ನಾಯಕರು ಹೇಳುವುದೇ ಬೇರೆ, ಮತದಾರರು ಹೇಳುವುದೇ ಬೇರೆ

ಮುಂಬೈ, ಅ 12:    ಮಹಾರಾಷ್ಟ್ರ ವಿಧಾನಸಭಾ ಚುನಾವಣೆಗೆ ಸಂಬಂಧಿಸಿದಂತೆ ರಾಜಕೀಯ ನಾಯಕರ ನಡುವೆ ಕೆಸರೆರಚಾಟ ತಾರಕಕ್ಕೆ ಮುಟ್ಟಿದೆ. ಆರೋಪ ಮತ್ತು ಪ್ರತ್ಯಾರೋಪಗಳು ದಿನೇ ದಿನೇ ಕಾವು ಪಡೆದುಕೊಳ್ಳುತ್ತಿದೆ. ರಾಜ್ಯದ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಮತ್ತು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಅವರು ಅಭಿವೃದ್ಧಿಯ ವಿಚಾರಗಳನ್ನು ಪದೇ ಪದೇ ಪ್ರಸ್ತಾಪ ಮಾಡುತ್ತಿದ್ದರೂ ರಾಜ್ಯದ ಮತದಾರರು ಹೇಳುವುದೇ ಬೇರೆಯಾಗಿದೆ. ಮುಂಬೈನ ಮತದಾರರೊಬ್ಬರು ಚುನಾವಣೆಯ ಬಗ್ಗೆ ಮಾತನಾಡಿ, ಮುಂಬೈ ನಗರದಲ್ಲಿ ಅನೇಕ ಸಮಸ್ಯೆಗಳಿವೆ. ಇದನ್ನು ನಿವಾರಿಸಬೇಕು. ಜಗತ್ತಿನ ಪ್ರಮುಖ ವಾಸಯೋಗ್ಯ ನಗರವನ್ನಾಗಿ ಮಾಡಬೇಕು ಎಂದು ತಮ್ಮ ಅಭಿಪ್ರಾಯ ಹೇಳಿಕೊಂಡಿದ್ದಾರೆ. ರಾಜ್ಯದ ಮತ್ತೊಬ್ಬ ಮತದಾರ ಮಾತನಾಡಿ, ರಾಜ್ಯದಲ್ಲಿ ರೈತರ ಪರಿಸ್ಥಿತಿ ಶೋಚನೀಯವಾಗಿದೆ. ನಗರ ಪ್ರದೇಶಗಳಲ್ಲಿ ಮೂಲಭೂತ ಸೌಕರ್ಯಗಳ ಕೊರತೆ ಕಾಡುತ್ತಿದೆ. ಬಿಜೆಪಿ ಮತ್ತು ಶಿವಸೇನೆ ಐದು ವರ್ಷಗಳ ಕಾಲ ಅಧಿಕಾರ ಮಾಡಿದ್ದರೂ ರಾಜ್ಯದಲ್ಲಿ ಹೇಳಿಕೊಳ್ಳುವ ಪ್ರಗತಿ ಆಗಿಲ್ಲ ಎಂದು ಅಸಮಾಧಾನ ಹೊರಹಾಕಿದ್ದಾರೆ.