ಬೆಳಗಾವಿ, ಡಿ 8: ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರಿಗೆ ಆರ್ಥಿಕ ನಿರ್ವಹಣೆಯ ಜ್ಞಾನವಿಲ್ಲ. ಮುಖ್ಯಮಂತ್ರಿ ಕುರ್ಚಿ ಮೇಲೆ ಕುಳಿತು ಅಧಿಕಾರ ಉಳಿಸಿಕೊಳ್ಳಲು ಭಜನೆ ಮಾಡುವ ಬದಲು, ಕೇಂದ್ರ ಸರ್ಕಾರದ ಬಳಿ ಗಟ್ಟಿ ಮಾತನಾಡಿದರೆ ರಾಜ್ಯಕ್ಕೆ ಬರ ಬೇಕಿರುವ ಜಿಎಸ್ಟಿ ಸಂಗ್ರಹಣೆಯ ಪಾಲು 5,600 ಕೋಟಿಹಣ ವೂ ಬರುತ್ತದೆ, ಸರ್ಕಾರಿ ನೌಕರರಿಗೆ ಸಂಬಳವೂ ಸಿಗುತ್ತದೆ, ನೆರೆ ಪರಿಹಾರದ ಹಣವೂ ಬರುತ್ತದೆ ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಭಾನುವಾರ ಹೇಳಿದ್ದಾರೆ. ಸುದ್ದಿಗಾರೊಂದಿಗೆ ಮಾತನಾಡುತ್ತಿದ್ದ ಅವರು, ಕೇಂದ್ರದಿಂದ ಬರಬೇಕಿದ್ದ ಜಿಎಸ್ಟಿ ಸಂಗ್ರಹಣೆಯ ರಾಜ್ಯದ ಪಾಲು ರೂ.5,600 ಕೋಟಿ ಹಣ ಇನ್ನೂ ಬಂದಿಲ್ಲ ಯಡಿಯೂರಪ್ಪ ಅಧಿಕಾರ ಉಳಿಸಿಕೊಳ್ಳಲು ಭಜನೆ ಮಾಡುವ ಬದಲು, ಕೇಂದ್ರ ಸರ್ಕಾರ ಬಳಿ ತೆರಳಿ ಗಟ್ಟಿಯಾಗಿ ಮಾತನಾಡಿದರೆ, ರಾಜ್ಯಕ್ಕೆ ಹಣವೂ ಬರುತ್ತದೆ ಸರ್ಕಾರಿ ನೌಕರರಿಗೆ ವೇತನ, ಸಂತ್ರಸ್ಥರಿಗೆ ನೆರೆ ಪರಿಹಾರದ ಹಣವೂ ಲಭಿಸಲಿದೆ ಎಂದರು. ಮಹಾರಾಷ್ಟ್ರ, ಹರಿಯಾಣದ ಚುನಾವಣಾ ಫಲಿತಾಂಶವನ್ನು ಮರೆತು ಬಿಜೆಪಿ ಮುಖಂಡರಾದ ಜಗದೀಶ್ ಶೆಟ್ಟರ್ ಮತ್ತು ಈಶ್ವರಪ್ಪ ಭ್ರಮೆಯಲ್ಲಿ ಮಾತನಾಡುತ್ತಿದ್ದಾರೆ ಎಂದು ಲೇವಡಿ ಮಾಡಿದ ಸಿದ್ದರಾಮಯ್ಯ, ಕಾಂಗ್ರೆಸ್ ಮುಕ್ತ ಭಾರತ ಎಂದಿದ್ದ ಬಿಜೆಪಿ ನಿಧಾನವಾಗಿ ಒಂದೊಂದೆ ರಾಜ್ಯದಲ್ಲಿ ಕಣ್ಮರೆಯಾಗುತ್ತಿದೆ. ದೇಶದ ಜನಕ್ಕೆ ಯಾರು ತಮ್ಮ ಹಿತ ಕಾಯುವವರು ಎಂದು ಕ್ರಮೇಣ ಅರ್ಥವಾಗುತ್ತಿದೆ ಎಂದು ಸಿದ್ದರಾಮಯ್ಯ ವಿಶ್ಲೇಷಿಸಿದ್ದಾರೆ. ಹೊಸಕೋಟೆಯನ್ನು ಮಾದರಿ ತಾಲೂಕು ಮಾಡುತ್ತೇವೆ ಎಂದು ಹೇಳುವ ಮುಖ್ಯಮಂತ್ರಿ ಯಡಿಯೂರಪ್ಪ ಪ್ರವಾಹದಲ್ಲಿ ಆಸ್ತಿಪಾಸ್ತಿ ಕಳೆದುಕೊಂಡು ಬೀದಿಯಲ್ಲಿ ಬದುಕು ಸಾಗಿಸುತ್ತಿರುವ ಮುಂಬೈ ಕರ್ನಾಟಕ ಭಾಗದ ಜನರು ಮರೆತುಹೋಗಿದ್ದಾರೆ. ಅವರ ಬದುಕು ಸರಿ ಮಾಡೋದು ಯಾವಾಗ? ಹುಸಿ ಭರವಸೆ, ಸುಳ್ಳು ಜಾಹಿರಾತು ಜನರ ಹೊಟ್ಟೆ ತುಂಬಿಸುತ್ತಾ ? ಎಂದು ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ.