ಮಹಿಳೆಯರು ನಿಯಮಿತವಾಗಿ ತಪಾಸಣೆಗೆ ಒಳಗಾಗಬೇಕು: ಮೇಯರ್ ಮುಲ್ಲಂಗಿ ನಂದೀಶ್
ಬಳ್ಳಾರಿ 25: ಹೆಣ್ಣುಮಕ್ಕಳಲ್ಲಿ ಕಂಡುಬರಬಹುದಾದಂತಹ ಗರ್ಭಕಂಠದ ಕ್ಯಾನ್ಸರ್ ಸುಲಭವಾಗಿ ಲಭ್ಯವಿರುವ ಸ್ಕ್ರೀನಿಂಗ್ ವಿಧಾನಗಳ ಮೂಲಕ ಆರಂಭದಲ್ಲಿ ಪತ್ತೆಹಚ್ಚಬಹುದಾಗಿದ್ದು, ಮಹಿಳೆಯರು ಸಕಾಲದಲ್ಲಿ ಚಿಕಿತ್ಸೆ ಪಡೆಯಬೇಕು ಎಂದು ಬಳ್ಳಾರಿ ಮಹಾನಗರ ಪಾಲಿಕೆಯ ಮೇಯರ್ ಮುಲ್ಲಂಗಿ ನಂದೀಶ್ ಅವರು ಹೇಳಿದರು.
ಮಂಗಳವಾರದಂದು, ಬಯೋಸೈಫರ್ ಲ್ಯಾಬ್ ಹಾಗೂ ಬಳ್ಳಾರಿ ಮಹಾನಗರ ಪಾಲಿಕೆ, ಸಂಜೀವಿನಿ ಆಸ್ಪತ್ರೆ, ನವಕರ್ನಾಟಕ ಆಸ್ಪತ್ರೆ, ಸಿರಿ ಡಯಗ್ನೋಸ್ಟಿಕ್ ಲ್ಯಾಬ್ ಇವರ ಸಹಯೋಗದಲ್ಲಿ ನಗರದ ಬಿಡಿಎಎ ಫುಟ್‌ಬಾಲ್ ವೇದಿಕೆ ಸಭಾಂಗಣದಲ್ಲಿ ಮಹಾನಗರ ಪಾಲಿಕೆಯ ಮಹಿಳಾ ಪೌರಕಾರ್ಮಿಕರಿಗೆ ಆಯೋಜಿಸಿದ್ದ ಉಚಿತ ತಪಾಸಣಾ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಉಚಿತ ನೋಂದಣಿ, ಅನುಭವಿ ವೈದ್ಯರೊಂದಿಗೆ ಉಚಿತ ಸಮಾಲೋಚನೆ ಮತ್ತು ಉಚಿತ ಪರೀಕ್ಷೆ ಕೈಗೊಳ್ಳಲಾಗುತ್ತದೆ. ಮಹಿಳೆಯರು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ತಿಳಿಸಿದರು.ವೈದ್ಯರಾದ ಡಾ.ಶಂಕರ್ ಅವರು ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಿ ಅವರು ಮಾತನಾಡಿ, ಮಹಿಳೆಯರಲ್ಲಿ ಕಂಡುಬರುವ ಗರ್ಭಕಂಠದ ಕ್ಯಾನ್ಸರ್ ಮತ್ತು ಸ್ತನ ಕ್ಯಾನ್ಸರ್ ಗಳಿಂದ ಮಹಿಳೆಯರು ಸಾವನ್ನಪ್ಪಿದ ಪ್ರಕರಣಗಳು ಕಂಡುಬರುತ್ತಿವೆ. ಇದಕ್ಕಾಗಿ 10 ವರ್ಷದಿಂದ 45 ವರ್ಷದೊಳಗಿನ ಹೆಣ್ಣು ಮಕ್ಕಳು ತಪ್ಪದೇ ಪ್ರಾರಂಭಿಕ ಹಂತದಲ್ಲಿ ತಪಾಸಣೆ ಮಾಡಿಸಿಕೊಳ್ಳಬೇಕು. ಒಂದು ವೇಳೆ ದೃಢಪಟ್ಟಲ್ಲಿ ಎರಡು ಹಂತದ ಡೋಸ್ ಗಳಲ್ಲಿ ಗುಣಪಡಿಸಬಹುದಾಗಿದೆ ಎಂದು ಹೇಳಿದರು.ದೇಶದಲ್ಲಿ ಗರ್ಭಕಂಠದ ಕ್ಯಾನ್ಸರ್ ಮತ್ತು ಸ್ತನ ಕ್ಯಾನ್ಸರ್ ಹೆಚ್ಚಾಗಿ ಕಂಡುಬರಬಹುದಾಗಿದ್ದು, ತಪಾಸಣೆ ಮತ್ತು ಚಿಕಿತ್ಸೆಗಾಗಿ ಕೇಂದ್ರ ಸರ್ಕಾರವು ವಿಶೇಷ ಅನುದಾನ ಮೀಸಲಿರಿಸಿದೆ ಎಂದು ತಿಳಿಸಿದರು.ಬಳಿಕ ಕಾರ್ಯಕ್ರಮದಲ್ಲಿ ಮಹಿಳಾ ಪೌರಕಾರ್ಮಿಕರಿಗೆ ತಪಾಸಣೆ ಕೈಗೊಳ್ಳಲಾಯಿತು.ಈ ಸಂದರ್ಭದಲ್ಲಿ ಮಹಾನಗರ ಪಾಲಿಕೆಯ ಉಪಮೇಯರ್ ಡಿ.ಸುಕುಂ, ಸಾಮಾಜಿಕ, ಆರೋಗ್ಯ ಮತ್ತು ಶಿಕ್ಷಣ ಸ್ಥಾಯಿ ಸಮಿತಿಯ ಅಧ್ಯಕ್ಷರಾದ ಎಂ.ಕೆ.ಪದ್ಮಾರೋಜ, ಪ್ರಭಾರಿ ಆರೋಗ್ಯಾಧಿಕಾರಿ ಡಾ.ಮುನಾಫ್ ಪಟೇಲ್, ವೈದ್ಯರಾದ, ಡಾ.ಶಮೀರ್, ಡಾ.ಗಂಗಾಧರ ಸೇರಿದಂತೆ ಪಾಲಿಕೆಯ ಅಧಿಕಾರಿ ಮತ್ತು ಸಿಬ್ಬಂದಿ, ಮಹಿಳಾ ಪೌರ ಕಾರ್ಮಿಕರು ಹಾಗೂ ಮತ್ತೀತರರು ಇದ್ದರು.