ಕಾಮಗಾರಿ ಆರಂಭ: 4ನೇ ರೇಲ್ವೆ ಗೇಟ್‌ನ ಸಂಚಾರ ವರ್ಷದವರೆಗೆ ಬಂದ್

ಕಾಮಗಾರಿ ಆರಂಭ: 4ನೇ ರೇಲ್ವೆ ಗೇಟ್‌ನ ಸಂಚಾರ ವರ್ಷದವರೆಗೆ ಬಂದ್  Work begins: Traffic at 4th Railway Gate closed until end of year

ಬೆಳಗಾವಿ 20: ರೇಲ್ವೆ ಕೆಳಸೇತುವೆ ಕಾಮಗಾರಿಯನ್ನು ಆರಂಭಿಸಲಾದ ನಿಮಿತ್ತ ಇಂದಿನಿಂದ ಬೆಳಗಾವಿಯ ನಾಲ್ಕನೇ ರೇಲ್ವೆ ಗೇಟ್ ಸಂಚಾರವನ್ನು ಒಂದು ವರ್ಷದ ಅವಧಿಗೆ ನಿರ್ಬಂಧಿಸಲಾಗಿದೆ.ಟ್ರಾಫಿಕ್ ಸಿಪಿಐ ಬಸಗೌಡ ಪಾಟೀಲ್ ಮತ್ತು ಪಿ.ಎಸ್‌.ಐ ಮಹಾಂತೇಶ್ ಮಿರ್ಜಿ ಮತ್ತು ಸಿಬ್ಬಂದಿಗಳ ನೇತೃತ್ವದಲ್ಲಿ ಇಂದಿನಿಂದ ಸಂಚಾರವನ್ನು ನಿರ್ಬಂಧಿಸಿ ಫಲಕವನ್ನು ಅಳವಡಿಸಲಾಯಿತು. 

ಬೆಳಗಾವಿಯ ಅನಗೋಳದಲ್ಲಿರುವ ನಾಲ್ಕನೇ ರೇಲ್ವೆ ಕೆಳಸೇತುವೆ ಕಾಮಗಾರಿಯನ್ನು ಜೂನ್ 20ರಿಂದ ಕೈಗೆತ್ತಿಕೊಂಡ ಹಿನ್ನೆಲೆ ಇಂದಿನಿಂದ 2026 ಜೂನ್ 19ರವರೆಗೆ ಸಂಚಾರ ನಿರ್ಬಂಧವನ್ನು ಹೇರಲಾಗಿದೆ. ಇನ್ನು ಸುಗಮ ಸಂಚಾರಕ್ಕೆ ಪರ್ಯಾಯ ಮಾರ್ಗಗಳನ್ನು ಸಂಚಾರಿ ಪೊಲೀಸರು ನೀಡಿದ್ದಾರೆ. ಅನಗೋಳದಿಂದ ಬೆಮ್ಕೋಗೆ ಚಲಿಸುವ ಎಲ್ಲ ಮಾದರಿಯ ವಾಹನಗಳು ಡಿ.ವ್ಹಿ.ಎಸ್ ಚೌಕ್ , ಹರಿಮಂದಿರ ರಸ್ತೆ, ಅನಗೋಳ ನಾಕಾ, ಮೂರನೇ ರೇಲ್ವೆ ಗೇಟ್ ಮೇಲ್ಸೇತುವೆ ಸೇರಿ ಖಾನಾಪುರ ರಸ್ತೆಯ ಮಾರ್ಗವಾಗಿ ಸಂಚರಿಸಬಹುದು. ಇನ್ನು ಖಾನಾಪುರ ರಸ್ತೆಯಿಂದ ಬೆಮ್ಕೋ ಕ್ರಾಸ್ ಮಾರ್ಗವಾಗಿ ಸಂಚರಿಸುವ ವಾಹನಗಳು ಮೂರನೇ ರೇಲ್ವೆ ಗೇಟ್ ಮೇಲ್ಸೇತುವೆಯನ್ನು ಬಳಸಬಹುದಾಗಿದೆ ಎಂದು ನಗರ ಪೊಲೀಸ್ ಆಯುಕ್ತರಾದ ಭೂಷಣ್ ಬೋರಸೆ ಹೇಳಿದ್ದಾರೆ.

259 ಮೀಟರ್ ಉದ್ದದ ಕೆಳ ಸೇತುವೆಯನ್ನು ನಾಲ್ಕನೇ ರೇಲ್ವೆ ಗೇಟ್‌’ನಲ್ಲಿ ನಿರ್ಮಿಸಲಾಗುತ್ತಿದೆ. ಇದು ದ್ವಿಪಥ ರಸ್ತೆಯಾಗಲಿದ್ದು, ಎರಡು ಬದಿ ಫೂಟ್‌’ಪಾಥ್ ಮತ್ತು ಸರ್ವಿಸ್ ರಸ್ತೆಯನ್ನು ಹೊಂದಿರುತ್ತದೆ. 12 ತಿಂಗಳಲ್ಲಿ ಕಾಮಗಾರಿಯನ್ನು ಪೂರ್ಣಗೊಳಿಸಲಾಗುವುದು ಎಂದು ರೇಲ್ವೆ ಮಂಡಳದ ಅಭಿಯಂತರ ನಾಗರಾಜ್ ಮಾಹಿತಿ ನೀಡಿದರು.