ಖಾಕಿ ಗೌರವಕ್ಕೆ ಸ್ತ್ರೀಶಕ್ತಿಯ ನಮನ
Women Police Officer Chennamma Karnal honored by Dari Deepa Organisation
ದಾರೀ ದೀಪ ಸಂಸ್ಥೆಯಿಂದ ಮಹಿಳಾ ಪೊಲೀಸ್ ಅಧಿಕಾರಿ ಚೆನ್ನಮ್ಮ ಕರ್ನಾಲ್ ಅವರಿಗೆ ಸನ್ಮಾನ
ಗದಗ 22: "ಬದಲಾಗುತ್ತಿರುವ ಇಂದಿನ ಕಾಲಘಟ್ಟದಲ್ಲಿ ಮಹಿಳೆ ಕೇವಲ ಕುಟುಂಬದ ಕೊಂಡಿಯಲ್ಲ, ಅವಳು ಇಡೀ ಸಮಾಜದ ಭದ್ರತೆಯ ಶಕ್ತಿಯಾಗಿ ಹೊರಹೊಮ್ಮುತ್ತಿದ್ದಾಳೆ. ಖಾಕಿ ವಸ್ತ್ರದ ಘನತೆಯನ್ನು ಎತ್ತಿಹಿಡಿಯುತ್ತಿರುವ ಮಹಿಳಾ ಅಧಿಕಾರಿಗಳು ಬದಲಾವಣೆಯ ಹರಿಕಾರರು," ಎಂದು ದಾರೀದೀಪ ಮಹಿಳಾ ವಿವಿಧೋದ್ದೇಶ ಸಂಸ್ಥೆಯ ಅಧ್ಯಕ್ಷರಾದ ಶಕುಂತಲಾ ಮುಳುಗುಂದ ಅವರು ಅಭಿಪ್ರಾಯಪಟ್ಟರು.
ನಾಗರಿಕ ಸೇವಾ ದಿನದ ಅಂಗವಾಗಿ ಸಮಾಜದ ಶಾಂತಿ ಮತ್ತು ಸುವ್ಯವಸ್ಥೆಗಾಗಿ ನಿಷ್ಠೆಯಿಂದ ಶ್ರಮಿಸುತ್ತಿರುವ ಪೊಲೀಸ್ ಇಲಾಖೆಯ ಮಹಿಳಾ ಹೆಡ್ ಕಾನ್ಸ್ಟೇಬಲ್ ಚೆನ್ನಮ್ಮ ಕರ್ನಾಲ್ ಅವರನ್ನು ಸನ್ಮಾನಿಸುವ ಮೂಲಕ ಗದಗಿನ ದಾರೀದೀಪ ಮಹಿಳಾ ವಿವಿಧೋದ್ದೇಶ ಸಂಸ್ಥೆಯು ಒಂದು ಅರ್ಥಪೂರ್ಣ ಸಂದೇಶವನ್ನು ಸಾರಿತು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಶ್ರೀಮತಿ ಶಕುಂತಲಾ ಮುಳುಗುಂದ ಅವರು ಮಾತನಾಡಿ, "ಸಮರ್ಥ ಆಡಳಿತ ಮತ್ತು ಜನಸ್ನೇಹಿ ಪೊಲೀಸ್ ವ್ಯವಸ್ಥೆಯಲ್ಲಿ ಮಹಿಳೆಯರ ಸಹಾನುಭೂತಿ ಹಾಗೂ ಧೈರ್ಯ ಅತ್ಯಂತ ಅವಶ್ಯಕ. ಚೆನ್ನಮ್ಮ ಕರ್ನಾಲ್ ಅವರಂತಹ ಕರ್ತವ್ಯನಿಷ್ಠ ಅಧಿಕಾರಿಗಳು ಇಂದಿನ ಯುವತಿಯರಿಗೆ ಸ್ಫೂರ್ತಿಯ ಸೆಲೆಯಾಗಿದ್ದಾರೆ. ಸವಾಲುಗಳನ್ನು ಮೆಟ್ಟಿ ನಿಂತು ಸಾಧನೆಯ ಶಿಖರಕ್ಕೇರುವ ಮೂಲಕ ಅವರು ಸಮಾಜಕ್ಕೆ ಹೊಸ ದಿಕ್ಕನ್ನು ತೋರುತ್ತಿದ್ದಾರೆ," ಎಂದು ಬಣ್ಣಿಸಿದರು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡಿದ್ದ ಶ್ರೀಮತಿ ಜ್ಯೋತಿ ದೇಸಾಯಿಗೌಡರ್, ವಿಜಯಲಕ್ಷ್ಮಿ ಅಸೂಟಿ, ದೀಪಾ ಹನುಮಂತ ಗೌಡರ ಹಾಗೂ ಪ್ರೀತಿ ಶಿವಪ್ಪನಮಠ ಅವರುಗಳು ಮಾತನಾಡಿ, "ವೃತ್ತಿ ಮತ್ತು ಪ್ರವೃತ್ತಿಗಳ ನಡುವೆ ಸಮತೋಲನ ಕಾಯ್ದುಕೊಂಡು ನಾಗರಿಕ ಸೇವೆಯಲ್ಲಿ ತೊಡಗಿರುವ ಮಹಿಳೆಯರ ಶ್ರಮ ಶ್ಲಾಘನೀಯ. ಇಂತಹ ಸನ್ಮಾನಗಳು ಸಮಾಜದಲ್ಲಿ ಸಕಾರಾತ್ಮಕ ಬದಲಾವಣೆಯನ್ನು ತರಬಲ್ಲವು," ಎಂದು ಹಿತನುಡಿಗಳನ್ನು ಹಂಚಿಕೊಂಡರು.
ಸನ್ಮಾನ ಸ್ವೀಕರಿಸಿದ ಶ್ರೀಮತಿ ಚೆನ್ನಮ್ಮ ಕರ್ನಾಲ್ ಅವರು ಮಾತನಾಡಿ, "ಸಮಾಜ ಮತ್ತು ಸಂಘಟನೆಗಳು ನೀಡುವ ಈ ಗೌರವವು ನನ್ನ ಕರ್ತವ್ಯದ ಮೇಲಿನ ನಿಷ್ಠೆಯನ್ನು ಮತ್ತಷ್ಟು ಹೆಚ್ಚಿಸಿದೆ," ಎಂದು ಕೃತಜ್ಞತೆ ಸಲ್ಲಿಸಿದರು. ಕಾರ್ಯಕ್ರಮವು ಮಹಿಳಾ ಸಬಲೀಕರಣದ ಮಹತ್ವ ಹಾಗೂ ಸಮಾಜದ ರಕ್ಷಣೆಯಲ್ಲಿ ಮಹಿಳೆಯರ ಅನಿವಾರ್ಯತೆಯನ್ನು ಸಾರುವ ಮೂಲಕ ಯಶಸ್ವಿಯಾಗಿ ಜರುಗಿತು.
ಈ ಸಂದರ್ಭದಲ್ಲಿ ಸಂಸ್ಥೆಯ ಪದಾಧಿಕಾರಿಗಳು ಹಾಗೂ ಪ್ರಮುಖರು ಉಪಸ್ಥಿತರಿದ್ದರು. ಕೃಷ್ಣಾ ಗದಗ 9845650612
5 ತಿಂಗಳಿಂದ ವೇತನವಿಲ್ಲದೆ ಪೌರ ಕಾರ್ಮಿಕರ ಪರದಾಟ : ಕುಟುಂಬ ನಿರ್ವಹಣೆಗೆ ಸಾಲಕ್ಕಾಗಿ ಹುಡುಕಾಟ
ಐವರ ಖದೀಮರ ಬಂಧನ, 67.93 ಲಕ್ಷ ಮೌಲ್ಯದ 416 ಗ್ರಾಂ ಚಿನ್ನಾಭರಣ ವಶಕ್ಕೆ: ಮಾಳಮಾರುತಿ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ
ತಾಯಿ, ಮಗ ನದಿಗೆ ಬಿದ್ದ ಪ್ರಕರಣ: ನಾಲ್ಕು ದಿನದ ಬಳಿಕ ಬಾಲಕನ ಶವ ಪತ್ತೆ : ಸತತ 4 ದಿನ ಕಾರ್ಯಾಚರಣೆ
ಜಮೀನಿನಲ್ಲಿ ವಂಚನೆ : ನ್ಯಾಯಕ್ಕಾಗಿ ಬಡ ರೈತನಿಂದ ಜಿಲ್ಲಾಧಿಕಾರಿಗಳ ಮೊರೆ : ಪೊಲೀಸರಿಂದ ನ್ಯಾಯ ಸಿಗದೆ ಅನ್ನದಾತನ ಅಳಲು
ಸಂಚಾರಕ್ಕೆ ಅಡತಡೆ : ರಸ್ತೆ ಬದಿಯ ಡಬ್ಬಾ ಅಂಗಡಿಗಳ ತೆರವು ಕಾರ್ಯಾಚರಣೆ : ಅಧಿಕಾರಿಗೆ ಅವಾಜ್ ಹಾಕಿದನಾ ಮುಖಂಡ?
ನೈಟಿ ಹಾಕುವ ವಿಷಯವಾಗಿ ಜಗಳ : ಪತ್ನಿಗೆ ಬೆಂಕಿ ಹಚ್ಚಿ ಹತ್ಯೆಗೆ ಯತ್ನಿಸಿದ ಪತಿ ಬಂಧನ 