ಎಷ್ಟೋ ಬಾರಿ ನನ್ನ ಯುವ ಮಿತ್ರರನ್ನು ಕಂಡಾಗ ನಾನು ನಿಜಕ್ಕೂ ಕಂಗಾಲಾಗಿ ಹೋಗಿದ್ದೇನೆ. ಅಪ್ಪ ಅಮ್ಮನ ದುಡ್ಡಲ್ಲಿ ಮಜಾ ಮಾಡುವ ಹುಡುಗರನ್ನು ಕಂಡಾಗಲಂತೂ ಹೀಗಾದರೆ ಹೇಗೆ ಎನ್ನವ ಪ್ರಶ್ನೆಗೆ ಉತ್ತರ ಹುಡುಕಲು ಯತ್ನಿಸಿ ಸೋತಿದ್ದೇನೆ. ಯಾವ ದೇಶಕ್ಕಾಗಿ ನಮ್ಮವರು ಪ್ರಾಣ ನೀಡಿದರೋ, ಯಾವ ದೇಶಕ್ಕಾಗಿ ತಮ್ಮ ಸ್ವಂತ ಬದುಕನ್ನು ಮರೆತು ಬದುಕಿದರೋ, ಯಾವ ದೇಶಕ್ಕಾಗಿ ತಮ್ಮ ಸರ್ವಸ್ವವನ್ನು ಅರ್ಿಸಿದರೋ, ಯಾವ ದೇಶದಕ್ಕಾಗಿ ತಮ್ಮ ದೇಹವನ್ನು ದಂಡಿಸಿಕೊಂಡರೋ, ಯಾವ ದೇಶಕ್ಕಾಗಿ ಕೊರಳನ್ನು ಕುಣಿಕೆಗೊಡ್ಡಿದರೋ, ಯಾವ ದೇಶಕ್ಕಾಗಿ ತಮ್ಮ ಕಣ್ಣೇದುರೆ ಕರುಳ ಕುಡಿಗಳ ಕೊನೆಯ ಕ್ಷಣಗಳನ್ನು ಕಂಡರೋ ಅಂತ ದೇಶದಲ್ಲಿ ಹುಟ್ಟಿದ ಯುವಪಡೆ ಏನು ಮಾಡುತ್ತಿದ್ದಾರೆ ಎನ್ನುವುದನ್ನು ಕಂಡು ಸಂಕಟ ಪಟ್ಟುಕೊಳ್ಳದ ಹೊರತು ಅನ್ಯ ಮಾರ್ಗವೇ ಉಳಿಯಲಿಲ್ಲವಲ್ಲ ಎನ್ನುವ ವೇದನೆಯಲ್ಲಿ ಅದೆಷ್ಟೋ ಬಾರಿ ಕನಲಿ ಹೋಗಿದ್ದೇನೆ. ಇಷ್ಟಕ್ಕೆಲ್ಲ ಕಾರಣವಾಗಿದ್ದೇನು? ಸ್ವಾತಂತ್ರ್ಯ, ಈ ದೇಶಕ್ಕಾಗಿ ತಮ್ಮ ಪ್ರಾಣಕ್ಕೆ ಬದಲಾಗಿ ನೀಡಿ ಹೋದ ಸ್ವಾತಂತ್ರ್ಯ, ತಮ್ಮ ಸ್ವಂತಬದುಕನ್ನು ಬಲಿಕೊಟ್ಟು ಬಿಟ್ಟು ಹೋದ ಸ್ವಾತಂತ್ರ್ಯ, ನಮ್ಮ ಇಂದಿನ ದಿನಗಳಿಗಾಗಿ ಅಂದವರು ತಮ್ಮ ದಿನಗಳನ್ನು ತ್ಯಾಗಮಾಡಿ ತಂದು ಕೊಟ್ಟ ಸ್ವಾತಂತ್ರ್ಯ. ಅದರ ಫಲವಾಗಿಯೇ ಇಂದು ನಾವು ನಮ್ಮತನವನ್ನು ಮರೆತು ಅನ್ಯ ದೇಶದ ಕುನ್ನಿಗಳಂತೆ ಬದುಕು ಮಾಡುತ್ತಿರುವುದು. ನಿಜಕ್ಕೂ ಇದಕ್ಕೆಲ್ಲ ಕಾರಣವಾಗಿದ್ದು ಸ್ವಾತಂತ್ರ್ಯವೇ. ಕಾರಣ ನಮಗೆ ಸ್ವಾತಂತ್ರ್ಯ ಎಂದರೆ ಏನು ಎನ್ನುವುದೇ ಗೊತ್ತಿಲ್ಲ. ಸ್ವಾತಂತ್ರ್ಯದ ಮಹತ್ವವನ್ನು ನಾವು ಕಂಡಿಲ್ಲ, ಸ್ವಾತಂತ್ರ್ಯ ಪಡೆಯಲು ಇರಬೇಕಾದ ಅರ್ಹತೆಗಳನ್ನು ನಾವು ತಿಳಿದಿಲ್ಲ. ಆ ಕಾರಣಕ್ಕೆ ನಮಗೆ ಸ್ವಾತಂತ್ರ್ಯದ ಬೆಲೆ ಗೊತ್ತಿಲ್ಲ. ಏಕೆಂದರೆ ನಾವು ಸ್ವಾತಂತ್ರ್ಯ ಪೂರ್ವದಲ್ಲಿ ಹುಟ್ಟಿಲ್ಲ. ಬದಲಿಗೆ ಸ್ವಾತಂತ್ರ್ಯ ಸಿಕ್ಕ ನಂತರ ಹುಟ್ಟಿದ್ದೇವೆ. ಅದಕ್ಕೆ ಇಷ್ಟೆಲ್ಲ ಅವಾಂತರವನ್ನು ಹುಟ್ಟು ಹಾಕುತ್ತಿದ್ದೇವೆ. ಬೇಕಾ ಬಿಟ್ಟಿ ಬದುಕು ಮಾಡುತ್ತ ಸಾಗುತ್ತಿದ್ದೇವೆ.
ನಮ್ಮ ದೇಶದ ಚರಿತ್ರೆಯ ಕುರಿತು ಮಾತನಾಡಿದರೆ ಇಂದು ನಮ್ಮವರಿಗೆ ಇಷ್ಟವಾಗುವುದಿಲ್ಲ. ಇತಿಹಾಸವನ್ನು ಕಲಿತು ಮಾಡುವುದಾದರೂ ಏನು?. ಸತ್ತವರ ಕಥೆಯನ್ನು ಕಟ್ಟಿಕೊಂಡು ಬದುಕು ಮಾಡುವುದಕ್ಕೆ ಇದು ಓಬೆರಾಯನ ಕಾಲವಲ್ಲ; ರೋಬೋಟ್ ಕಾಲ; ಇಲ್ಲಿ ತಂತ್ರಜ್ಞಾನವನ್ನು ಮುಂದಿಟ್ಟುಕೊಂಡು ಬೆಳದವನು ಮಾತ್ರ ಬದುಕು ಕಟ್ಟಿಕೊಳ್ಳುತ್ತಾನೆ. ಅಷ್ಟಕ್ಕೂ ನಾವೇನು ಸಾವಿರಾರು ವರ್ಷಗಳ ಕಾಲ ಬದುಕುತ್ತೀವಾ? ಇಲ್ಲ. ಅಂದಮೇಲೆ ಇರುವಷ್ಟು ಸಮಯ ಮಜವಾಗಿ ಬದುಕಿದರಾಯಿತು. ದೇಶ ದೇಶ ಎಂದು ಬೊಬ್ಬೆ ಹಾಕುತ್ತೀರಲ್ಲ. ಈ ದೇಶ ನಮಗೇನು ಕೊಟ್ಟಿದೆ?. ಅಮೇರಿಕಾದಂತೆ ವೈಭವ ನೀಡಿದೆಯಾ? ಇಂಗ್ಲಂಡನಂತೆ ಜಗತ್ತನ್ನು ಆಳಿದೆಯಾ? ಇಲ್ಲ ತಾನೆ? ಏನು ಕೊಡದೇ ಇರುವ ದೇಶಕ್ಕಾಗಿ ನಾವೇಕೆ ತಲೆ ಕೆಡಿಸಿಕೊಳ್ಳಬೇಕು? ನಮ್ಮ ಬದುಕು, ನಮ್ಮಿಷ್ಟ ಅದನ್ನು ಪ್ರಶ್ನಿಸುವ ಹಕ್ಕು ಯಾರಿಗೂ ಇಲ್ಲ. ಹೀಗೆ ಉಡಾಫೆಯ ಮಾತುಗಳನ್ನು ಬಹಳ ಜನರ ಬಾಯಿಂದ ಕೇಳಿದ್ದೇನೆ. ಆದರೆ ನಾನು ಕೇಳಿದ ಪ್ರಶ್ನೆಗೆ ಯಾವೊಬ್ಬ ಯವಕನಿಂದಲೂ ಸರಿಯಾದ ಉತ್ತರ ನನಗೆ ಸಿಕ್ಕಿಲ್ಲ. ಏನು ಕೊಡದ ದೇಶದ ಬಗ್ಗೆ ತಲೆ ಕೆಡಿಸಿಕೊಳ್ಳಬಾರದು ಎನ್ನುವುದಾದರೆ ನಿನಗೆ ಜನ್ಮ ಕೊಟ್ಟಿದ್ಯಾರು? ನಮ್ಮ ತಂದೆ. ಅವರಿಗೆ ಜನ್ಮ ಕೊಟ್ಟಿದ್ಯಾರು? ಅವರ ತಂದೆ. ಅವರೆಲ್ಲರಿಗೂ ಜನ್ಮಕೊಟ್ಟಿದ್ಯಾರು? ಉತ್ತರ ಶೂನ್ಯ. ಕಾರಣ ಉತ್ತರವಾಗಿ ಬರುವ ಪದವೇ ಭಾರತ. ಅಂದರೆ ಆಗಲೇ ಹೇಳಿದರಲ್ಲ ಏನು ಕೊಡದ ದೇಶ ಎಂದು. ಆ ದೇಶದ ಹೆಸರನ್ನೇ ಇಲ್ಲಿ ಉಲ್ಲೇಖ ಮಾಡಬೇಕಾಗುತ್ತದೆ. ಆಗ ಇವರದು ನೀರವ ಮೌನ. ಈ ದೇಶ ನಮಗೆ ಉಸಿರು ಕೊಟ್ಟಿದೆ. ಹೆಸರು ಕೊಟ್ಟಿದೆ. ಬದುಕುವುದಕ್ಕೆ ಅವಕಾಶ ಮಾಡಿಕೊಟ್ಟಿದೆ. ನಮ್ಮನ್ನು ಪ್ರಶ್ನಿಸುವ ಹಕ್ಕು ಯಾರಿಗೂ ಇಲ್ಲ ಎಂದು ಹೇಳುತ್ತೀರಲ್ಲ ಆ ಪ್ರಶ್ನೆ ಮಾಡುವ ಹಕ್ಕನ್ನು ಕೊಟ್ಟಿದ್ದು ಕೂಡ ಇದೇ ದೇಶವೆ. ಎಲ್ಲವನ್ನು ಇಲ್ಲಿಂದಲೇ ಪಡೆದು ಇಲ್ಲಸಲ್ಲದ ಮಾತುಗಳಿಗಾಗಿ ನಮ್ಮದೇಶವನ್ನು ದೂಷಣೆ ಮಾಡುವುದು ಯಾವ ನ್ಯಾಯ ನೀವೆ ಹೇಳಿ?
ನಿಜ ಹೇಳಬೇಕೆಂದರೆ ನಾವಿಂತ ಪವಿತ್ರವಾದ ದೇಶದಲ್ಲಿ ಹುಟ್ಟಬಾರದಿತ್ತು. ಕಾರಣ ನಾವು ಮಾತನಾಡುವ ಬಗೆಯನ್ನು ಕಂಡಾಗಲಂತೂ ನಾವಿಲ್ಲಿ ಹುಟ್ಟುವ ಯೋಗ್ಯತೆಯನ್ನು ಕಳೆದುಕೊಂಡವರು ಎನ್ನುವುದು ಮನದಟ್ಟಾಗುತ್ತದೆ. ಎಲ್ಲವನ್ನು ನೀಡಿದ ದೇಶದ ಬಗ್ಗೆ ಅಭಿಮಾನ ಪಡಬೇಕಾದ ಜಾಗದಲ್ಲಿ ಅಪಮಾನವಾಗುವ ಮಾತನಾಡುತ್ತೇವೆ. ಕೆಂಪು ಬಣ್ಣಕ್ಕೆ ಮರುಳಾಗಿ ವಿದೇಶವನ್ನು ಹಾಡಿ ಹೊಗಳುವ ನಮಗಳಿಗೆ ಗೊತ್ತಿಲ್ಲ; ಒಂದಾನೊಂದು ಕಾಲದಲ್ಲಿ ಈ ದೇಶದ ಎದುರು ವಿಶ್ವವೇ ಜ್ಞಾನಕ್ಕಾಗಿ ಮಂಡಿಯೂರಿತ್ತು. ಜ್ಞಾನದ ಹಸಿವನ್ನು ತಣಿಸಿಕೊಳ್ಳುವುದಕ್ಕಾಗಿ ಈ ದೇಶದ ವಿಶ್ವ ವಿದ್ಯಾಲಯಗಳ ಎದುರು ಅಜ್ಞಾನದ ಭಿಕ್ಷಾಪಾತ್ರ ಹಿಡಿದು ಅಂಗಲಾಚುತ್ತಿತ್ತು. ಅಷ್ಟೇ ಅಲ್ಲ ಈ ದೇಶದಲ್ಲಿರುವ ಸಂಪತ್ತನ್ನು ಕಂಡೇ ವಿದೇಶಿಯರು ಈ ದೇಶಕ್ಕೆ ಲಗ್ಗೆ ಇಟ್ಟಿದ್ದು. ಕೇವಲ ಒಂದು ಬಾರಿ ಊಟ ಮಾಡಿದಾಗ ಕೈಗಂಟಿದ ಮಸಾಲೆ ವಾಸನಗೇ ಮರುಳಾದವರು ಈ ದೇಶಕ್ಕೆ ವಲಸೆ ಬಂದು, ಇಲ್ಲಿ ನೆಲೆ ನಿಂತುಕೊಂಡರೆಂದರೆ ಇನ್ನು ಈ ದೇಶದಲ್ಲಿನ ಇತರ ವಿಚಾರಗಳು ಹೇಗಿದ್ದವು ಒಮ್ಮೆ ವಿಚಾರ ಮಾಡುವುದು ಒಳಿತು. ನಮ್ಮ ದೇಶದಲ್ಲಿ ಹಿಟ್ಲರ್ ಇರಲಿಲ್ಲ, ಮುಸೋಲಿನಿ ಇರಲಿಲ್ಲ, ಜಿಯಾ ಉಲ್ ಹಕ್ ಆಗಲಿ, ಜಿಯಾ ಉರ್ ರಹೆಮಾನ್ ಆಗಲಿ ಆಳ್ವಿಕೆ ಮಾಡಲಿಲ್ಲ. ಬದಲಿಗೆ ನಮ್ಮ ದೇಶವನ್ನು ಭರತ, ಅಶೋಕ, ಅಮೋಘವರ್ಷನೃಪತುಂಗನಂಥಹ ಶ್ರೇಷ್ಠ ರಾಜರುಗಳು ಆಳ್ವಿಕೆ ಮಾಡಿದರು. ನಂತರ ಆಗಮಿಸಿದ ವಿದೇಶಿಯರು ತಮ್ಮ ಸ್ವಾರ್ಥ ಸಾಧನೆಗಾಗಿ ನಮ್ಮಲ್ಲಿನ ಭಾವನೆಗಳನ್ನು ಬಂಡವಾಳ ಮಾಡಿಕೊಂಡು, ತಮ್ಮ ಸ್ವಾರ್ಥದ ಬೆಳೆಯನ್ನು ಯಶಸ್ವಿಯಾಗಿ ಬೆಳೆದುಕೊಂಡರು. ಆಗ ನಮಗೇ ಅರಿವಿಲ್ಲದಂತೆಯೇ ನಾವುಗಳು ಗುಲಾಮಗಿರಿಯ ಕೂಪಕ್ಕೆ ಬಿದ್ದೆವು. ಕೊನೆಗೆ ಲಕ್ಷಾಂತರ ಜನರ ಸಾವಿನ ಸಾಕ್ಷಿಯಾಗಿ, ಲಕ್ಷಾಂತರ ಜನರ ರಕ್ತದ ಅರೆ್ಣಯ ಪರಿಣಾಮದಿಂದಾಗಿ ಅಂದು ಪಡೆದ ಸ್ವಾತಂತ್ರ್ಯದ ಬೆಳಕಲ್ಲಿ ಇಂದು ವಾಸಿಸುತ್ತಿದ್ದೇವೆ. ಆದರೂ ನಮಗೆ ಸ್ವಾತಂತ್ರ್ಯದ ಬೆಲೆ ಗೊತ್ತಿಲ್ಲ; ಕಾರಣ, ನಾವು ಸ್ವಾತಂತ್ರ್ಯ ಸಿಕ್ಕ ನಂತರ ಹುಟ್ಟಿದ್ದೇವೆ.
ಅಂದು ಸ್ವಾಮಿ ವಿವೇಕಾನಂದರು ಈ ದೇಶದ ಭವಿಷ್ಯ ನಿಂತಿರುವುದೇ ಯುವಕರ ಮೇಲೆ ಎಂದು ಹೇಳಿದರು. ಈ ದೇಶದಲ್ಲಿ ಜನಿಸುವ ಪ್ರತಿಯೊಬ್ಬ ಯುವಕನು ಪುರುಷ ಸಿಂಹಗಳಾಗಬೇಕು ಎಂದು ಹೇಳಿದರು. ಆದರೆ ಇಂದು ಯಾರಲ್ಲೂ ಆ ಛಾತಿಯಾಗಲಿ, ದೇಶಭಕ್ತಿಯಾಗಲಿ ಕಾಣುತ್ತಿಲ್ಲ. ಬದಲಿಗೆ ಎಲ್ಲರಲ್ಲೂ ಈ ದೇಶ ನಮಗೇನು ಕೊಟ್ಟಿದೆ ಎನ್ನುವ ಸ್ವಾರ್ಥ ಮಾತ್ರ ಕಾಣುತ್ತಿದೆ. ಅಷ್ಟಕ್ಕೂ ಈ ದೇಶ ನಮಗೇನು ಕೊಡಬೇಕು ಅದಕ್ಕಿಂತ ಹೆಚ್ಚಿನದನ್ನು ಕೊಟ್ಟಿದೆ. ನಮ್ಮಿಂದ ಕಸಿದುಕೊಳ್ಳಲಾಗದಂತಹ ಶ್ರೇಷ್ಠವಾದ ಕಾಣಿಕೆಯನ್ನೇ ಕೊಟ್ಟಿದೆ. ಆದರೆ ಅದನ್ನು ಮನಗಾಣದೇ ನಾವು ಈ ದೇಶ ಏನುಕೊಟ್ಟಿತು ಎನ್ನುವ ವ್ಯರ್ಥ ಪ್ರಶ್ನೆಗೆ ಉತ್ತರ ಹುಡುಕಲು ಹೆಣಗಾಡುತ್ತಿರುವುದು ಮೂರ್ಖತನದ ಪರಮಾವಧಿಯಲ್ಲಿದೇ ಇನ್ನೇನಾಗಲು ಸಾಧ್ಯ? ಈ ದೇಶದಲ್ಲಿ ನೀಡಿದಂತ ಶ್ರೇಷ್ಠ ಸ್ವಾತಂತ್ರ್ಯವನ್ನು ಈ ಜಗತ್ತಿನ ಯಾವುದೇ ಮೂಲೆಯಲ್ಲಿರುವ ದೇಶವು ನೀಡಿಲ್ಲ ಎನ್ನುವುದು ಕುತುಹಲಕರ. ಜಗತ್ತಿನ ಅತ್ಯಂತ ದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರವಾಗಿ ಗುರುತಿಸಿಕೊಂಡಿರುವ ಈ ದೇಶ ಕಂಡ ಕಂಡ ದೇಶಗಳು ಕೆಂಡದ ಮಳೆ ಸುರಿಸಿದರು ಕಂಡು ಕೇಳರಿಯದ ರೀತಿಯಲ್ಲಿ ಮೇಲೆದ್ದು ಬಂದಿದೆ. ಆದರೆ ಇಂದು ಸ್ವಾತಂತ್ರ್ಯದ ಅರ್ಥ ಗೊತ್ತಿಲ್ಲದ ಸ್ವೇಚ್ಛಾಚಾರಿಗಳ ಕೈಯಲ್ಲಿ ದೇಶ ಸಿಕ್ಕು ನಲುಗುತ್ತಿರುವುದು ನಿಜಕ್ಕೂ ದೊಡ್ಡ ದುರಂತದಂತೆ ಕಾಣುತ್ತಿದೆ. ನಿಜ ಹೇಳಬೇಕೆಂದರೆ ನೆಮ್ಮದಿಯಾಗಿರಲು ಒಬ್ಬ ವ್ಯಕ್ತಿಗೆ ಏನು ಬೇಕು ಎಲ್ಲವನ್ನು ಈ ದೇಶ ಒದಗಿಸುತ್ತದೆ. ಆದರೂ ನಮಗೆ ತೃಪ್ತಿ ಇಲ್ಲ. ಧಾರ್ಮಿಕ ಸ್ವಾತಂತ್ರ್ಯದ ಹೆಸರಲ್ಲಿ ಬೀದಿಗಳಿದು ಬಡಿದಾಡಿಕೊಳ್ಳುತ್ತೇವೆ. ನಮ್ಮ ದೇಶದ ನಾಗರಿಕ ಮೇಲೆ ನಾವೇ ಕೈ ಮಾಡುತ್ತೇವೆ. ಅದಕ್ಕೂ ಮುನ್ನ ಒಂದು ಬಾರಿ ವಿಚಾರ ಮಾಡಿ, ಮ್ಯಾನ್ಮರ್‌ನಂತ ರಾಷ್ಟ್ರವನ್ನು ನೆನಪಿಸಿಕೊಳ್ಳಿ. ತುಪಾಕಿಗಳ ದಡಬಡ ಸದ್ದು ಹಾಗೇ ಕಿವಿಗೆ ಗಡುಚಿಕ್ಕಿದಂತ ಅನುಭವ ನೀಡುತ್ತದೆ. ಆಗ ಈ ದೇಶದ ಪ್ರಜಾಪ್ರಭುತ್ವ ಎಷ್ಟು ಸುಂದರ ಎನ್ನುವುದು ಅರ್ಥವಾಗುತ್ತದೆ. ಸ್ವಾತಂತ್ರ್ಯದ ಹೆಸರಲ್ಲಿ ಸ್ವಾರ್ಥ ಸಾಧಿಸಿಕೊಳ್ಳುವ ನಮಗೆ ನಿಜವಾಗಲೂ ಸ್ವಾತಂತ್ರ್ಯದ ಅರಿವಿದೆಯಾ? ಇಲ್ಲ ಖಂಡಿತ ಇಲ್ಲ. ಏಕೆಂದರೆ ನಾವೆಲ್ಲ ಹುಟ್ಟಿದ್ದು ಸ್ವಾತಂತ್ರ್ಯ ಸಿಕ್ಕ ಮೇಲೆಯೇ ಅಲ್ಲವೇ?
ಪುರುಷನಿಗೆ ಸರಿ ಸಮನಾದ ಸ್ವಾತಂತ್ರ್ಯವನ್ನು ಕೊಡದೇ ಇರುವ ದೇಶ ನಮ್ಮದು ಎಂದು ಮಹಿಳೆ ಹೇಳುತ್ತಾಳೆ. ಆದರೆ ತಾಲಿಬಾನ ಆಡಳಿತದಂತೆ ಈ ದೇಶದ ಮಹಿಳೆಯರನ್ನು ಬುರುಕಾ ಹಾಕಿಕೊಂಡು ಬದುಕು, ಅಲ್ಲಿ ಹೋಗಬೇಡ, ಇಲ್ಲಿ ಬರಬೇಡ, ಮಹಿಳೆ ಯಾವತ್ತಿದ್ದರೂ ಗೋಷಾದಲ್ಲಿಯೇ ಇರಬೇಕು ಎಂದು ಹೇಳುತ್ತಾರೆಯೇ? ಇಲ್ಲ ತಾನೆ? ಈ ದೇಶದ ಮಹಿಳೆಯನ್ನು ದೇಶದ ಪ್ರಥಮ ಪ್ರಜೆಯನ್ನಾಗಿ ಮಾಡಿಲ್ಲವೇ? ಅಂದ ಮೇಲೆ ಈ ದೇಶದಲ್ಲಿ ಮಹಿಳೆಗೆ ಸ್ವಾತಂತ್ರ್ಯವಿಲ್ಲ ಎಂದು ಹೇಳಿದರೆ ತಪ್ಪಾಗುತ್ತದೆ ಅಲ್ಲವೇ? ಏಕೆಂದರೆ ಎಲ್ಲರನ್ನು ಸಮಾನವಾಗಿ ಕಾಣುವುದನ್ನು ನಮ್ಮ ಸಂವಿಧಾನವೇ ನಮಗೆ ಕಲಿಸಿಕೊಟ್ಟಿದೆ. ಆದರೂ ಕೆಲವೊಬ್ಬರು ಅದನ್ನು ಒಪ್ಪಿಕೊಳ್ಳದ ಮನಸ್ಸಿನವರಿದ್ದರೆ. ಅವರನ್ನು ಧಿಕ್ಕರಿಸಿ ಮೇಲೆದ್ದರೆ ನಮಗೆ ಸಂವಿಧಾನ ನೀಡಿದ ಎಲ್ಲ ಹಕ್ಕುಗಳನ್ನು ನಾವು ಅನುಭವಿಸುತ್ತೇವೆ. ವಿಚಿತ್ರ ಎಂದರೆ, ಇಲ್ಲಿ ಪ್ರತಿಯೊಬ್ಬ ನಾಗರೀಕನನ್ನು ಸಮಾನವಾಗಿ ನೋಡಿಕೊಳ್ಳುವುದು ಅಸಾಧ್ಯ ಎನ್ನುವುದು ಗೊತ್ತಿದ್ದರೂ ಸಮಾನತೆ ಸಾಧಿಸುವುದಕ್ಕಾಗಿ ಪ್ರತಿಕ್ಷಣ ಹೋರಾಡುವ ನಮ್ಮ ದೇಶದ ಸ್ವಾತಂತ್ರ್ಯತೆ ಬಗ್ಗೆ ನಮಗೆ ಗೊತ್ತಿಲ್ಲ ಅಲ್ವೇ? ಎಲ್ಲ ನೀಡಿದರೂ ಏನು ಇಲ್ಲ ಎಂದು ಹೇಳುವ ಯುವಪಡೆ ಒಮ್ಮೆ ಹೇಳಿ ನೋಡೋಣ ನಿಮ್ಮ ಪ್ರಕಾರ ಸ್ವಾತಂತ್ರ್ಯ ಎಂದರೆ ಏನು? ನಡು ರಸ್ತೆಯಲ್ಲಿ ಅರೆಬರೆ ಬಟ್ಟೆ ತೊಟ್ಟು ಕುಣಿಯುವುದಾ? ಅಥವಾ ಹೊಸ ವರ್ಷದ ಹೆಸರಿನಲ್ಲಿ ಮಧ್ಯ ಕುಡಿದು ಮೆರೆಯುವುದಾ? ಈ ರೀತಿ ಪ್ರಶ್ನೆ ಮಾಡಿದವರು ಪುರುಷ ಪ್ರಧಾನ ಸಮಾಜದ ಮನಸ್ಥಿತಿ ಉಳ್ಳವರು ಎಂದು ಬಾಯಿ ಬಡಿದುಕೊಳ್ಳುತ್ತಾರೆ. ಅದಕ್ಕು ಮುಂಚೆ ಕೊಂಚ ಯೋಚಿಸಿದರೆ ಒಳಿತು. ಈ ದೇಶದ ಸ್ವಾತಂತ್ರ್ಯ ಹೋರಾಟದಲ್ಲಿ ಪುರುಷರು ಮಹಿಳೆಯರು ಎನ್ನುವ ಬೇಧವೇ ಮಾಡಲಿಲ್ಲ. ಅದಕ್ಕೆ ಸ್ವಾತಂತ್ರ್ಯ ಗಂಗೆಯ ಒಡಲಿಗೆ ಧುಮುಕಿದವರು ಇಂದು ಇತಿಹಾಸದ ಭಾಗವಾಗಿ ಹೋದರು. ಆಗ ಎಲ್ಲರಿಗೂ ಬೇಕಾಗಿದ್ದು ಪುರುಷ ಮಹಿಳೆ ಎನ್ನುವ ಸ್ವಾತಂತ್ರ್ಯವಲ್ಲ ಸುಂದರ ಭಾರತ ನಿರ್ಮಾಣದ ಸ್ವಾತಂತ್ರ್ಯ. ಆದರೆ ಇಂದೇನಾಗಿದೆ ಯಾರೋ ಕೊಟ್ಟು ಹೋದ ಸ್ವಾತಂತ್ರ್ಯದ ಲಾಭ ಪಡೆದುಕೊಂಡು ಬೇಕಾ ಬಿಟ್ಟಿ ಬದುಕು ಮಾಡುವ ನಾವುಗಳು ಮತ್ತೆ ಮತ್ತೆ ನಮ್ಮ ದೇಶವನ್ನು ನಕಾರಾತ್ಮಕತೆಯ ಪ್ರತಿಬಿಂಬದಂತೆ ಬಿಂಬಿಸುತ್ತಾರೆ. ಮೊದಲು ಅದರಿಂದ ಹೊರ ಬರಬೇಕಿದೆ.ಸಿಕ್ಕ ಸ್ವಾತಂತ್ರ್ಯವನ್ನು ಸ್ವೇಚ್ಛಾಚಾರಕ್ಕೆ ಬಳಸಿಕೊಂಡು ಬಂಡಬಾಳು ಬುದುಕುವುದು ಮಾತ್ರವಲ್ಲದೆ ದೇಶ ನಮಗೇನು ಕೊಟ್ಟಿತು ಎನ್ನುವ ಪ್ರಶ್ನೆ ಮಾಡುತ್ತ ಈ ದೇಶದ ಅಸ್ಥಿತ್ವವನ್ನೇ ಪ್ರಶ್ನೆ ಮಾಡಲು ಮುಂದಾಗುವುದು ನಾಚಿಕೆಗೇಡಾಗುತ್ತದೆ.
ಹೊಟ್ಟೆ ತುಂಬಿದವನಿಗೆ ಹೇಗೆ ಅನ್ನದ ಬೆಲೆ ಗೊತ್ತಾಗುವುದಿಲ್ಲವೋ ಹಾಗೆ ಸ್ವಾತಂತ್ರ್ಯ ಸಿಕ್ಕ ಮೇಲೆ ಜನಿಸಿದ ನಮಗೆ ಸ್ವಾತಂತ್ರ್ಯದ ಬೆಲೆ ಗೊತ್ತಾಗುತ್ತಿಲ್ಲ. ಅನ್ನದ ಬೆಲೆ ಅರಿವಾಗುವುದು ಹಸಿವಾದಾಗ ಎಂದ ಮೇಲೆ ಸ್ವಾತಂತ್ರ್ಯದ ಬೆಲೆ ಅರ್ಥವಾಗುವುದು ಅದನ್ನು ಕಳೆದುಕೊಂಡಾಗಲೇ ಅಲ್ಲವೇ? ಬಾಲಿವುಡ್ ಟಾಲಿವುಡ್ ಸ್ಯಾಂಡಲ್‌ವುಡ್ ಎಂದು ಚಿತ್ರ ರಂಗದಲ್ಲಿ ಭಾರಿ ಮೆರೆದು, ಕೋಟಿ ಕೋಟಿ ಕೊಳ್ಳೆ ಹೊಡೆದ ಕೆಲವು ಜನ ಮಹಾನುಬಾವರು ಹಾಗೂ ಅವರ ಮಡದಿಯರು ಈ ದೇಶದಲ್ಲಿ ಉಸಿರುಗಟ್ಟಿಸುವ ವಾತಾವರಣವಿದೆ, ಇಲ್ಲಿ ಧಾರ್ಮಿಕ ಅಸಹಿಷ್ಣುತೆ ಎದ್ದು ಕಾಣುತ್ತದೆ ಎಂದು ಆರೋಪ ಮಾಡುತ್ತಾರೆ. ಅಂಥವರನ್ನು ಒಂದು ದಿನದ ಮಟ್ಟಿಗೆ ಪಾಕಿಸ್ತಾನದಲ್ಲೋ ಅಥವಾ ಅಪ್ಘಾನಿಸ್ಥಾನದಲ್ಲೋ ಬಿಟ್ಟು ಬಂದರೆ ಗೊತ್ತಾಗುತ್ತದೆ. ಎಲ್ಲೆಲ್ಲಿ ಏನೇನಿದೆ ಏನೇನಿಲ್ಲ ಎಂದು. ಧರ್ಮದ ಹೆಸರಲ್ಲಿ ವಿಷ ಬಿತ್ತುವ ಜಂತುಗಳು ಎಲ್ಲ ಕಡೆಯೂ ಇವೆ. ಹಾಗೆಂದು ಭಾರತ ಅವರು ಹೇಳಿದ್ದಕ್ಕೆಲ್ಲ ತಲೆ ಅಲ್ಲಾಡಿಸುತ್ತದೆಯೇ? ಒಂದು ವೇಳೆ ಹಾಗೆ ಮಾಡಿದ್ದರೆ ಇಂದು ಈ ದೇಶವು ಒಂದೇ ಧರ್ಮದವರ ಪಾಲಾಗಿ; ಅನ್ಯ ಧರ್ಮಿಯರ ಪಾಡು ಹೇಳತೀರದಂತಾಗುತ್ತಿತ್ತು. ಆದರೆ ಹಾಗಾಗಲಿಲ್ಲ ಕಾರಣ, ಜಗತ್ತಿನಲ್ಲಿಯೇ ಎಲ್ಲ ಧರ್ಮಗಳಿಗೂ ಆಶ್ರಯ ನೀಡಿ ಸಮಾನ ಅವಕಾಶ ಕಲ್ಪಿಸಿಕೊಟ್ಟ ದೇಶ ಭಾರತ. ಒಂದು ಧರ್ಮವನ್ನು ರಾಷ್ಟ್ರೀಯ ಧರ್ಮವಾಗಿ ಘೋಷಿಸಿದರೆ ಮಿಕ್ಕ ಧರ್ಮಿಯರಿಗೆ ಅನ್ಯಾಯವಾಗುತ್ತದೆ ಎನ್ನುವುದನ್ನು ಅರಿತು ಜಾತ್ಯತೀತ ಭಾರತವನ್ನಾಗಿ ಘೋಷಣೆ ಮಾಡಿ, ಎಲ್ಲರಿಗೂ ಅವಕಾಶ ಕಲ್ಪಿಸಿದರು. ಆದರೂ ಕೆಲವರಿಗೆ ಈ ದೇಶದಲ್ಲಿ ಉಸಿರು ಕಟ್ಟಿದಂತಾಗುತ್ತದೆ. ಮತ್ತೆ ಕೆಲವರಿಗೆ ಮುಳ್ಳು ನೆಟ್ಟಂತಾಗುತ್ತದೆ. ಆಗ ಸ್ವಾತಂತ್ರ್ಯ, ಸಮಾನತೆಯ ಪ್ರಶ್ನೆಗಳನ್ನು ಮುಂದಿಟ್ಟುಕೊಂಡು ದೇಶವನ್ನು ಹಣಿಲು ಹೊರಡುತ್ತಾರೆ. ಒಂದು ಬಾರಿ ಕಣ್ಣು ಬಿಟ್ಟು ನೋಡಿ; ಪಾಕಿಸ್ತಾನದ, ಬಾಂಗ್ಲಾದೇಶದಂತ ಕ್ರಿಕೇಟ್ ತಂಡದಲ್ಲಿ ಮೊದಲ ಆಧ್ಯತೆ ಆ ದೇಶದ ರಾಷ್ಟ್ರೀಯ ಧರ್ಮ ಎಂದು ಗುರುತಿಸಿಕೊಂಡ ಧರ್ಮಿಯರಿಗೆ. ಆದರೆ ಭಾರತದಲ್ಲಿ ಪ್ರತಿಭೆಗೆ ಅವಕಾಶವಿದೆಯೇ ಹೊರತು ಧರ್ಮಕ್ಕಲ್ಲ. ಅದಕ್ಕೆ ತಾನೇ ಇಲ್ಲಿ ಕಪೀಲದೇವನು ನಾಯಕನಾಗಿದ್ದು, ಮಹ್ಮದ್ ಅಜರುದ್ದೀನನು ನಾಯಕಾನಗಿದ್ದು. ಬಾಬು ರಾಜೇಂದ್ರ ಪ್ರಸಾದ ಅವರು ರಾಷ್ಟ್ರಪತಿಯಾಗಿದ್ದು, ಝಾಕೀರ ಹುಸೇನರು ರಾಷ್ಟ್ರಪತಿಯಾಗಿದ್ದು. ಆದರೂ ಕೆಲವರಿಗೆ ಸ್ವಾತಂತ್ರ್ಯ ಇಲ್ಲ. ಏಕೆಂದರೆ ಅವರು ಸ್ವಾತಂತ್ರ್ಯ ಸಿಕ್ಕ ನಂತರ ಜನಿಸಿದ್ದಾರಲ್ಲ ಅದಕ್ಕೆ ಅವರಿಗೆ ಅದರ ಅರ್ಥವೇ ಗೊತ್ತಿಲ್ಲ. ಕುಲಕ್ಕೆ ಮೃತ್ಯು ಕೊಡಲಿಯ ಕಾವು ಎನ್ನುವಂತೆ ಈ ದೇಶದಲ್ಲಿ ಹುಟ್ಟಿದವರೇ ಈ ದೇಶಕ್ಕೆ ಕಂಟಕವಾಗಿ ಕಾಡುವುದಕ್ಕೆ ಕಾರಣ ಅವರಿಗೆ ಈ ಸ್ವಾತಂತ್ರ್ಯದ ಬೆಲೆ ಗೊತ್ತಿಲ್ಲದೇ ಇರುವುದು. ಮತ್ತು ಇದನ್ನು ಪಡೆದುಕೊಳ್ಳುವುದಕ್ಕೆ ಅದೆಂತ ಬೆಲೆಯನ್ನು ಈ ದೇಶ ತೆತ್ತಿದೆ ಎನ್ನುವುದು ಗೊತ್ತಾಗದೇ ಇರುವುದು. “ಬಾವಿಯಲ್ಲಿನ ಕಪ್ಪೆಗೆ ಬಾವಿಯೇ ಪ್ರಪಂಚ, ಅಲ್ಪವನ್ನು ತಿಳಿದವನಿಗೆ ಅದೇ ಸರ್ವಸ್ವ” ಎನ್ನುವಂತೆ ಏನು ಗೊತ್ತಿಲ್ಲದೇ ಇದ್ದರೂ ಅದನ್ನು ಒಪ್ಪಿಕೊಳ್ಳದೇ ಎಲ್ಲವನ್ನು ಬಲ್ಲವರಂತೆ ಆಡುವ ಕೆಲವು ಜನಗಳನ್ನು ಉತ್ತರ ಕೋರಿಯಾದ ಸರ್ವಾಧಿಕಾರಿ ಕೀಮ್ ಉನ್ ಜಾಂಗ್‌ನ ಆಡಳಿತದಲ್ಲಿ ಬದುಕಲು ಬಿಟ್ಟು ಬರಬೇಕು. ಆಗ ನಿಜಕ್ಕೂ ಸ್ವಾತಂತ್ರ್ಯದ ಬೆಲೆ ಅರ್ಥವಾಗುತ್ತದೆ. ಈ ದೇಶ ಎಂತ ಶ್ರೇಷ್ಠ ಎನ್ನುವುದು ಮನವರಿಕೆಯಾಗುತ್ತದೆ. ಅಮೇರಿಕಾದ ವೈಭೋಗದ ಜೀವನದಲ್ಲಿ ಸಂಬಂಧಗಳು ವ್ಯಾಪಾರವಾಗುತ್ತಿವೆ. ಆದರೆ ಭಾರತದಲ್ಲಿ ಇಂದಿಗೂ ಸಂಬಂಧಗಳು ಸಂಬಂಧಗಳಾಗಿಯೇ ಉಳಿದಿವೆ. ಎಲ್ಲ ಸಂಬಂಧಕ್ಕಿಂತ ಮನುಷ್ಯ ಸಂಬಂಧ ದೊಡ್ಡದು ಎನ್ನುವ ನಂಬಿಕೆ ನಮ್ಮ ಮನದಲ್ಲಿದೆ. ವಸುದೈವ ಕುಟುಂಬಕಂ ಎನ್ನುವ ಕಲ್ಪನೆಯನ್ನು ನಮ್ಮ ರಕ್ತದಲ್ಲಿ ಬೆರಸಿಕೊಂಡಾಗಿದೆ. ಅದರ ಅರಿವಿಲ್ಲದ ನನ್ನ ಯುವ ಮಿತ್ರರು ಅನ್ಯ ದೇಶದ ಮೇಲೆ ಅನನ್ಯವಾದ ಪ್ರೇಮ ತೋರಿಸಿ ನಮ್ಮ ದೇಶವನ್ನು ಬೈಯುತ್ತಾರೆ. ಸೆಕೆಂಡಿನಲ್ಲಿ ಪದಕ ಕಳೆದುಕೊಂಡವಿಗೆ ಸಮಯದ ಅರಿವಿರುತ್ತದೆ. ನಿಮಿಶದಲ್ಲಿ ಬಸ್ಸು ಕಳೆದುಕೊಂಡವನಿಗೆ ಸಮಯದ ಅರಿವಿರುತ್ತದೆ. ಹಾಗೆ ಸ್ವಾತಂತ್ರ್ಯ ಎನ್ನುವುದು ಸುಲಭವಾಗಿ ಸಿಕ್ಕಿದ್ದಲ್ಲ ಸುಮ್ಮನೆ ದಕ್ಕಿದ್ದಲ್ಲ ಎನ್ನುವುದು ಅರ್ಥವಾದಾಗ ಮಾತ್ರ ಈ ದೇಶದ ಬಗ್ಗೆ ಹಾಗೂ ಈ ದೇಶದ ಪರಂಪರೆಯ ಬಗ್ಗೆ ಅಭಿಮಾನ ಮೂಡುತ್ತದೆ. ಇಲ್ಲದೇ ಇದ್ದಲ್ಲಿ ಇಷ್ಟೇ ಈ ದೇಶದ ಕುರಿತು ಮಾತನಾಡುತ್ತ ಸಾಗುವುದಾಗುತ್ತದೆ. ಅದಕ್ಕೆ ಹೇಳಿದ್ದು ದೇಶ ಏನು ಕೊಡಬೇಕೋ ಅದನ್ನು ಮೀರಿ ಕೊಟ್ಟಿದೆ. ಆದರೆ ದೇಶಕ್ಕೆ ನಾವೇನು ಕೊಟ್ಟಿದ್ದೇವೆ ಎನ್ನುವುದನ್ನು ನಾವೊಮ್ಮೆ ತಿಳಿಯಬೇಕಾಗಿದೆ. ಹೌದಲ್ಲವೇ? 52 ಸೆಕೆಂಡ್‌ಗಳ ಕಾಲ ರಾಷ್ಟ್ರಗಿತೆಗೆ ಎದ್ದು ನಿಲ್ಲುವುದು ನಮಗೆ ಕಷ್ಟವಾಗುತ್ತದೆ. ಆದರೆ ತಿರುಪತಿ ತಿಮ್ಮಪ್ಪನ ಸನ್ನಿದಾನದಲ್ಲಿ ಎರಡು ದಿನಗಳ ಕಾಲ ಸರತಿ ಸಾಲಿನಲ್ಲಿ ನಿಲ್ಲುತ್ತೇವೆ. ಹಜ್ ಯಾತ್ರೆಯಲ್ಲಿ ಗದ್ದಲದಲ್ಲಿ ನಿಂತುಕೊಳ್ಳುತ್ತೇವೆ. ಆದರು ನಾವೆಲ್ಲ ಭಾರತೀಯರು ಭವ್ಯ ಭಾರತದ ದಿವ್ಯ ಪ್ರಜೆಗಳು ಅಲ್ಲವೇ? ಇಷ್ಟೆಲ್ಲ ಹೇಳಿದ ಮೇಲೆ ನಿಮಗೂ ಅರ್ಥವಾಗಿರಬೇಕು ಅಲ್ಲವೇ ಅದಕ್ಕೆ ಹೇಳುತ್ತೇನೆ ನಮಗೆ ಇನ್ನೂ ಈ ದೇಶದ ಸ್ವಾತಂತ್ರ್ಯದ ಬೆಲೆ ಗೊತ್ತಿಲ್ಲ. ಕಾರಣ, ನಾವು ಈ ದೇಶಕ್ಕೆ ಸ್ವಾತಂತ್ರ್ಯ ಸಿಕ್ಕ ನಂತರ ಹುಟ್ಟಿದ್ದೇವೆ. ಅಲ್ಲವೇ?
- * * * -