ಮನಕಲುಕುವ ದೃಶ್ಯಕ್ಕೆ ಸಾಕ್ಷಿಯಾದ್ ವಯನಾದ ಚುನಾವಣೆ

ವಯನಾಡ್‌ 13:   ಭೂಕುಸಿತದಲ್ಲಿ ದೂರವಾದವರನ್ನು ಮತ್ತೆ ಕೂಡುವಂತೆ ಮಾಡಿದ ವಯನಾಡ್‌ ಚುನಾವಣೆ. ಭೂಕುಸಿತ ಸಂಭವಿಸಿ ತಮ್ಮವರನ್ನು ಕಳೆದುಕೊಂಡು ದುಃಖದಲ್ಲಿದ್ದ ಜನರು ಮತಗಟ್ಟೆಗಳಲ್ಲಿ ಸಂಬಂಧಿಗಳನ್ನು, ಸ್ನೇಹಿತರನ್ನು ಕಂಡು ಭಾವುಕರಾಗಿ, ಪರಸ್ಪರ ಅಪ್ಪಿಕೊಂಡು ಕಣ್ಣೀರಾದ ಘಟನೆ ನಡೆದಿದೆ.

ಜುಲೈ 30ರಂದು ಚೂರಲ್‌ಮಲ ಮತ್ತು ಮುಂಡಕ್ಕೈ ಗ್ರಾಮಗಳಲ್ಲಿ ಸಂಭವಿಸಿದ ಭೂಕುಸಿತದಲ್ಲಿ ನೂರಕ್ಕೂ ಹೆಚ್ಚು ಮನೆಗಳು ಕೊಚ್ಚಿ ಹೋಗಿದ್ದು, 200ಕ್ಕೂ ಹೆಚ್ಚು ನಿವಾಸಿಗಳು ಮೃತಪಟ್ಟಿದ್ದಾರೆ. ನೂರಾರು ಜನ ಮನೆ, ಕುಟುಂಬ ಸದಸ್ಯರನ್ನು ಕಳೆದುಕೊಂಡು ನಿರಾಶ್ರಿತರಾಗಿದ್ದಾರೆ. ಗ್ರಾಮದ ಜನರು ಸರ್ವಸ್ವವನ್ನೂ ಕಳೆದುಕೊಂಡು ನಿರಾಶ್ರಿತರಾಗಿ ಬದುಕುತ್ತಿದ್ದಾರೆ. ಈ ನಡುವೆ ಮತದಾನಕ್ಕೆ ಬಂದಾಗ ಅಕ್ಕಪಕ್ಕದ ಊರಿನ ಜನರನ್ನು ಕಂಡು ಹಳೆಯ ದಿನಗಳನ್ನು ಮೆಲುಕು ಹಾಕಿದರು. ಧರ್ಮಗಳ ಬೇಧವಿಲ್ಲದೆ ಹಬ್ಬಗಳನ್ನು ಒಟ್ಟಾಗಿ ಆಚರಿಸುತ್ತಿದ್ದ ದಿನಗಳು, ಪರಸ್ಪರ ಸಹಬಾಳ್ವೆಯಿಂದ ಬದುಕುತ್ತಿದ್ದ ದಿನಗಳನ್ನು ನೆನೆದು ವೃದ್ಧರೊಬ್ಬರು ಬೇಸರ ವ್ಯಕ್ತಪಡಿಸಿದರು. ವ್ಯಕ್ತಿಯೊಬ್ಬರು ಸ್ನೇಹಿತನನ್ನು ಅಪ್ಪಿಕೊಂಡು, ‘ಅಳಬೇಡ, ಎಲ್ಲವೂ ಸರಿಹೋಗುತ್ತದೆ’ ಎಂದು ಸಂತೈಸಿದರು.

ಭೂಕುಸಿತದ ನಂತರ ಬದುಕುಳಿದವರನ್ನು ಜಿಲ್ಲೆಯ ವಿವಿಧ ಭಾಗಗಳಿಗೆ ಸ್ಥಳಾಂತರಿಸಿ ಪುನರ್ವಸತಿ ಕಲ್ಪಿಸಿದ್ದಾರೆ. ಹೀಗಾಗಿ ನಮ್ಮವರನ್ನು ಕಂಡಾಗ ಹೇಗಿದ್ದೀರಿ ಎಂದು ಕೇಳಿಲ್ಲ, ಎಲ್ಲಿ ವಾಸಿಸುತ್ತಿದ್ದೀರಿ ಎಂದು ಮೊದಲು ಕೇಳಿದ್ದು’ ಎಂದು ಮಹಿಳೆಯೊಬ್ಬರು ಪ್ರತಿಕ್ರಿಯಿಸಿದರು.