ಸಿಎಂ ಪರಿಹಾರ ನಿಧಿ ಖರ್ಚು-ವೆಚ್ಚ ಬಗ್ಗೆ ಶ್ವೇತ ಪತ್ರ‌‌ ಹೊರಡಿಸಲಿ: ಕಾಂಗ್ರೆಸ್ ಆಗ್ರಹ

ಬೆಂಗಳೂರು, ಮೇ  8,ಕೊರೊನಾ ಲಾಕ್‌ಡೌನ್‌ ಸಂಕಷ್ಟ ಪರಿಹಾರಕ್ಕಾಗಿ ರಾಜ್ಯದ ಮೂಲೆಮೂಲೆಗಳಿಂದ  ವಿವಿಧ ಸಂಘಸಂಸ್ಥೆ, ನೌಕರರು ಸೇರಿದಂತೆ ವಿವಿಧ ಮೂಲಗಳಿಂದ ಮುಖ್ಯಮಂತ್ರಿಗಳ ಪರಿಹಾರ  ನಿಧಿಗೆ ಸಾಕಷ್ಟು ಹಣ ಹರಿದು ಬಂದಿದ್ದು, ಪರಿಹಾರ ನಿಧಿ ಖರ್ಚುವೆಚ್ಚದ ಬಗ್ಗೆ ಸರ್ಕಾರ  ಶ್ವೇತಪತ್ರ ಹೊರಡಿಸುವಂತೆ ಕಾಂಗ್ರೆಸ್ ಆಗ್ರಹಿಸಿದೆ.ಇಂದು ಮುಖ್ಯಮಂತ್ರಿಗಳನ್ನು  ಭೇಟಿಯಾದ ವಿಪಕ್ಷ ನಾಯಕ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ನಿಯೋಗಕ್ಕೆ ಇತರೆ ಪಕ್ಷದ  ನಾಯಕರು ಸಾಥ್ ನೀಡಿದ್ದು ಶ್ವೇತಪತ್ರಕ್ಕೆ  ಆಗ್ರಹಿಸಿವೆ.
ರಾಜ್ಯದಿಂದಲೂ ಸಹ  ಪ್ರಧಾನಿಗಳ ಕೊರೊನಾ ಪರಿಹಾರ ನಿಧಿಗೆ ಹಣ ಹರಿದು ಹೋಗಿದ್ದು, ರಾಜ್ಯದಿಂದ ಕೇಂದ್ರಕ್ಕೆ  ಹೋಗಿರುವ ನಿಧಿಯನ್ನು ರಾಜ್ಯಕ್ಕೆ ಕೊರೊನಾ ಪರಿಹಾರಕ್ಕೆ ಮರಳಿ ನೀಡುವಂತೆ  ಒತ್ತಾಯಿಸಲಾಗಿದೆ. ಅಷ್ಟೇ ಅಲ್ಲದೆ ಮುಖ್ಯಮಂತ್ರಿ ಪರಿಹಾರ ನಿಧಿ ಖಾತೆಗೆ ಇಲ್ಲಿಯವರೆಗೆ  ಬಂದ ಹಣವೆಷ್ಟು? ಯಾವ ಉದ್ದೇಶಕ್ಕೆ ಎಷ್ಟು ಹಣ ಖರ್ಚು ಮಾಡಲಾಗಿದೆ? ಉಳಿದ ಹಣ ಎಷ್ಟು? ಈ  ಬಗ್ಗೆ  ಮಾಹಿತಿಯನ್ನು ಹೊಂದಿರುವ ಬಗ್ಗೆ ಸರ್ಕಾರ ‘ಶ್ವೇತ ಪತ್ರ’ ಹೊರಡಿಸುವಂತೆ‌  ಕಾಂಗ್ರೆಸ್ ಒತ್ತಾಯಿಸಿದೆ.ಆಹಾರ ಪದಾರ್ಥಗಳ ಕಿಟ್ ವಿತರಣೆಯಲ್ಲಿ ಆಗಿರುವ  ಭ್ರಷ್ಟಾಚಾರದ ಬಗ್ಗೆ ತನಿಖೆಗೆ ಆಗ್ರಹಿಸಿರುವ ವಿಪಕ್ಷಗಳು, ಕೊರೋನಾ ರೋಗದ  ಹಿನ್ನೆಲೆಯಲ್ಲಿ ಉದ್ಭವವಾಗಿರುವ ಪರಿಸ್ಥಿತಿಯನ್ನು ಎದುರಿಸಲು ತೆಲಂಗಾಣ ಮತ್ತು ಕೇರಳ  ಸರ್ಕಾರಗಳು ನೀಡಿರುವಂತೆ ರೂ.35 ಸಾವಿರ ಕೋಟಿಗಳು ಮತ್ತು ರೂ.20 ಸಾವಿರ ಕೋಟಿಗಳ ವಿಶೇಷ  ಪ್ಯಾಕೇಜನ್ನು ಕರ್ನಾಟಕದಲ್ಲಿಯೂ ಪ್ರಕಟಿಸಲು ಒತ್ತಾಯಿಸಿವೆ.