ಚಳಿಗಾಲದ ಅಧಿವೇಶನ ಬಂತೆಂದರೆ ನೆನಪಾಗುವುದು ಪ್ರತಿಭಟನೆಗಳ ಬಿಸಿ

When the winter session comes, the heat of the protests comes to mind

ಬೆಳಗಾವಿ 06: ಬೆಳಗಾವಿಯ ಸುವರ್ಣ ವಿಧಾನ ಸೌಧದಲ್ಲಿ ಪ್ರತಿವರ್ಷ ನಡೆಯುವ ಚಳಿಗಾಲದ ವಿಶೇಷ ಅಧಿವೇಶನ ಬಂತೆಂದರೆ ಮೊದಲು ನೆನಪಾಗುವುದು ಪ್ರತಿಭಟನೆಗಳ ಬಿಸಿ. ಅಷ್ಟೊಂದು ಪ್ರಮಾಣದಲ್ಲಿ ಬೆಳಗಾವಿಯಲ್ಲಿ ಪ್ರತಿಭಟನೆ ತಾರಕಕ್ಕೇರುತ್ತದೆ.  

ಇಲ್ಲಿ ನಡೆಯುವ ಅಧಿವೇಶನದ ಸಂದರ್ಭದಲ್ಲಿ ವಿವಿಧ ಸಂಘಟನೆಗಳು ಹಮ್ಮಿಕೊಳ್ಳುವ ಪ್ರತಿಭಟನೆಗಳು ರಾಜ್ಯದ ಗಮನ ಸೆಳೆಯುತ್ತವೆ. ಈ ವರ್ಷವೂ ಡಿಸೆಂಬರ್ 9ರಿಂದ 19ರವರೆಗೆ ಚಳಿಗಾಲದ ಅಧಿವೇಶನ ನಿಗದಿಯಾಗಿದೆ. ಈ ಸಲವು ಅಧಿವೇಶನದ ಸಂದರ್ಭದಲ್ಲಿ ವಿವಿಧ ಸಂಘಟನೆಗಳು ಬೆಳಗಾವಿಗೆ ಬಂದು ಪ್ರತಿಭಟನೆ ನಡೆಸಲು ಮುಂದಾಗಿವೆ. ಈಗಾಗಲೇ 55 ಸಂಘಟನೆಗಳು ಪ್ರತಿಭಟನೆ ನಡೆಸಲು ಅನುಮತಿ ಕೋರಿ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸುವುದು ವಿಶೇಷ. 

ಬೆಳಗಾವಿ ಸುವರ್ಣ ವಿಧಾನಸೌಧದ ಹೊರ ಭಾಗದಲ್ಲಿ ಪ್ರತಿಭಟನೆ ನಡೆಸಲು ಜಿಲ್ಲಾಡಳಿತವೇ ವಿಶೇಷ ಸೌಲಭ್ಯ ಒದಗಿಸಿಕೊಡುತ್ತದೆ. ಪೆಂಡಾಲ್, ಕುಡಿಯುವ ನೀರು ಸೇರಿದಂತೆ ಅಗತ್ಯ ಭದ್ರತೆಯನ್ನು ಮಾಡಿಕೊಡುತ್ತದೆ. ಅಧಿವೇಶನದಲ್ಲಿ ಭಾಗವಹಿಸುವ ಸಂಬಂಧಿಸಿದ ಸಚಿವರು ಆಗಮಿಸಿ ಮನವಿ ಸ್ವೀಕರಿಸಿ ಬೇಡಿಕೆ ಈಡೇರಿಸುವ ಭರವಸೆ ನೀಡುವುದು ನಡೆದುಕೊಂಡು ಬರುತ್ತಿದೆ.  

ತಮ್ಮ ಬೇಡಿಕೆಯನ್ನು ಈಡೇರಿಸುವಂತೆ ಕೋರಿ ಆಗಮಿಸುವ ಪ್ರತಿಭಟನಾಕಾರರಿಗೆ ಬೆಳಗಾವಿ ಅಧಿವೇಶನ ಭರವಸೆಯ ಬೆಳಕಾಗಿ ಪರಿಣಮಿಸಿದೆ. ಈ ನಿಟ್ಟಿನಲ್ಲಿ ಪ್ರತಿ ವರ್ಷ ರಾಜ್ಯದ ವಿವಿಧ ಸಂಘಟನೆಗಳು ಬೆಳಗಾವಿಗೆ ಆಗಮಿಸಿ ಪ್ರತಿಭಟನೆ, ಧರಣಿ ನಡೆಸಿ ಸರಕಾರಕ್ಕೆ ಮನವಿ ಸಲ್ಲಿಸುವ ಪರಂಪರೆಯನ್ನು ಇಲ್ಲಿ ಅಧಿವೇಶನ ಆರಂಭವಾದಂದಿನಿಂದ ಕಾಣಬಹುದು.