ಮಹಿಳೆಯರು ಮಕ್ಕಳನ್ನು ಸಂಸ್ಕಾರವಂತರನ್ನಾಗಿ ಬೆಳೆಸಿ: ಕೀರ್ತಿ ಶಿವಕುಮಾರ್

ಮಹಿಳೆಯರು ಮಕ್ಕಳನ್ನು ಸಂಸ್ಕಾರವಂತರನ್ನಾಗಿ ಬೆಳೆಸಿ: ಕೀರ್ತಿ ಶಿವಕುಮಾರ್ Women should raise their children to be cultured: Keerthi Shivakumar

ಲೋಕದರ್ಶನ ವರದಿ 

ಬೆಳಗಾವಿ 30: ಹೆಣ್ಣು ಅಬಲೆಯಲ್ಲ, ಸಬಲೆ. ಜಗತ್ತಿನ ಸೃಷ್ಟಿಯ ಮೂಲವೇ ಮಹಿಳೆಯಾಗಿದ್ದಾಳೆ. ಅವರು ಮಾಡುವ ಕೆಲಸಗಳಿಗೆ ಅಭಿನಂದಿಸಿ, ಪ್ರೋತ್ಸಾಹಿಸಬೇಕು ಹೊರತು ತಾರತಮ್ಯತೆ ಮಾಡಬಾರದು ಎಂದು ಕೀರ್ತಿ ಶಿವಕುಮಾರ್ ಅವರು ಹೇಳಿದರು.  

ನಗರದ ಹಿಂದವಾಡಿಯ ಗೊಮ್ಮಟೇಶ್ ವಿದ್ಯಾ ಪೀಠದಲ್ಲಿ ಕ್ರಾಂತಿ ಮಹಿಳಾ ಮಂಡಳ ಮತ್ತು ಉಮಾ ಸಂಗೀತ ಪ್ರತಿಷ್ಠಾನದ ವತಿಯಿಂದ ಆಯೋಜಿಸಲಾದ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು. 

ಮನೆಯ ಬೆಳಗುವ ದೀಪ ಅವಳು, ಈ ಸಮಾಜದ ಪ್ರತಿಯೊಂದು ಕ್ಷೇತ್ರದಲ್ಲೂ ತನ್ನ ಛಾಪನ್ನು ಮೂಡಿಸುತ್ತಿರುವ ಮಹಿಳೆ ಅಸಾಮಾನ್ಯಳು ಎಂದರು. ಸ್ತ್ರೀ ಶಿಕ್ಷಣವನ್ನು ಪಡೆಯುವುದರ ಜೊತೆಗೆ ಸಂಸ್ಕಾರವನ್ನು ಕಲಿತು ತಮ್ಮ ಮಕ್ಕಳನ್ನು ಸಂಸ್ಕಾರವಂತರನ್ನಾಗಿ ಮಾಡುವುದು ಮಹಿಳೆಯ ಮುಖ್ಯ ಕೆಲಸವಾಗಿದೆ ಮಹಿಳೆಯರು ಸ್ವಾವಲಂಬಿಗಳಾಗಿ ಬದುಕಬೇಕು ಮಹಿಳೆ ಯಾವುದೇ ಒಂದು ಚಟುವಟಿಕೆಯಲ್ಲಿ ಭಾಗವಹಿಸಲು ವಯಸ್ಸಿನ ಅಂತರವನ್ನು ಲೆಕ್ಕಿಸದೆ ಖುಷಿಯಿಂದ ಚಟುವಟಿಕೆಗಳಲ್ಲಿ ಪಾಲ್ಗೊಳ್ಳಬೇಕು ಎಂದು ಸಲಹೆ ನೀಡಿದರು. 

ಡಾ. ಸಂಜೀವ್ ಪಾಟೀಲ್ ಮಾತನಾಡಿ, ದೇವರು ನಮಗೆ ಸೌಂದರ್ಯವಾದ ಈ ದೇಹವನ್ನು ನೀಡಿದ್ದಾನೆ ಇದನ್ನು ಅತ್ಯಂತ ಕಾಳಜಿಯಿಂದ ನೋಡಿಕೊಳ್ಳಬೇಕು ಎಂದು ಹೇಳಿದರು. ಆಶ್ರಯ ಫೌಂಡೇಶನ್ ಸಂಸ್ಥಾಪಕಿ ನಾಗರತ್ನ ರಾಮ ಗೌಡ ಮಾತನಾಡಿ, ಸಮಾಜದ ಉನ್ನತಿಗಾಗಿ ಬೆಳಗಾವಿಯಲ್ಲಿ ಶ್ರಮಿಸುವ ಏಕೈಕ ಮಂಡಳ ಎಂದರೆ ಕ್ರಾಂತಿ ಮಹಿಳಾ ಮಂಡಳ ಮತ್ತು ಉಮಾ ಸಂಗೀತ ಪ್ರತಿಷ್ಠಾನ ಎಂದು ಹೇಳಲು ಹೆಮ್ಮೆ ಅನಿಸುತ್ತದೆ ಎಂದರು. 

ಕ್ರಾಂತಿ ಮಹಿಳಾ ಮಂಡಳ ಮತ್ತು ಉಮಾ ಸಂಗೀತ ಪ್ರತಿಷ್ಠಾನದಿಂದ ಲೇಕವ್ಯೂ ಆಸ್ಪತ್ರೆಯ ವೈದ್ಯರಾದ ಡಾ. ಸಂಗೀತ, ಡಾ. ಸಂಜೀವ್ ಪಾಟೀಲ್ ದಂಪತಿಗಳಿಗೆ ಆದರ್ಶ ದಂಪತಿಗಳ ಎಂಬ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು. ಮತ್ತು ಆದರ್ಶ ಅತ್ತೆ ಸೊಸೆ ಪ್ರಶಸ್ತಿಯನ್ನು ಚೆನ್ನಕ್ಕಾ ಕಾಗತಿಕರ ಮತ್ತು ಸೊಸೆ ನೀತಾ ಅಶೋಕ್ ಕಾಗತಿಕರ್ ಅವರಿಗೆ ಆದರ್ಶ ಅತ್ತೆ ಸೊಸೆ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು. 

ಸಂಗೀತ ವಿದೂಷಕಿ ಸೀಮಾ ಕುಲ್ಕರ್ಣಿ ಅವರಿಗೆ ಪ್ರತಿಭಾ ಪುರಸ್ಕಾರ ಎಂಬ ಪ್ರಶಸ್ತಿಯನ್ನು ನೀಡಿ ಸನ್ಮಾನಿಸಲಾಯಿತು. ಕಾರ್ಯಕ್ರಮದಲ್ಲಿ ಆರ್ಷ ಆಶ್ರಮದ ಹೆಣ್ಣು ಮಕ್ಕಳ ಶಿಕ್ಷಣಕ್ಕಾಗಿ 5,52,000 ರೂ. ಚಕ್ ವಿತರಿಸಲಾಯಿತು.  ಅದೇ ರೀತಿಯಾಗಿ ಆರಾಧನಾ ಸ್ಕೂಲ್ ಮಕ್ಕಳಿಗೋಸ್ಕರ 5000 ರೂ. ಚೆಕ್ ಅನ್ನು ಶಾಲೆಯ ಮುಖ್ಯೋಪಾಧ್ಯಾಯರಾದಂತಹ ಸುತಾರ್ ಸರ್ ಅವರಿಗೆ ವಿತರಿಸಲಾಯಿತು.  

ಅಧ್ಯಕ್ಷ ಮಂಗಲಾ ಮಠದ ಸ್ವಾಗತಿಸಿದರು. ಕಾರ್ಯದರ್ಶಿ ಭಾರತಿ ರತ್ನಪಗೊಳ ಪ್ರಸ್ತಾವಿಕವಾಗಿ ಮಾತನಾಡಿದರು. ಕ್ರಾಂತಿ ಮಹಿಳಾ ಮಂಡಳ ಮತ್ತು ಉಮಾ ಸಂಗೀತ ಪ್ರತಿಷ್ಠಾನದ ಎಲ್ಲ ಸದಸ್ಯರು ಪ್ರಾರ್ಥನೆಯನ್ನು ಹಾಡಿದರು. ತ್ರಿಶಲಾ ಪಾಯಪ್ಪನವರ್, ದರ್ಶನ ನಿಲಜಗಿ, ಮಮ್ತಾ ಪತ್ರಾವಳಿ ಪರಚಯಿಸಿದರು. ರೋಹಿಣಿ ಇಂಡಿ, ಡಾ. ರಾಜೇಂದ್ರ ಮಠದ, ಡಾ. ಗುಡಗನಟ್ಟಿ, ಆರ್ಷ್‌ ಆಶ್ರಮದ ಹೆಣ್ಣು ಮಕ್ಕಳು ಹಾಗೂ ಕಾಗತಿಕರ್ ಇತರರು ಇದ್ದರು. ಪುಷ್ಪ ನಿಲಜಗಿ ನಿರೂಪಿಸಿದರು. ಪದ್ಮಜಾ ತುರುಮುಂಡಿ ವಂದಿಸಿದರು.