ಕೋವಿಡ್ 19 ಉತ್ಪನ್ನಗಳ ಆಮದು ಸುಂಕ ಕಡಿತಕ್ಕೆ ವಿಶ್ವ ಬ್ಯಾಂಕ್ ಆಗ್ರಹ

ವಾಷಿಂಗ್ಟನ್, ಮಾರ್ಚ್ 31,ಬಡ ರಾಷ್ಟ್ರಗಳ ಆರ್ಥಿಕ ಹೊರೆಯನ್ನು ಕಡಿಮೆ ಮಾಡಲು ಕೋವಿಡ್ 19 ಉತ್ಪನ್ನಗಳ ಆಮದಿನ ಮೇಲಿನ ಸುಂಕವನ್ನು ಜಿ 20 ರಾಷ್ಟ್ರಗಳು ಕಡಿತ ಮಾಡುವಂತೆ ಅಥವಾ ರದ್ದುಪಡಿಸುವಂತೆ ಎಂದು ವಿಶ್ವ ಬ್ಯಾಂಕ್ ಅಭಿವೃದ್ಧಿ ನೀತಿ ಮತ್ತು ಪಾಲುದಾರಿಕಾ ವಿಭಾಗದ ವ್ಯವಸ್ಥಾಪಕ ನಿರ್ದೇಶಕ ಮಾರಿ ಪಂಜೆಸ್ಟು ಮನವಿ ಮಾಡಿದ್ದಾರೆ.“ ಜಿ 20 ರಾಷ್ಟ್ರಗಳು ಕೋವಿಡ್ 19 ಉತ್ಪನ್ನಗಳ ಮೇಲಿನ ಸುಂಕವನ್ನು ರದ್ದುಪಡಿಸಬೇಕು ಅಥವಾ ಕಡಿಮೆ ಮಾಡಬೇಕು, ಜೊತೆಗೆ ಬಡವರ ರಕ್ಷಣೆ ಹಾಗೂ ವ್ಯಾಪಾರ ಚಟುವಟಿಕೆ ಚೇತರಿಕೆಗೆ ಆಹಾರ ಸೇರಿದಂತೆ ಇತರ ಮೂಲಭೂತ ಅಗತ್ಯಗಳ ಮೇಲಿನ ಸುಂಕವನ್ನೂ ಕಡಿಮೆ ಮಾಡಬೇಕು ಅಥವಾ ತಾತ್ಕಾಲಿಕವಾಗಿ ರದ್ದುಪಡಿಸಬೇಕು” ಎಂದು ವ್ಯಾಪಾರ ಸಚಿವರೊಂದಿಗೆ ಸೋಮವಾರ ನಡೆಸಿದ ವರ್ಚುಯಲ್ ಸಭೆಯಲ್ಲಿ ಅಭಿಪ್ರಾಯಪಟ್ಟಿದ್ದಾರೆ. ಅಲ್ಲದೇ ಜಿ 20 ರಾಷ್ಟ್ರಗಳು ಔಷಧ, ಆಹಾರ ಮೊದಲಾದ ಅಗತ್ಯದ ವಸ್ತುಗಳ ಮೇಲೆ ಹೊಸ ರಫ್ತು ನಿರ್ಬಂಧಗಳನ್ನು ವಿಧಿಸುವುದರಿಂದ ಹಿಂದೆ ಸರಿಯಬೇಕು ಎಂದೂ ಅವರು ಆಗ್ರಹಿಸಿದ್ದಾರೆ. ಕೊರೊನಾ ಅತಿ ಹೆಚ್ಚು ಬಾಧಿತವಾಗಿರುವ 17 ರಾಷ್ಟ್ರಗಳು ಜಾಗತಿಕ ವ್ಯಾಪಾರ ಜಾಲದಲ್ಲಿ ಪ್ರಮುಖ ಪಾತ್ರ ವಹಿಸಿದ್ದು ಈ ರಾಷ್ಟ್ರಗಳ ಚಟುವಟಿಕೆ ಬಾಧಿತವಾಗದಂತೆ ಕ್ರಮಕೈಗೊಳ್ಳಬೇಕಿದೆ ಎಂದು ಅವರು ಹೇಳಿದ್ದಾರೆ.ಅಭಿವೃದ್ಧಿ ಹೊಂದುತ್ತಿರುವ ರಾಷ್ಟ್ರಗಳೂ ಸಹ ವೈದ್ಯಕೀಯ ಸಾಧನ, ಸಲಕರಣೆಗಳ ಕೊರೊತೆಯಿಂದ ಅಪಾಯ ಎದುರಿಸುತ್ತಿದೆ ಎಂದು ಪಂಜೆಸ್ತು ಆತಂಕ ವ್ಯಕ್ತಪಡಿಸಿದ್ದಾರೆ.  ವಿಶ್ವಾದ್ಯಂತ 775000 ಕ್ಕೂ ಹೆಚ್ಚು ಜನ ಕೊರೊನಾ ವೈರಾಣು ಸೋಂಕಿನಿಂದ ಬಳಲುತ್ತಿದ್ದು 37 ಸಾವಿರ ಜನ ಈ ಸೋಂಕಿನಿಂದ ಸಾವನ್ನಪ್ಪಿದ್ದಾರೆ.