ಆಡಳಿತಾತ್ಮಕ ದೊಡ್ಡಜಿಲ್ಲೆ ಬೆಳಗಾವಿ ವಿಭಜಿಸುವ ಮನವಿಗೆ ಬಜೆಟ್‌ನಲ್ಲಿ ಸ್ಪಂದನೆ ದೊರೆಯುತ್ತದೆಯೇ?

Will there be a response in the budget to the request to divide the administrative district of Belga

ಸಂತೋಷ್ ಕುಮಾರ್ ಕಾಮತ್  

ಮಾಂಜರಿ 07: ರಾಜ್ಯದ ಅತಿ ದೊಡ್ಡ ಜಿಲ್ಲೆ ಬೆಳಗಾವಿಯನ್ನು ಆಡಳಿತಾತ್ಮಕ ದೊಡ್ಡಜಿಲ್ಲೆ ಅನುಕೂಲಕ್ಕಾಗಿ ವಿಭಜಿಸುವಂತೆ ಮೂರು ದಶಕದಿಂದ ಹೋರಾಟಗಳು ನಡೆಯುತ್ತಲೇ ಇದ್ದು, ಚಿಕ್ಕೋಡಿ, ಬೈಲಹೊಂಗಲ, ಗೋಕಾಕ ಜಿಲ್ಲೆ ರಚನೆ ಬೇಡಿಕೆಗೆ ರಾಜ್ಯ ಸರಕಾರ ಈ ಬಾರಿಯ ಬಜೆಟ್‌ನಲ್ಲಿ ಸ್ಪಂದನೆ ನೀಡುತ್ತದೆಯೇ ಎಂಬ ನೀರೀಕ್ಷೆ ಮೂಡಿದೆ. 

14 ತಾಲೂಕು, 506 ಗ್ರಾಮ ಪಂಚಾಯಿತಿ ಸೇರಿದಂತೆ 54 ಲಕ್ಷ ಜನಸಂಖ್ಯೆ, 300 ಕಿಲೋ ಮೀಟರ್ ಭೌಗೋಳಿಕ ವಿಸ್ತಾರವನ್ನು ಬೆಳಗಾವಿ ಹೊಂದಿದೆ. ಸಾರ್ವಜನಿಕರ ಹಿತದೃಷ್ಟಿಯಿಂದ ಮತ್ತು ಅಧಿಕಾರ ವಿಕೇಂದ್ರೀಕರಣ ದೃಷ್ಟಿಯಿಂದ ಜಿಲ್ಲೆ ವಿಭಜಿಸಿ ಸಮಗ್ರ ಅಭಿವೃದ್ಧಿಗೆ ಅನುವು ಮಾಡಿಕೊಡಬೇಕು ಎನ್ನುವುದು ಜನರ ಒತ್ತಾಸೆ. 

ಚಿಕ್ಕೋಡಿ, ರಾಯಬಾಗ, ಅಥಣಿ, ರಾಮದುರ್ಗ, ಕುಡಚಿ, ಕಾಗವಾಡ, ಗೋಕಾಕ ತಾಲೂಕುಗಳ ಜನರು ಜಿಲ್ಲಾ ಕೇಂದ್ರ ಬೆಳಗಾವಿಗೆ ಬರಲು 150-200ಕ್ಕೂ ಅಧಿ ಕ ಕಿಮೀ ಕ್ರಮಿಸಬೇಕಾದ ಅನಿವಾರ್ಯತೆ ಇದೆ. ಈ ಹಿನ್ನೆಲೆಯಲ್ಲಿ ಚಿಕ್ಕೋಡಿ, ಬೈಲಹೊಂಗಲ ಹಾಗೂ ಗೋಕಾಕ ಭಾಗದ ಜನ ಜಿಲ್ಲಾ ವಿಭಜನೆಗಾಗಿ ಧ್ವನಿ ಎತ್ತುತ್ತಲೇ ಇದ್ದಾರೆ. ಆದರೆ, ಜನಪ್ರತಿನಿಧಿಗಳ ಇಚ್ಛಾಶಕ್ತಿ ಕೊರತೆಯಿಂದ ಇಂದಿಗೂ ಸಾಕಾರವಾಗಿಲ್ಲ. ಸಚಿವರಾದ ಸತೀಶ ಜಾರಕಿಹೊಳಿ ಹಾಗೂ ಲಕ್ಷ್ಮೀ ಹೆಬ್ಬಾಳಕರ್, ಪ್ರಕಾಶ ಹುಕ್ಕೇರಿ, ಲಕ್ಷ್ಮಣ ಸವದಿ, ಬಾಲಚಂದ್ರ ಜಾರಕಿಹೊಳಿ, ಅಣ್ಣಾಸಾಹೇಬ ಜೊಲ್ಲೆ ಸೇರಿದಂತೆ ಜಿಲ್ಲೆಯ ನಾಯಕರು ಜಿಲ್ಲಾ ವಿಭಜನೆಯಾದರೆ ಅಭಿವೃದ್ಧಿಗೆ ಆಸರೆಯಾಗುತ್ತದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಅಲ್ಲದೇ ಈ ಬಗ್ಗೆ ಸಿಎಂ ಹಾಗೂ ಡಿಸಿಎಂ ಅವರೊಂದಿಗೆ ಚರ್ಚಿಸಲಾಗುವುದು ಎಂದಿದ್ದು ಜನರ ನೀರೀಕ್ಷೆಗೆ ರೆಕ್ಕೆ ಬಂದಂತಾಗಿದೆ. 

ಒಮ್ಮತಕ್ಕೆ ಬರಬೇಕಿದೆ ನಾಯಕರು: ಆಡಳಿತಾತ್ಮಕ  

ದೃಷ್ಟಿಯಿಂದ ಬೆಳಗಾವಿ, ಬೈಲಹೊಂಗಲ ಹಾಗೂ ಚಿಕ್ಕೋಡಿ- ಈ ಮೂರು ಉಪ ವಿಭಾಗ ರಚಿಸಲಾಗಿದೆ. ಇವುಗಳನ್ನೇ ಜಿಲ್ಲೆಯನ್ನಾಗಿ ಘೋಷಿಸಬೇಕು ಎಂಬ 

ವಾಸುದೇವ ರಾವ್, ಹುಂಡೇಕರ್ ಮತ್ತು ಪಿ.ಸಿ.ಗದ್ದಿಗೌಡರ್ ಸಮಿತಿಗಳು 1997ರಲ್ಲೇ ಚಿಕ್ಕೋಡಿ ಹೊಸ ಜಿಲ್ಲೆಶಿಫಾರಸುಘೋಷಿಸಲು ಶಿಫಾರಸು ಮಾಡಿದ್ದವು. 

ಆದರೆ, ಕನ್ನಡ ಪರ ಸಂಘಟನೆಗಳಿಂದ ಇದಕ್ಕೆ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ಅಂದಿನ ಮುಖ್ಯಮಂತ್ರಿ ಜೆ.ಎಚ್‌.ಪಟೇಲ್ ಅವರು ಚಿಕ್ಕೋಡಿ ನೂತನ ಜಿಲ್ಲೆ ಘೋಷಿಸುವ ನಿರ್ಧಾರದಿಂದ ಹಿಂದೆ ಸರಿದಿದ್ದರು. ಬೆಳಗಾವಿ ಜಿಲ್ಲೆ ವಿಭಜನೆಯಾದರೆ ಮರಾಠಿ ಭಾಷಿಕರ ಪ್ರಾಬಲ್ಯ ಹೆಚ್ಚಾಗುತ್ತದೆ ಎಂದು ಜಿಲ್ಲಾ ವಿಭಜನೆಗೆ ಅಂದು ಕನ್ನಡ ಪರ ಸಂಘಟನೆಗಳು ವಿರೋಧ ವ್ಯಕ್ತಪಡಿಸಿದ್ದವು. ಆದರೆ, ಈಗ ಪರಿಸ್ಥಿತಿ ಬದಲಾಗಿದ್ದು, ಜಿಲ್ಲಾ ವಿಭಜನೆ ಮಾಡುವುದು ಸೂಕ್ತ ಎಂಬ ಅಭಿಪ್ರಾಯ ಕೇಳಿ ಬರುತ್ತಿದೆ. ಈ ಮೊದಲು ಚಿಕ್ಕೋಡಿ ಮತ್ತು ಗೋಕಾಕ ಎರಡನ್ನೂ ಜಿಲ್ಲೆ ಮಾಡಬೇಕು ಎಂಬ ಕೂಗು ಜೋರಾಗಿತ್ತು. ಆದರೆ, ಈಗ ಬೈಲಹೊಂಗಲ ಜಿಲ್ಲೆಯ ಬೇಡಿಕೆ ಬಲವಾಗಿದೆ. ಹೀಗಾಗಿ ಬೆಳಗಾವಿ ಜಿಲ್ಲೆ ವಿಭಜಿಸಿ ಮೂರು ಹೊಸ ಜಿಲ್ಲೆಗಳನ್ನು ಮಾಡುವಂತೆ ಸರಕಾರಕ್ಕೆ ಪ್ರಸ್ತಾವ ಸಲ್ಲಿಸಲಾಗಿದೆ ಎಂದು ಮೂಲಗಳು ತಿಳಿಸಿವೆ. 

ವಾದ ಒಂದೆಡೆಯಾದರೆ, ಮತ್ತೊಂದೆಡೆ ಬೈಲಹೊಂಗಲ ಬದಲಾಗಿ ಗೋಕಾಕ ಜಿಲ್ಲೆಯನ್ನಾಗಿಸಬೇಕು ಎಂಬ ಹೋರಾಟವೂ ನಡೆದಿದೆ. ನೂತನ ಜಿಲ್ಲಾ ಕೇಂದ್ರ ಯಾವುದು ಆಗಬೇಕು ಎಂಬ ವಿಚಾರದಲ್ಲಿ ಜಿಲ್ಲಾ ನಾಯಕರು ಒಮ್ಮತಕ್ಕೆ ಬರಬೇಕಿದೆ. ಅಂದಾಗ ಮಾತ್ರ ನೂತನ ಜಿಲ್ಲೆ ರಚನೆ ಸಂಗತಿ ಸಾಕಾರವಾಗಲಿದೆ ಎಂಬುದು ಹೋರಾಟಗಾರರ ಅಭಿಪ್ರಾಯ. 

 ಹಿಂದೆ ಚಿಕ್ಕೋಡಿಯಲ್ಲಿ ನಡೆದ ಸಮಾರಂಭವೊಂದರಲ್ಲಿ ಮಾತನಾಡಿದ್ದ ರಾಜ್ಯದ ಮುಖ್ಯಮಂತ್ರಿಗಳಾದ  ಸಿದ್ದರಾಮಯ್ಯ, ''ಬೆಳಗಾವಿ ಜಿಲ್ಲೆ ವಿಭಜಿಸಿ ಚಿಕ್ಕೋಡಿ, ಗೋಕಾಕ ಜಿಲ್ಲೆ ಘೋಷಣೆ ಮಾಡಲು ಸಿದ್ದ. ಜಿಲ್ಲಾ ವ್ಯಾಪ್ತಿಯ ಎಲ್ಲಜನಪ್ರತಿನಿಧಿಗಳು ಒಮ್ಮತಕ್ಕೆ ಬಂದರೆ ಹೊಸ ಚಿಕ್ಕೋಡಿ ಜಿಲ್ಲೆ ಘೋಷಣೆ ಮಾಡಲಾಗುವುದು ಎಂದಿದ್ದರು  

ಬೆಳಗಾವಿಯಲ್ಲಿ ಮರಾಠಿಗರ ಪ್ರಾಬಲ್ಯ ಹೆಚ್ಚಾಗದಂತೆ ಜಿಲ್ಲೆ ವಿಭಜನೆ ಮಾಡಬೇಕು. 

ಪ್ರಸ್ತುತ ಉಪವಿಭಾಗ ಕೇಂದ್ರಗಳನ್ನಾಧರಿಸಿ ಜಿಲ್ಲೆ ವಿಭಜಿಸಿದರೆ ಜನಪರವಾಗಿ ಕೆಲಸ ಮಾಡಲು ಆಡಳಿತ ಯಂತ್ರಕ್ಕೆ ಅನುಕೂಲ. ಅಭಿವೃದ್ಧಿ ಹಾಗೂ ಮೂಲ ಸೌಲಭ್ಯಗಳ ದೃಷ್ಟಿಯಿಂದಲೂ ಉಪವಿಭಾಗ ಕೇಂದ್ರ ಗಳನ್ನೇ ಜಿಲ್ಲಾ ಕೇಂದ್ರವನ್ನಾಗಿ ಮಾಡುವುದು ಸೂಕ್ತ. 

 ಇಸ್ಮಾಯಿಲ್ ಪಾಪಾಲಾಲ್ ತಂಬಾಟ್   ನಸಲಾಪುರ  

ಜೆ.ಎಚ್‌.ಪಟೇಲ್ ಸಿಎಂ ಆಗಿದ್ದಾಗ ಗೋಕಾಕ ಮತ್ತು ಚಿಕ್ಕೋಡಿ ಜಿಲ್ಲೆ ಘೋಷಿಸಿ ಗೆಜೆಟ್ ಅಧಿಸೂಚನೆ ಹೊರಡಿಸಿದ್ದರು. ಆದರೆ, ಬೈಲಹೊಂಗಲವನ್ನೇ ಜಿಲ್ಲಾ ಕೇಂದ್ರವಾಗಿಸಬೇಕೆಂದು ಅಲ್ಲಿನ ಜನ ಹಾಗೂ ಬೆಳಗಾವಿಯಲ್ಲಿ ಕನ್ನಡಪರ ಸಂಘಟನೆಗಳು ಪ್ರತಿಭಟನೆ ನಡೆಸಿದ್ದವು. ಹೀಗಾಗಿ ಅಂದು ಜಿಲ್ಲಾ ರಚನೆ ಆದೇಶ ರದ್ದು ಮಾಡಲಾಗಿತ್ತು. ಈಗಲೂ ಗೋಕಾಕ ಜಿಲ್ಲೆ ರಚನೆ ಸೂಕ್ತ. 

ಅಬೂಬಕರ್ ಜಮಾದಾರ್ ಗೋಕಾಕ್ ನಿವಾಸಿ  

ಚಿಕ್ಕೋಡಿ ಜಿಲ್ಲೆ ಮಾಡುವುದರಿಂದ ಸಾಮಾನ್ಯ ಜನರಿಗೆ ಅನುಕೂಲವಾಗುತ್ತದೆ. ಈ ಭಾಗದ ಎಲ್ಲ ಜನಪ್ರತಿನಿಧಿಗಳು ಎಚ್ಚೆತ್ತುಕೊಂಡು ಒಗ್ಗಟ್ಟಿನಿಂದ ಮುಖ್ಯಮಂತ್ರಿಗಳ ಮೇಲೆ ಒತ್ತಡ ತಂದು ಚಿಕ್ಕೋಡಿ ಜಿಲ್ಲೆ ಘೋಷಣೆಗೆ ಮುಂದಾಗಬೇಕು. 

ಸಂಜು ಬಡಿಗೇರ , ಅಧ್ಯಕ್ಷ, ಚಿಕ್ಕೋಡಿ ಜಿಲ್ಲಾ ಹೋರಾಟ