ಗ್ರಾಹಕರ ವಿಶ್ವಾಸಕ್ಕೆ ಧಕ್ಕೆ ಬಾರದ ಹಾಗೆ ಕೆಲಸ: ಶಾಸಕ ಯತ್ನಾಳ್

ಗ್ರಾಹಕರ ವಿಶ್ವಾಸಕ್ಕೆ ಧಕ್ಕೆ ಬಾರದ ಹಾಗೆ ಕೆಲಸ: ಶಾಸಕ ಯತ್ನಾಳ್  Work in a way that does not compromise customer confidence: MLA Yatnal

ತಾಳಿಕೋಟಿ 16: ಆರ್ಥಿಕ ಹಾಗೂ ಸಾಮಾಜಕಳಕಳಿಯೊಂದಿಗೆ 2006 ರಲ್ಲಿ ಆರಂಭಿಸಲಾದ ಸಿದ್ಧಸಿರಿ ಸೌಹಾರ್ದ ಸಂಘವು ಇಂದಿಗೆ 81,981 ಸದಸ್ಯರನ್ನು, 4380 ಕೋಟಿ ಠೇವಣಿ, ರೂ 72 ಕೋಟಿ ಶೇರು ಬಂಡವಾಳ ದೊಂದಿಗೆ ಕ್ಷಿಪ್ರ ಗತಿಯಲ್ಲಿ ಮುನ್ನುಗುತ್ತಿದೆ ಇದಕ್ಕೆ ಪ್ರಮುಖ ಕಾರಣ ಗ್ರಾಹಕರು ನಮ್ಮ ಮೇಲೆ ಇಟ್ಟಿರುವ ವಿಶ್ವಾಸವಾಗಿದೆ ಇದನ್ನು ಯಾವ ಕಾರಣಕ್ಕೂ ಕೆಡದಂತೆ ನೋಡಿಕೊಳ್ಳುತ್ತೇವೆ ಎಂದು ವಿಜಯಪುರ ನಗರ ಶಾಸಕ, ಸಿದ್ಧಸಿರಿ ಸೌಹಾರ್ದ ಸಹಕಾರಿ ಸಂಘದ ಅಧ್ಯಕ್ಷ ಬಸನಗೌಡ ರಾ. ಪಾಟೀಲ( ಯತ್ನಾಳ) ಹೇಳಿದರು.

ಶುಕ್ರವಾರ ಪಟ್ಟಣದಲ್ಲಿ ಸಿದ್ಧಸಿರಿ ಆಡಳಿತ ಮಂಡಳಿ ವತಿಯಿಂದ ಹಮ್ಮಿಕೊಂಡ ಬ್ಯಾಂಕಿನ ಸ್ವಂತ ನೂತನ ಕಟ್ಟಡ ಉದ್ಘಾಟನಾ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಸಿದ್ಧಸಿರಿ ಸೌಹಾರ್ದ ಸಹಕಾರಿ ಸಂಘವು ಹಣಕಾಸಿನ ವ್ಯವಹಾರ ಅಲ್ಲದೆ ಹಲವಾರು ಸಾಮಾಜಿಕ ಹಾಗೂ ಧಾರ್ಮಿಕ ಸೇವಾ ಕಾರ್ಯಗಳನ್ನೂ ಮಾಡುತ್ತಿದೆ. ಬಡವರಿಗಾಗಿ ಪ್ರಧಾನ ಮಂತ್ರಿ ಜನ ಓಷಧಾಲಯ, ಬೀದಿಬದಿ ವ್ಯಾಪಾರಿಗಳಿಗೆ "ಕೇಸರಿ ಸ್ವಾವಲಂಬಿ" ಸಾಲ ಯೋಜನೆ, ಪ್ರತಿ ವರ್ಷ ತುಮಕೂರು ಸಿದ್ದಗಂಗಾ ಮಠ ಹಾಗೂ ಕೊಪ್ಪಳ ಗವಿಸಿದ್ದೇಶ್ವರ ಮಠಕ್ಕೆ 101 ಕ್ವಿಂಟಲ್ ಅಕ್ಕಿ ಹಾಗೂ 5001 ವಿಭೂತಿಗಳ ದೇಣಿಗೆ, ಗೋ ರಕ್ಷಾ ಕೇಂದ್ರಗಳು, ಸಿದ್ದೇಶ್ವರ ಲೋಕ ಕಲ್ಯಾಣ ಚಾರಿಟೇಬಲ್ ಟ್ರಸ್ಟ್‌ ಸ್ಥಾಪಿಸಲಾಗಿದ್ದು ಇದರ ಅಡಿಯಲ್ಲಿ ಜೆಎಸ್‌ಎಸ್ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ, ಬಡವರಿಗಾಗಿ ಉಚಿತ ಡಯಾಲಿಸಿಸ್ ಕೇಂದ್ರ ನಡೆಸಲಾಗುತ್ತಿದೆ. ಬ್ಯಾಂಕಿನ ಸಿಬ್ಬಂದಿಗಳಿಗೆ ರೂ 1ಲಕ್ಷದಿಂದ 5 ಲಕ್ಷದವರೆಗೆ ಸಿಬ್ಬಂದಿ ಸುರಕ್ಷತಾ ನಿಧಿ ಹಾಗೂ ಸಾಲಗಾರರಿಗೆ ಸಾಲಗಾರರ ಸುರಕ್ಷಾ ನಿಧಿ ಅಡಿಯಲ್ಲಿ 5, ಲಕ್ಷ ದವರೆಗೆ ಸಾಲ ಮನ್ನಾ ಮಾಡಲಾಗುತ್ತದೆ ಎಂದ ಅವರು ಬರುವ ವರ್ಷದಲ್ಲಿ ರೂ 5,000 ಕೋಟಿ ಠೇವಣಿಯ ಗುರಿ ನಮ್ಮದಾಗಿದೆ ನಿಮ್ಮೆಲ್ಲರ ಪ್ರೀತಿ ವಿಶ್ವಾಸ ಇದೇ ರೀತಿಯಾಗಿ ಮುಂದುವರೆಯಲಿ ಎಂದರು. ಬಿಜೆಪಿ ಮಾಜಿ ಜಿಲ್ಲಾ ಉಪಾಧ್ಯಕ್ಷ ಆರ್‌.ಎಸ್‌.ಪಾಟೀಲ ಕೂಚಬಾಳ ಮಾತನಾಡಿ ಯತ್ನಾಳ ಗೌಡರ ಮಾತುಗಳು ಎಷ್ಟು ನೇರವಾಗಿಯೂ ಅವರ ಹೃದಯ ಅಷ್ಟೇ ಮೃದುವಾಗಿದೆ. ಸಾಮಾಜಿಕ ಕಳಕಳಿಯೊಂದಿಗೆ ಅವರು ಈ ಸಂಘದ ಮೂಲಕ ಬಡವರಿಗಾಗಿ ಸಾಕಷ್ಟು ಕೆಲಸಗಳನ್ನು ಮಾಡುತ್ತಿದ್ದಾರೆ ಅವರ ಈ ಸೇವಾ ಕಾರ್ಯಗಳಲ್ಲಿ ನಾವೆಲ್ಲರೂ ಸಹಕರಿಸಬೇಕಾಗಿದೆ ಎಂದರು. ವೀರಶೈವ ವಿದ್ಯಾವರ್ಧಕ ಸಂಘದ ಅಧ್ಯಕ್ಷ ವೀರುಪಾಕ್ಷಯ್ಯ ಹಿರೇಮಠ ನೂತನ ಕಟ್ಟಡವನ್ನು ಉದ್ಘಾಟಿಸಿದರು. ಕೆಸರಟ್ಟಿ ಶಂಕರಲಿಂಗ ಗುರುಪೀಠದ ಬಾಲತಪಸ್ವಿ ಪೂಜ್ಯ ಸೋಮಲಿಂಗ ಮಹಾ ಸ್ವಾಮಿಗಳು ಸಾನಿಧ್ಯ ವಹಿಸಿ ಆಶೀರ್ವಚನ ನೀಡಿದರು.

ಶ್ರೀ ಖಾಸ್ಗತೇಶ್ವರ ಮಠದ ಮುಖ್ಯಸ್ಥ ಮುರುಗೇಶ ವಿರಕ್ತಮಠ ಸಮ್ಮುಖ ವಹಿಸಿದ್ದರು. ವೇದಿಕೆಯಲ್ಲಿ ಪುರಸಭೆ ಮಾಜಿ ಅಧ್ಯಕ್ಷ ದಶರಥಸಿಂಗ್ ಮನಗೂಳಿ, ಖ್ಯಾತ ವೈದ್ಯ ಡಾ.ವಿಜಯಕುಮಾರ ಕಾರ್ಚಿ, ಪುರಸಭೆ ಮಾಜಿ ಸದಸ್ಯ ನಾಗೇಶ ದೇಶಪಾಂಡೆ,ಅಡತ್ ಮರ್ಚಂಟ್ ಅಸೋಸಿಯೇಷನ್ ಅಧ್ಯಕ್ಷ ಅಶೋಕ ಶೆಟ್ಟಿ, ಪ್ರಭುಗೌಡ ದೇಸಾಯಿ, ಸಿದ್ಧಸಿರಿ ಸೌಹಾರ್ದ ಸಹಕಾರಿ ಸಂಘದ ಆಡಳಿತ ಮಂಡಳಿ ನಿರ್ದೇಶಕರು, ವಿವಿಧ ಶಾಖೆಗಳ ವ್ಯವಸ್ಥಾಪಕರು, ಸಿಬ್ಬಂದಿ ವರ್ಗ ಹಾಗೂ ಯತ್ನಾಳರ ಅಭಿಮಾನಿಗಳು ಇದ್ದರು.ಕುಮಾರಿ ತೇಜಶ್ವಿನಿ ಡಿಸಲೆ ನಿರೂಪಿಸಿ ಕೊನೆಯಲ್ಲಿ ವಂದಿಸಿದರು.