ಮಾಹಿತಿ ಹಕ್ಕು ಕಾಯ್ದೆ ಕುರಿತು ಅಧಿಕಾರಿಗಳಿಗೆ ಕಾರ್ಯಾಗಾರ

ಮಾಹಿತಿ ಹಕ್ಕು ಕಾಯ್ದೆ ಕುರಿತು ಅಧಿಕಾರಿಗಳಿಗೆ ಕಾರ್ಯಾಗಾರ  Workshop for officials on the Right to Information Act


ವಿಜಯನಗರ (ಹೊಸಪೇಟೆ), ಸೆ. 24: ಮಾಹಿತಿ ಹಕ್ಕು ಕಾಯ್ದೆಯಡಿ ಎದುರಾಗುವ ಸವಾಲುಗಳು, ಗೊಂದಲಗಳು ಹಾಗೂ ಕಾಯ್ದೆಯ ದುರುಪಯೋಗದ ಕುರಿತು ಅಧಿಕಾರಿಗಳಿಗೆ ಸ್ಪಷ್ಟ ಅರಿವು ಮೂಡಿಸುವ ಉದ್ದೇಶದಿಂದ ಕಾರ್ಯಾಗಾರ ಆಯೋಜಿಸಲಾಗಿತ್ತು.  

ನಗರದ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಸಾರ್ವಜನಿಕ ಮಾಹಿತಿ ಅಧಿಕಾರಿಗಳಿಗೆ ಆಯೋಜಿಸಿದ್ದ ಮಾಹಿತಿ ಹಕ್ಕು ಕಾಯ್ದೆ ಕುರಿತ ಕಾರ್ಯಾಗಾರ ಹಾಗೂ ಸಂವಾದ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಜಿಲ್ಲಾಧಿಕಾರಿ ಕವಿತಾ ಎಸ್‌. ಮನ್ನಿಕೇರಿ, ಅಧಿಕಾರಿಗಳು ಕಾಯ್ದೆಯ ಸಮರ​‍್ಕ ಅರಿವು ಪಡೆದುಕೊಂಡು ಜವಾಬ್ದಾರಿಯುತವಾಗಿ ಕಾರ್ಯನಿರ್ವಹಿಸಬೇಕು ಎಂದು ತಿಳಿಸಿದರು.  

ಮಾಹಿತಿ ಹಕ್ಕು ಕಾಯ್ದೆ ಆಡಳಿತ ವ್ಯವಸ್ಥೆಯಲ್ಲಿ ಪಾರದರ್ಶಕತೆ ತರುವುದರ ಜೊತೆಗೆ, ಸರ್ಕಾರದ ಯೋಜನೆಗಳು ಹಾಗೂ ಕಾರ್ಯಕ್ರಮಗಳು ನಿಗದಿತ ಉದ್ದೇಶದಂತೆ ಅನುಷ್ಠಾನಗೊಳ್ಳುತ್ತಿವೆಯೇ ಎಂಬುದನ್ನು ಸಾರ್ವಜನಿಕರು ತಿಳಿದುಕೊಳ್ಳಲು ಅವಕಾಶ ಕಲ್ಪಿಸುವ ಮಹತ್ವದ ಕಾನೂನಾಗಿದೆ. ಹೀಗಾಗಿ ಅಧಿಕಾರಿಗಳು ಕಾಯ್ದೆಯ ನಿಯಮಗಳನ್ನು ಸಮರ​‍್ಕವಾಗಿ ಅರಿತು ಜವಾಬ್ದಾರಿಯಿಂದ ಕರ್ತವ್ಯ ನಿರ್ವಹಿಸಬೇಕು ಎಂದರು.  

ಕಾನೂನಿನಲ್ಲಿ ನಿಗದಿಪಡಿಸಿರುವ ಪ್ರಕ್ರಿಯೆಯನ್ನು ಸರಿಯಾಗಿ ಪಾಲಿಸಿದರೆ ಸಾರ್ವಜನಿಕರಿಗೆ ಮಾಹಿತಿ ನೀಡುವ ಸಂದರ್ಭದಲ್ಲಿ ಅಧಿಕಾರಿಗಳು ಯಾವುದೇ ಭಯ ಅಥವಾ ಆತಂಕಕ್ಕೆ ಒಳಗಾಗುವ ಅಗತ್ಯವಿಲ್ಲ. ಅರ್ಜಿದಾರರು ಕಾನೂನುಬದ್ಧವಾಗಿ ಹಾಗೂ ಸಾರ್ವಜನಿಕ ಹಿತಾಸಕ್ತಿಯಿಂದ ಮಾಹಿತಿ ಕೋರಿದಲ್ಲಿ, ನಿಗದಿತ ಅವಧಿಯೊಳಗೆ ಸಂಬಂಧಿಸಿದ ಮಾಹಿತಿಯನ್ನು ಒದಗಿಸುವುದು ಅಧಿಕಾರಿಗಳ ಕರ್ತವ್ಯವಾಗಿದೆ ಎಂದು ಜಿಲ್ಲಾಧಿಕಾರಿ ಸ್ಪಷ್ಟಪಡಿಸಿದರು.  

ಕೆಲವೊಮ್ಮೆ ಅಧಿಕಾರಿಗಳ ಮೇಲೆ ಒತ್ತಡ ಹೇರುವ ಅಥವಾ ದುರುದ್ದೇಶದಿಂದಲೂ ಮಾಹಿತಿ ಹಕ್ಕು ಅರ್ಜಿಗಳನ್ನು ಸಲ್ಲಿಸುವ ಸಾಧ್ಯತೆಗಳಿವೆ. ಇಂತಹ ಸಂದರ್ಭಗಳಲ್ಲಿ ಅಧಿಕಾರಿಗಳು ಆತಂಕಕ್ಕೊಳಗಾಗದೆ, ಕಾಯ್ದೆಯಡಿ ತಮ್ಮ ಕರ್ತವ್ಯ ಹಾಗೂ ಅಧಿಕಾರಗಳನ್ನು ಅರಿತು ಕಾನೂನುಬದ್ಧವಾಗಿ ಕ್ರಮ ಕೈಗೊಳ್ಳಬೇಕು. ಅರ್ಜಿಯ ಸ್ವರೂಪ, ಕೋರಿರುವ ಮಾಹಿತಿಯ ವ್ಯಾಪ್ತಿ ಹಾಗೂ ಕಾಯ್ದೆಯ ನಿಯಮಾನುಸಾರ ಮಾಹಿತಿ ಒದಗಿಸಬೇಕು ಎಂದು ಸಲಹೆ ನೀಡಿದರು.  

ಮಾಹಿತಿ ಹಕ್ಕು ಕಾಯ್ದೆಯನ್ನು ಕೇವಲ ಅರ್ಜಿದಾರರ ಹಕ್ಕು ಎಂಬ ದೃಷ್ಟಿಯಿಂದ ನೋಡದೆ, ಜವಾಬ್ದಾರಿಯುತ ಆಡಳಿತ, ಪಾರದರ್ಶಕತೆ ಹಾಗೂ ಸಾರ್ವಜನಿಕರೊಂದಿಗೆ ಸರ್ಕಾರದ ವಿಶ್ವಾಸವನ್ನು ಬಲಪಡಿಸುವ ವ್ಯವಸ್ಥೆಯಾಗಿ ಅಧಿಕಾರಿಗಳು ಅರ್ಥಮಾಡಿಕೊಳ್ಳಬೇಕು. ಕಾಯ್ದೆಯ ಕುರಿತು ಯಾವುದೇ ಸಂದೇಹಗಳಿದ್ದರೂ ತಜ್ಞರಿಂದ ಅಗತ್ಯ ಮಾಹಿತಿ ಪಡೆದು ಸ್ಪಷ್ಟತೆ ಹೊಂದಬೇಕು ಎಂದು ಹೇಳಿದರು.  

ಕೃಷಿ ಇಲಾಖೆಯ ನಿವೃತ್ತ ಜಂಟಿ ನಿರ್ದೇಶಕ ವೆಂಕಟರವಣಪ್ಪ ಅವರು ಮಾಹಿತಿ ಹಕ್ಕು ಕಾಯ್ದೆ ಕುರಿತು ವಿಶೇಷ ಉಪನ್ಯಾಸ ನೀಡಿದರು.  ಕಾರ್ಯಾಗಾರದಲ್ಲಿ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಗರಿಮಾ ಪನ್ವಾರ್, ಅಪರ ಜಿಲ್ಲಾಧಿಕಾರಿ ಪಿ.ಎನ್‌. ಲೋಕೇಶ್ ಸೇರಿದಂತೆ ಸಂಬಂಧಿಸಿದ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.