ಹುಬ್ಬಳ್ಳಿಯಲ್ಲಿ ಜರುಗಿದ ಹೊಸ ಆದಾಯ ತೆರಿಗೆ ಕಾಯ್ದೆ 2025 ರ ಕಾರ್ಯಾಗಾರ

ಹುಬ್ಬಳ್ಳಿಯಲ್ಲಿ ಜರುಗಿದ ಹೊಸ ಆದಾಯ ತೆರಿಗೆ ಕಾಯ್ದೆ 2025 ರ ಕಾರ್ಯಾಗಾರ Workshop on the new Income Tax Act 2025 held in Hubballi

ಲೋಕದರ್ಶನ ವರದಿ 

ಹುಬ್ಬಳ್ಳಿ 25: ಮೇ 22, 2026 ರಂದು ಹುಬ್ಬಳ್ಳಿಯಲ್ಲಿ ಆದಾಯ ತೆರಿಗೆ ಇಲಾಖೆ ಹಾಗೂ ಧಾರವಾಡ ಜಿಲ್ಲಾ ತೆರಿಗೆ ಸಲಹೆಗಾರರ ಸಂಘ ಸಂಯುಕ್ತವಾಗಿ ಹೊಸ ಆದಾಯ ತೆರಿಗೆ ಕಾಯಿದೆ-2025 ಹಾಗೂ ಆದಾಯ ತೆರಿಗೆ ವಿನಾಯಿತಿ ವಿಷಯ ಕುರಿತು ಆದಾಯ ತೆರಿಗೆ ಸಲಹೆಗಾರರಿಗೆ ತಿಳುವಳಿಕೆ ಕಾರ್ಯಗಾರವನ್ನು ಆಯೋಜಿಸಲಾಗಿತ್ತು. 

ಆದಾಯ ತೆರಿಗೆ ವಿನಾಯಿತಿಯ ಜಂಟಿ ಆಯುಕ್ತ ರಾಜಾರೆಡ್ಡಿ ಅವರು ಹೊಸ ಆದಾಯ ತೆರಿಗೆ ಕಾಯಿದೆ-2025ರ ಪರಿಚಯ ಮಾಡಿಕೊಟ್ಟರು. ಅನುರಂಜನ ವರ್ಮಾ ಅವರು ಹೊಸ ಆದಾಯ ತೆರಿಗೆ ಕಾಯಿದೆ-2025ರಲ್ಲಿ ಆದ ಬದಲಾವಣೆ ಬಗ್ಗೆ ವಿಸ್ತೃತವಾಗಿ ಪ್ರಸ್ತುತ ಪಡಿಸಿದರು. 

ಆದಾಯ ತೆರಿಗೆ (ವಿನಾಯಿತಿ) ಅಧಿಕಾರಿ ಮಹೇಶ ಮರದ ಮತ್ತು ಆದಾಯ ತೆರಿಗೆ ಪರೀಕ್ಷಾಧಿಕಾರಿ ಕೃಷ್ಣಕುಮಾರ ಅವರು ಮಾತನಾಡಿ, ಟ್ರಸ್ಟ್‌, ಚಾರಿಟೇಬಲ್ ಟ್ರಸ್ಟ್‌, ಸರ್ಕಾರೇತರ ಸಂಸ್ಥೆಗಳು ಮತ್ತು ಆಸ್ಪತ್ರೆ ಇವುಗಳ ಬಗ್ಗೆ ಹೊಸ ಆದಾಯ ತೆರಿಗೆ ಕಾಯಿದೆ-2025ರಲ್ಲಿ ಆದ ಬದಲಾವಣೆಗಳ ಬಗ್ಗೆ ತಿಳಿಸಿದರು. ಆದಾಯ ತೆರಿಗೆ ಇಲಾಖೆಯು 2 ಸುಧಾರಿತ ಅಪ್ಲಿಕೇಶನ್‌ಗಳನ್ನು ಪರಿಚಯಿಸಿದೆ, ಅವು ಯಾವುವೆಂದರೆ ಕರ ಸಾಥಿ ಮತ್ತು ಕರ ಸೇತು ಕುರಿತು ವಿವರಿಸಿದರು.  

ಸಂಘದ ಹಿರಿಯ ತೆರಿಗೆ ಸಲಹೆಗಾರರಾದ ಎಸ್‌.ಟಿ. ಅಕ್ಕಿ, ಡಿ.ವ್ಹಿ. ಘಾವಡೆ, ಅರವಿಂದ ಲಿಂಬಿಕಾಯಿ, ಕೆ. ಪ್ರಭಾಕರರಾವ್ ಹಾಗೂ ಇತರರು ಕಾರ್ಯಾಗಾರದಲ್ಲಿ ಉಪಸ್ಥಿತರಿದ್ದರು. ಸಂಘದ ಅಧ್ಯಕ್ಷ ರವೀಂದ್ರ ವ್ಹಿ. ಶೆಟ್ಟಿ ಸ್ವಾಗತಿಸಿದರು. ವ್ಯವಸ್ಥಾಪನಾ ಸಮಿತಿ ಸದಸ್ಯ ಸೋಮು ಸೋಲಾರಗೊಪ್ಪ ನಿರೂಪಿಸಿದರು. ಕಾರ್ಯದರ್ಶಿ ರಾಘವೇಂದ್ರ ಹುಬಳೀಕರ ವಂದಿಸಿದರು.  

ಕಾರ್ಯಗಾರದಲ್ಲಿ ಹುಬ್ಬಳ್ಳಿ ಆದಾಯ ತೆರಿಗೆ ಅಧಿಕಾರಿ ಅನುರಂಜನ ವರ್ಮಾ ಮತ್ತು ಸಹೋದ್ಯೋಗಿಗಳು ಮತ್ತು ಧಾರವಾಡ ಜಿಲ್ಲಾ ತೆರಿಗೆ ಸಲಹೆಗಾರರ ಸಂಘದ ಎಲ್ಲ ಪದಾಧಿಕಾರಿಗಳು ಮತ್ತು ಸದಸ್ಯರು ಭಾಗವಹಿಸಿದ್ದರು.