ಜಿಲ್ಲಾ ಮಟ್ಟದ ಅಧಿಕಾರಿಗಳು ಹಾಗೂ ಸಾರ್ವಜನಿಕ ಮಾಹಿತಿ ಅಧಿಕಾರಿಗಳಿಗೆ ಕಾರ್ಯಾಗಾರ ಹಾಗೂ ಸಂವಾದ ಕಾರ್ಯಕ್ರಮ
Workshop and interaction program for district level officials and public information officers
ಕೊಪ್ಪಳ 21 :ಮಾಹಿತಿ ಹಕ್ಕು ಕಾಯ್ದೆ ಜನಪರ ಮತ್ತು ಪ್ರಬಲ ಕಾಯ್ದೆಯಾಗಿದ್ದು, ಪಾರದರ್ಶಕ ಆಡಳಿತ ವ್ಯವಸ್ಥೆಯನ್ನು ಜಾರಿಗೊಳಿಸುವಲ್ಲಿ ಪ್ರಮುಖವಾಗಿ ಕಾರ್ಯನಿರ್ವಹಿಸುತ್ತದೆ. ಸಾರ್ವಜನಿಕ ಸೇವೆಯಲ್ಲಿರುವವರಿಗೆ ಮಾಹಿತಿ ಹಕ್ಕು ಕಾಯ್ದೆಯು ರಕ್ಷಣೆಯೂ ಹೌದು, ಎಚ್ಚರಿಕೆಯೂ ಹೌದು ಎಂದು ಕರ್ನಾಟಕ ರಾಜ್ಯ ಮಾಹಿತಿ ಆಯೋಗದ ಕಲಬುರಗಿ ಪೀಠದ ರಾಜ್ಯ ಮಾಹಿತಿ ಆಯುಕ್ತರಾದ ಬಿ. ವೆಂಕಟ್‌ಸಿಂಗ್ ಹೇಳಿದರು. ಅವರು ಶನಿವಾರ ಕೊಪ್ಪಳ ಜಿಲ್ಲಾಡಳಿತ ಭವನದ ಆಡಿಟೋರಿಯಂ ಹಾಲ್‌ನಲ್ಲಿ ಕೊಪ್ಪಳ ಜಿಲ್ಲೆಯ ಎಲ್ಲಾ ಇಲಾಖೆಗಳ ಜಿಲ್ಲಾ ಮಟ್ಟದ ಅಧಿಕಾರಿಗಳು ಹಾಗೂ ಸಾರ್ವಜನಿಕ ಮಾಹಿತಿ ಅಧಿಕಾರಿಗಳಿಗೆ ಮಾಹಿತಿ ಹಕ್ಕು ಕಾಯ್ದೆಯ ಕುರಿತು ಹಮ್ಮಿಕೊಂಡಿದ್ದ ಕಾರ್ಯಾಗಾರ ಹಾಗೂ ಸಂವಾದ ಕಾರ್ಯಕ್ರಮದ ಉದ್ಘಾಟನೆ ನೆರವೇರಿಸಿ ಮಾತನಾಡಿದರು.
ಮಾಹಿತಿ ಹಕ್ಕು ಕಾಯ್ದೆಯ ಮುಖ್ಯ ಉದ್ದೇಶ ಸರ್ಕಾರದ ಆಡಳಿತದಲ್ಲಿ ಸಾರ್ವಜನಿಕರು ಭಾವಹಿಸುವುದಾಗಿದೆ. ಸರಕಾರದ ಯೋಜನೆ ಕುರಿತು ಸಾರ್ವಜನಿಕರು ಮಾಹಿತಿ ಪಡೆಯಲು ಈ ಕಾಯ್ದೆಯಡಿ ಅವಕಾಶವಿದೆ. ಇದರಿಂದ ಜನರಿಗೆ ಸರ್ಕಾರದ ಯೋಜನೆಗಳ ಮಾಹಿತಿ ತಿಳಿಯುವುದರ ಜೊತೆಗೆ ಆಡಳಿತದಲ್ಲಿ ಪಾರದರ್ಶಕತೆ ತರಬಹುದಾಗಿದೆ. ಈ ಕಾಯ್ದೆ ಬಂದು 20 ವರ್ಷಗಳಾದರೂ ಬಹಳಷ್ಟು ಅಧಿಕಾರಿಗಳಿಗೆ ಕಾಯ್ದೆ ಅನುಷ್ಠಾನದಲ್ಲಿ ಮಾಹಿತಿ ಕೊರತೆ ಇದೆ. ಹಾಗಾಗಿ ಜಿಲ್ಲಾ ಮತ್ತು ತಾಲ್ಲೂಕು ಹಾಗೂ ಗ್ರಾಮ ಪಂಚಾಯತಿ ಮಟ್ಟದ ಅಧಿಕಾರಿಗಳಿಗೆ ಮಾಹಿತಿ ಹಕ್ಕು ಕಾಯ್ದೆ ಕುರಿತ ಪುಸ್ತಕವನ್ನು ಎಲ್ಲರಿಗೂ ತಲುಪಿಸುವ ಕೆಲಸ ಮಾಡಬೇಕು ಎಂದು ಹೇಳಿದರು.
ಕಲಬುರಗಿ ಪೀಠ ಆರಂಭವಾದಾಗಿನಿಂದ ಇಲ್ಲಿಯವರೆಗೆ 10,423 ಪ್ರಕರಣಗಳನ್ನು ವಿಲೇವಾರಿ ಮಾಡಲಾಗಿದೆ. ನಾನು ಈ ಕಲಬುರಗಿ ಪೀಠದ ಮಾಹಿತಿ ಆಯುಕ್ತನಾಗಿ ಅಧಿಕಾರ ಸ್ವೀಕರಿಸಿದ 3 ತಿಂಗಳ ಅವಧಿಯಲ್ಲಿ 1,400 ಪ್ರಕರಣಗಳನ್ನು ವಿಚಾರಣೆ ಮಾಡಿ 605 ಪ್ರಕರಣಗಳನ್ನು ವಿಲೇವಾರಿ ಮಾಡಿದ್ದೇನೆ. 6,655 ಪ್ರಕರಣಗಳು ಇನ್ನೂ ವಿಲೇವಾರಿಗೆ ಬಾಕಿ ಇದ್ದು, ಆದ್ಯತೆ ಮೇರೆಗೆ ಸೋಮವಾರದಿಂದ ಶುಕ್ರವಾರ ಅರ್ಜಿಗಳನ್ನು ವಿಲೇವಾರಿ ಮಾಡಲಾಗುತ್ತಿದೆ. ಕೊಪ್ಪಳ ಜಿಲ್ಲೆಯಲ್ಲಿ 797 ಪ್ರಕರಣಗಳು ಬಾಕಿ ಇವೆ. ಕಲ್ಯಾಣ ಕರ್ನಾಟಕದ ಜಿಲ್ಲೆಗಳಲ್ಲಿ ರಾಯಚೂರು ಜಿಲ್ಲೆಯಲ್ಲಿ ಅತಿ ಹೆಚ್ಚು ಮತ್ತು ಬೀದರ ಜಿಲ್ಲೆಯಲ್ಲಿ ಅತಿ ಕಡಿಮೆ ಪ್ರಕರಣಗಳು ಇವೆ. ಇದುವರೆಗೂ ದ್ವಿತೀಯ ಮೇಲ್ಮನವಿ ವಿಚಾರಣೆಗೆ ಅರ್ಜಿದಾರರು ಹಾಗೂ ಅಧಿಕಾರಿಗಳು ಬೆಂಗಳೂರಿಗೆ ಹೋಗಬೇಕಿತ್ತು. ಆದರೆ ಫೆಬ್ರವರಿಯಿಂದ ಆಯೋಗದ ಕಲಬುರಗಿ ಪೀಠದಲ್ಲಿ ದ್ವಿತೀಯ ಮೇಲ್ಮನವಿ ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದ್ದು, ಕಲ್ಯಾಣ ಕರ್ನಾಟಕದ ಎಲ್ಲ 7 ಜಿಲ್ಲೆಗಳ ಜನರಿಗೆ ಇದರಿಂದ ಅನುಕೂಲವಾಗಲಿದೆ ಎಂದು ಅವರು ಹೇಳಿದರು.
ಕರ್ನಾಟಕ ರಾಜ್ಯ ಮಾಹಿತಿ ಆಯೋಗ ಬೆಂಗಳೂರು ಪೀಠದ ರಾಜ್ಯ ಮಾಹಿತಿ ಆಯುಕ್ತರಾದ ಡಾ. ಹರೀಶಕುಮಾರ ಅವರು ಮಾತನಾಡಿ, ಮಾಹಿತಿ ಹಕ್ಕು ಕಾಯ್ದೆಯು ಸ್ವತಂತ್ರ ಭಾರತದಲ್ಲಿ ಅತ್ಯಂತ ಕ್ರಾಂತಿಕಾರಕ ಕಾಯ್ದೆಯಾಗಿದೆ. ಸರ್ಕಾರದ ಯೋಜನೆಗಳು, ಸೌಲಭ್ಯಗಳ ಹಿತಾಸಕ್ತಿಗೆ ಸಂಬಂಧಿಸಿದಂತೆ ಮಾಹಿತಿ ಪಡೆಯುವುದು ದೇಶದ ಪ್ರತಿಯೊಬ್ಬ ಪ್ರಜೆಗಳ ಮೂಲಭೂತ ಹಕ್ಕಾಗಿದೆ. ದೇಶದ ಶಾಸಕಾಂಗ, ಕಾರ್ಯಾಂಗ ಮತ್ತು ನ್ಯಾಯಾಂಗ ವ್ಯವಸ್ಥೆ ದಾರಿತಪ್ಪಿದಾಗ ಅಂತಿಮ ನಿರ್ಣಾಯಕರು ಜನರೇ ಆಗಿರುತ್ತಾರೆ. ಜನರಿಗಾಗಿ ತಂದ ಕಾಯ್ದೆ, ಕಾನೂನುಗಳ ಪಾಲಕರು ಅವರೇ ಆಗಿದ್ದಾರೆ. ಪ್ರಜಾಪ್ರಭುತ್ವ ಪ್ರಬಲವಾಗಬೇಕು. ಜನರಿಗೆ ಸರ್ಕಾರದ ಮಹಿತಿ ಲಭ್ಯವಾಗಬೇಕು ಎಂಬ ಉದ್ದೇಶದಿಂದ ನಮ್ಮ ದೇಶದಲ್ಲಿ 2005ರ ಅಕ್ಟೋಬರ್ 5 ರಂದು ಜಾರಿಗೆ ಬಂದ ಆರ್.ಟಿ.ಐ ಕಾಯ್ದೆಯನ್ನು ಅನುಷ್ಠಾನಗೊಳಿಸಿದ ಮೊಟ್ಟ ಮೊದಲ ರಾಜ್ಯ ನಮ್ಮ ಕರ್ನಾಟಕವಾಗಿದೆ ಎಂದರು.
ಮಾಹಿತಿ ಹಕ್ಕು ಕಾಯ್ದೆಯ ಬಗ್ಗೆ ಅಧಿಕಾರಿಗಳಲ್ಲಿ ಭಯದ ವಾತಾವರಣವಿದ್ದು, ಭಯ ಪಡುವ ಅವಶ್ಯಕತೆ ಇಲ್ಲ. ಈ ಕಾಯ್ದೆಯು ಬಹಳ ಸುಲಭ ಮತ್ತು ಸಂಕೀರ್ಣವಾಗಿದೆ. ಮೊದಲು ಅಧಿಕಾರಿಗಳಲ್ಲಿ ಆರ್.ಟಿ.ಐ ಕುರಿತು ಸ್ಪಷ್ಟ ಅರಿವಿರಬೇಕು. ಇದರ ಬಗ್ಗೆ ಯಾವುದೇ ಅಲಕ್ಷ್ಯ ಬೇಡ. ಸಾರ್ವಜನಿಕ ಮಾಹಿತಿ ಅಧಿಕಾರಿಗಳು ನಿಗದಿತ ಕಾಲವಧಿಯೊಳಗೆ ಸಾರ್ವಜನಿಕರಿಗೆ ಮಾಹಿತಿ ನೀಡಲು ಕ್ರಮ ವಹಿಸಬೇಕು. ಆರ್.ಟಿ.ಐ ಅಡಿ ಸ್ವೀಕೃತವಾಗುವ ಅರ್ಜಿಗಳ ಪೈಕಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್, ಕಂದಾಯ ಮತ್ತು ಲೋಕೋಪಯೋಗಿ ಇಲಾಖೆಗಳ ಅರ್ಜಿಗಳೇ ಹೆಚ್ಚಾಗಿವೆ. ಇದರಲ್ಲಿ ಶೇ.30 ರಷ್ಟು ಅರ್ಜಿಗಳು ಗ್ರಾಮ ಪಂಚಾಯಿತಿಗಳಿಗೆ ಸಂಬಂಧಿಸಿದ ಮಾಹಿತಿ ಒಳಗೊಂಡಿವೆ. ಇತ್ತೀಚಿಗೆ ಪೊಲೀಸ್ ಇಲಾಖೆಯಲ್ಲಿಯೂ ಅರ್ಜಿಗಳು ಸ್ವೀಕೃತವಾಗುತ್ತಿದ್ದು, ಮಾನವ ಹಕ್ಕುಗಳ ಉಲ್ಲಂಘನೆ ಸಂದರ್ಭದಲ್ಲಿ 24 ಗಂಟೆಯೊಳಗೆ ಮಾಹಿತಿ ನೀಡಬೇಕು. ಕಾಯ್ದೆಯನ್ನು ಸಮರ್ಕವಾಗಿ ಅನುಷ್ಠಾನ ಮಾಡುವ ಮೂಲಕ ದೇಶದ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಮತ್ತಷ್ಟು ಗಟ್ಟಿಗೊಳಿಸಲು ಎಲ್ಲಾ ಅಧಿಕಾರಿಗಳು ಶ್ರಮಿಸಬೇಕು ಎಂದು ಹೇಳಿದರು.
ಕರ್ನಾಟಕ ರಾಜ್ಯ ಮಾಹಿತಿ ಆಯೋಗ ಬೆಂಗಳೂರು ಪೀಠದ ರಾಜ್ಯ ಮಾಹಿತಿ ಆಯುಕ್ತರಾದ ಬದ್ರುದ್ದೀನ್ ಕೆ. ಅವರು ಮಾತನಾಡಿ, ಅಧಿಕಾರಿಗಳು ತಮ್ಮ ಸೇವಾವಧಿಯಲ್ಲಿ ಮಾಹಿತಿ ಹಕ್ಕು ಕಾಯ್ದೆಯನ್ನು ಸಮರ್ಕವಾಗಿ ನಿರ್ವಹಿಸಿದರೆ ಅದು ನಿವೃತ್ತಿ ನಂತರವೂ ನಿಮ್ಮ ಸಹಾಯಕ್ಕೆ ಬರುತ್ತದೆ. ಅಧಿಕಾರಿಗಳು ಆತ್ಮವಿಶ್ವಾಸದಿಂದಿರಬೇಕು. ಪಾರದರ್ಶಕ ಆಡಳಿತವಿದ್ದಾಗ ಆತ್ಮವಿಶ್ವಾಸ ಸಹಜವಾಗಿಯೇ ಬರುತ್ತದೆ. ಮಾಹಿತಿ ಹಕ್ಕು ಕಾಯ್ದೆಯನ್ನು ಸರಿಯಾಗಿ ಅರ್ಥೈಸಿಕೊಳ್ಳಿ. ಕೊಡಬಹುದಾದ ಹಾಗೂ ಕೊಡಲಾಗದ ಮಾಹಿತಿ ಯಾವುದು ಎಂಬುದನ್ನು ತಿಳಿದುಕೊಳ್ಳಿ. ಅರ್ಜಿ ಬಂದ ಕೂಡಲೇ ಗಾಬರಿಯಾಗುವ ಬದಲು ಅರ್ಜಿಯಲ್ಲಿನ ಮಾಹಿತಿ ನಿಮ್ಮಲ್ಲಿ ಲಭ್ಯವಿದೆಯೋ ಇಲ್ಲವೋ ಎಂಬುದನ್ನು ಪರೀಶೀಲಿಸಿ ಸೂಕ್ತ ಮಾಹಿತಿ ಅಥವಾ ಹಿಂಬರವನ್ನು ನೀಡಿ.
ಮಾಹಿತಿ ನೀಡಲು 30 ದಿನಗಳ ಅವಧಿಯನ್ನು ನಿಗದಿಪಡಿಸಲಾಗಿದ್ದು, ಕೊನೆಯ ದಿನದವರೆಗೂ ಕಾಯದೆ, ಅರ್ಜಿಗಳನ್ನು ಬೇಗ ವಿಲೇವಾರಿ ಮಾಡಿ. ಇದರಿಂದ ಅನಗತ್ಯ ಒತ್ತಡ ತಪ್ಪುತ್ತದೆ. ಮಾಹಿತಿ ಹಕ್ಕಿಗೆ ಸಂಬಂಧಿಸಿದ ಯಾವುದೇ ಮಾಹಿತಿ ಅಥವಾ ವಿಷಯವನ್ನು ದಾಖಲೆ ಅಥವಾ ಪತ್ರ ಮುಖೇನ ನೀಡಿ. ಎಲ್ಲ ಇಲಾಖೆಗಳ ಸಾರ್ವಜನಿಕ ಮಾಹಿತಿ ಅಧಿಕಾರಿಗಳು ಇಲಾಖೆಗೆ ಸಂಬಂಧಿಸಿದ ಮಾಹಿತಿಯನ್ನು ಕಾಯ್ದೆಯ 4(1)(ಎ) ಮತ್ತು 4(1)(ಬಿ)ಯಲ್ಲಿ ವಿಂಗಡಿಸಿ, ಇಲಾಖೆಯ ವೆಬ್‌ಸೈಟ್‌ಗೆ ಅಪ್‌ಲೋಡ್ ಮಾಡಿ. ಇದರಿಂದ ಶೇ.80 ರಷ್ಟು ಕೆಲಸ ಹಾಗೂ ಒತ್ತಡ ಕಡಿಮೆಯಾಗುತ್ತದೆ. ಮಾಹಿತಿ ಹಕ್ಕಿಗೆ ಸಂಬಂಧಿಸಿದ ಅರ್ಜಿ ಕುರಿತು ಯಾವುದೇ ಅಲಕ್ಷ್ಯ ಅಥವಾ ಅನಗತ್ಯ ವಿಳಂಬ ಮಾಡಬೇಡಿ. ಇಲಾಖೆಗಳ ಮೇಲಧಿಕಾರಿಗಳು ಪ್ರತಿ ಮೂರು ತಿಂಗಳಿಗೊಮ್ಮೆ ಅಧೀನ ಕಚೇರಿಯ ಪರೀಶೀಲನೆ ನಡೆಸಿ, ಯಾವುದೇ ಅರ್ಜಿ ಬಾಕಿ ಇರದಂತೆ ಖಚಿತಪಡಿಸಿಕೊಳ್ಳಿ ಎಂದು ಅವರು ಹೇಳಿದರು.
ಜಿಲ್ಲಾಧಿಕಾರಿ ಡಾ. ಸುರೇಶ ಬಿ. ಇಟ್ನಾಳ ಅವರು ಮಾತನಾಡಿ, ಮಾಹಿತಿ ಹಕ್ಕು ಕಾಯ್ದೆಯಿಂದ ಆಡಳಿತದಲ್ಲಿ ಪಾರದರ್ಶಕತೆ ಬರುವುದರ ಜೊತೆಗೆ ವ್ಯವಸ್ಥೆಯಲ್ಲಿನ ಲೋಪ-ದೋಷಗಳನ್ನು ಸರಿಪಡಿಸಲು ಅನುಕೂಲವಾಗಿದೆ. ಅಧಿಕಾರಿಗಳು ಮಾಹಿತಿ ಹಕ್ಕಿನ ಕುರಿತು ಸರಿಯಾಗಿ ತಿಳಿದುಕೊಳ್ಳಬೇಕು. ತಮಗೆ ಮಾಹಿತಿ ಕೊರತೆ ಇದ್ದರೆ ಈ ಕುರಿತು ಮಾಹಿತಿ ಒಳಗೊಂಡ ಪುಸ್ತಕಗಳನ್ನು ಖರೀದಿಸಿಕೊಂಡು ಓದಿ ತಿಳಿದುಕೊಳ್ಳಬೇಕು. ತಮ್ಮ ಕಛೇರಿಯಲ್ಲಿ ಮಾಹಿತಿ ಹಕ್ಕಿಗೆ ಸಂಬಂಧಿಸಿದ ಯಾವುದೇ ಅರ್ಜಿಗಳು ಬಂದಿದ್ದರೆ ಅವುಗಳನ್ನು ಆದಷ್ಟು ಬೇಗನೆ ವಿಲೇವಾರಿ ಮಾಡಬೇಕು. ಎಲ್ಲಾ ಕಛೇರಿಗಳಲ್ಲಿ ಸಾರ್ವಜನಿಕ ಮಾಹಿತಿ ಅಧಿಕಾರಿ ಮತ್ತು ಪ್ರಥಮ ಮೇಲ್ಮನವಿ ಪ್ರಾಧಿಕಾರಿ ಯಾರು ಎನ್ನುವ ಕುರಿತು ಬೋರ್ಡ್‌ಗಳನ್ನು ತಮ್ಮ ಕಚೇರಿಗಳಲ್ಲಿ ಕಡ್ಡಾಯವಾಗಿ ಹಾಕಬೇಕು ಎಂದು ಹೇಳಿದರು.
ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ವರ್ಣಿತ್ ನೇಗಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ರಾಮ್ ಎಲ್. ಅರಸಿದ್ಧಿ, ಅಪರ ಜಿಲ್ಲಾಧಿಕಾರಿ ಸಿದ್ರಾಮೇಶ್ವರ, ಜಿ.ಪಂ ಉಪಕಾರ್ಯದರ್ಶಿ ಟಿ.ಕೃಷ್ಣಮೂರ್ತಿ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು. ಕರ್ನಾಟಕ ರಾಜ್ಯ ಮಾಹಿತಿ ಆಯೋಗದ ರಾಜ್ಯ ಮಾಹಿತಿ ಆಯುಕ್ತರುಗಳು ಸಾರ್ವಜನಿಕ ಮಾಹಿತಿ ಅಧಿಕಾರಿಗಳೊಂದಿಗೆ ಮಾಹಿತಿ ಹಕ್ಕು ಕಾಯ್ದೆಯ ಕುರಿತು ಸಂವಾದ ನಡೆಸಿದರು. ಜಿಲ್ಲಾ ತರಬೇತಿ ಸಂಸ್ಥೆಯ ಪ್ರಾಚಾರ್ಯರಾದ ಕೃಷ್ಣಮೂರ್ತಿ ದೇಸಾಯಿ ಅವರು ಕಾರ್ಯಕ್ರಮ ನಿರೂಪಿಸಿದರು. ಕಾರ್ಯಾಗಾರದಲ್ಲಿ ವಿವಿಧ ಇಲಾಖೆಗಳ ಜಿಲ್ಲಾ ಮಟ್ಟದ ಅಧಿಕಾರಿಗಳು ಹಾಗೂ ಸಾರ್ವಜನಿಕ ಮಾಹಿತಿ ಅಧಿಕಾರಿಗಳು ಭಾಗವಹಿಸಿದ್ದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 