ಮಹಿಳೆಯರು ತಮ್ಮ ಸಾಮರ್ಥ್ಯವನ್ನು ಅರಿತು ಉನ್ನತ ಹುದ್ದೆಗಳನ್ನು ಅಲಂಕರಿಸಬೇಕು

ಮಹಿಳೆಯರು ತಮ್ಮ ಸಾಮರ್ಥ್ಯವನ್ನು ಅರಿತು ಉನ್ನತ ಹುದ್ದೆಗಳನ್ನು ಅಲಂಕರಿಸಬೇಕು Women should realize their potential and occupy high positions.

ಲೋಕದರ್ಶನ ವರದಿ 

ವಿಜಯಪುರ 15 :  ಮಹಿಳೆಯರು ತಮ್ಮಲ್ಲಿರುವ ಪ್ರತಿಭೆ ಮತ್ತು ಶಕ್ತಿಯನ್ನು ಹೊರಹೊಮ್ಮಿಸಿ ಜೀವನದಲ್ಲಿ ಉನ್ನತ ಹುದ್ದೆಗಳನ್ನು ಅಲಂಕರಿಸುವತ್ತ ಸಾಗಬೇಕು ಎಂದು ಬಾಗಲಕೋಟ ಹಾಗೂ ವಿಜಯಪುರದ ತುಳಸಿಗೇರಿ ಮಧುಮೇಹ ಆಸ್ಪತ್ರೆಯ ಮುಖ್ಯ ಮಧುಮೇಹ ತಜ್ಞ ಡಾ.ಬಾಬು ರಾಜೇಂದ್ರ ನಾಯಕ ಹೇಳಿದರು. ನಗರದ ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾನಿಲಯದ, ಸಸ್ಯಶಾಸ್ತ್ರ ಅಧ್ಯಯನ ವಿಭಾಗದ ಸಹಯೋಗದಲ್ಲಿ ಇತ್ತಿಚಿಗೆ ಹಮ್ಮಿಕೊಂಡಿದ್ದ, ಪರಿಸರ ದಿನಾಚರಣೆ ಹಾಗೂ ಎಂ.ಎಸ್‌ಸಿ ಅಂತಿಮ ವರ್ಷದ ವಿದ್ಯಾರ್ಥಿನಿಯರ ಬೀಳ್ಕೊಡುಗೆ ಸಮಾರಂಭದಲ್ಲಿ “ಒಬ್ಬ ವಿದ್ಯಾರ್ಥಿ-ಒಂದು ಸಸಿ” ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.  

ಡಾ.ಬಾಬಾಸಾಹೇಬ ಅಂಬೇಡ್ಕರ್ ಅವರ ತತ್ವಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳುವ ಮೂಲಕ ಸಮಾಜದ ಅಭಿವೃದ್ಧಿಗೆ ಕೊಡುಗೆ ನೀಡಬೇಕು ಎಂದು ಕರೆ ನೀಡಿದರು. ಇದೇ ಸಂದರ್ಭದಲ್ಲಿ ಜೈವಿಕ ತಂತ್ರಜ್ಞಾನ ಅಧ್ಯಯನ ವಿಭಾಗದ ಸಹಾಯಕ ಪ್ರಾಧ್ಯಾಪಕ ಡಾ.ಜಾಯ್ ಹೊಸ್ಕೇರಿ ಮಾತನಾಡಿ, ಆರ್ಕಿಡ್ ಸಸ್ಯಗಳ ಬೆಳವಣಿಗೆ ಮತ್ತು ರಫ್ತು ಸಾಧ್ಯತೆಗಳ ಕುರಿತು ಮಾಹಿತಿ ನೀಡಿದರು.  

ಸಸ್ಯಶಾಸ್ತ್ರ ಅಧ್ಯಯನ ವಿಭಾಗದ ಸಂಯೋಜಕ ಡಾ.ಬಾಬು ಆರ್‌.ಎಲ್‌. ಮಾತನಾಡಿ, ವಿದ್ಯಾರ್ಥಿನಿಯರು ವಿದ್ಯಾಭ್ಯಾಸದ ಜೊತೆಗೆ ಮಾನವೀಯ ಮೌಲ್ಯಗಳನ್ನು ಬೆಳೆಸಿಕೊಂಡು ಉತ್ತಮ ಸಾಧನೆ ಮಾಡಬೇಕು ಹಾಗೂ ಮಹಿಳಾ ಉದ್ಯಮಶೀಲತೆಯತ್ತ ಹೆಚ್ಚಿನ ಗಮನ ಹರಿಸಿ ಉದ್ಯೋಗದಾತರಾಗಬೇಕು ಎಂದರು. ದ್ರಾಕ್ಷಾಯಣಿ ಹಾಗೂ ಶುನೈನ್ ನಾಜ್ ಕಾರ್ಯಕ್ರಮ ನಿರೂಪಿಸಿದರು. ಗ್ರೀಷ್ಮಾ ಕುಲಕರ್ಣಿ ಸ್ವಾಗತಿಸಿದರು, ಶ್ರೀದೇವಿ ನಿಗಡಿ ಅತಿಥಿಗಳನ್ನು ಪರಿಚಯಿಸಿದರು, ಶಶಿಕಲಾ ವಂದಿಸಿದರು. ಕಾರ್ಯಕ್ರಮದಲ್ಲಿ ಬೋಧಕ ಹಾಗೂ ಬೋಧಕೇತರ ಸಿಬ್ಬಂದಿ ಉಪಸ್ಥಿತರಿದ್ದರು.