ಪ್ರಾಣ ಭಯದಿಂದ ಓಡಲು ಪ್ರಾರಂಭಿಸಿದ ಈತ ಮುಂದೆ ಓಟದಲ್ಲಿಯೇ ಇತಿಹಾಸ ನಿರ್ಮಿಸುತ್ತಾನೆ ಎಂದರೆ ನಾವು ಒಪ್ಪಲೇ ಬೇಕು

ನಾನು ಈ ಮೊದಲು ಒಂದು ಬಾರಿ ಮಿಲ್ಕಾ ಬಗ್ಗೆ ಬರೆದಿದ್ದೆ ಆಗ ಎಲ್ಲರೂ ಬಹಳ ಅಚ್ಚರಿ ಹಾಗೂ ಅಭಿಮಾನ ಪಟ್ಟಿದ್ದರು. ಆ ಲೇಖನ ಬರೆಯುವಂತ ಸಮಯದಲ್ಲಿ ಅದೇ ತಾನೆ ಭಾಗ್ ಮಿಲ್ಕಾ ಭಾಗ್ ಚಿತ್ರ ಬಿಡುಗಡೆ ಆಗಿತ್ತು. ಎಲ್ಲರೂ ಚಿತ್ರದ ಕುರಿತು ಬಹಳ ಪ್ರಶಂಸೆ ಮಾಡಿದ್ದರು. ಅದರಲ್ಲೂ ಆ ಚಿತ್ರವನ್ನು ನಿರ್ಮಾಣ ಮಾಡುವುದಕ್ಕೆ ಒಪ್ಪಿಗೆ ಕೇಳಿದಾಗ ಮಿಲ್ಕಾ ಒಪ್ಪಿಗೆ ನೀಡಿ, ಅದಕ್ಕಾಗಿ ಕೇವಲ 1 ರೂಪಾಯಿಯ ಸಂಭಾವನೆ ಪಡೆದಿದ್ದರು. ಇದನ್ನು ಕೇಳಿದ ಮೇಲಂತೂ ಜನ ಬಹಳ ಸಂತಸ ಪಟ್ಟರು. ಅದೇನೋ ಗೊತ್ತಿಲ್ಲ ಆಮೇಲೆ ಆ ವ್ಯಕ್ತಿಯ ಬದುಕಿನ ಕುರಿತು ಓದುವ ಆಸೆ ಆಯಿತು. ಓದಿ ಸುಮ್ಮನೆ ನನ್ನ ಪಾಡಿಗೆ ನಾನು ಇರುವ ಜಾಯಮಾನ ನನ್ನದಲ್ಲ. ಮುಚ್ಚಿಟ್ಟ ಜ್ಞಾನ ಕೊಳೆಯುತ್ತದೆ. ಬಿಚ್ಚಿಟ್ಟ ಜ್ಞಾನ ಬೆಳೆಯುತ್ತದೆ ಎಂದುಕೊಂಡು ಬದುಕುವ ನಾನು ತಿಳಿದುಕೊಂಡಿದ್ದನ್ನು ಹೇಳುವುದಕ್ಕೆಂದು ಬರವಣಿಗೆಯ ಮೊರೆ ಹೋಗುತ್ತೇನೆ. ಹೀಗೆ ಮೊರೆ ಹೋದ ನಾನು ಅಂಕಣ ರೂಪದಲ್ಲಿ ಬರೆದೆ. ಆದರೆ ಮೊನ್ನೆ ಯಾವುದೋ ವಿಷಯ ಬಂದಾಗ ನನ್ನ ಮಾತುಗಳನ್ನು ಆಲಿಸುತ್ತ ಮೈಮರೆತ ಕೆಲವು ಜನ ಯುವಮಿತ್ರರು ಸಾರ್ ಮತ್ತೊಂದು ಬಾರಿ ನೀವು ಮಿಲ್ಕಾನ ಕುರಿತು ಬರೆಯಿರಿ ಎಂದು ದುಂಬಾಲು ಬಿದ್ದಾಗ ಅನಿವಾರ್ಯವಾಗಿ ಮತ್ತೊಮ್ಮೆ ನಾನು ಮಿಲ್ಕಾಸಿಂಗ್‌ನ ಕುರಿತು ಬರೆಯುವ ಕಾರ್ಯ ಮಾಡುತ್ತಿದ್ದೇನೆ. ಹಾಗೇ ಒಮ್ಮೆ ಓದಿನ ಮೇಲೆ ಖುಷಿ ಎನಿಸಿದಲ್ಲಿ ಮತ್ತೊಬ್ಬರಿಗೆ ಓದುವುದಕ್ಕೆ ಹಂಚಿಕೊಳ್ಳಿ. ನಿಜಕ್ಕೂ ಒಬ್ಬ ಅಂಕಣಕಾರನಿಗೆ ತೃಪ್ತಿ ಸಿಗುವುದು ಯಾವಾಗ? ಈ ಪ್ರಶ್ನೆಗೆ ಉತ್ತರ ಸಿಕ್ಕಿದ್ದು ವಿಶ್ವೇಶ್ವರ ಭಟ್ಟರ ಬರಹಗಳನ್ನು ಓದಿದಾಗ. ರಿಚರ್ಡ ಬ್ರಾನ್ಸನ್‌ನ ಮೇಲೆ ಅದೇನೋ ಒಂದು ರೀತಿಯ ಅಕ್ಕರೆಯನ್ನು ಬೆಳೆಸಿಕೊಂಡ ಭಟ್ಟರು ಅವನು ಮಾಡುವ ಹುಚ್ಚು ಸಾಹಸಗಳಾದಿಯಾಗಿ ಅವನ ಸಾಧನೆಯನ್ನು ಆಗಾಗ ಬರೆಯುತ್ತಿದ್ದರು. ಆ ಬರವಣಿಗೆ ಅದ್ಯಾವ ಪರಿ ಓದುಗರಿಗೆ ಹುಚ್ಚು ಹಿಡಿಸಿತ್ತೆಂದರೆ ಮತ್ತೆ ಮತ್ತೆ ಅವನ ಕುರಿತು ಬರೆಯಿರಿ ಎಂದು ಓದುಗರು ದುಂಬಾಲು ಬೀಳುತ್ತಿದ್ದರು. ಈ ವಿಷಯವನ್ನು ಭಟ್ಟರೆ ತಮ್ಮ ಅಂಕಣ ಬರಹದಲ್ಲಿ ಹಂಚಿಕೊಂಡಿದ್ದಾರೆ. ಆಗ ನನಗನಿಸಿದ್ದು ಯಾವಾಗ ಒಬ್ಬ ಓದುಗ ತನಗೆ ಬೇಕು ಎನಿಸಿದ ವಿಷಯವನ್ನು ಇವರಿಂದ ಬರೆಸಿಕೊಂಡು ಓದಬೇಕು ಎಂದು ಹಂಬಲಿಸುತ್ತಾನೋ ಆಗ ಅಂಕಣಕಾರನ ಬರಹಗಳು ಓದುಗನ ಎದೆಯಲ್ಲಿ ಸ್ಥಾನ ಗಿಟ್ಟಿಸಿಕೊಂಡು ಕಾಡಿದರೆ; ಅಂಕಣಕಾರ ಓದುಗನ ಪ್ರೀತಿಗೆ ಪಾತ್ರನಾಗಿ ಅಭಿಮಾನದ ಸ್ಥಾನದಲ್ಲಿ ವಿರಾಜಮಾನನಾಗಿರುತ್ತಾನೆ ಎನ್ನುವುದು ಸ್ಪಷ್ಟವಾಗುತ್ತದೆ. ಅದರ ಜೊತೆಗೆ ಬರವಣಿಗೆಯ ಜವಾಬ್ದಾರಿ ಮತ್ತಷ್ಟು ಹೆಚ್ಚುತ್ತಲೇ ಇದೆ ಎಂದು ಅರ್ಥವಾಗುತ್ತದೆ. ನನಗೂ ಈಗ ಹಾಗೆ ಎನಿಸುತ್ತಿದೆ. ಪ್ರತಿ ಬಾರಿಯೂ ಅಂಕಣವನ್ನು ಬರೆದಾಗ ಕಾಮೆಂಟ್ ಮಾಡುವ ಓದುಗರು ಹಾಗೂ ಆತ್ಮೀಯರು, ಕರೆ ಮಾಡಿ ಮಾತನಾಡುವ ಗೆಳಯರು, ಇತ್ತೀಚೆಗೆ ಹೊಸ ಹೊಸ ವಿಷಯವನ್ನು ಮುಂದಿಟ್ಟು ಇದರ ಕುರಿತು ನೀವು ಬರೆದರೆ ತುಂಬ ಸುಂದರವಾಗಿರುತ್ತದೆ. ನಿಮ್ಮ ಬರವಣಿಗೆಯಲ್ಲಿ ಇದನ್ನು ಓದುವುದೇ ಒಂದು ತರಹದ ಖುಷಿ. ದಯವಿಟ್ಟು ಈ ವಾರ ನಾನು ಹೇಳಿದ ವಿಷಯದ ಕುರಿತು ಬರೆಯಿರಿ ಎನ್ನುವಾಗ ನನಗೆ ಭಟ್ಟರಿಗೆ ದುಂಬಾಲು ಬೀಳುತ್ತಿದ್ದ ಓದುಗರ ನೆನಪಾಗುತ್ತದೆ. ಹಾಗೆ ಭಟ್ಟರಂತೆ ನಾನು ಹೊಸತನ್ನು ಹುಡುಕುವ ಪ್ರಯತ್ನದಲ್ಲಿ ಬರವಣಿಗೆಯ ಹಮ್ಮಸ್ಸಿನಲ್ಲಿ ಮುಂದುವರೆಯುತ್ತೇನೆ. ಹೀಗೆ ಪ್ರತಿ ಬಾರಿ ಅಂಕಣವನ್ನು ಬಿಟ್ಟು ಬಿಡದೇ ಓದುವ ಕೆಲವು ಜನ ಆತ್ಮೀಯ ಓದುಗರು ಮಿಲ್ಕಾಸಿಂಗ್ ಕುರಿತು ಒಂದು ಲೇಖನ ಬರೆಯಿರಿ ಎಂದು ಹೇಳಿದಾಗ ಆಗಲಿ ಎಂದು ಹೇಳಿದೆ. ಆದರೆ ಮಿಲ್ಕಾಸಿಂಗ ಬಗ್ಗೆ ಡಾಕ್ಯುಮೆಂಟರಿಯ ಹಾಗೆ ಬರೆದರೆ ಅದರಲ್ಲೇನು ಹೊಸತನವಾಗಲಿ ಸ್ವಾರಸ್ಯವಾಗಲಿ ಇರುವುದಿಲ್ಲ. ಬರೆಯುವುದೇ ನಿಜವಾದಲ್ಲಿ ಏನಾದರೂ ಹೊಸ ವಿಷಯವನ್ನು ಬರೆಯುವುದು ಒಳಿತು ಎಂದು ಬರವಣಿಗೆಗೆ ಇಳಿದಾಗಲೇ ಈ ಲೇಖನ ಹುಟ್ಟಿಕೊಂಡಿದ್ದು. ಓದುಗರ ಇಚ್ಚೆಯಂತೆ ಬರೆದರು ಕೂಡ ಅಂತಿಮ ಅಭಿಪ್ರಾಯ ಓದುಗರದೇ ಅಲ್ಲವೇ? 

ಇತ್ತೀಚೆಗಷ್ಟೆ ನಮ್ಮನ್ನಗಲಿದ ಮಿಲ್ಕಾ ಸಿಂಗ್ ಬಗ್ಗೆ ಬಹಳಷ್ಟು ಜನಕ್ಕೆ ಗೊತ್ತಿದೆ. ಆದರೆ ಎಲ್ಲರಿಗೂ ಗೊತ್ತಿರುವುದು ಇಷ್ಟೇ; ಅವರೊಬ್ಬ ಭಾರತ ಕಂಡ ಶ್ರೇಷ್ಠ ಕ್ರೀಡಾ ಪಟು, ಕಾಮನವೆಲ್ತ ಕ್ರೀಡಾ ಕೂಟಗಳಲ್ಲಿ ಬಂಗಾರದ ಬೇಟೆಯಾಡಿದ ಓಟಗಾರ, ಪದ್ಮಶ್ರೀ ಪ್ರಶಸ್ತಿ ಪಡೆದ ಸಾಧಕ, ಅಥ್ಲೆಟಿಕ್ ಲೋಕದ ದಂತಕಥೆ, ಒಂದು ಸಣ್ಣ ತಪ್ಪಿನಿಂದ ಒಲಂಪಿಕ್ ಪದಕ ಕಳೆದುಕೊಂಡ ಭಾರತೀಯ. ಹೀಗೆ ಹಲವು ಮುಖಗಳಿಂದ ಇವರನ್ನು ನಾವು ಕಂಡಿದ್ದೇವೆ. ಆದರೆ ಸಿಂಥೆಟಿಕ್ ಟ್ರ್ಯಾಕ್ ಮೇಲೆ ಮಿಂಚಿನ ವೇಗದಿ ಓಡಿ ಪದಕಗಳನ್ನು ಬಾಚಿಕೊಳ್ಳುತ್ತಿದ್ದ ಮಾನವ ಜಿಂಕೆ ಓಡುವುದನ್ನು ಕಲಿತಿದ್ದಾದರೂ ಯಾವಾಗ? ಓಡುವುದಕ್ಕೆ ಪ್ರೇರಣೆ ನೀಡಿದ್ದಾದರೂ ಏನು? ಎಲ್ಲವನ್ನು ಬಿಟ್ಟು ಓಡುವುದರೆಡಗೇ ಏಕೆ ಈತ ಮನಸು ಮಾಡಿದ? ಯಾರ ಗರಡಿಯಲ್ಲಿ ಪಳಗಿ ಓಡುವುದಕ್ಕೆ ಅಣಿಯಾದ? ಹೀಗೆ ಮುಂತಾದ ವಿಷಯಗಳು ನಮಗೆ ಗೊತ್ತಿಲ್ಲ. ನಾನು ಕೂಡ ಈ ಪ್ರಶ್ನೆಗಳನ್ನು ಮುಂದಿಟ್ಟುಕೊಂಡು  ಮಿಲ್ಕಾಸಿಂಗ್ ಬಗ್ಗೆ ಹೆಚ್ಚಿನದನ್ನು ತಿಳಿದುಕೊಳ್ಳುವ ಕುತುಹಲದ ಜೊತೆಗೆ ಮೇಲಿನ ಎಲ್ಲ ಪ್ರಶ್ನೆಗಳಿಗೂ ಉತ್ತರ ಪಡೆಯಲು ಹವಣಿಸಿದೆ. ಅದಕ್ಕಾಗಿ ಅವರ ಬದುಕಿನ ಪಯಣವನ್ನು ಅಧ್ಯಯನ ಮಾಡಲು ಮುಂದಾದೆ. ಆದರೆ ಅಲ್ಲಿ ಎಲ್ಲ ಪ್ರಶ್ನೆಗಳಿಗೂ ಸಿಕ್ಕಿದ್ದು ಒಂದೇ ಉತ್ತರ. ‘ಜೀವನ...!’ ಹೌದು ಜೀವನವೇ ಇವರಿಗೆ ಓಡುವುದಕ್ಕೆ ಪ್ರೇರಣೆ ಕೊಟ್ಟಿದ್ದು, ಬದುಕೇ ಇವರಿಗೆ ಮೊದಲಬಾರಿ ಓಡುವುದಕ್ಕೆ ಹಚ್ಚಿದ್ದು. ಅಂದು ಆರಂಭವಾದ ಓಟ ಇಂದು ಸಾವಿನಲ್ಲಿ ಅಂತ್ಯವಾಗಿದೆ. ಆದರೆ ಅವರ ಬದುಕಿನ ಪ್ರತಿ ಹೆಜ್ಜೆಯ ಹೋರಾಟ ಬದುಕಿರುವ ನಮಗೆಲ್ಲ ಆದರ್ಶವಾದರೆ; ಸತ್ತಂತೆ ಬದುಕುತ್ತಿರುವವರನ್ನು ಎಚ್ಚರಿಸುವ ಕರೆಗಂಟೆಯಾಗಿದೆ. ಒಂದು ವೇಳೆ ಮಿಲ್ಕಾ ಜಾಗದಲ್ಲಿ ನಾವಿದ್ದರೆ ನಮ್ಮ ಬದುಕು ಹೇಗಿರುತ್ತಿತ್ತೋ?, ನಾವು ಯಾವ ರೀತಿಯ ನಿರ್ಧಾರ ಮಾಡುತ್ತಿದ್ದೇವೊ? ಇಂಥ ಪ್ರಶ್ನೆಗಳು ಸುಳಿದರೆ ಅದಕ್ಕೆ ಉತ್ತರ ಸಿಗುವುದೇ ನಿಜಕ್ಕೂ ಅನುಮಾನ. ಹಾಗಿತ್ತು ಅವರ ಬದುಕಿನ ದಾರಿ. ‘ಮುಂದೆ ಗುರಿಯಿದ್ದು ಹಿಂದೆ ಗುರುವಿನ ಬಲವಿದ್ದರೆ ಸಾಧನೆ ಸುಲಭ’ ಎಂದು ಸಾವಿರಾರು ಜನ ಹೇಳುತ್ತಾರೆ. ಆದರೆ ಸಾವಿಂದ ತಪ್ಪಿಸಿಕೊಂಡು, ಬದುಕನ್ನು ಅರಸುತ್ತ ಹೊರಟ ವ್ಯಕ್ತಿ ಮುಂದೆ ಜಗತ್ತೇ ಗುರುತಿಸುವ ಮಟ್ಟದಲ್ಲಿ ಬೆಳೆಯುವುದಿದೆಯಲ್ಲ ಅದು ನಿಜಕ್ಕೂ ರೋಚಕ. ಅಂತ ರೋಚಕ ಬದುಕಿಗೆ ಸಾಕ್ಷಿಯಾದವರು ಮಿಲ್ಕಾಸಿಂಗ್‌. 

ನಾವುಗಳು ಕೇವಲ ಅವರ ಗೆಲವುನ್ನು ಮಾತ್ರ ನೋಡಿ ಹಾರುವ ಸಿಖ್ ಎಂದು ಹೆಮ್ಮೆಯಿಂದ ಹೇಳುತ್ತೇವೆ. ಆದರೆ ಆ ಗೆಲುವಿನ ಹಿಂದಿರುವ ನೋವು, ಅನುಭವಿಸಿದ ಯಾತನೆ, ಪಟ್ಟ ಪಡಿಪಾಟಲು, ಸಹಿಸಿಕೊಂಡ ಹಿಂಸೆ, ವೇದನೆಗಳಿಗೆ ಲೆಕ್ಕವೇ ಇಲ್ಲ. ಇವುಗಳ ಕುರಿತು ನಮಗೆ ಗೊತ್ತೇ ಇಲ್ಲ. ಗೊತ್ತಿದ್ದರೆ ಅವರನ್ನು ನೋಡುವ ದೃಷ್ಠಿಕೋನದಲ್ಲಿ ಮತ್ತಷ್ಟು ಬದಲಾವಣೆಯನ್ನು ಕಾಣುತ್ತಿದ್ದೆವು. ಒಂದು ಬಾರಿ ಅವರನುಭವಿಸಿದ ಕಷ್ಟಗಳನ್ನು ನಾವು ಕಂಡುಕೊಂಡರೆ ಸಾವು ಹತ್ತಿರ ಇದ್ದಾಗಲು ಸಾಧನೆ ಮಾಡುವುದಕ್ಕೆ ಮನಸ್ಸು ಸಿದ್ಧಗೊಳ್ಳುತ್ತದೆ. ಅಷ್ಟಕ್ಕೂ ಒಬ್ಬ ಸಾಮಾನ್ಯ ಸಿಖ್ ಹುಡುಗ ಭಾರತದ ‘ಪ್ಲಾಯಿಂಗ್ ಸಿಖ್‌’ ಆಗಿ ಬಿರುದು ಪಡೆದಿದ್ದಾರೂ ಹೇಗೆ ಎನ್ನುವುದು ಗೊತ್ತಾ? ಗೊತ್ತಾದರೆ ನಮ್ಮ ದೇಶದ ಮೇಲೆ ನಮಗೆ ಹೆಮ್ಮೆ ಹಾಗೂ ಗರ್ವ ಉಂಟಾಗುತ್ತದೆ. ಮಿಲ್ಕಾನಂತ ಛಲದಂಕ ಮಲ್ಲರಿಂದಾಗಿ ಭಾರತ ಮಾತೆಯ ಸ್ಥಾನ ಪ್ರಪಂಚದಲ್ಲಿ ಇನ್ನೂ ಮೇಲೆರುತ್ತಿದೆ ಎನ್ನುವುದು ಕಂಡು ಖುಷಿಯಾಗುತ್ತದೆ. ಮಿಲ್ಕಾ ಹುಟ್ಟಿದ್ದು ಆಗಿನ ಭಾರತ ಹಾಗೂ ಈಗಿನ ಪಾಕಿಸ್ತಾನದಲ್ಲಿರುವ ಗೋವಿಂದಪುರದಲ್ಲಿ. ಹುಟ್ಟುತ್ತಲೆ ಬಡತನದ ಹೊಟ್ಟೆ ತುಂಬಿಸಿಕೊಳ್ಳುವುದಕ್ಕಾಗಿ ಓಡುವುದಕ್ಕೆ ಆರಂಭಿಸಿದ ಮಿಲ್ಕಾಸಿಂಗ್ ಭಾರತ ಪಾಕಿಸ್ತಾನ ವಿಭಜನೆಯಾದಾಗ ಜೀವ ಉಳಿಸಿಕೊಳ್ಳುವುದಕ್ಕಾಗಿ ಓಡಬೇಕಾಯಿತು. ಕಣ್ಣೆದುರೇ ಹೆತ್ತವರನ್ನು ಹಾಗೂ ಸಹೋದರಿಯರನ್ನು ಕೊಂದು ಹಾಕಿದ ಕೋಮುವಾದಿಗಳ ದಳ್ಳುರಿಯಿಂದ ತಪ್ಪಿಸಿಕೊಳ್ಳುವುದಕ್ಕೆ ಪಾಕಿಸ್ತಾನದಿಂದ ಓಟ ಆರಂಭಿಸಿ; ಭಾರತಕ್ಕೆ ಬಂದು ತಲುಪಿದರೂ ಅವರ ಓಟ ನಿಲ್ಲಲಿಲ್ಲ. ಪಂಜಾಬಿನಲ್ಲಿ ನಡೆಯುತ್ತಿದ್ದ ಧರ್ಮಗಳ ತಿಕ್ಕಾಟದ ಹೋರಾಟದಿಂದ ತಪ್ಪಿಸಿಕೊಳ್ಳಲು ದಿಲ್ಲಿವರೆಗೂ ಓಡಿದ ಮಿಲ್ಕಾ ಅದಾಗಲೇ ಓಟದಲ್ಲಿ ಬಹಳಷ್ಟು ಪಳಗಿ ಬಿಟ್ಟಿದ್ದ. ನಾವುಗಳು ಬದುಕಿನ ಓಟದಲ್ಲಿ ಕೊಂಚ ಓಡುವುದರೊಳಗೆ ಸುಸ್ತಾಗಿ ಮುಗ್ಗರಿಸುತ್ತೇವೆ. ಆದರೆ ಮಿಲ್ಕಾ ಪ್ರಾಣ ಉಳಿಸಿಕೊಳ್ಳುದಕ್ಕೆಂದು ಓಡುತ್ತಲೇ ಪ್ರಪಂಚವೇ ಗುರುತಿಸುವ ಸಾಧನೆ ಮಾಡಿದ್ದು ಇಂದು ಇತಿಹಾಸ. ಅಂದು ಮಗನ ಜೀವ ಉಳಿಸಲು ಹೆತ್ತವರು “ಭಾಗ್ ಮಿಲ್ಕಾ ಭಾಗ್‌” ಎಂದು ಹೇಳಿದರು. ಆದರೆ ಅದು ಕೇವಲ ಪ್ರಾಣ ಉಳಿಸಿಕೊಳ್ಳುವ ಓಟವಾಗಲಿಲ್ಲ. ಬದಲಿಗೆ ಪದಕ ಪಡೆದುಕೊಳ್ಳುವ ಓಟವಾಗಿತ್ತು, ಪ್ರಪಂಚ ಗೆಲ್ಲುವ ಓಟವಾಗಿತ್ತು, ಪಟ್ಟ ಕಷ್ಟಗಳಿಗೆ ಪ್ರತಿಯಾಗಿ ಸಾಧನೆಯ ಕಿರಿಟ ತೊಡುವ ಓಟವಾಗಿತ್ತು, ಸಾವನ್ನು ಗೆದ್ದವನು ಸರ್ವಸ್ವವನ್ನು ಗೆಲ್ಲಬಲ್ಲ ಎನ್ನುವುದನ್ನು ತೋರಿಸುವ ಓಟವಾಗಿತ್ತು, ಭಾರತದ ಹೆಮ್ಮೆಗೆ ಮತ್ತೊಂದು ಗರಿ ಮೂಡಿಸುವ ಓಟವಾಗಿತ್ತು, ಇತಿಹಾಸವೇ ಸುವರ್ಣಾಕ್ಷರಗಳಲ್ಲಿ ಆತನ ಹೆಸರನ್ನು ಬರೆದಿಡುವ ಓಟವಾಗಿತ್ತು, ಕೊನೆಗೆ ವಿಧಿಯಾಟವನ್ನೇ ಬದಲಿಸುವ ಓಟವಾಗಿ ಮಿಲ್ಕಾನನ್ನು ಇಡೀ ಜಗತ್ತಿಗೆ ಪರಿಚಯಿಸುವಂತೆ ಮಾಡುವ ಓಟವಾಗಿತ್ತು. ಹಾಗೆ ಓಡುತ್ತಲೇ ಯಾರೂ ಊಹಿಸದ ಸಾಧನೆಯನ್ನು ಮಾಡಿದ ಮಿಲ್ಕಾಸಿಂಗ್ ಜೀವನದಲ್ಲಿ ಸೋತವನಿಗೆ ಆದರ್ಶವಾಗಿ ನಿಲ್ಲುವ ಮಟ್ಟಕ್ಕೆ ಬೆಳೆದು ಬಿಟ್ಟರು. 

ಮಿಲ್ಕಾಸಿಂಗ್ ಜೀವನ ನಿರ್ವಹಣೆಗಾಗಿ ಭಾರತದ ಸೈನ್ಯಕ್ಕೆ ಸೇರಿದರು. ಎರಡು ಬಾರಿ ಸೈನ್ಯಕ್ಕೆ ಸೇರಬೇಕೆಂದರೂ ಸೇರಿಸಿಕೊಳ್ಳದ ಅಧಿಕಾರಿಗಳು ಮೂರನೇ ಬಾರಿಗೆ ಅವರನ್ನು ಸೇನೆಗೆ ಸೇರಿಸಿಕೊಂಡರು. ಯಾವಾಗ ಬದುಕಿಗೆ ಒಂದು ನೆಲೆ ದೊರೆಯಿತೊ ಆಗ ಸಾಧನೆಯ ದಾರಿ ತೆರೆದುಕೊಂಡಿತು. ಜೀವ ಉಳಿಸಿಕೊಳ್ಳಲು ಪಾಕಿಸ್ತಾನದಿಂದ ಓಡುತ್ತ ಓಡುತ್ತ, ಜೀವನ ಎನ್ನುವ ರೇಸ್‌ನಲ್ಲಿ ಸಮಸ್ಯೆಗಳು ಎನ್ನುವ ಹರ್ಡಲ್ಸ್‌ಗಳು ಎದುರಾದಾಗೊಮ್ಮೆ ಜಿಗಿದು ದಾಟುತ್ತಲೇ ಬಂದ ಮಿಲ್ಕಾ ಈ ಬಾರಿ ತಮ್ಮ ಓಟಕ್ಕೊಂದು ಸರಿಯಾದ ಮಾರ್ಗ ಕೊಟ್ಟು, ಭಾರತಕ್ಕಾಗಿ ಮೊದಲ ಬಾರಿಗೆ ಅಂತರಾಷ್ಟ್ರೀಯ ಕ್ರೀಡಾಕೂಟದಲ್ಲಿ ಪದಕವನ್ನು ಗೆದ್ದು ಭಾರತಾಂಭೆಯ ಋಣ ತಿರಿಸಿದರು. ಯಾವಾಗ ಭಾರತದ ಪರವಾಗಿ ಓಡಿ ಚಿನ್ನವನ್ನು ಮುಡಿಗೇರಿಸಿಕೊಂಡರೊ ಮುಂದೆ ಮಿಲ್ಕಾ ಬದುಕಿನಲ್ಲಿ ಬದಲಾವಣೆಯ ಪರ್ವ ಆರಂಭವಾಯಿತು. ಆದರೆ ಸಾಧನೆಯ ತುಡಿತ ಮಾತ್ರ ಅಲ್ಲಿಗೆ ನಿಲ್ಲಲಿಲ್ಲ. ಸಾವು ಬದುಕಿನ ಓಟದಿಂದ ಓಲಂಪಿಕ್ಸ್‌ ಟ್ರ್ಯಾಕ್‌ನಲ್ಲಿ ಓಡುವವರೆಗೂ ಮಿಲ್ಕಾರ ಜೀವನ ನಮಗೆಲ್ಲ ಬದುಕಿನ ವಿವಿಧ ಪಾಠಗಳನ್ನು ತಿಳಿಸುತ್ತದೆ. ಅದರಲ್ಲೂ ಕಣ್ಣೆದುರೇ ಹೆತ್ತವರನ್ನು ಕೊಂದು ಹಾಕಿ, ದೇಶವನ್ನು ಬಿಟ್ಟು ಓಡುವಂತೆ ಮಾಡಿದ ಪಾಕಿಸ್ತಾನದ ನೆಲದಲ್ಲಿ, ಆ ದೇಶದ ಅತೀ ವೇಗದ ಓಟಗಾರನನ್ನು ಸೋಲಿಸಿ, ಶತ್ರು ರಾಷ್ಟ್ರದ ಅಧ್ಯಕ್ಷನಿಂದಲೇ ‘ಹಾರುವ ಸಿಖ್‌’ ಎನ್ನುವ ಬಿರುದನ್ನು ಪಡೆದುಕೊಳ್ಳುತ್ತಾನೆಂದರೆ ಮಿಲ್ಕಾನಲ್ಲಿ ಅದೆಂತ ಛಲ ಇರಬೇಡಾ ಹೇಳಿ?. ಅವಮಾನವಾದಲ್ಲಿ ಬಹುಮಾನ ಪಡೆಯುವುದಿದೆಯಲ್ಲ ಅದಕ್ಕಿಂತ ದೊಡ್ಡ ಸಾಧನೆ ಬೇರೊಂದಿಲ್ಲ. ಹಾಗೆ ಹೆತ್ತವರನ್ನು ಕೊಂದವರೆ ಅವನ ಸಧನೆಗೆ ತಲೆ ತಗ್ಗಿಸುತ್ತಾರೆಂದರೆ ಮಿಲ್ಕಾನ ಹೋರಾಟಕ್ಕೆ ಸಮನಾಗಿ ಮತ್ತೊಬ್ಬರು ನಿಲ್ಲುವುದಕ್ಕೆ ಸಾಧ್ಯವೇ? ಖಂಡಿತ ಇಲ್ಲ. ಸಾಧನೆ ಎಂದರೆ ಇದು. ಬದುಕು ಎಂದರೆ ಇದು. ಹೋರಾಟ ಎಂದರೆ ಇದು. ಇದುವೇ ಜೀವನ. ಅಂದು ಸಾವಿನೆದುರು ನಿಂತ ತಂದೆ ತಾಯಿಗಳು ಪಾಕಿಸ್ತಾನದಿಂದ ‘ಭಾಗ್ ಮಿಲ್ಕಾ ಭಾಗ್‌’ ಎಂದು ಓಡಿಸಿದರು. ಮುಂದೆ ರೇಸ್‌ನಲ್ಲಿ ಅಭಿಮಾನಿಗಳು ಕೂಡ ‘ಭಾಗ್ ಮಿಲ್ಕಾ ಭಾಗ್‌’ ಎಂದು ಹುರಿದುಂಬಿಸಿದರು. ವಿಚಿತ್ರ ಎಂದರೆ ಅಂದು ಮಿಲ್ಕಾನ ಹೆತ್ತವರು ಮಗನನ್ನು ಬದುಕಿಸಲು ಓಡಿಸಿದರು. ಅದೇ ಮಿಲ್ಕಾನನ್ನು ಅಭಿಮಾನಿಗಳು ಗೆಲುವಿನ ದಡವನ್ನು ಸೇರಿಸುವುದಕ್ಕಾಗಿ ಓಡಿಸಿದರು. ಅಲ್ಲಿಗೆ ಮಿಲ್ಕಾಸಿಂಗ್ ಎನ್ನುವ ಹೋರಾಟಗಾರ ಬದುಕಿನ ರೇಸ್‌ನಲ್ಲಿ ಗೆದ್ದು, ಭಾರತದ ಇತಿಹಾಸದಲ್ಲಿ ದಂತಕಥೆಯಾಗಿ ಉಳಿದು ಬಿಟ್ಟನು.    

ಮಿಲ್ಕಾಸಿಂಗ್ ಕೇವಲ ಓಟದಿಂದ ಮಾತ್ರ ಹಿರೋ ಆಗಲಿಲ್ಲ. ಬದಲಿಗೆ ಜೀವನದಲ್ಲಿಯೂ ಆತ ಮಾಡಿದ ಅನುಕರಣಿಯ ಕಾರ್ಯಗಳಿಂದಾಗಿ ಹೀರೋ ಆಗುತ್ತಾರೆ. ನಾವು ಕೇವಲ ಅವರನ್ನು ಕ್ರಿಡಾಂಗಣದ ಟ್ರ್ಯಾಕ್‌ನಲ್ಲಿ ಕಂಡು ಹೀರೋ ಎಂದುಕೊಂಡರೆ ಅರ್ಧ ತಿಳಿದಂತಾಗುತ್ತದೆ. ಕ್ರೀಡಾಂಗಣದ ಆಚೆಯು ಮಿಲ್ಕಾ ಆದರ್ಶಪ್ರಾಯ ವ್ಯಕ್ತಿ. ಮಿಲ್ಕಾ ಮಾಡಿದ ಕಾರ್ಯವನ್ನು ತಿಳಿದುಕೊಂಡರೆ ಸಾಕು ಪ್ರತಿಯೊಬ್ಬರು ವಾಹ್ ಮಿಲ್ಕಾ ವಾಹ್ ಎನ್ನದೇ ಇರಲಾರರು. ಇವರ ಸಾಧನೆಗೆ ಸರ್ಕಾರ 2001 ರಲ್ಲಿ ಅರ್ಜುನ ಪ್ರಶಸ್ತಿ ನೀಡಲು ಮುಂದಾಯಿತು. ಆದರೆ ಅದನ್ನು ಮಿಲ್ಕಾ ಒಪ್ಪಿಕೊಳ್ಳಲಿಲ್ಲ. ನಿಜಕ್ಕೂ ನನ್ನ ಹೋರಾಟವನ್ನು ಸರ್ಕಾರ ಗುರಿತಿಸಿದ್ದೇ ಆದರೆ ನನಗೆ 40 ವರ್ಷಗಳ ಹಿಂದೆಯೇ ಈ ಪ್ರಶಸ್ತಿ ಬರಬೇಕಿತ್ತು. ಆದರೆ ಅದನ್ನು ಮಾಡದೇ ಈಗ ನೀಡಲು ಬಂದಿರುವುದು ನನ್ನ ಸಾಧನೆಗೆ ಸರ್ಕಾರ ಮಾಡಿದ ಅವಮಾನ ಎನಿಸುತ್ತದೆ. ಅಷ್ಟಕ್ಕೂ ನಾನು ಓಡಿದ್ದು ದೇಶಕ್ಕಾಗಿ, ಪದಕ ಪಡೆದಿದ್ದು ರಾಷ್ಟ್ರಕ್ಕೆ ಗರ್ವ ಮೂಡಿಸುವುದಕ್ಕಾಗಿ. ನಾನು ಮಾಡಿದ ಸಾಧನೆಗೆ ನಮ್ಮಮ್ಮ ಭಾರತಾಂಭೆ ಹರಸಿ ಹಾರೈಸಿದ್ದಾಳೆ. ಅವಳ ಆಶಿರ್ವಾದವೇ ನನಗೆ ದೊಡ್ಡ ಪ್ರಶಸ್ತಿ ಎಂದು ತಿರಸ್ಕರಿಸಿದು. ಮಿಲ್ಕಾರಿಗಾದ ಅನುಭವವನ್ನು ನೋಡಿದಾಗ ನನಗೆ ಮೇಜರ್ ಧ್ಯಾನ್‌ಚಂದ ನೆನಪಾಗುತ್ತಾರೆ. ಹೇಗೆ ಮಿಲ್ಕಾ ಸಾಧನೆಯನ್ನು ಕಡೆಗಣಿಸಿ ಕೊನೆಗೆ 40 ವರ್ಷಗಳ ನಂತರ ಪ್ರಶಸ್ತಿ ನೀಡಲು ಸರ್ಕಾರ ಮುಂದೆ ಬಂದಿತೋ; ಹಾಗೆಯೇ ದೇಶಕ್ಕಾಗಿ ಆಟವಾಡಿದ ಧ್ಯಾನ್‌ಚಂದರಿಗೆ ಇಲ್ಲಿವರೆಗೂ ಭಾರತ ರತ್ನ ನೀಡದೆ ಅವಮಾನಿಸುತ್ತಲೇ ಬಂದಿದ್ದಾರೆ. ಅದೆ ಕಾರಣಕ್ಕಾಗಿಯೆ ನಮ್ಮಲ್ಲಿ ಬಹಳಷ್ಟು ಪ್ರತಿಭೆಗಳು ನಿರಾಶೆಗೆ ಒಳಗಾಗುತ್ತಿರುವುದನ್ನು ನಾವು ನೋಡುತ್ತೇವೆ. ಇಷ್ಟಕ್ಕೆ ಮಿಲ್ಕಾ ಕಥೆ ಮುಗಿಯುವುದಿಲ್ಲ. ಕ್ರೀಡೆಯಲ್ಲಿ ಮಿಲ್ಕಾರ ಒಂದು ಮುಖ ನೋಡಿದ ನಾವು ಸಾಮಾಜಿಕ ಕಳಕಳಿ ಹಾಗೂ ಮಾನವೀಯತೆಯಲ್ಲಿ ಇನ್ನೊಂದು ಮುಖವನ್ನು ಕಾಣಬಹುದು ಎನ್ನುವುದಕ್ಕೆ ಹಲವು ಘಟನೆಗಳು ಸಾಕ್ಷಿ ನೀಡುತ್ತವೆ. ಅಂದು ಅಂದರೆ 1999 ರ ಕಾರ್ಗಿಲ್ ಯುದ್ಧದಲ್ಲಿ ಭಾರತಾಂಬೆಯ ರಕ್ಷಣೆಗಾಗಿ ಹೋರಾಡಿ, ಹುತಾತ್ಮರಾದ ವೀರ ಯೋಧ ಹವಿಲ್ದಾರ ವಿಕ್ರಮ್ ಸಿಂಗ್‌ರ ಮಗನನ್ನು ದತ್ತು ಪಡೆದುಕೊಂಡು ಬೆಳೆಸುವುದರ ಮೂಲಕ ಮಿಲ್ಕಾಸಿಂಗ್ ಇತರರಿಗೂ ಮಾದರಿಯಾಗಿದ್ದಾರೆ. ಸೆಲಿಬ್ರಿಟಿಗಳಾದವರು ಕ್ಯಾಮರಾದ ಮುಂದೆ ಕುಳಿತು ಮಾತನಾಡುವುದು ಮುಖ್ಯವಲ್ಲ,  ಬದಲಿಗೆ ಕ್ಯಾಮರಾದ ಹಿಂದೆ ತಾವು ಮಾಡಬೇಕಾದ ಕರ್ತವ್ಯವನ್ನು ಅರಿಯುವುದು ಮುಖ್ಯ ಎನ್ನುವುದಕ್ಕೆ ಇವರ ಆದರ್ಶಗಳು ಸಾಕ್ಷೀಕರಿಸುತ್ತವೆ. ಇವರ ಜೀವನ ಹಾಗೂ ಸಾಧನೆಯನ್ನು ಆಧರಿಸಿ “ಭಾಗ್ ಮಿಲ್ಕಾ ಭಾಗ್‌” ಚಿತ್ರವನ್ನು ನಿರ್ಮಾಣ ಮಾಡುವುದಕ್ಕೆ ಮುಂದೆ ಬಂದಾಗ ಅದಕ್ಕವರು ಪಡೆದ ಸಂಭಾವನೆ ಕೇಳಿದರೆ ನಿಜಕ್ಕೂ ಅಚ್ಚರಿಯಾಗುತ್ತದೆ. ಅವಕಾಶ ಸಿಕ್ಕರೆ ಲಕ್ಷ ಲಕ್ಷ ಬಾಚಿಕೊಳ್ಳುವ ಇರಾದೆ ಹೊಂದಿರುವ ಜನಗಳ ಮಧ್ಯದಲ್ಲಿ ಮಿಲ್ಕಾಸಿಂಗ್ ಕೇವಲ 1 ರೂಪಾಯಿ ಸಂಭಾವನೆ ಪಡೆಯುತ್ತಾರೆ ಎಂದರೆ ಇವರ ಆದರ್ಶಮಯ ಬದುಕು ನಮಗೆ ಅರ್ಥವಾಗಲೇ ಬೇಕು. ಸಿನಿಮಾದ ಲಾಭಾಂಶದಲ್ಲಿ ಒಂದು ರೂಪಾಯಿಯನ್ನು ಮುಟ್ಟದ ಮಿಲ್ಕಾಸಿಂಗ್ ಅದನ್ನು ಸಂಪೂರ್ಣ ಕ್ರೀಡೆಗೆ ಮುಡಿಪಾಗಿಟ್ಟರು. ಇದು ಅವರ ಸಾಮಾಜಿಕ ಬದ್ಧತೆ ಹಾಗೂ ಕ್ರೀಡೆಯ ಮೇಲಿನ ಪ್ರೇಮವನ್ನು ತಿಳಿಸುತ್ತದೆ. ಅದಕ್ಕೆ ಹೇಳಿದ್ದು ಮಿಲ್ಕಾಸಿಂಗ್‌ರಲ್ಲಿ ಕೇವಲ ಒಬ್ಬ ಕ್ರೀಡಾಪಟು ಮಾತ್ರವಲ್ಲ ಒಬ್ಬ ನಿಜವಾದ ಮಾನವನನ್ನು ಕಾಣುತ್ತೇವೆ, ಒಬ್ಬ ಹೃದಯವಂತನನ್ನು ಕಾಣುತ್ತೇವೆ ಎಂದು. 

ಅಂದು ಬದುಕಿಗಾಗಿ ಓಡಿದರು, ಮುಂದೆ ದೇಶಕ್ಕಾಗಿ ಓಡಿದರು. ಓಡುತ್ತಲೇ ಕನಸುಗಳನ್ನು ಕಂಡರು. ಅವುಗಳನ್ನು ಸಾಕಾರಗೊಳಿಸಿಕೊಳ್ಳುವುದಕ್ಕಾಗಿ ಮತ್ತೆ ಮತ್ತೆ ಓಡಿದರು. ಆದರೂ ಅವರ ಒಂದು ಕನಸು ಕನಸಾಗೇ ಉಳಿಸಿದುರುವುದು ವಿಷಾಧನೀಯ. ಅದೇನು ಎನ್ನುತ್ತೀರಾ? ಅಂದು ಒಲಂಪಿಕ್ ರೇಸ್‌ನಲ್ಲಿ ಇನ್ನೇನು ಗೆಲುವಿನ ಗುರಿ ಮುಟ್ಟುವಾಗ ತಿರುಗಿ ನೋಡುವ ಸಣ್ಣ ತಪ್ಪು ಮಾಡಿದ್ದಕ್ಕಾಗಿ ಪದಕದಿಂದ ವಂಚಿತರಾಗಿದ್ದು ಮಿಲ್ಕಾರನ್ನು ಜೀವನದುದ್ದಕ್ಕೂ ಕಾಡಿತು. ಅದಕ್ಕಾಗಿ ತಮ್ಮಿಂದ ಆಗದ ಈ ಕಾರ್ಯವನ್ನು ಭಾರತದ ಯಾವುದಾದರೂ ಓಟಗಾರ ನೆರವೇರಿಸಬೇಕು. ಒಲಂಪಿಕ್‌ನ ಓಟದಲ್ಲಿ ಚಿನ್ನದ ಬೇಟೆಯಾಡಬೇಕು. ಅದನ್ನು ಕಣ್ಣಾರೆ ನೋಡಬೇಕು ಎನ್ನುವುದು ಅವರ ಕನಸಾಗಿತ್ತು. ಆದರೆ ಅದು ನನಸಾಗುವ ಮೊದಲೆ ಅವರು ಬದುಕಿನ ಓಟಕ್ಕೆ ವಿದಾಯ ಹೇಳಿ, ಸಾರ್ಥಕತೆಯ ಗೆಲುವನ್ನು ಪಡೆದುಕೊಂಡರು. ಆದರೆ ಅವರಾತ್ಮ ಮಾತ್ರ ಅವರ ಕನಸು ನನಸಾಗುವ ದಿನಕ್ಕಾಗಿ ಹಾತೊರೆಯುತ್ತಲೇ ಇರುತ್ತದೆ ಎನ್ನುವುದು ನನ್ನ ಅನಿಸಿಕೆ. ಬರೀ ರಾಜಕೀಯಕ್ಕೆ ಆಧ್ಯತೆ ನೀಡುವ ನಮ್ಮ ದೇಶದಲ್ಲಿ ಪ್ರತಿಭೆಗಳನ್ನು ಹೆಕ್ಕಿ ತೆಗೆಯಲು ಮುಂದಾದರೆ ಮನೆಗೊಬ್ಬ ಮಿಲ್ಕಾ ಹುಟ್ಟಿಕೊಳ್ಳುತ್ತಾನೆ. ದೇಶಿಯ ಪ್ರತಿಭೆಗಳನ್ನು ಗುರುತಿಸಿ ತರಬೇತಿ ನೀಡಿದರೆ ಅವರು ಜಗತ್ತನ್ನೆ ನಾಚಿಸುವಂತ ಸಾಧನೆ ಮಾಡುತ್ತಾರೆ. ಆದರೆ ಈ ಕಾರ್ಯವಾಗದೇ ಇರುವುದರಿಂದ ಮಿಲ್ಕಾರ ಕನಸು ನನಸಾಗುತ್ತದೆಯೇ? ಎನ್ನುವ ಪ್ರಶ್ನೆ ನನ್ನನ್ನು ಕಾಡುತ್ತಿದೆ. ಅವರಾದರೋ ಎಲ್ಲ ಸವಾಲುಗಳನ್ನು ಮೆಟ್ಟಿ ಮೇಲೆ ಬಂದರು. ಈಗ ಕ್ರೀಡೆಗೆ ಕಾಲಿಡುವುದೇ ಒಂದು ಸವಾಲಾಗಿ ಹೋಗಿದೆ. ಇಲ್ಲಿ ಕ್ರೀಡೆ ಎಂದರೆ ಕೇವಲ ಕ್ರಿಕೇಟ್ ಎಂದುಕೊಂಡಿರುವಾಗ ಸಾಧಕರು ಎಲ್ಲಿಂದ ಎದ್ದು ಬರುತ್ತಾರೆ ಹೇಳಿ? ಇನ್ನಾದರೂ ಅನ್ಯ ಕ್ರೀಡೆಗಳಿಗೆ ಆದ್ಯತೆ ದೊರೆತು ಮುಂದಿನ ದಿನಗಳಲ್ಲಿ ಮಿಲ್ಕಾಸಿಂಗ್ ಕಂಡ ಕನಸು ನನಸಾಗಲಿ, ಒಲಂಪಿಕ್ ಓಟದಲ್ಲಿ ಭಾರತಕ್ಕೆ ಸ್ವರ್ಣ ದೊರಕಲಿ, ಜಗತ್ತನ್ನೆ ಗೆದ್ದ ಸಾಧಕ ಆತ್ಮಕ ಶಾಂತಿ ದೊರಕಲಿ. ಏನಂತಿರಾ? 

- ಮಂಜುನಾಥ ಮ. ಜುನಗೊಂಡ 

ವಿಜಯಪುರ   


- * * * -