ಸ್ವಾಗತ ಕೋರುವ ಪುತ್ರಿಯರ ದಿನ-ಸ್ಪಂದನ ಕಾರ್ಯಕ್ರಮ

Welcome Daughters' Day-Vibrant Program

 ಸ್ವಾಗತ ಕೋರುವ ಪುತ್ರಿಯರ ದಿನ-ಸ್ಪಂದನ ಕಾರ್ಯಕ್ರಮ 

ವಿಜಯಪುರ, 21: ಪಠ್ಯದ ಜೊತೆಗೆ ಮೌಲ್ಯಗಳನ್ನು ರೂಢಿಸಿಕೊಳ್ಳುವುದು ವ್ಯಕ್ತಿಯ ಸಮಗ್ರ ಅಭಿವೃದ್ಧಿಗೆ ಅವಶ್ಯಕವಾಗಿದೆ ಎಂದು ಕಲಬುರ್ಗಿಯ ಗುಲಬರ್ಗಾ ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿ ಪ್ರೊ.ಬಿ.ಜಿ.ಮೂಲಿಮನಿ ಹೇಳಿದರು. 

ನಗರದ ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯದ ವಿದ್ಯಾರ್ಥಿ ಕ್ಷೇಮಪಾಲನ ನಿರ್ದೇಶನಾಲಯದ ವತಿಯಿಂದ ಸೋಮವಾರ ಆಯೋಜಿಸಿದ್ದ 2024-25ನೇ ಶೈಕ್ಷಣಿಕ ಸಾಲಿನಲ್ಲಿ ಪ್ರಥಮ ವರ್ಷಕ್ಕೆ ಪ್ರವೇಶ ಪಡೆದ ವಿದ್ಯಾರ್ಥಿನಿಯರಿಗೆ ಸ್ವಾಗತ ಕೋರುವ ‘ಪುತ್ರಿಯರ ದಿನ-ಸ್ಪಂದನ’ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.  

 ಈ ವಿಶ್ವವಿದ್ಯಾಲಯವು ಪಠ್ಯ ಚಟುವಟಿಕೆಗಳ ಜೊತೆಗೆ ಮೌಲ್ಯಾಧಾರಿತ ಶಿಕ್ಷಣ ನೀಡುವ ಮೂಲಕ ವ್ಯಕ್ತಿತ್ವದ ಅಭಿವೃದ್ಧಿಗೆ ಸಹಾಯ ಮಾಡುತ್ತದೆೆ. ಮಹಿಳೆ ಮಾತ್ರ ಒಂದು ದೇಶದ ಸಂಸ್ಕೃತಿ ಮತ್ತು ಪರಂಪರೆಯ ಪ್ರತೀಕವಾಗಿದ್ದು, ಆಕೆಯ ಶಕ್ತಿಯು ದೇಶದ ಪ್ರಗತಿಗೆ ದೊಡ್ಡ ಕೊಡುಗೆಯನ್ನು ನೀಡುತ್ತದೆ. ಜೀವನದಲ್ಲಿ ಸರ್ವಧರ್ಮ ಸಮನ್ವಯವನ್ನು ಅಳವಡಿಸಿಕೊಳ್ಳುವುದರಿಂದ ಸಮಾನತೆ ಮತ್ತು ಶಾಂತಿಯ ದಾರಿಯನ್ನು ಅನುಸರಿಸಬೇಕು ಎಂದರು. 

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕುಲಪತಿ ಪ್ರೊ.ಬಿ.ಕೆ.ತುಳಸಿಮಾಲ ಮಾತನಾಡಿ, ಎರಡು ವರ್ಷಗಳ ಕಾಲ ಕೇವಲ ತರಗತಿಯಲ್ಲಿ ಕಲಿಯುವುದಷ್ಟೇ ಸಾಕಾಗುವುದಿಲ್ಲ, ಈ ಅವಧಿಯಲ್ಲಿ ನೀವು ಕೆಲವು ಕೌಶಲ್ಯಗಳು ಮತ್ತು ಮೌಲ್ಯಗಳನ್ನು ಮೈಗೂಡಿಸಿಕೊಳ್ಳುವುದು ಬಹಳ ಮುಖ್ಯವಾಗಿದೆ. ಇಂದಿನ ಸಂದರ್ಭದಲ್ಲಿ ಸಾಮಾಜಿಕ ಮೌಲ್ಯಗಳು ನಿಧಾನವಾಗಿ ಕಣ್ಮರೆಯಾಗುತ್ತಿರುವುದರಿಂದ, ನೀವು ಇವುಗಳನ್ನು ಅಳವಡಿಸಿಕೊಳ್ಳುವ ಕಡೆಗೆ ಹೆಚ್ಚು ಗಮನಹರಿಸಬೇಕು. ಜೀವನದಲ್ಲಿ ಕೇವಲ ಪಠ್ಯದ ಜ್ಞಾನವಷ್ಟೇ ಅಲ್ಲದೆ, ಸಾಮಾಜಿಕ, ನೈತಿಕ ಮತ್ತು ಜೀವನದ ಮೌಲ್ಯಗಳು ಅತ್ಯಂತ ಮುಖ್ಯವಾದವು. ಈ ಬೆಳವಣಿಗೆಗೆ ವಿಶ್ವವಿದ್ಯಾನಿಲಯವು ಸೂಕ್ತ ಮಾರ್ಗದರ್ಶನ ನೀಡುತ್ತಿದ್ದು, ನಿಮ್ಮ ಬೆಳವಣಿಗೆಗೆ ಸಾಕ್ಷಿಯಾಗುತ್ತದೆ. ಮುಂಬರುವ ದಿನಗಳಲ್ಲಿ ನೀವು ಈ ವಿವಿಯ ಹೆಮ್ಮೆಯ ರಾಯಭಾರಿಗಳಾಗಿ, ಸಮಾಜಕ್ಕೆ ಪ್ರೇರಣಾದಾಯಕ ಮಾದರಿಯಾಗುವತ್ತ ಪ್ರಯತ್ನಿಸಬೇಕು ಎಂದರು. 

ಇದೇ ಸಂದರ್ಭದಲ್ಲಿ ಮಹಿಳಾ ವಿವಿಯ ಕುಲಸಚಿವ ಶಂಕರಗೌಡ ಸೋಮನಾಳ ಪ್ರಥಮ ವರ್ಷದ ವಿದ್ಯಾರ್ಥಿನಿಯರಿಗೆ ರಸಪ್ರಶ್ನೆ ಕಾರ್ಯಕ್ರಮ ನಡೆಸಿದರು. ಕಾರ್ಯಕ್ರಮದಲ್ಲಿ ವಿವಿಧ ಕೇಂದ್ರಗಳು ಮತ್ತು ನಿರ್ದೇಶನಾಲಯಗಳು ಹಾಗೂ ಗ್ರಂಥಾಲಯ ಸೌಲಭ್ಯಗಳ ಬಗೆಗೆ ಆಯಾ ಕೇಂದ್ರಗಳ ಮುಖ್ಯಸ್ಥರು ಮಾಹಿತಿ ನೀಡಿದರು.  

ಸ್ಪಂದನ ಕಾರ್ಯಕ್ರಮಕ್ಕೆ  ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಪ್ರೊ.ಬಿ.ಜಿ.ಮೂಲಿಮನಿ, ಅವರು ಕಡು ಬಡವ ವಿದ್ಯಾರ್ಥಿನಿಯರಿಗೆ ಶಿಷ್ಯವೇತನಕ್ಕಾಗಿ ದೇಣಿಗೆಯಾಗಿ 10 ಲಕ್ಷ ರೂಗಳ ಚೆಕ್ಕನ್ನು ಹಸ್ತಾಂತರಿಸಿದರು. ಇದೇ ಸಂದರ್ಭದಲ್ಲಿ ಪ್ರೊ.ಬಿ.ಜಿ.ಮೂಲಿಮನಿ ದಂಪತಿಗಳನ್ನು ವಿವಿ ಪರವಾಗಿ ಸನ್ಮಾನಿಸಲಾಯಿತು. ಕಾರ್ಯಕ್ರಮದಲ್ಲಿ ಸಿಂಡಿಕೇಟ್ ಸದಸ್ಯರಾದ ಮಮತಾ ಎಸ್, ಶ್ರೀಪಾದ ಚೌಡಾಪುರ, ಡಾ.ಮಾಧುರಿ ಡಿ ಬಿರಾದಾರ, ಡಾ.ಶಿವಯೋಗಪ್ಪಾ ಮಾಡ್ಯಾಳ, ಡಾ.ಅತೀಕ್ ಉರ್ ರೆಹಮಾನ, ಡಾ.ನಟರಾಜ ಬೂದಾಳ, ಡಾ.ಗೀತಾ ಆರ್‌.ಎಂ, ಸೈದಪ್ಪಾ ಮಾದರ, ಡಾ.ಝೀಬಾ ಪರವೀನ, ಡಾ.ಬಸವರಾಜ ಗೋಡನಬಾವಿ ಅವರನ್ನು ಕುಲಪತಿಗಳು ಸನ್ಮಾನಿಸಿದರು. 

ಸನ್ಮಾನ ಸ್ವೀಕರಿಸಿದ ಸಿಂಡಿಕೇಟ್ ಸದಸ್ಯರ ಪರವಾಗಿ ಮಾತನಾಡಿದ ಪ್ರೊ.ನಟರಾಜ ಬೂದಾಳ, ಒಬ್ಬ ಹೆಣ್ಣು ಮಗಳು ಕಲಿತರೆ ಇಡೀ ಮನೆಯೇ ಕಲಿತಂತೆ. ಒಬ್ಬ ಹೆಣ್ಣು ದುಡಿದರೆ ಇಡೀ ಸಂಸಾರವೇ ದುಡಿದಂತೆ. ಇದು ವರೆಗೂ ರಾಜ್ಯದಲ್ಲಿರುವಂತಹ ಎಲ್ಲಾ ವಿಶ್ವವಿದ್ಯಾನಿಯಗಳು ಪುರುಷರ ಧ್ವನಿಯಾಗಿದ್ದವು. ಆದರೆ ಮೊದಲ ಬಾರಿಗೆ ಮಹಿಳೆಯರ ದನಿಯಾಗಿರುವ ವಿಶ್ವವಿದ್ಯಾನಿಲಯ ಅಂದರೆ ಅದು ಈ ಮಹಿಳಾ ವಿಶ್ವವಿದ್ಯಾನಿಲಯ ಎಂದರು. 

ಮೌಲ್ಯಮಾಪನ ಕುಲಸಚಿವ ಪ್ರೊ.ಎಚ್‌.ಎಂ.ಚಂದ್ರಶೇಖರ್, ವಿವಿಯ ಸಿಂಡಿಕೇಟ್ ಸದಸ್ಯರು, ವಿವಿಧ ವಿಭಾಗಗಳ ಮುಖ್ಯಸ್ಥರು, ಡೀನರು, ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ವರ್ಗ ಹಾಗೂ ಸಂಶೋಧನಾ ವಿದ್ಯಾರ್ಥಿನಿಯರು, ಸ್ನಾತಕ ಮತ್ತು ಸ್ನಾತಕೋತ್ತರ ವಿದ್ಯಾರ್ಥಿನಿಯರು ಮತ್ತಿತರರು ಉಪಸ್ಥಿತರಿದ್ದರು.  

ಕಾರ್ಯಕ್ರಮದಲ್ಲಿ ಪ್ರದರ್ಶಕ ಕಲೆಗಳ ಕೇಂದ್ರದ ವಿದ್ಯಾರ್ಥಿನಿಯರು ಪ್ರಾರ್ಥನಾ ಗೀತೆ ಹಾಡಿದರು. ವಿದ್ಯಾರ್ಥಿನಿ ಕ್ಷೇಮಪಾಲನಾ ನಿರ್ದೇಶನಾಲಯದ ನಿರ್ದೇಶಕಿ ಪ್ರೊ.ಶಾಂತಾದೇವಿ. ಟಿ ಸ್ವಾಗತಿಸಿ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಡಾ.ಜ್ಯೋತಿ ಉಪಾಧ್ಯೆ ಮುಖ್ಯ ಅತಿಥಿಗಳನ್ನು ಪರಿಚಯಿಸಿದರು. ಡಾ.ಅಶ್ವಿನಿ ಕೆ.ಎನ್‌. ನಿರೂಪಿಸಿದರು.  ಡಾ.ತಹಮೀನಾ ಕೋಲಾರ  ವಂದಿಸಿದರು.