ಅಯ್ಯೋ ನನಗೆ ಮಾತ್ರ ಮೇಲಿಂದ ಮೇಲೆ ಆರೋಗ್ಯ ಕೆಡುತ್ತಲೇ ಇರುತ್ತದೆ. ಮೊನ್ನೆ ಮೊನ್ನೆ ಜ್ವರ ನೆಗಡಿಯಾಗಿ ಬಳಲಿದ್ದೆ. ಇವತ್ತು ಕಾಲು ಗಂಟು ನೋವು. ತಿಂಗಳ ಹಿಂದೆ ಸೊಂಟ ಹಿಡಿದುಕೊಂಡು ಒಂದು ವಾರ ಮಲಗಿಯೇ ಬಿಟ್ಟೆ. ಉಳಿದವರೆಲ್ಲ ಎಷ್ಟು ಅರಾಮಾಗಿ ಇದ್ದಾರೆ. ಬೇಕಾದಾಗ ಎಲ್ಲೆಂದರಲ್ಲಿ ತಿರುಗಾಡಿಕೊಂಡು ಹೊಸ ಬಟ್ಟೆ ತೊಟ್ಟು ಒಂದು ಸೆಲ್ಪಿ ಪೋಟೋ ತೆಗೆದು ಫೇಸ್ಬುಕ್‌ಗೆ ಹಾಕ್ತಾರೆ. ಅಲ್ಲದೇ ಕಸೂತಿಯಂತೆ, ನೌಕರಿ ಮಾಡ್ತಾರಂತೆ, ರುಚಿಯಾದ ಅಡುಗೆ. ಎಲ್ಲರ ಜೀವನ ಮಾತ್ರ ಸಿಕ್ಕಾಪಟ್ಟೆ ಸುಂದರ. ನನ್ನದು ಮಾತ್ರ ಅನಾರೋಗ್ಯಗಳ ಆಗರ. ಮನಸ್ಸಿಗೆ ಖುಷಿಯೇ ಇಲ್ಲ. ಸಂತೋಷದಿಂದ ಇರೋಣ ಅನ್ನುವಷ್ಟರಲ್ಲಿ ನನಗೆ ಖಾಯಿಲೆ, ಇಲ್ಲವೇ ಮಕ್ಕಳ ಪರೀಕ್ಷೆ, ಯಜಮಾನರ ಕೆಲಸದ ಒತ್ತಡದ ಹೊರೆ ನನ್ನ ಮೇಲೆ. ಇದು ನನ್ನ ಹಣೆ ಬರಹವೇ ಇರ್ಬಹುದು ಎಂದು ಅಲವತ್ತುಕೊಳ್ಳುವ ಅದೆಷ್ಟು ಮಹಿಳೆಯರನ್ನು ಕಾಣುತ್ತೇವೆ. ಬಹುಶಹ ಗಂಡಸರು ಹೊರತೆನಲ್ಲ. ಪ್ರಮಾಣ ಕಡಿಮೆಯೇನೋ. ಇದು ಒಬ್ಬಿಬ್ಬರ ಸಮಮಸ್ಯೆ ಅಲ್ಲ. ಒಂದು ಸಬೂಬು ಹೇಳಬೇಕು ಎಂದುಕೊಂಡಿರುವ ಪ್ರತಿಯೊಬ್ಬರ ಸಮಸ್ಯೆ. ತನ್ನಿಂದ ಏನೂ ಆಗಿಲ್ಲ ಎಂದು ಹೇಳುವಾಗ ಅದಕ್ಕೊಂದು ಕಾರಣ ಬೇಕು. ಆ ಕಾರಣಕ್ಕೆ ಉಳಿದವರಿಗೆ ಸುಖ ತನಗೆ ಮಾತ್ರ ಕಷ್ಟ ಹಾಗಾಗಿ ನಾನಂದುಕೊಂಡಿದ್ದು, ತನ್ನದೇ ಪ್ರತ್ಯೇಕವಾದ ಆಟಿಡ್ಯೂಡ್ ಬೆಳೆಸಿಕೊಳ್ಳಲು ಅವಕಾಶ ಇಲ್ಲ ಎನ್ನುವ ಸಬೂಬು ಕೊಡುವ ರೀತಿ ಇದು ಅಷ್ಟೆ.
ಡಿ.ವಿ.ಜಿಯವರ ಕಗ್ಗವೊಂದು ಹೀಗಿದೆ. ‘ಎತ್ತಲೋ ಕಾಡು ಮಬ್ಬಿನಬಳ್ಳಿ ಮೊಗ್ಗಿರಲಿ ಚಿತ್ರರಚನೆಗದೇಕೆ ತೊಡಗುವಳ್ ಪ್ರಕೃತಿ? ಕೃತ್ಯಕ್ಕೆ ತಾಂ ತರುವ ಶಕ್ತಿಗುಣಪೂರ್ಣತೆಯೆ ಸಾರ್ಥಕವೋ ಜೀವಿತವದಕೆ/’ ಪ್ರಕೃತಿಯಲ್ಲಿ ಅರಳುವ ಹೂವು ಯಾರನ್ನು ಅವಲಂಬಿಸುವುದಿಲ್ಲ, ಯಾರಿಗಾಗಿಯೂ ಕಾಯುವುದಿಲ್ಲ, ತನಗೆ ಕಷ್ಟವೆಂದು ಮೊಗ್ಗು ಅರಳದೆ ಇರುವುದಿಲ್ಲ. ಮೊಗ್ಗಾಗಿ ನಿಂತಾಗ ಗಿಡದ ಬುಡಕ್ಕೆ ನೀರಿಲ್ಲದೆ ಗಿಡ ಬಾಡಿದ್ದರೂ ಸಹ ಹೂವು ತನ್ನರಳುವಿಕೆಯನ್ನು ಮರೆಯುವುದಿಲ್ಲ. ತನ್ನೆಲ್ಲ ಶಕ್ತಿ ಉಪಯೋಗಿಸಿ ಹೂವು ತನ್ನನ್ನು ಅರಳಿಸಿಕೊಂಡು ತನ್ನ ಕರ್ತವ್ಯವನ್ನು ಮಾಡುತ್ತದೆ. ಆದರೆ ಮನುಷ್ಯ? ಜನ ತನ್ನನ್ನು ನೋಡಬೇಕು, ಮೆಚ್ಚುಗೆ ಸೂಸಬೇಕು. ಎತ್ತರ ಸ್ಥಾನದಲ್ಲಿ ನಿಲ್ಲಬೇಕು ಎಂದು ಹಪಾಹಪಿ. ಹಾಗೇ ನಿಲ್ಲಲಾಗದಿದ್ದರೆ ಅದಕ್ಕೊಂದು ಕಾರಣ. ಎಲ್ಲರಿಗೂ ಅವಕಾಶವಿದೆ, ಆರೋಗ್ಯವಿದೆ ನನಗೆ ಮಾತ್ರ ಅವೆಲ್ಲವೂ ಇಲ್ಲ ಹಾಗಾಗಿ ಹೀಗೆ ಹಿಂದುಳಿದಿದ್ದೇನೆ.
ಒಬ್ಬ ಪುಟ್ಟ ವಿದ್ಯಾರ್ಥಿ. ಅಂಗನವಾಡಿಗೆ ಮೊದಲು ಹೋದವನು. ಅಲ್ಲಿ ನಲಿಕಲಿ ಎನ್ನುತ್ತ ತೊದಲು ನುಡಿಯಲ್ಲಿ ಮಾತೃಭಾಷೆಯಲ್ಲಿ ಕಲಿಯಲು ಆರಂಭಿಸಿದವನು. ಮನೆಯಲ್ಲಿಯೂ ಅದೇ ಭಾಷೆ. ಹಾಗಾಗಿ ಅಲ್ಲಿ ಕಲಿಕೆ ಎನ್ನುವದು ಅವನಿಗೆ ಆಟವಾಗಿ ಹೋಗಿತ್ತು. ಆ ಊರಿನ ಸಮೀಪ ಆಂಗ್ಲಮಾಧ್ಯಮ ಶಾಲೆಯೊಂದು ಬಂದಿತು. ಊರಿನ ಮಕ್ಕಳು ಆ ಶಾಲೆಗೆ ಹೋಗಲಾರಂಭಿಸಿದರು. ಆಗ ಹೆತ್ತವರು ತಮ್ಮ ಮಗನು ಚೆನ್ನಾಗಿ ಕಲಿಯಬೇಕು, ದೊಡ್ಡ ಆಫೀಸರ್ ಆಗಬೇಕು ಎನ್ನುವ ಎಲ್ಲ ಹೆತ್ತವರಂತೆ ಕನಸಿಟ್ಟು ಆಂಗ್ಲ ಮಾಧ್ಯಮ ಶಾಲೆಗೆ ಕಳುಹಿಸಿದರು. ಅಲ್ಲಿಗೆ ಹೋದ ಮಗು ಆರು ತಿಂಗಳ ಚುರುಕಾಗಿಯೇ ಇತ್ತು. ನಂತರದಲ್ಲಿ ತನಗೆ ತಿಳಿಯುತ್ತಿಲ್ಲ ಎಂದು ನಿಧಾನಕ್ಕೆ ಮಂಕಾಯಿತು. ಹಾಗಂತ ಸಪ್ಪೆ ಮಾಡಿಕೊಂಡೆನು ಕೂರಲಿಲ್ಲ. ಆದರೆ ಪರೀಕ್ಷೆ ಅಂದಾಗ ಭಯ ಶುರುವಾಗುತಿತ್ತು. ತನಗೇನು ಬರುವುದಿಲ್ಲ. ಈ ಭಾಷೆ ಹೊಸತು ಎನ್ನುವ ಭಾವನೆ ಹುಟ್ಟಿಕೊಂಡಿತ್ತು. ಹಾಗಾಗಿ ಎರಡನೇ ತರಗತಿ ಎನ್ನುವಷ್ಟರಲ್ಲಿ ಮಗು ತಾನು ಶಾಲೆಗೆ ಹೋಗುವುದಿಲ್ಲ ಎನ್ನುವಷ್ಟು ಹಠಮಾರಿಯಾಯಿತು. ಮನೆಯಲ್ಲಿ ಇಂಗ್ಲಿಷ್ ಬಾರದ ತಂದೆತಾಯಿಗಳು. ಮಗು ಮನೆಗೆ ಬಂದು ಪ್ರಶ್ನೆ ಕೇಳಿದರೆ ಉತ್ತರಿಸಲು ಬಾರದು. ಶಾಲೆಯಲ್ಲಿ ಕಲಿಸಿದ್ದು ಮಾತ್ರ ಪಾಠ ಹೀಗಾಗಿ ಶಿಕ್ಷಣ ಕುಂಠಿತವಾಯ್ತು. ಮಗುವಿನಲ್ಲಿ ತಾನು ದಡ್ಡ ಎನ್ನುವ ಯೋಚನೆ ಹುಟ್ಟಿಕೊಂಡಿತು. ಮಗುವನ್ನು ಶಾಲೆಗೆ ಕಳಿಸುವುದೇ ಕಷ್ಟ ಎಂದಾಗ ಮತ್ತೆ ಅಲ್ಲಿಂದ ಮಾತೃಭಾಷೆಯಲ್ಲಿ ಕಲಿಸುವ ಶಾಲೆಗೆ ಹಾಕಲಾಯಿತು. ಅಲ್ಲಿಂದ ಆ ಹುಡುಗ ಕ್ಲಾಸಿಗೆ ಪಸ್ಟ್ ರಾ್ಯಂಕ್ ಬರಲಾರಂಭಿಸಿದ. ಕೊನೆಗೆ ಹತ್ತನೇ ತರಗತಿಯೂ ಜಿಲ್ಲೆಗೆ ಪಸ್ಟ್ ಬಂದ. ಮುಂದೆ ಏನು? ಈ ಪ್ರಶ್ನೆಗೆ ಹುಡುಗನೇ ತನ್ನ ಉತ್ತರ ಹುಡುಕಿಕೊಂಡ. ಆಗ ಇಂಗ್ಲಿಷ್ ಅಂದರೆ ಹೆದರಿದ್ದ ಹುಡುಗ ಈಗ ಕಾಲೇಜ್‌ನಲ್ಲಿ ಕಲಿಯಲೇ ಬೇಕಲ್ಲ. ಆದರೆ ಕಾಲ ಒಂದಷ್ಟನ್ನು ಬದಲಿಸಿತ್ತು. ಹಂತಹಂತವಾಗಿ ಕಲಿತು ಬಂದ ಹುಡುಗನಿಗೆ ಈಗ ಇಂಗ್ಲಿಷ್ ಅಂಥಹ ದೊಡ್ಡ ಸಮಸ್ಯೆ ಅನ್ನಿಸಲಿಲ್ಲ. ಇಂಗ್ಲಿಷ್ ಎನ್ನುವ ಒಂದು ವಿಷಯವನ್ನು ತನ್ನದಾಗಿಸಿಕೊಳ್ಳಲು ತನ್ನ ಸುತ್ತ ಒಂದು ವಾತಾವರಣವನ್ನು ಸೃಷ್ಟಿಸಿಕೊಂಡ. ಒಳ್ಳೆಯ ಶಿಕ್ಷರಕ ಬಳಿ ಮನೆ ಪಾಠ ಮಾಡಿಸಿಕೊಂಡ. ಹಾಗಾಗಿ ಕಾಲೇಜ್‌ನಲ್ಲಿ ತಾನು ಸೈನ್ಸ್ ವಿಭಾಗವನ್ನೇ ತೆಗೆದುಕೊಂಡ.
ಆಗೋದಿಲ್ಲ. ಬರೋದಿಲ್ಲ ಎನ್ನುವುದೆಲ್ಲ ಒಂದು ನೆಪ ಅನ್ನುತ್ತಾರೆ ಹಿರಿಯರು. ಆದರೆ ನಮಗೆ ಬೇಕಾದದ್ದನ್ನು ಹುಡುಕಿ ನಡೆಯುವ ಮನಸ್ಸು ಒಂದು ಕಡೆ ಬೇಕಾದರೆ ಕೆಲವು ಬಾರಿ ಕಾಲವೂ ಕೂಡಿ ಬರಬೇಕು. ಹಾಗಂತ ಕಾಲ ಅದಾಗಿಯೇ ಬಂದು ಬಿಡುವುದಿಲ್ಲ. ನಮ್ಮ ಪ್ರಯತ್ನ ಹನ್ನೊಂದು ಇದ್ದರೆ ನಸೀಬು ಎನ್ನುವದು ಒಂದಂಕೆಯಷ್ಟಂತೆ. ಅಂದರೆ ನಸೀಬಕ್ಕೆ ಕಾದು ಕುಳಿತವರಿಗೆ ಸಮಯದ ಅಭಾವ, ಬೇಡದ ರೋಗ, ಇಲ್ಲದ ನೆಪಗಳು ಹುಡುಕಿಕೊಂಡು ಬರುತ್ತವೆ. ಅದೇ ಪ್ರಯತ್ನವನ್ನು ಪಡುವವನಿಗೆ ಇದ್ಯಾವುದರ ಲಕ್ಷ್ಯವೇ ಇರುವುದಿಲ್ಲ.
ಕೆಲವೇ ದಿನದ ಹಿಂದೆ ಅಪರಿಚಿತರ ಮನೆಗೆ ಸ್ನೇಹಿತೆಯ ಜೊತೆ ಹೋಗಬೇಕಾಗಿ ಬಂತು. ಹತ್ತು ನಿಮಿಷ ಎಂದು ಆ ಮನೆಯ ಒಳಗೆ ಹೊಕ್ಕಿದ್ದೆವು. ಆ ಮನೆಯ ಯಜಮಾನಿ ಎರಡು ಪ್ಲಾಸ್ಟಿಕ್ ಕೂರ್ಚಿ ಇಟ್ಟು ಕೂತ್ಕೊಳಿ ಅಂದ್ಲು. ನಾವು ಕೂತಿದ್ದು ಆಯ್ತು. ಆಕೆ ಏನಾದರೂ ಕುಡಿಯೋಕೆ ತರ್ತೆನೆ ಅಂತ ಹೇಳಿ ಒಳಗೆ ಹೋದ ಮೇಲೆ ನಮ್ಮ ಕಣ್ಣು ಆ ಮನೆಯ ಸುತ್ತ ಜಾಲಾಡಿತು. ಇಡೀ ಮನೆ ದೂಳೆಂದರೆ ಧೂಳು. ಅದೆಷ್ಟು ಧೂಳು ಎಂದರೆ ಧೂಳಿನಲ್ಲಿ ಕಾರು ಚಲಿಸಿ ಬಂದ ನಂತರ ಹೆಸರು ಬರೆಯಬಹುದಲ್ಲ ಅದೇ ರೀತಿ ಮನೆಯೊಳಗೆಲ್ಲ ಧೂಳು. ಟಿವಿ, ಪ್ಯಾನ್, ಕಿಟಕಿ ಎಲ್ಲಿಯಾದರೂ ನಮ್ಮ ಮೈ ಕೈ ತಾಕಿದರೆ ಧೂಳು ಮೆತ್ತುತಿತ್ತು ಕೊನೆಯದಾಗಿ ಆಕೆ ನಮಗೆ ಕುಡಿಯಲು ಕೊಡುವಾಗ ಎದುರು ಇಟ್ಟ ಟಿಪಾಯಿಯು ಧೂಳು. ಅವರು ನಡೆದಾಡುವ, ಟಿವಿಯ, ರಿಮೋಟ್, ಕೂತಿದ್ದ ಕೂರ್ಚಿ, ಟಿಪಾಯಿಯ ಮೇಲೆ ಇಷ್ಟು ಮಾತ್ರ ಒರೆಸಿದ್ದು ಕಾಣಿಸಿತು. ಇದು ನನಗಂತು ಸಹಿಸಲಾಗಲಿಲ್ಲ. ಆದರೂ ಅಪರಿಚಿತರ ಮನೆಗೆ ಹೋಗಿ ನಾನೇನು ಕೇಳಲಿ. ಆದರೂ ನ್ನ ಸ್ನೇಹಿತೆ ಕೇಳಿಯೇ ಬಿಟ್ಟಳು. ಅದ್ಯಾಕೆ ಮನೆ ಇಷ್ಟು ಧೂಳಾಗಿದೆ. ಇಲ್ಲಿ ಬೋರ್‌ವೆಲ್ ಏನಾದ್ರು ರಾತ್ರಿ ಕೊರೆಸಿದ್ದಾರ ಹೇಗೆ? ಅವರಿಗೆ ಅವಮಾನ ಆಗಬಾರದಲ್ಲ ಎಂದು ಹಾಗೆ ಕೇಳಿದ್ದಳು. ಆಗ ಆ ಮನೆಯ ಯಜಮಾನಿ ಏನ್ ಮಾಡೋದು ನಂಗೆ ಮಗನ್ನ ನೋಡ್ಕೊಳ್ಳೊವರೆಗೆ ಸುಸ್ತಾಗುತ್ತೆ. ನಮ್ಮತ್ತೆ ಯಾವಾಗೂ ಮಗಳ ಮನೆಗೆ ಹೋಗಿ ಬಿಡ್ತಾರೆ. ಅದ್ಕೆ ನಾನು ಅಮ್ಮನ ಮನೆಲೇ ಹೆಚ್ಚಿಗೆ ಇರೋದು. ಇಲ್ಲಿ ಬಂದಾಗ ಯಾರು ಕೆಲಸ ಮಾಡ್ತಾರೆ ಅನ್ಸುತ್ತೆ. ನಂಗೇಷ್ಟು ಬೇಕೋ ಅಷ್ಟು ಕ್ಲೀನ್ ಮಾಡ್ಕೊಂಡು ಇರ್ತಿನಿ. ನಿನ್ನೆ ಅಮ್ಮನ ಮನೆಯಿಂದ ಬಂದಿದ್ದೆ. ನಾಳೆ ಬೆಳಗ್ಗೆ ಮತ್ತೆ ಹೋಗ್ತಿನಿ’ ಎಂದರು. ಅಲ್ಲಿಗೆ ಯಾರು ಮಕ್ಕಳನ್ನು ಹೆತ್ತಿಲ್ಲವೆ, ಅತ್ತೆ ಇಲ್ಲದೆ, ಮಕ್ಕಳನ್ನು ಇಟ್ಟುಕೊಂಡು ತಾನುಳಿಯುವ ಮನೆಯನ್ನು ಯಾರು ಸ್ವಚ್ಛಮಾಡದೇ ಇರುತ್ತಾರೆಯೇ, ಇದೆಲ್ಲ ಆಲಸ್ಯತನ. ಅದಕ್ಕೊಂದು ನೆಪ ಅನ್ನಿಸಿ ಹೋಗಿದ್ದು ಸುಳ್ಳಲ್ಲ.
ಸಮಾಜದಲ್ಲಿ ವಿಚಿತ್ರ ವೈಚಿತ್ರ್ಯ ಎಲ್ಲವೂ ಇದೆ. ಆದರೆ ನಮಗೆ ಬೇಕಾದದ್ದು ಯಾವುದೋ ಅದನ್ನು ನಾವೇ ಆಯ್ಕೆ ಮಾಡಿಕೊಳ್ಳುವುದು. ಇವತ್ತೊಮದು ದಿನ ಹಾಯಾಗಿ ಮಲಗಿ ಬಿಡೋಣ ಅಂದುಕೊಂಡರೆ ಆ ವ್ಯಕ್ತಿಗೆ ಅದೇ ಪರಮ ಸುಖ. ಇವತ್ತು ಮಲಗದೇ ಕೆಲಸ ಮಾಡೋಣ ಎಂದುಕೊಂಡರೆ ಅದು ಕೂಡ ಸುಖವೇ. ಆದರೆ ಆ ಆಯ್ಕೆಯನ್ನು ಮಾಡಿಕೊಳ್ಳದೆ ಇನ್ನೊಬ್ಬರ ಮೇಲೆ ಅಪವಾದನೆ ಹಾಕಿ ಅಯ್ಯೋ ತನಗೆ ಮಾತ್ರ ಸಾಧ್ಯವಿಲ್ಲ ಎಂದು ಹೇಳುವುದು ಮಾತ್ರ ದೊಡ್ಡ ಅಪರಾಧದಂತೆ ಸರಿ. ಹೂವು ಕಾಡಿರಲಿ ನಾಡಿರಲಿ ಏನಾದರಾಗಲಿ ಅರಳುವುದನ್ನು ನಿಲ್ಲಿಸುವುದಿಲ್ಲ. ಮನುಷ್ಯ ಕೂಡ ನೆಪಗಳಿಗೆ ಅವಕಾಶ ಕೊಡುವ ಬದಲು ತನ್ನ ಪಾಡಿಗೆ ಪ್ರಯತ್ನಿಸಿದರೆ ಹೂವಿನಂತ ಬದುಕು ನಮ್ಮದು ಆಗುವುದು ಅಲ್ಲವೆ.
- * * * -