಆಗುತ್ತಿದೆ.

ನಿದ್ರಾಹೀನತೆ, ಬೊಜ್ಜು ಮುಂತಾದ ರೋಗಗಳಿಗೆ ತುತ್ತಾಗುತ್ತಿದ್ದಾರೆ. ಉತ್ತಮ ಆರೋಗ್ಯಕ್ಕಾಗಿ ಪೌಷ್ಟಿಕ ಆಹಾರ ಸೇವಿಸುವುದು ಮೊದಲ ಕರ್ತವ್ಯ. ಜಂಕ್ ಫುಡ್, ತಂಪು ಪಾನೀಯಗಳು ಮತ್ತು ಅತಿಯಾದ ಸಿಹಿ ಪದಾರ್ಥಗಳನ್ನು ಕಡಿಮೆ ಮಾಡಬೇಕು ಆರೋಗ್ಯದ ಬಗ್ಗೆ ಕಾಳಜಿ ಇರಲಿ.

ಜನಸಂಖ್ಯೆಯು ಒಂದು ದೇಶದ ಶಕ್ತಿಯೂ ಹೌದು, ಸವಾಲೂ ಹೌದು. ಜನಸಂಖ್ಯೆ ಸಮತೋಲನದಲ್ಲಿದ್ದರೆ ದೇಶದ ಅಭಿವೃದ್ಧಿಗೆ ಅದು ದೊಡ್ಡ ಬಲವಾಗುತ್ತದೆ. ಆದರೆ ಜನಸಂಖ್ಯೆಯು ನಿಯಂತ್ರಣವಿಲ್ಲದೆ ಹೆಚ್ಚಾದರೆ ಅನೇಕ ಸಾಮಾಜಿಕ, ಆರ್ಥಿಕ ಮತ್ತು ಪರಿಸರ ಸಮಸ್ಯೆಗಳು ಉಂಟಾಗುತ್ತವೆ ಎಂದು ಹೇಳಿದರು. 

ಎಸ್‌ಡಿಎಂ ಕಾಲೇಜು ಮತ್ತು ವಿಶ್ವವಿದ್ಯಾಲಯ, ಧಾರವಾಡದ ಡಾ. ಸತೀಶ ಜಿ. ಪಾಟೀಲ ಮಾತನಾಡಿ ಇಂದಿನ ಯುವಜನರಲ್ಲಿ ಜೀವನಶೈಲಿ ಸಂಬಂಧಿತ ಕಾಯಿಲೆಗಳು ಹೆಚ್ಚುತ್ತಿರುವ ಬಗ್ಗೆ ಅವರು ಕಳವಳ ವ್ಯಕ್ತಪಡಿಸಿ, ಪೌಷ್ಟಿಕ ಆಹಾರ ಸೇವನೆ, ನಿಯಮಿತ ವ್ಯಾಯಾಮ, ಸಮರ​‍್ಕ ನಿದ್ರೆ, ಯೋಗ, ಧ್ಯಾನ, ಒತ್ತಡ ನಿರ್ವಹಣೆ ಮಹತ್ವವನ್ನು ವಿವರಿಸಿದರು. 

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಜೆ.ಎಸ್‌.ಎಸ್ ಐ.ಟಿ.ಐ ಕಾಲೇಜಿನ ಪ್ರಾಂಶುಪಾಲರಾದ ಮಹಾವೀರ ಉಪಾದ್ಯೆ ಮಾತನಾಡಿ ಜನಸಂಖ್ಯೆ ಸಮತೋಲನದಲಿದ್ದರೆ ಸಮೃದ್ಧ ರಾಷ್ಟ್ರ ನಿರ್ಮಾಣಕ್ಕೆ ಅಡಿಪಾಯ ಹಾಕಿದಂತೆ.

ಯೌವ್ವನಾವಸ್ಥೆಯಲ್ಲಿ ದೈಹಿಕ, ಮಾನಸಿಕ ಹಾಗೂ ಭಾವನಾತ್ಮಕವಾಗಿ ಹಲವಾರು ಬದಲಾವಣೆಗಳು ಉಂಟಾಗುತ್ತವೆ. ಆದ್ದರಿಂದ ಈ ವಯಸ್ಸಿನಲ್ಲಿ ಆರೋಗ್ಯದ ಬಗ್ಗೆ ವಿಶೇಷ ಕಾಳಜಿ ವಹಿಸುವುದು ಅತ್ಯಗತ್ಯ. ಜನಸಂಖ್ಯೆ ಮತ್ತು ಆರೋಗ್ಯ ಕುರಿತು ವಿದ್ಯಾರ್ಥಿಗಳಲ್ಲಿ ಜಾಗೃತಿ ಮೂಡಿಸುವ ಜನಸಂಖ್ಯಾ ಸಂಶೋಧನಾ ಕೇಂದ್ರದ ಕಾರ್ಯವನ್ನು ಶ್ಲಾಘಿಸಿದರು.  

ಜೆಎಸ್‌ಎಸ್‌ನ ವಿವಿಧ ಪ್ರೌಢಶಾಲೆಗಳು ಹಾಗೂ ಪದವಿಪೂರ್ವ ಕಾಲೇಜುಗಳಿಂದ 250 ಕ್ಕೂ ಹೆಚ್ಚು ವಿದ್ಯಾರ್ಥಿಗಳು ಉತ್ಸಾಹದಿಂದ ಭಾಗವಹಿಸಿ ಜನಸಂಖ್ಯೆ ಮತ್ತು ಪರಿಸರ ಸಂಬಂಧಿತ ವಿಷಯಗಳ ಬಗ್ಗೆ ತಮ್ಮ ಅರಿವು ಮತ್ತು ಕಾಳಜಿಯನ್ನು ವ್ಯಕ್ತಪಡಿಸಿದರು. ಪ್ರಬಂಧ ಸ್ಪರ್ಧೆಯ ವಿಜೇತರಿಗೆ ಬಹುಮಾನಗಳನ್ನು ವಿತರಿಸಿದರು. 

ಜೆ.ಎಸ್‌.ಎಸ್ ಪಿ.ಆರ್‌.ಸಿ ನಿರ್ದೇಶಕರಾದ ಜ್ಯೋತಿ ಹಳ್ಳದ ಅತಿಥಿಗಳನ್ನು ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಕಾರ್ಯಕ್ರಮದಲ್ಲಿ ಜೆ.ಎಸ್‌.ಎಸ್ ನ ವಿವಿಧ ಶಿಕ್ಷಣ ಸಂಸ್ಥೆಗಳ ಮುಖ್ಯಸ್ಥರು, ಉಪನ್ಯಾಸಕರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಡಾ. ಪ್ರಸಾದ.ಎಚ್ ವಂದಿಸಿದರು. ಚೆನ್ನು ನೂಲ್ವಿ ಕಾರ್ಯಕ್ರಮ ನಿರೂಪಿಸಿದರು.