ಬೆಂಗಳೂರು, ಮಾ 26,ಕೊರೊನಾ ವೈರಸ್ ಆತಂಕದಿಂದಾಗಿ 2020 ಮೇ 17ರಂದು ನಗರದಲ್ಲಿ ನಡೆಯಬೇಕಿದ್ದ ವಿಶ್ವ ಅಥ್ಲೆಟಿಕ್ಸ್ ಗೋಲ್ಡ್ ಲೇಬಲ್ ರೇಸ್ 13ನೇ ಆವೃತ್ತಿಯ ಟಿಸಿಎಸ್ ವಿಶ್ವ 10ಕೆ ಬೆಂಗಳೂರು ಓಟವನ್ನು ಮುಂದಿನ ಆದೇಶದವರೆಗೂ ಮುಂದೂಡಲಾಗಿದೆ. ಕೋವಿಡ್ -19 ಜಾಗತಿಕ ಪಿಡುಗು ವಿಶ್ವದಾದ್ಯಂತ ಪರಿಣಾಮ ಬೀರಿದ್ದು, ಇಡೀ ಕ್ರೀಡಾ ಚಟುವಟಿಗಳನ್ನು ಸ್ತಬ್ಧಗೊಳಿಸಿದೆ. ಇದೀಗ ಇದರ ಸಾಲಿಗೆ ವಿಶ್ವ 10ಕೆ ಸಹ ಸೇರ್ಪಡೆಯಾಗಿದೆ. ಮುನ್ನೆಚ್ಚರಿಕಾ ಕ್ರಮವಾಗಿ ವಿಶ್ವದ ಎಲ್ಲ ಪಾಲುದಾರರೊಂದಿಗೆ ಚರ್ಚಿಸಿ ಸುರಕ್ಷತೆ ದೃಷ್ಟಿಯಿಂದ ಸ್ಪರ್ಧೆಯನ್ನು ಮುಂದೂಡುವ ನಿರ್ಧಾರ ಕೈಗೊಳ್ಳಲಾಗಿದೆ. ಜತೆಗೆ ಗುರುವಾರದಿಂದ (ಮಾ.26) ಸ್ಪರ್ಧಿಗಳ ನೋಂದಣಿಯನ್ನು ಅಮಾನತುಗೊಳಿಸಲಾಗಿದೆ ಎಂದು ಸ್ಪರ್ಧೆಯ ಆಯೋಜಕರು ತಿಳಿಸಿದ್ದಾರೆ.
ಪ್ರೊಕ್ಯಾಮ್ ಇಂಟರ್ ನ್ಯಾಷನಲ್ ನ ಜಂಟಿ ವ್ಯವಸ್ಥಾಪಕ ನಿರ್ದೇಶಕ ವಿವೇಕ್ ಸಿಂಗ್, " ನಮಗೆ ತಿಳಿದಿರುವಂತೆ ಪ್ರಪಂಚವು ತುಂಬಾ ಕಷ್ಟಕರವಾದ ಸನ್ನಿವೇಶವನ್ನು ಎದುರಿಸುತ್ತಿದೆ, ಅದು ನಮ್ಮೆಲ್ಲರಿಂದ ಹೆಚ್ಚಿನ ಕಾಳಜಿ ಮತ್ತು ಗಮನವನ್ನು ಬಯಸುತ್ತಿದೆ. ನಮ್ಮ ಅನೇಕ ಓಟಗಾರರು ಸ್ಪರ್ಧೆ 13 ನೇ ಆವೃತ್ತಿಯನ್ನು ಕುತೂಹಲದಿಂದ ಕಾಯುತ್ತಿದ್ದಾರೆ ಮತ್ತು ಅದಕ್ಕಾಗಿ ತರಬೇತಿಯಲ್ಲಿ ನಿರತರಾಗಿದ್ದಾರೆ ಎಂದು ನಮಗೆ ತಿಳಿದಿದೆ. ಆದರೆ ಕೋವಿಡ್-19 ಸಾಂಕ್ರಾಮಿಕ ರೋಗದಿಂದ ಉಂಟಾಗುವ ಸಂದರ್ಭದಲ್ಲಿ ಈ ಕಠಿಣ ನಿರ್ಧಾರವನ್ನು ನಾವು ತೆಗೆದುಕೊಳ್ಳಬೇಕಾಯಿತು, ” ಎಂದು ಹೇಳಿದ್ದಾರೆ. ಈ ಸ್ಪರ್ಧೆಗೆ ಸೂಕ್ತ ದಿನಾಂಕವನ್ನು ಗುರುತಿಸಲು ನಾವು ರಾಜ್ಯ, ಅಂತಾರಾಷ್ಟ್ರೀಯ ಮತ್ತು ರಾಷ್ಟ್ರೀಯ ಅಥ್ಲೆಟಿಕ್ ಸಂಸ್ಥೆಗಳೊಂದಿಗೆ ನಿಕಟವಾಗಿ ಕಾರ್ಯಪ್ರವೃತ್ತರಾಗಿದ್ದೇವೆ, ” 2020 ಆವೃತ್ತಿಗೆ ಈಗಾಗಲೇ ನೋಂದಾಯಿಸಿರುವ ಓಟಗಾರರ ಅನುಕೂಲಕ್ಕಾಗಿ, ಅವರ ನೋಂದಣಿಯನ್ನು ಯಾವುದೇ ಹೊಸ ಪಾವತಿ ಇಲ್ಲದೆ ಸ್ವಯಂಚಾಲಿತವಾಗಿ ಹೊಸ ಓಟದ ದಿನಾಂಕಕ್ಕೆ ವರ್ಗಾಯಿಸಲಾಗುತ್ತದೆ ಎಂದು ಆಯೋಜಕರು ಹೇಳಿದ್ದಾರೆ.ಇದಲ್ಲದೆ ಮುಂದಿನ ಕೆಲವು ದಿನಗಳಲ್ಲಿ, ಪ್ರೊಕಾಮ್ ಇಂಟರ್ ನ್ಯಾಷನಲ್ ಪರಿಷ್ಕೃತ ದಿನಾಂಕವನ್ನು ತನ್ನ ವೆಬ್ ಸೈಟ್ ನಲ್ಲಿ ಪ್ರಕಟಿಸಲಿದೆ ಎಂದಿದ್ದಾರೆ.