ನವದೆಹಲಿ, ಜ 29, ದಕ್ಷಿಣ ಆಫ್ರಿಕಾದಲ್ಲಿ ನಡೆಯುತ್ತಿರುವ ಕಿರಿಯರ ವಿಶ್ವಕಪ್ ಕ್ರಿಕೆಟ್ ಟೂರ್ನಿಯಲ್ಲಿ ಪ್ರಿಯಮ್ ಗರ್ಗ್ ನಾಯಕತ್ವದ 19 ವಯೋಮಿತ ಭಾರತ ತಂಡವು ಮೂರು ಬಾರಿ ಚಾಂಪಿಯನ್ ಆಸ್ಟ್ರೇಲಿಯಾ ತಂಡವನ್ನು 74 ರನ್ ಗಳಿಂದ ಸೋಲಿಸುವ ಮೂಲಕ ಎರಡು ವಿಶಿಷ್ಠ ದಾಖಲೆಗಳನ್ನು ಮಾಡಿದೆ. ಮಂಗಳವಾರ ನಡೆದಿದ್ದ ಟೂರ್ನಿಯ ಕ್ವಾರ್ಟರ್ ಪೈನಲ್ ಹಣಾಹಣಿಯಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಭಾರತ, ನಿಗದಿತ 50 ಓವರ್‌ಗಳಿಗೆ 9 ವಿಕೆಟ್ ನಷ್ಟಕ್ಕೆ 233 ರನ್ ಗಳಿಸಿತ್ತು. ಬಳಿಕ ಗುರಿ ಹಿಂಬಾಲಿಸಿದ್ದ ಆಸ್ಟ್ರೇಲಿಯಾ ತಂಡ 42.4 ಓವರ್‌ಗಳಲ್ಲಿ 157ಕ್ಕೆ ಆಲ್‌ಔಟ್ ಆಯಿತು. ಆ ಮೂಲಕ ಟೂರ್ನಿಯಿಂದ ಹೊರ ನಡೆಯಿತು.
ಗೆಲುವಿನೊಂದಿಗೆ ಭಾರತ 19 ವಯೋಮಿತಿ ವಿಶ್ವಕಪ್ ಟೂರ್ನಿಯಲ್ಲಿಸತತ 10 ಪಂದ್ಯಗಳಲ್ಲಿ ಗೆದ್ದು ಆಸ್ಟ್ರೇಲಿಯಾ ದಾಖಲೆಯನ್ನು ಮುರಿಯಿತು. ಆಸ್ಟ್ರೇಲಿಯಾ ತಂಡ 2002 ಮತ್ತು 2004 ರ ಆವೃತ್ತಿಯಲ್ಲಿ ಈ ಸಾಧನೆ ಮಾಡಿತ್ತು. ಇದೀಗ ಭಾರತ ತಂಡ 2018 ಮತ್ತು 2020ರ ಆವೃತ್ತಿಯಲ್ಲಿ ಸತತ 10 ಪಂದ್ಯಗಳಲ್ಲಿ ಗೆದ್ದು ಕಾಂಗರೂಗಳ ದಾಖಲೆಯನ್ನು ಪುಡಿ-ಪುಡಿ ಮಾಡಿತು.2002ರ ಆವೃತ್ತಿಯಲ್ಲಿ ಆಸ್ಟ್ರೇಲಿಯಾ ಸತತ ಎಂಟು ಪಂದ್ಯಗಳಲ್ಲಿ ಜಯ ಸಾಧಿಸಿತ್ತು. ಬಳಿಕ 2004ರ ಆವೃತ್ತಿಯಲ್ಲಿ ಒಂದು ಪಂದ್ಯ ಗೆದ್ದಿತ್ತು. ಇದಾದ ಬಳಿಕ ಭಾರತ 2008 ಮತ್ತು 2010ರ ಆವೃತ್ತಿಯಲ್ಲಿ ಸತತ ಎಂಟು ಪಂದ್ಯಗಳನ್ನು ಗೆದ್ದು ಎರಡನೇ ಸ್ಥಾನದಲ್ಲಿತ್ತು. ಸತತ ಎಂಟು ಪಂದ್ಯಗಳಲ್ಲಿ ಗೆದ್ದಿರುವ ಬಾಂಗ್ಲಾದೇಶ ಹಾಗೂ ಪಾಕಿಸ್ತಾನ ತಂಡಗಳು ಇದೀಗ ನಂತರದ ಸ್ಥಾನಗಳನ್ನು ಅಲಂಕರಿಸಿವೆ.ವಿಶ್ವಕಪ್ ಟೂರ್ನಿಯಲ್ಲಿ ಸತತ 10 ಪಂದ್ಯಗಳ ಗೆಲುವಿನ ದಾಖಲೆಯ ಜತೆಗೆ ಪ್ರಿಯಮ್ ಗರ್ಗ್ ಪಡೆ ಮತ್ತೊಂದು ಮೈಲುಗಲ್ಲನ್ನು ಸೃಷ್ಠಿಸಿತು. ಯುವ ಏಕದಿನ ಕ್ರಿಕೆಟ್ ನಲ್ಲಿ ಅತಿ ಹೆಚ್ಚು ಪಂದ್ಯಗಳನ್ನು ಗೆದ್ದ ವಿಶ್ವದ ಮೊದಲ ತಂಡ ಎಂಬ ಸಾಧನೆಗೆ ಭಾರತ ಕಿರಿಯರು ಭಾಜನರಾದರು.
ಆಸ್ಟ್ರೇಲಿಯಾ ವಿರುದ್ಧ ಮಂಗಳವಾರ ಭಾರತಕ್ಕೆ 200 ನೇ ಪಂದ್ಯದ ಗೆಲುವಾಗಿತ್ತು. ಆ ಮೂಲಕ ಅಗ್ರ ಸ್ಥಾನವನ್ನು ಇನ್ನಷ್ಟು ಗಟ್ಟಿ ಮಾಡಿಕೊಂಡಿತು. 261 ಪಂದ್ಯಗಳಾಡಿರುವ ಭಾರತ ತಂಡ 200 ಪಂದ್ಯಗಳಲ್ಲಿ ಜಯ, 56 ಪಂದ್ಯಗಳಲ್ಲಿ ಸೋಲು, ಎರಡು ಟೈ ಹಾಗೂ ಮೂರು ಪಂದ್ಯಗಳು ರದ್ದಾಗಿದ್ದವು. ಈ ಪಟ್ಟಿಯಲ್ಲಿ 244 ಪಂದ್ಯಗಳಲ್ಲಿ 151 ಪಂದ್ಯಗಳನ್ನು ಗೆದ್ದಿರುವ ಪಾಕಿಸ್ತಾನ ಎರಡನೇ ಸ್ಥಾನದಲ್ಲಿದೆ.