ನಂದಿ ಸಹಕಾರಿ ಸಕ್ಕರೆ ಕಾರ್ಖಾನೆ ಉಳಿಸಲು ಶಕ್ತಿಮೀರಿ ಪ್ರಯತ್ನ ಮಾಡುವೆ; ಎಂಬಿಪಿ

Will try my best to save Nandi Cooperative Sugar Factory: MBP

ಲೋಕದರ್ಶನ ವರದಿ 

ನಂದಿ ಸಹಕಾರಿ ಸಕ್ಕರೆ ಕಾರ್ಖಾನೆ ಉಳಿಸಲು ಶಕ್ತಿಮೀರಿ ಪ್ರಯತ್ನ ಮಾಡುವೆ; ಎಂಬಿಪಿ 

ವಿಜಯಪುರ 21: ನಂದಿ ಸಹಕಾರಿ ಸಕ್ಕರೆ ಕಾರ್ಖಾನೆ ಉಳಿಸಲು ಶಕ್ತಿಮೀರಿ ಪ್ರಯತ್ನ ಮಾಡುತ್ತಿದ್ದು, ಒಂದು ವಾರದಲ್ಲಿ ಮುಖ್ಯಮಂತ್ರಿಗಳ ಭೇಟಿಗೆ ದಿನಾಂಕ ನಿಗದಿ ಪಡಿಸಲಾಗುವುದು ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕೆ, ಮೂಲಸೌಲಭ್ಯ ಅಭಿವೃದ್ಧಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಂ. ಬಿ. ಪಾಟೀಲ ಹೇಳಿದ್ದಾರೆ.  

ಸೋಮವಾರ ನಗರದಲ್ಲಿರುವ ಸಚಿವರ ಗೃಹ ಕಚೇರಿಯಲ್ಲಿ ಕಾರ್ಖಾನೆ ಹಿತರಕ್ಷಣೆ ಕುರಿತು ರೈತರೊಂದಿಗೆ ನಡೆದ ಸಭೆಯಲ್ಲಿ ಅವರು ಮಾತನಾಡಿದರು.ಸಕ್ಕರೆ ಕಾರ್ಖಾನೆ ಉಳಿವಿಗೆ ಎನ್‌.ಸಿ.ಡಿ.ಸಿ ಯೋಜನೆಯಡಿ ಸಾಲ ಒದಗಿಸುವಂತೆ ನಾನು ಈಗಾಗಲೇ ಮುಖ್ಯಮಂತ್ರಿಗಳಿಗೆ ಮನವಿ ಮಾಡಿದ್ದು, ಹಣಕಾಸು ಇಲಾಖೆ ಅಧಿಕಾರಿಗಳೊಂದಿಗೆ ಸತತ ಸಂಪರ್ಕದಲ್ಲಿದ್ದೇನೆ. ಆದ್ಯತೆಯ ಆಧಾರದ ಮೇಲೆ ಕಾರ್ಖಾನೆಯ ಮನವಿಯನ್ನು ಪರಿಗಣಿಸಿ ನೆರವು ನೀಡುವಂತೆ ಕೋರಿದ್ದೇನೆ.  ಇನ್ನು ಮುಂದೆ ಸಚಿವರಾದ ಎಚ್‌. ಕೆ. ಪಾಟೀಲ, ಶಿವಾನಂದ ಪಾಟೀಲ, ಶಾಸಕ ಜೆ. ಟಿ. ಪಾಟೀಲ ಮತ್ತು ನಾನಾ ಮುಖಂಡರೊಂದಿಗೆ ಸಿಎಂ ಬೇಟಿ ಮಾಡಿ ನೆರವಿಗೆ ವಿನಂತಿಸುತ್ತೇವೆ ಎಂದು ಅವರು ತಿಳಿಸಿದರು.   

ಇಂದು ಕೂಡ ನಾನು ಸಿಎಂ ಕಚೇರಿಗೆ ಕರೆ ಮಾಡಿ ಭೇಟಿಗೆ ದಿನಾಂಕ ನಿಗದಿ ಪಡಿಸಲು ಕೇಳಿದ್ದೇನೆ.  ಒಂದು ವಾರದಲ್ಲಿ ದಿನಾಂಕ ನಿಗದಿಯಾಗಲಿದ್ದು, ಈ ಸಭೆಗೆ ಸಂಬಂಧಿಸಿದ ಎಲ್ಲ ಮುಖಂಡರು ಬರುಬೇಕು. ವಿಜಯಪುರ ಮತ್ತು ಕಾರ್ಖಾನೆಗೆ ಸಂಬಂಧಿಸಿದ ಬಾಗಲಕೋಟೆ ಜಿಲ್ಲೆಯ ಜನಪ್ರತಿನಿದಿಗಳನ್ನೂ ಸಭೆಗೆ ಆಹ್ವಾನಿಸಲಾಗುವುದು ಎಂದು ಸಚಿವರು ತಿಳಿಸಿದರು.ಒಂದು ಕಾಲದಲ್ಲಿ ದೇಶದಲ್ಲಿಯೇ ಸಹಕಾರಿ ಸಕ್ಕರೆ ಕಾರ್ಖಾನೆಗಳಲ್ಲಿ ಮೊದಲ ಸ್ಥಾನದಲ್ಲಿದ್ದ ನಂದಿ ಸಹಕಾರಿ ಸಕ್ಕರೆ ಕಾರ್ಖಾನೆ ಅನೇಕ ಪ್ರಶಸ್ತಿ ಮತ್ತು ಪ್ರಶಂಸೆಗಳನ್ನು ಪಡೆದಿತ್ತು. ಆದರೆ, ವಿಸ್ತರಣೆ ಯೋಜನೆ ಕೈಗೊಂಡ ಹಿನ್ನೆಲೆಯಲ್ಲಿ ಸಂಕಷ್ಟದಲ್ಲಿದೆ.  ನಾನು ಈ ಹಿಂದೆ ನೀಡಿದ ಭರವಸೆಯಂತೆ ಷೇರುಗಳನ್ನು ಪಡೆಯುತ್ತೇನೆ. ಅಲ್ಲದೇ, ಕಾರ್ಖಾನೆಯನ್ನು ಗತವೈಭವಕ್ಕೆ ತರಲು ಶಕ್ತಿ ಮೀರಿ ಪ್ರಯತ್ನಿಸುತ್ತೇನೆ ಎಂದು ಸಚಿವ ಎಂ. ಬಿ. ಪಾಟೀಲ ತಿಳಿಸಿದರು.ಈ ಸಂದರ್ಭದಲ್ಲಿ ವಿಧಾನ ಪರಿಷತ ಶಾಸಕ ಸುನೀಲಗೌಡ ಪಾಟೀಲ, ಕಾರ್ಖಾನೆ ಅಧ್ಯಕ್ಷ ಆನಂದಕುಮಾರ ದೇಸಾಯಿ, ನಿರ್ದೇಶಕರಾದ ಶಶಿಕಾಂತಗೌಡ ಪಾಟೀಲ, ಮುಖಂಡರಾದ ಶಿವನಗೌಡ ಪಾಟೀಲ ಯಡಹಳ್ಳಿ, ಬಸವರಾಜ ದೇಸಾಯಿ, ಬಿ. ಡಿ. ಪಾಟೀಲ, ಆರ್‌. ಪಿ. ಕೊಡಬಾಗಿ, ಟಿ. ಆರ್‌. ಪಚ್ಚಣ್ಣವರ, ಜೆ. ಡಿ. ದೇಸಾಯಿ, ಎಲ್‌. ಎಸ್‌. ನಿಡೋಣಿ, ಆರಿ​‍್ಪ.ರಾಘಾ, ಲಕ್ಷ್ಮಣ ಚಿಕದಾನಿ, ಉಮೇಶ ಮಲ್ಲಣ್ಣವರ, ಎಚ್‌. ಬಿ. ಹರನಟ್ಟಿ, ಸುರೇಶ ದೇಸಾಯಿ, ಬಿ. ಬಿ. ಪಾಟೀಲ, ಮಲ್ಲು ದಳವಾಯಿ, ರಮೇಶ ಬಡ್ರಿ, ಅಪ್ಪುಗೌಡ ಪಾಟೀಲ, ಡಾ. ಕೆ. ಎಚ್‌. ಮುಂಬಾರಡ್ಡಿ ಮುಂತಾದವರು ಉಪಸ್ಥಿತರಿದ್ದರು.