ದೂಧಗಂಗಾ ನದಿಗೆ ನೀರು: ರೈತರಲ್ಲಿ ಸಂತಸ

Water to Dudhganga river: Farmers are happy

ಮಾಂಜರಿ 10: ಚಿಕ್ಕೋಡಿ ಮತ್ತು ನಿಪ್ಪಾಣಿ ತಾಲೂಕಿನ ಸರ್ವಸಾಮಾನ್ಯ ಜನರಿಗೆ ವರದಾನವಾಗಿರುವ  ದೂಧಗಂಗಾ ನದಿಗೆ ನೆರೆಯ ಮಹಾರಾಷ್ಟ್ರದ ಕಾಳಮ್ಮಾವಾಡಿ ಜಲಾಶಯದಿಂದ ಸುಳಕುಡ ಬ್ಯಾರೇಜ್ ಮೂಲಕ ಬಿಡುಗಡೆ ಮಾಡಿರುವ 300 ಕ್ಯೂಸೆಕ್ ನೀರು ಸದಲಗಾ ಪಟ್ಟಣದ ದೂಧಗಂಗಾ ನದಿಗೆ ನೀರು ಹರಿದು ಬರುತ್ತಿರುವುದರಿಂದ ನದಿ ತೀರದ ರೈತರಲ್ಲಿ ಸಂತಸ ಮೂಡಿದೆ. 

ಕಳೆದ 8-10 ದಿನಗಳ ಹಿಂದೆ ಹುನ್ನರಗಿ, ಸಿದ್ದಾಳ, ಭೋಜ ಮುಂತಾದ ಗ್ರಾಮಗಳ ರೈತರು ರೊಚ್ಚಿಗೆದ್ದು, ಕಾರದಗಾ-ಭೋಜ ಬ್ಯಾರೇಜಕ್ಕೆ ಬಾಗಿಲು ಹಾಕಿ ನೀರನ್ನು ತಡೆಹಿಡಿದಿದ್ದರಿಂದ ದೂಧಗಂಗಾ ನದಿಯ ಸದಲಗಾ, ಯಕ್ಸಂಬಾ ಪಟ್ಟಣದ ನೀರು ಖಾಲಿಯಾಗುತಿತ್ತು. ಇಂದು ನೀರು ಹರಿದು ಬುರುತ್ತಿರುವುದರಿಂದ ರೈತರು ನಿಟ್ಟುಸಿರು ಬಿಟ್ಟಿದ್ದಾರೆ. 

ದೂಧಗಂಗಾ ನದಿಯ ಕಟ್ಟ ಕಡೆಯ ಗ್ರಾಮವಾಗಿದ್ದರಿಂದ ಯಕ್ಸಂಬಾ ಪಟ್ಟಣದ ದೂಧಗಂಗಾ ನದಿಯಲ್ಲಿನ ನೀರು ಸಂಪೂರ್ಣ ಖಾಲಿಯಾಗಿತ್ತು. ಇದರಿಂದಾಗಿ ಸಾರ್ವಜನಿಕರಿಗೆ ಕುಡಿಯುವ ನೀರನ ಸಮಸ್ಯೆಯೊಂದಿಗೆ ಹೊಲಗದ್ದೆಗಳಿಗೆ ನೀರು ಹಾಯಿಸುವುದು ಹೇಗೆ ಎಂಬ ಚಿಂತೆ ರೈತರನ್ನು ಕಾಡುತ್ತಿತ್ತು. ಇಂದು ನೀರು ಹರಿದು ಬರುತ್ತಿರುವುದರಿಂದ ನಾಳೆಯವರೆಗೆ ಯಕ್ಸಂಬಾ ಪಟ್ಟಣದ ದೂಧಗಂಗಾ ನದಿಗೆ ನೀರು ತಲುಪಲಿದೆ. ದೂಧಗಂಗಾ ನದಿಯ ನೀರಿನಿಂದ ಮಾಂಗೂರ, ಬಾರವಾಡ, ಕಾರದಗಾ, ಬೇಡಕಿಹಾಳ, ಶಮನೇವಾಡಿ, ಬೋರಗಾಂವ, ಶಿರದವಾಡ, ಜನವಾಡ, ಸದಲಗಾ, ಮಲಿಕವಾಡ ಮತ್ತು ಯಕ್ಸಂಬಾ ಪಟ್ಟಣಗಳ ರೈತರಿಗೆ ಮತ್ತು ಸಾರ್ವಜನಿಕರಿಗೆ ತುಂಬಾ ಉಪಯುಕ್ತವಾಗುತ್ತದೆ.  

ಪ್ರಸಕ್ತ ಸಾಲಿನಲ್ಲಿ ಬಿಸಿಲಿನ ಧಗೆ ಮತ್ತು ನೀರಿನ ಕೊರತೆಯಿಂದಾಗಿ ಸಾರ್ವಜನಿಕರಲ್ಲಿ ಚಿಂತೆ ಮೂಡಿಸಿತ್ತು. ಆದರೆ ನದಿಗೆ ನೀರು ಹರಿದುಬರುತ್ತಿರುವುದರಿಂದ ತುರ್ತು ಸಮಸ್ಯೆ ಬಗೆಹರಿದಂತಾಗಿದೆ ಎಂದು ರೈತರು ತಿಳಿಸಿದ್ದಾರೆ.