ಪ್ರತಿಯೊಬ್ಬರು ಸಂವಿಧಾನ ಓದಿದಾಗ ನಮ್ಮ ಹಕ್ಕು ಮತ್ತು ಕರ್ತವ್ಯ ತಿಳಿಯಬಹುದು

ಪ್ರತಿಯೊಬ್ಬರು ಸಂವಿಧಾನ ಓದಿದಾಗ ನಮ್ಮ ಹಕ್ಕು ಮತ್ತು ಕರ್ತವ್ಯ ತಿಳಿಯಬಹುದು When everyone reads the Constitution, they can understand their rights and duties

                ಗದಗ 27  : ಪ್ರಜಾಪ್ರಭುತ್ವದ ವ್ಯವಸ್ಥೆ ಭದ್ರವಾಗಿಸಲು ಎಲ್ಲರೂ ನಮ್ಮ ದೇಶದ ಸಂವಿಧಾನ ಓದಿ ಅರ್ಥಮಾಡಿಕೊಳ್ಳಬೇಕು. ಜಗತ್ತಿನಲ್ಲೇ ನಮ್ಮ ಭಾರತ ದೇಶದ ಸಂವಿಧಾನ ಶ್ರೇಷ್ಠ ವಾಗಿದೆ ಎಂದು ವಿಧಾನ ಪರಿಷತ್ ಶಾಸಕ ಎಸ್ ವಿ ಸಂಕನೂರ ಹೇಳಿದರು.ಗದಗ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಸಮಾಜ ಕಲ್ಯಾಣ ಇಲಾಖೆ ಹಾಗೂ ವಿವಿಧ ಇಲಾಖೆಗಳ ವತಿಯಿಂದ ಗದಗ ನಗರದ ಜಿಲ್ಲಾಡಳಿತ ಭವನದ ಸಭಾಂಗಣದಲ್ಲಿ ಬುಧವಾರ ಆಯೋಜಿಸಿದ್ದ ಭಾರತ ಸಂವಿಧಾನ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.ಸಂವಿಧಾನ ಶಿಲ್ಪಿ ಡಾ. ಬಿ ಆರ್ ಅಂಬೇಡ್ಕರ್ ಅವರು ರಚಿಸಿದ ಸಂವಿಧಾನ ಭಾರತೀಯರ ಬದುಕಿನ ಅವಿಭಾಜ್ಯ ಅಂಗವಾಗಿದೆ.  

                  ಸಂವಿಧಾನದ ಆಶಯಗಳಿಗನುಗುಣವಾಗಿ ಎಲ್ಲರೂ ಬದುಕು ಕಟ್ಟಿಕೊಳ್ಳಬೇಕು. ಭಾರತೀಯ ನಾಗರೀಕರ ರಕ್ಷಣೆಯನ್ನು ಸಂವಿಧಾನ ಮಾಡುತ್ತಿದೆ ಅದರಂತೆ ನಾವು ಸಹ ಮುಂದಿನ ಪೀಳಿಗೆಗೆ ಸಂವಿಧಾನದ ಆಶಯ, ಮಹತ್ವವನ್ನು ಸಾರುವ ಮೂಲಕ ಸಂವಿಧಾನವನ್ನು ರಕ್ಷಣೆ ಮಾಡಬೇಕು ಎಂದರು.ಜಗತ್ತಿನಲ್ಲಿ ಅತೀ ಹೆಚ್ಚು ಯುವ ಜನರು ಭಾರತ ದೇಶದಲ್ಲಿದ್ದಾರೆ. ಯುವಕರು ಸಂವಿಧಾನವನ್ನು ತಿಳಿದುಕೊಂಡು ಅರ್ಥೈಸಿಕೊಳ್ಳಬೇಕು.  ಸಂವಿಧಾನವನ್ನು ಅರ್ಥೈಸಿಕೊಳ್ಳಲು ಹೃದಯ ವೈಶಾಲ್ಯತೆ ಅಗತ್ಯ. ಜಗತ್ತಿನ ಅತಿ ದೊಡ್ಡ ಸಂವಿಧಾನವನ್ನು ಭಾರತ ರತ್ನ ಡಾ. ಅಂಬೇಡ್ಕರ್ ಅವರು ಭಾರತೀಯರಿಗೆ ನೀಡಿದ್ದಾರೆ ಎಂದು ಹೇಳಿದರು.ಭಾರತ ದೇಶಕ್ಕೆ ಸಂವಿಧಾನವನ್ನು ರಚಿಸಲು ಅನೇಕರ ಶ್ರಮವಿದೆ. ಡಾ.ಬಿ.ಆರ್‌. ಅಂಬೇಡ್ಕರ್ ಸಂವಿಧಾನ ಕರಡು ರಚನಾ ಸಮಿತಿಯ ಅಧ್ಯಕ್ಷತೆ ವಹಿಸಿ ಪ್ರಪಂಚದ ಎಲ್ಲಾ ಸಂವಿಧಾನಗಳನ್ನು ಅಧ್ಯಯನ ಮಾಡಿ  ನಮ್ಮ ದೇಶದ ಆರ್ಥಿಕ ಮತ್ತು ಸಾಮಾಜಿಕ ಸ್ಥಿತಿಗೆ ಹೊಂದುವಂತೆ ಒಂದು ಸಮಗ್ರವಾದ ಸಂವಿಧಾನವನ್ನು ಸಿದ್ಧಪಡಿಸಿದ್ದಾರೆ.  

        ಎಲ್ಲರೂ ಸಂವಿಧಾನದ ಮೂಲಭೂತ ಹಕ್ಕುಗಳು ಎಂದಾಗ ಧ್ವನಿ ಎತ್ತುತ್ತಾರೆ ಆದರೆ ಮೂಲಭೂತ ಕರ್ತವ್ಯಗಳನ್ನು ಪಾಲಿಸಲು ಮುಂದೆ ಬರುವುದಿಲ್ಲ. ಮೂಲಭೂತ ಹಕ್ಕುಗಳನ್ನು ಕೇಳುವುದರ ಜೊತೆಗೆ ಮೂಲಭೂತ ಕರ್ತವ್ಯಗಳನ್ನು ನಿಭಾಯಿಸೋಣ ಎಂದು ಶಾಸಕ ಎಸ್ ವಿ ಸಂಕನೂರ ಕರೆ ನೀಡಿದರು. ಸಂವಿಧಾನ ಆಶಯಗಳನ್ನು ಎಲ್ಲರಿಗೂ ತಿಳಿಸುವ ಸದುದ್ದೇಶದಿಂದ ಪ್ರಧಾನಿ ನರೇಂದ್ರ ಮೋದಿಯವರು 2015 ರಿಂದ ಸಂವಿಧಾನ ದಿನಾಚರಣೆ ಆಚರಣೆಗೆ ಮುಂದಾಗಿದ್ದಾರೆ. ನಾವೆಲ್ಲರೂ ರಾಷ್ಟ್ರಧ್ವಜ, ಗೀತೆ ಸಂವಿಧಾನಕ್ಕೆ ಗೌರವ ನೀಡೋಣ. ಸಾರ್ವಜನಿಕ ಆಸ್ತಿ, ಸಂಪತ್ತು, ನೈಸರ್ಗಿಕ ಸಂಪನ್ಮೂಲಗಳ ರಕ್ಷಣೆ ಹೋಣೆ ನಮ್ಮದು ಎಂದರು.ಜಿಲ್ಲಾ ಮಟ್ಟದ ಗ್ಯಾರಂಟಿ ಅನುಷ್ಠಾನ ಪ್ರಾಧಿಕಾರ ಅಧ್ಯಕ್ಷ ಬಿ ಬಿ ಅಸೂಟಿ ಮಾತನಾಡಿ, ಡಾ. ಅಂಬೇಡ್ಕರ್ ಸಂವಿಧಾನ ಅರಿತರೆ ಎಲ್ಲರೂ ಸಂವಿಧಾನವನ್ನು ಗೌರವದಿಂದ ಕಾಣುತ್ತಾರೆ.

         ದೇಶದ ಸಂವಿಧಾನ ಅತ್ಯಂತ ಪ್ರಭುದ್ಧವಾಗಿದೆ. ಸಂವಿಧಾನ ಆಶಯಕ್ಕೆ ಅನುಗುಣವಾಗಿ ನಾವೇಲ್ಲರೂ ಮುನ್ನಡೆಯೋಣ ಎಂದರು.ಪ್ರಜಾಪ್ರಭುತ್ವ ದಿನಾಚರಣೆಯ ಅಂಗವಾಗಿ ಆಯೋಜಿಸಲಾಗಿದ್ದ ಜಿಲ್ಲಾ ಮಟ್ಟದ ವಿವಿಧ ಸ್ಪರ್ಧೆಗಳಲ್ಲಿ ಭಾಗವಹಿಸಿ ವಿಜೇತರಾದ ವಿದ್ಯಾರ್ಥಿಗಳಿಗೆ ಸಮ್ಮಾನ ಮಾಡುವ ಮೂಲಕ ಅವರನ್ನು ಗೌರವಿಸಲಾಯಿತು.ಸಮಾಜ ಕಲ್ಯಾಣ ಇಲಾಖೆಯ ಉಪನಿರ್ದೇಶಕಿ ಡಾ. ನಂದಾ ಹಣಬರಟ್ಟಿ ಸರ್ವರನ್ನು ಸ್ವಾಗತಿಸಿದರು. ಪ್ರೊ.ಬಾಹುಬಲಿ ಜೈನರ ನಿರ್ವಹಿಸಿದರು.ವೇದಿಕೆಯಲ್ಲಿ ನಗರಾಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ಅಕ್ಬರ್ ಸಾಬ ಬಬರ್ಚಿ, ಡಿವೈಎಸ್ಪಿ ವಿಧ್ಯಾನಂದ ನಾಯ್ಕ, ಜಿಪಂ ಉಪಕಾರ್ಯದರ್ಶಿ ಸಿ ಆರ್ ಮುಂಡರಗಿ, ಡಾ. ಬಸವರಾಜ ಬಳ್ಳಾರಿ, ಡಾ. ಎಸ್ ಎಸ್ ನೀಲಗುಂದ, ಆರ್ ಎಸ್ ಬುರಡಿ, ರಾಜಾರಾಮ ಪವಾರ ಇದ್ದರು.