ಗದಗ10: ಜಾತಿ, ಮತ ಎಂದು ಬೇಧಭಾವ ಮಾಡದೆ ಇಡೀ ಮನುಕುಲದ ಶ್ರೇಯಕ್ಕೆ ದಾರಿ ತೋರಿದಂತಹ ಮಹಾಸಾದ್ವಿ ಶಿವಶರಣೆ ಹೇಮರಡ್ಡಿ ಮಲ್ಲಮ್ಮ ಅವರಿಗೆ ನಾವೆಲ್ಲರೂ ಸದಾ ಚಿರ ಋಣಿಯಾಗಿರಬೇಕು ಎಂದು ರಾಜ್ಯದ ಕಾನೂನು, ನ್ಯಾಯ, ಮಾನವ ಹಕ್ಕುಗಳು, ಸಂಸದೀಯ ವ್ಯವಹಾರಗಳು, ಶಾಸನ ರಚನೆ ಮತ್ತು ಪ್ರವಾಸೋದ್ಯಮ ಸಚಿವರು ಹಾಗೂ ಗದಗ ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಕೆ.ಪಾಟೀಲ ಅವರು ನುಡಿದರು.
ನಗರದ ಶ್ರೀ ಶಿವಾನಂದ ಕಲ್ಯಾಣ ಮಂಟಪದಲ್ಲಿ ಶನಿವಾರ(ಮೇ.10) ಜರುಗಿದ ಮಹಾಸಾದ್ವಿ ಶಿವಶರಣೆ ಹೇಮರಡ್ಡಿ ಮಲ್ಲಮ್ಮನವರ ಜಯಂತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.ಮಹಾಸಾದ್ವಿ ಶಿವಶರಣೆ ಹೇಮರಡ್ಡಿ ಮಲ್ಲಮ್ಮ ಸಾಕಷ್ಟು ಜನರಿಗೆ ನಾಟಕ, ಕೀರ್ತನ ಹಾಗೂ ಪುರಾಣಗಳ ಮೂಲಕ ಪರಿಚಯಿಸಲಾಗುತ್ತಿದೆ. ಮಲ್ಲಮ್ಮ ಭಕ್ತಿಯ ಪರಕಾಷ್ಠೆ, ಭಕ್ತಿಯ ಶ್ರೇಷ್ಠತೆಯನ್ನು ಸಮಾಜಕ್ಕೆ ತೊರಿಸಿರುವ ಮಹಾಸಾದ್ವಿ ಎಂದರು.ದಾರ್ಶನಿಕ, ತತ್ವಜ್ಞಾನಿ ಮಹಾಯೋಗಿ ವೇಮನರನ್ನು ತಿದ್ಧುವ ಮೂಲಕ ಸಮಾಜಕ್ಕೆ ವೇಮನರಂತಹ ತತ್ವಜ್ಞಾನಿಯನ್ನು ನೀಡಿದಂತಹ ಮಹಾನುಭಾವೆ ಶಿವಶರಣೆ ಹೇಮರಡ್ಡಿ ಮಲ್ಲಮ್ಮ ಅವರ ತತ್ವ ಆದರ್ಶಗಳನ್ನು ನಾವೆಲ್ಲರೂ ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಅತಿಥಿ ಸತ್ಕಾರ, ಹಸಿವು ನಿಗಿಸುವ ಕಾರ್ಯದಲ್ಲಿ ಸದಾ ಮುಂದಿರುವ ರೆಡ್ಡಿ ಸಮುದಾಯ ಯಾವಾಗಲೂ ನ್ಯಾಯಪರವಾದ ಹೋರಾಟಲ್ಲಿ ಮುಂಚೂಣಿಯಲ್ಲಿದ್ದು ಸಮಾಜದಲ್ಲಿ ಎಲ್ಲರೂ ಒಗ್ಹಟ್ಟಾಗಿ ಬಾಳುವದರ ಮೂಲಕ ಸಧೃಡ ಸಮಾಜ ನಿರ್ಮಾಣಕ್ಕೆ ಮುಂದಾಗಬೇಕು ಎಂದರು.ಸರ್ಕಾರದಿಂದ ಏರಿ್ಡಸುವ ಜಯಂತಿಗಳು ಅರ್ಥಪೂರ್ಣವಾಗಿ ಆಚರಿಸಿ ಮಹನೀಯರ ತತ್ವಾದರ್ಶಗಳು ಜನರಿಗೆ ತಲುಪಿಸುವ ನಿಟ್ಟಿನಲ್ಲಿ ಯಶಸ್ವಿಯಾಗಿ ಆಯೋಜನೆ ಆಗಬೇಕು. ಮಹನೀಯರ ಜಯಂತಿಗಳು ಕೇವಲ ಒಂದು ಸಮುದಾಯಕ್ಕೆ ಮಾತ್ರ ಸೀಮಿತವಾಗಬಾರದು ಅವರ ತತ್ವಾದರ್ಶಗಳನ್ನು ಪ್ರತಿಯೊಬ್ಬರಿಗೂ ತಲುಪಿಸುವಂತಹ ಕಾರ್ಯವಾಗಬೇಕು ಎಂದು ಸಚಿವರು ಆಶಿಸಿ ಹೇಮರಡ್ಡಿ ಮಲ್ಲಮ್ಮಹಾಗೂ ವೇಮನರ ದೇವಸ್ಥಾನ ಹಾಗೂ ಕಲ್ಯಾಣ ಮಂಟಪ ನಿರ್ಮಾಣ ಕಾಮಗಾರಿಯನ್ನು ಶೀಘ್ರದಲ್ಲಿಯೇ ಪ್ರಾರಂಭಿಸಲಾಗುವದು ಎಂದು ತಿಳಿಸಿದರು.
ಇಂದು ದೇಶದಲ್ಲಿ ಯುದ್ಧ ನಡೆಯುವ ತವಕದಲ್ಲಿದ್ದು, ವೈರಿ ರಾಷ್ಟ್ರ ಮೇಲಿಂದ ಮೇಲೆ ಆಕ್ರಮಣ ಮಾಡುತ್ತಿದೆ. ಈ ಸಂದರ್ಭದಲ್ಲಿ ದೇಶದ ಜನ ಒಗ್ಗಟ್ಟಾಗಿ ನಮ್ಮ ರಾಷ್ಟ್ರವನ್ನು ಕಾಪಾಡಿಕೊಳ್ಳಲು ಕರೇ ನೀಡಿದ ಅವರು ವೈರಿ ರಾಷ್ಟ್ರದ ಎಲ್ಲ ಯೋಜನೆಗಳನ್ನು ಬುಡಮೇಲು ಮಾಡುತ್ತಿರುವ ನಮ್ಮ ಸೈನ್ಯಕ್ಕೆ ಸಚಿವರಾದ ಎಚ್.ಕೆ.ಪಾಟೀಲ ಅವರು ಅಭಿನಂದನೆ ಸಲ್ಲಿಸಿದರು. ಕರ್ನಾಟಕ ಖನಿಜ ಅಭಿವೃಧ್ಧಿ ನಿಗಮ ನಿಯಮಿತದ ಅಧ್ಯಕ್ಷರು ಹಾಗೂ ರೋಣ ಶಾಸಕ ಜಿ.ಎಸ್.ಪಾಟೀಲ ಅವರು ಮಾತನಾಡಿ, ಕುಟುಂಬಗಳು ಒಗ್ಗಟ್ಟಿನಿಂದ ಹೇಗೆ ಸಾಗಬೇಕು ಎಂಬ ಪರಿಪಾಠವನ್ನು ಕಲಿಸಿದಂತಹ ಮಹಾಮಾತೆ ಹೇಮರಡ್ಡಿ ಮಲ್ಲಮ್ಮಅವರು ಸಂಸಾರದಲ್ಲಿ ಬರುವಂತಹ ಕಷ್ಟಗಳನ್ನು ಎದುರಿಸಲು ಮಾರ್ಗದರ್ಶನ ಮಾಡಿದ್ದು ಅವರ ಮಾರ್ಗದರ್ಶನಗಳನ್ನು ಪ್ರತಿಯೊಬ್ಬರು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದರು.ಸಮಾಜದ ವತಿಯಿಂದ ಇನ್ನೂ ರಚನಾತ್ಮಕ ಕಾರ್ಯಗಳನ್ನು ಮಾಡುವದರ ಮೂಲಕ ಸಧೃಡ ಸಮಾಜ ನಿರ್ಮಾಣಕ್ಕೆ ಮುಂದಾಗುವಂತೆ ಶಾಸಕರಾದ ಜಿ.ಎಸ್.ಪಾಟೀಲ ಅವರು ತಿಳಿಸಿದರು.
ವಿಧಾನ ಪರಿಷತ್ ಶಾಸಕ ಎಸ್.ವಿ.ಸಂಕನೂರ ಅವರು ಮಾತನಾಡಿ, ನಾವು ಅನೇಕ ಮಹನೀಯರ ಜಯಂತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದೆ. ಸಮಾಜದಲ್ಲಿ ಮಾನವೀಯ ಮೌಲ್ಯಗಳು ಕುಸಿಯುತ್ತಿವೆ. ಮಹನೀಯರ ಆದರ್ಶಗಳನ್ನು ಮೆಲಕು ಹಾಕುವದರ ಮೂಲಕ ಅವುಗಳನ್ನು ಜೀವನದಲ್ಲಿ ಅಳವಡಿಸಿಕೊಂಡು ಸಮಾಜ ಸುಧಾರಣೆಗಾಗಿ ಇಂತಹ ಮಹನೀಯರ ಜಯಂತಿಗಳನ್ನು ಆಚರಿಸಲಾಗುತ್ತಿದೆ ಎಂದರು.ಮಹಾಸಾದ್ವಿ ಶಿವಶರಣೆ ಹೇಮರಡ್ಡಿ ಮಲ್ಲಮ್ಮ ಅವರ ಭಕ್ತಿಗೆ ಮೆಚ್ಚಿ ಶಿವನೆ ಪ್ರತ್ಯಕ್ಷವಾಗಿ ವರವನ್ನು ನೀಡಿರುತ್ತಾನೆ. ಕುಟುಂಬದಲ್ಲಿನ ಕಷ್ಟಗಳು ಎದುರಾದರು ಸಹ ಸದಾ ಸಮಾಜದ ಒಳಿತಾಗಲಿ ಎಂದು ಸಾಕ್ಷಾತ ಶಿವನಿಂದ ವರ ಬೇಡುತ್ತಾಳೆ. ನಮಗೆ ಯಾರಾದರು ಕೆಟ್ಟದನ್ನು ಬಯಸಿದರೆ ಅವರಿಗೆ ಒಳ್ಳೆಯದನ್ನೆ ಬಯಸುವದರ ಮೂಲಕ ಉತ್ತಮ ಸಮಾಜ ನಿರ್ಮಾಣ ಮಾಡಬೇಕು ಎಂದರು. ಜಿಲ್ಲಾಧಿಕಾರಿ ಸಿ.ಎನ್.ಶ್ರೀಧರ ಮಾತನಾಡಿ, ಮಹಾಸಾದ್ವಿ ಹೇಮರಡ್ಡಿ ಮಲ್ಲಮ್ಮ ಅವರ ತತ್ವ ಆದರ್ಶಗಳನ್ನು ಪ್ರತಿಯೊಬ್ಬರು ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಅವರಂತೆ ಸ್ವಾರ್ಥವನ್ನು ತ್ಯಾಗ ಮಾಡಿ ನಿಸ್ವಾರ್ಥ ಜೀವನದ ಜೊತೆಗೆ ಸರಳ ಜೀವನ ನಡೆಸಲು ಪ್ರತಿಯೊಬ್ಬರು ಮುಂದಾಗಬೇಕು ಎಂದರು.ಕಾರ್ಯಕ್ರಮದ ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸಿದ್ದ ವೀಣಾ ತಿರ್ಲಾಪುರ ಅವರು ಹೇಮರಡ್ಡಿ ಮಲ್ಲಮ್ಮನವರ ತತ್ವಾದರ್ಶ,ಜೀವನ ಸಾಧನೆ ಕುರಿತು ಮಾತನಾಡಿ, ಪತಿಯಲ್ಲಿ ಪರಮಾತ್ಮನನ್ನು ಕಂಡಂತಹ ಶರಣೆ ಮಹಾಸಾದ್ವಿ ಹೇಮರಡ್ಡಿ ಮಲ್ಲಮ್ಮ. ಶಿವ ಪಾರ್ವತಿಯರ ಮಹಾನ ಭಕ್ತೆಯಾಗಿದ್ದ ಮಹಾಸಾದ್ವಿ ಹೇಮರಡ್ಡಿ ಮಲ್ಲಮ್ಮ ಭೂಲೋಕದಲ್ಲಿ ಸತ್ಯ ಧರ್ಮ ಉಳಿಸಲು ಈ ಧರೆಗೆ ಬಂದರು. ಹೇಮರೆಡ್ಡಿ ಮಲ್ಲಮ್ಮ ಅವರು ವೇಮರೆಡ್ಡಿಯ ಮಗ ಭರಮರೆಡ್ಡಿಯವರೊಂದಿಗೆ ಮದುವೆ ಆಗುತ್ತಾರೆ. ಹೇಮರೆಡ್ಡಿ ಮಲ್ಲಮ್ಮ ಗಂಡನಲ್ಲಿದ್ದ ಮುಗ್ಧ, ಸಾಧು ಸ್ವಭಾವವನ್ನು ಕಂಡು ಮಹಾದೇವನಂತೆ ಉಪಚರಿಸುತ್ತಾಳೆ. ಜೀವನವಿಡಿ ಕಷ್ಟವನ್ನುಂಡರೂ, ಇತರರು ಕಷ್ಟದಲ್ಲಿರುವಾಗ, ತನ್ನ ನೋವನ್ನೆಲ್ಲ ಮರೆತು ಅವರನ್ನು ಜೋಪಾನ ಮಾಡುತ್ತಿದ್ದರು. ಹೇಮರಡ್ಡಿ ಮಲ್ಲಮ್ಮಅವರು ಅನೇಕ ಪವಾಡಗಳನ್ನು ಮಾಡಿರುವರು ಎಂದರು.ಮಲ್ಲಿಕಾರ್ಜುನನ ಪರಮ ಭಕ್ತೆಯಾಗಿದ್ದ ಮಲ್ಲಮ್ಮ ತನ್ನ ಬಳಗಕ್ಕೆಂದೂ ಬಡತನ ಬಾರದಿರಲಿ, ಅವರಿಗೆಂದೂ ಉಣ್ಣಲು-ಉಡಲು-ತೊಡಲು ಯಾವ ಕೊರತೆಯೂ ಆಗದಿರಲಿ, ಮಲ್ಲಿಕಾರ್ಜುನನ ಪೂಜೆ, ಜಾತ್ರೆ ಮತ್ತು ಉತ್ಸವಗಳು ನಿರಂತರ ನಡೆಯಬೇಕು ಎಂದು ಮಲ್ಲಿಕಾರ್ಜುನನಿಂದ ವರವನ್ನು ಪಡೆದಿರುತ್ತಾರೆ ಎಂದು ಹೇಮರಡ್ಡಿ ಮಲ್ಲಮ್ಮನವರ ಜೀವನ ಸಾಧನೆ ಕುರಿತು ಉಪನ್ಯಾಸ ನೀಡಿದರು.
ಕಾರ್ಯಕ್ರಮದಲ್ಲಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಅಕಬರಸಾಬ್ ಬಬರ್ಚಿ, ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿಯ ಅಧ್ಯಕ್ಷ ಬಿ.ಬಿ.ಅಸೂಟಿ, ಮಾಜಿ ಶಾಸಕರುಗಳಾದ ಡಿ.ಆರ್.ಪಾಟೀಲ, ಬಿ.ಆರ್. ಯಾವಗಲ್, ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಭರತ ಎಸ್, ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಬಿ.ಎಸ್.ನೇಮಗೌಡ, ಅಪರ ಜಿಲ್ಲಾಧಿಕಾರಿ ಅನ್ನಪೂರ್ಣ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೆಶಕ ವೀರಯ್ಯಸ್ವಾಮಿ ಹಿರೇಮಠ, ಜಿಲ್ಲಾ ರಡ್ಡಿ ಸಮಾಜದ ಅಧ್ಯಕ್ಷ ರವೀಂದ್ರ ಮೂಲಿಮನಿ ಸೇರಿದಂತೆ ಸಮಾಜದ ಗಣ್ಯರು, ಮುಖಂಡರು, ಸಾರ್ವಜನಿಕರು ಉಪಸ್ಥಿತರಿದ್ದರು.ಪಂಡಿತ ವೆಂಕಟೇಶ ಅಲ್ಕೋಡ್ ಹಾಗೂ ಸಂಗಡಿಗರು ನಾಡಗೀತೆ ಹಾಗೂ ಭಕ್ತಿ ಸಂಗೀತ ಗಾಯನ ಪ್ರಸ್ತುತಿಸಿದರು. ಎಸ್.ಎಸ್.ಶಿವನಗೌಡರ ಅವರು ಪ್ರಾಸ್ತಾವಿಕವಾಗಿ ಮಾತನಾಡಿದರು.ಸುಧಾ ಹುಚ್ಚಣ್ಣವರ ಕಾರ್ಯಕ್ರಮ ನಿರೂಪಿಸಿದರು.ಇದೇ ಸಂದರ್ಭದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದಂತಹ ಸಾಧಕರುಗಳಿಗೆ ಸಚಿವರು ಹಾಗೂ ಗಣ್ಯರು ಗೌರವಿಸಿದರು.